Tuesday, May 27, 2025

ಮಳೆ ಅನಾಹುತ ಎದುರಿಸಲು ವಿಪತ್ತು ನಿರ್ವಹಣಾ ತಂಡ ರಚಿಸಿ : ತಹಸೀಲ್ದಾರ್

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಣ್ಣನವರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ: ತಾಲೂಕಿನಾದ್ಯಂತ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಬಾರಿಯಂತೆ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕೆಂದು ತಹಸೀಲ್ದಾರ್ ಪರುಸಪ್ಪ ಕುರುಬರ ಸೂಚಿಸಿದರು. 
    ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ವಿಪತ್ತು ನಿರ್ವಹಣಾ ಸಮಿತಿ ರಚಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು,  ಸರ್ಕಾರಿ ಶಾಲೆ, ವಿದ್ಯಾರ್ಥಿ ನಿಲಯ ಮುಂತಾದವುಗಳನ್ನು ಗುರುತಿಸಿ ಆಗಬಹುದಾದ ತೊಂದರೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಬೇಕು. ಮಳೆಗಾಳಿಗೆ ಮರ ಹಾಗೂ ಮರದ ರೊಂಬೆ-ಕೊಂಬೆಗಳು ಬೀಳುವಂತಿದ್ದರೆ ಅವುಗಳ ಮಾಹಿತಿಯನ್ನು ಅರಣ್ಯ ಇಲಾಖೆ, ವಿದ್ಯುತ್ ಇಲಾಖೆಗೆ, ರಸ್ತೆ ಮುಚ್ಚಿ ಹೋಗುವ ಅಥವಾ ಸೇತುವೆ ಮುಳುಗುವ ಸಾಧ್ಯತೆ ಕಂಡು ಬಂದರೆ ಹಾಗು ಮಳೆ ಕಾರಣ ಕೆರೆ ಕೋಡಿ ಒಡೆಯುವ ಸಾಧ್ಯತೆಯಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.
    ಮಾಹಿತಿ ನೀಡುವಲ್ಲಿ ವಿಫಲರಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಡೆಂಗ್ಯೂ, ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ತಾಲೂಕಿನಲ್ಲಿ ರೋಗ ಉಲ್ಬಣಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಟೆಸ್ಟಿಂಗ್ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ನಾಗರೀಕರು ತಕ್ಷಣ ತಾಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯ ವಾಣಿ ಕೇಂದ್ರಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಮಾತನಾಡಿ, ಕಳೆದ ಬಾರಿ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಚಿಸಿಕೊಂಡಂತೆ ಈ ಬಾರಿ ಸಹ ವಿಪತ್ತು ನಿರ್ವಹಣಾ ತಂಡ ರಚಿಸಿಕೊಳ್ಳಬೇಕು. ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಳೆಯಿಂದ ಸಮಸ್ಯೆಗಳು ಎದುರಾದಲ್ಲಿ ಅದೆ ಶಾಲೆಗಳಲ್ಲಿ ಪಾಠ ಪ್ರವಚನ ಮುಂದುವರೆಸುವ ಅಥವಾ ಪ್ರರ್ಯಾಯ ವ್ಯವಸ್ಥೆ ಕೈಗೊಳ್ಳುವ ಸಂಬಂಧ ಸೂಕ್ತ ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಓಗಳಿಗೆ ಪೂರ್ವಭಾವಿಯಾಗಿ ತಿಳಿಸಬೇಕು. ವಿಪತ್ತು ನಿರ್ವಹಣ ತಂಡದವರು ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನೈಜ್ಯತೆಯನ್ನು ಅರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
    ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಶಾಲೆಗಳು ಮೇ.೨೯ ರಿಂದ ಪುನಾರಂಭಗೊಳ್ಳಲಿವೆ. ಶಾಲೆಯ ಕಟ್ಟಡ ಹಾಗೂ ಅಲ್ಲಿ ಮಳೆ ಬಂದರೆ ಆಗಬಹುದಾದ ತೊಂದರೆಗಳ ಬಗ್ಗೆ ಅರಿಯುವ ಸಲುವಾಗಿ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ಚರ್ಚಿಸಲಾಗುತ್ತದೆ. ಅಲ್ಲಿ ಪಡೆದ ಮಾಹಿತಿಯನ್ನು ಪಿಡಿಓಗಳಿಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. 
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಣ್ಣನವರ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು, ಗ್ರಾಮಲೆಕ್ಕಿಗರು ಸಭೆಯಲ್ಲಿ ಭಾಗವಹಿಸಿದ್ದರು.

Monday, May 26, 2025

ಸಂವಿಧಾನ ಅರಿತುಕೊಂಡಾಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ : ಬಿ.ಎನ್ ರಾಜು

ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿವತಿಯಿಂದ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಸಮೀಪದ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಎಸ್.ಆರ್ ನಾಯಕ್ ಅವರಿಗೆ ಶ್ರದ್ಧಾಂಜಲಿ ಮತ್ತು ಮಾನವ ಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ: ಪ್ರತಿಯೊಬ್ಬರು ಸಂವಿಧಾನ ಅರಿತುಕೊಂಡಾಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ ಎಂದು ನಗರದ  ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು. 
    ಅವರು ಸೋಮವಾರ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಸಮೀಪದ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಎಸ್.ಆರ್ ನಾಯಕ್ ಅವರಿಗೆ ಶ್ರದ್ಧಾಂಜಲಿ ಮತ್ತು ಮಾನವ ಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ನೇತೃತ್ವದವಹಿಸಿ ಮಾತನಾಡಿದರು. 
    ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಸಂವಿಧಾನದಂತೆ ಕಾರ್ಯ ನಿರ್ವಹಿಸಬೇಕು. ಎಲ್ಲವೂ ಈ ದೇಶದ ಜನರ ಕಲ್ಯಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಈ ಹಿನ್ನಲೆಯಲ್ಲಿ ಇವುಗಳ ಕಾರ್ಯ ಚಟುವಟಿಕೆಗಳು ಹಾಗು ಸಂವಿಧಾನ ನೀಡಿರುವ ಹಕ್ಕುಗಳು, ಕಾನೂನುಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. 
    ಬಡ ಕುಟುಂಬದ ಡಾ.ಎಸ್ ಆರ್. ನಾಯಕ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ನಂತರ ಉನ್ನತ ಪದವಿಯೊಂದಿಗೆ ಜಿಲ್ಲಾ ನ್ಯಾಯಧೀಶರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸಿ ಬಡ ಜನರ ಸೇವೆ ಮತ್ತು ಭಾರತ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಂಡ ಅಪರೂಪದ ವ್ಯಕ್ತಿ ಎಂದರು. 
    ೨೦೦೭ರಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ನಂ. ೧ ಸ್ಥಾನ ಪಡೆಯಲು ಮುಖ್ಯ ಕಾರಣ ಡಾ.ಎಸ್.ಆರ್ ನಾಯಕ್.  ಅವರು ಬಡವರ ಬಗ್ಗೆ ಹೆಚ್ಚು ಕಾಳಜಿ ಇಟ್ಟು ಅನೇಕ ಪ್ರಕರಣಗಳಲ್ಲಿ ಕೇವಲ ಟಿ.ವಿ ನ್ಯೂಸ್ ಮೂಲಕ ದೂರು ದಾಖಲಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿದ್ದು ಮರಿಯುವಂತಿಲ್ಲ. ಮಾನವ ಹಕ್ಕುಗಳು ಎಂಬ ಶಬ್ದವೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಖ್ಯಾತಿ ಪಡೆಯಲು ಡಾ. ಎಸ್ ಆರ್ ನಾಯಕ್ ರವರು ರಾಜ್ಯದ ಉದ್ದಗಲಕ್ಕೂ ಪದೇ ಪದೇ ಪ್ರವಾಸ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ಮೂಡಿಸಿದ್ದು ಕಾರಣವಾಗಿದೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲಸಮ ಮಾಡಿ ಇಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿದ್ದಾರೆ. ೨೦೧೦ರಲ್ಲಿ ಇದೆ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಸಮಾವೇಶದಲ್ಲಿ ಭಾಗವಹಿಸಿ ಮಾನವ ಹಕ್ಕುಗಳ ಬಗ್ಗೆ ಹಾಗೂ ವಿಶ್ವಮಾನವ ಅಂಬೇಡ್ಕರ್ ಮತ್ತು ಬಸವಣ್ಣನವರ ಬಗ್ಗೆ ಸುದೀರ್ಘವಾಗಿ ವಿಚಾರವನ್ನು ಮಂಡಿಸಿದ್ದು, ಮರೆಯಲು ಸಾಧ್ಯವಿಲ್ಲ. ಇವರ ನಿಧನದಿಂದ ರಾಜ್ಯದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು. 
    ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಸಾಮಾಜಿಕ ಹೋರಾಟಗಾರ ಉಕ್ಕುಂದ ಶಿವಕುಮಾರ್ ಹಾಗು ಸಮಿತಿ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ : ೩-೪ ದಿನ ಭತ್ತದ ಕೊಯ್ಲು ಮುಂದೂಡಿ

ಮಳೆ ಸಂಬಂಧ ಅಧಿಕಾರಿಗಳ ಸಭೆ : ಸಹಾಯವಾಣಿ ಕೇಂದ್ರ ಆರಂಭ 

ಭದ್ರಾವತಿಯಲ್ಲಿ ಸೋಮವಾರ ಬೆಳಿಗ್ಗೆ ಸುಮಾರು ಅರ್ಧ ತಾಸು ಜೋರು ಮಳೆಯಾಗಿದ್ದು, ಉಳಿದಂತೆ ಆಗಾಗ ತುಂತುರು ಮಳೆಯಾಗಿದೆ. 
    ಭದ್ರಾವತಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಆದರೆ ಇದುವರೆಗೂ ಯಾವುದೇ ಹಾನಿ ಸಂಭವಿಸಿಲ್ಲ. ರೈತರು ಭತ್ತದ ಬೆಳೆ ಕೊಯ್ಲು ೩-೪ ದಿನ ಮುಂದೂಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ವ್ಯಕ್ತಪಡಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಕೃಷಿ ಇಲಾಖೆಯ ಅಧಿಕಾರಿ ರಾಕೇಶ್, ತಾಲೂಕಿನಲ್ಲಿ ಭತ್ತ ಮತ್ತು ಅಡಕೆ ಬೆಳೆ ಪ್ರಮುಖವಾಗಿದ್ದು, ಪ್ರಸ್ತುತ ಭತ್ತ ಕೊಯ್ಲು ಹಂತ ತಲುಪಿದೆ. ರೈತರು ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ೩-೪ ದಿನಗಳ ವರೆಗೆ ಕೊಯ್ಲು ಕಾರ್ಯ ಸ್ಥಗಿತಗೊಳಿಸುವುದು. ಒಂದು ವೇಳೆ ಮಳೆ ಮುಂದುವರೆದರೆ ಮಳೆ ನೀರಿನಿಂದ ಭತ್ತದ ಹುಲ್ಲು ಹಾನಿಯಾಗಲಿದೆ. ಇದನ್ನು ತಪ್ಪಿಸಲು ಸ್ಥಗಿತಗೊಳಿಸುವುದು ಸೂಕ್ತವಾಗಿದೆ ಎಂದರು. 
    ಪ್ರಸ್ತುತ ಸುರಿದಿರುವ ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ದಪ್ಪ ಹನಿಯಿಂದ ಕೂಡಿರುವ ಮಳೆ ನಿರಂತರವಾಗಿ ಸುರಿದರೆ ಭತ್ತದ ಕಾಳು ಕೆಳಗೆ ಬಿದ್ದು ಹಾನಿ ಸಂಭವಿಸಲಿದೆ. ಉಳಿದಂತೆ ಅಡಕೆ ಬೆಳೆಗೆ ಪ್ರಸ್ತುತ ಸುರಿಯುತ್ತಿರುವ ಮಳೆ ಅನುಕೂಲವಾಗಿದ್ದು, ಬೇಸಿಗೆಯಿಂದ ನೀರಿಲ್ಲದೆ ಒಣಗಿರುವ ಅಡಕೆ ಗಿಡಗಳಿಗೆ ತೇವಾಂಶ ಹೆಚ್ಚಳವಾಗಲಿದ್ದು, ಅಲ್ಲದೆ ಅಡಕೆ ಬೆಳೆಗೆ ಗೊಬ್ಬರ ನೀಡಲು ಸೂಕ್ತ ಸಮಯವಾಗಿದೆ ಎಂದರು. 
    ಮಳೆಯಿಂದ ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ಇದುವರೆಗೂ ಯಾವುದೇ ಹಾನಿಯಾಗಿಲ್ಲ. ಮಳೆಯಿಂದಾಗಿ ಶನಿವಾರ ಮತ್ತು ಭಾನುವಾರ ವ್ಯಾಪಾರ-ವಹಿವಾಟಿಗೆ ಸ್ವಲ್ಪ ಸಮಸ್ಯೆಯಾಗಿದೆ. ಸೋಮವಾರ ಬೆಳಿಗ್ಗೆ ಸುಮಾರು ಅರ್ಧ ತಾಸು ಜೋರು ಮಳೆಯಾಗಿದೆ. 
    ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ವತಿಯಿಂದ ಮಳೆ ಸಂಬಂಧ ಸಭೆ ನಡೆಸಲಾಗಿದ್ದು, ಎಲ್ಲಾ ಇಲಾಖೆಗಳ ಮಾಹಿತಿ ಪಡೆದುಕೊಳ್ಳಲಾಗಿದೆ. 
    ತಾಲೂಕು ಕಛೇರಿ ಸಹಾಯವಾಣಿ ಕೇಂದ್ರ ಸ್ಥಾಪನೆ :
    ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿಳುತ್ತಿದ್ದು, ಯಾವುದೇ ಹಾನಿಯಾದಲ್ಲಿ, ತೊಂದರೆಯಾದಲ್ಲಿ ತಕ್ಷಣ ತಾಲೂಕು ಕಛೇರಿ ಸಹಾಯವಾಣಿ (ಹೆಲ್ಸ್ ಡೆಸ್ಕ್) ಕೇಂದ್ರ ದೂರವಾಣಿ ಸಂಖ್ಯೆ :೦೮೨೮೨-೨೬೩೪೬೬ ಕ್ಕೆ ಸಂಪರ್ಕಿಸಲು ಕೋರಲಾಗಿದೆ.  
    ತುರ್ತು ಸನ್ನಿವೇಶಗಳಲ್ಲಿ ಸಮೀಪದ ನೋಡಲ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದಾಗಿದ್ದು, ತಹಸೀಲ್ದಾರ್, ಮೊ: ೮೮೬೭೪೩೨೯೫೨, ತಹಸೀಲ್ದಾರ್ ಗ್ರೇಡ್-೨, ಮೊ: ೯೯೪೫೩೭೭೪೬೨,  ಶಿರಸ್ತೆದಾರ್, ಮೊ: ೭೭೯೫೨೩೫೦೫೫,  ಉಪ ತಹಸೀಲ್ದಾರ್ ಕೂಡ್ಲಿಗೆರೆ ಮೊ: ೯೯೦೦೮೦೦೬೪೮, ಉಪ ತಹಶೀಲ್ದಾರ್ ಆನವೇರಿ ೯೪೮೦೪೬೭೧೯೮, ಉಪ ತಹಶೀಲ್ದಾರ್ ಕಲ್ಲಿಹಾಳ್ ಮತ್ತು ಹೊಳೆಹೊನ್ನೂರು ಮೊ: ೭೮೯೨೬೨೧೧೦೬, ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ ಮೊ: ೯೪೪೯೬೮೬೪೭೪, ರಾಜಸ್ವ ನಿರೀಕ್ಷಕರು ಕೂಡ್ಲಿಗೆರೆ ಹೋಬಳಿ ಮೊ: ೯೪೮೩೨೯೨೩೦೯ ಮತ್ತು ರಾಜಸ್ವ ನಿರೀಕ್ಷಕರು ಹೊಳೆಹೊನ್ನೂರು ಹೋಬಳಿ ಮೊ: ೭೮೯೨೬೨೧೧೧೦೬ ರವರಿಗೆ ಮಾಹಿತಿ ನೀಡಲು ಕೋರಲಾಗಿದೆ. 

ಉತ್ತಮ ಸಂಸ್ಕಾರದಿಂದ ಗೌರವಯುತ ಬದುಕು ಸಾಧ್ಯ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಭದ್ರಾವತಿ ತಾಲೂಕಿನ ನಾಗತಿಬೆಳಗಲು ತಾಂಡದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿದ್ದರು. 
    ಭದ್ರಾವತಿ : ದೇವಾಲಯಗಳು ಸಂಸ್ಕಾರದ ಸಾಂಸ್ಕೃತಿಕ ಕೇಂದ್ರಗಳು. ದೇವಾಲಯದ ಕಳಸ ನೋಡುವ ಉದ್ದೇಶ ತಲೆ ಎತ್ತಿ ಬದುಕನ್ನು ಕಟ್ಟಿಕೊಳ್ಳುವ ಜ್ಞಾಪನ ಕ್ರಿಯೆಯಾಗಿದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. 
    ಶ್ರೀಗಳು ತಾಲೂಕಿನ ನಾಗತಿಬೆಳಗಲು ತಾಂಡದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. 
    ಮನೆಗೆ ಮಗನಾಗಿ ಅಥವಾ ಮಗಳಾಗಿ, ದೇಶದ ಪ್ರಜೆಯಾಗಿ ಕಳಸಾಪ್ರಾಯವಾಗಿ ಬದುಕಬೇಕು. ಪ್ರತಿಯೊಬ್ಬರು ಗೌರವಯುತವಾಗಿ ಬಾಳುವಂತಹ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಇದಕ್ಕೆ ಸಂಸ್ಕಾರದ ಅವಶ್ಯಕತೆಯಿದೆ. ಗೌರವಯುತ ಬದುಕು ತಲೆ ಎತ್ತಿಬದುಕುವಂತೆ ಮಾಡುತ್ತದೆ ಎಂದರು.
    ಬೆಂಕಿಕೆರೆ ಹನುಮಂತಪ್ಪ, ಪ್ರಕಾಶ್, ಜಯಪ್ಪ ಪೂಜಾರ್, ಮಣಿಶೇಖರ್, ಹನುಮಂತಪ್ಪ, ನಂಜುಂಡ ನಾಯ್ಕ, ತಿಮ್ಮಣ್ಣ, ಮಹದೇವಪ್ಪ, ನಾಗ್ಯಾ ನಾಯ್ಕ, ಹಾಲೇಶ್ ನಾಯ್ಕ, ಶಂಕರಪ್ಪ ಗೌಡ, ಡಿ. ನಂಜುಂಡಪ್ಪ, ಎನ್. ಚಂದ್ರಪ್ಪ, ಟಿ. ಮಂಜಪ್ಪ, ರಾಜಪ್ಪ, ಲಕ್ಷ್ಮಣ, ವೆಂಕಟೇಶ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, May 25, 2025

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ : ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಬಹುತೇಕ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಮಂಜುನಾಥ್ ಮತ್ತು ಎನ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಹಾಗು ಸಹಕಾರ್ಯದರ್ಶಿಯಾಗಿ ಅಂತೋಣಿ ದಾಸ್, ಎಚ್.ಡಿ ತ್ಯಾಗರಾಜ್ ಮತ್ತು ಎನ್.ಬಿ ಮಂಜುನಾಥ್ ಹಾಗು ಖಜಾಂಚಿಯಾಗಿ ಆನಂದ ಆಯ್ಕೆಯಾಗಿದ್ದಾರೆ. 
      ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಿತು. ನಂತರ ಮತದಾನ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಂಡಿತು.  . ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 

ವಿಜೃಂಭಣೆಯಿಂದ ಜರುಗಿದ ಶ್ರೀ ಕರುಮಾರಿಯಮ್ಮ ದೇವಿಯ ೪೫ನೇ ವರ್ಷದ ಕರಗ ಉತ್ಸವ

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೫ನೇ ವರ್ಷದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ ಬುಳ್ಳಾಪುರ ಚಾನಲ್ ಬಳಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 
    ಭಕ್ತರಿಂದ ಅಂಬಲಿ ಸಮರ್ಪಣೆಯೊಂದಿಗೆ ಅನ್ನದಾನ ನೆರವೇರಿತು. ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಸಂಜೆ ದೇವಿಗೆ ಅರಿಶಿನ ಅಭಿಷೇಕ ಮತ್ತು ಮಹಾ ಮಂಗಳಾರತಿಯೊಂದಿಗೆ ಕರಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. 
ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. 
    ಪ್ರತಿವರ್ಷದಂತೆ ಈ ಬಾರಿ ಸಹ ವಿಜಯ್ ಕುಮಾರ್-ಮಮತಾಶ್ರೀ ದಂಪತಿ ಕರಗ ಅಲಂಕಾರದ ಸೇವಾಕರ್ತರಾಗಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕಾಶಿಪತಿ ಅವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು.  
    ದೇವಸ್ಥಾನ ಸಮಿತಿ ಪ್ರಮುಖರಾದ ಅಧ್ಯಕ್ಷ ಬಿ. ಕುಪ್ಪಸ್ವಾಮಿ, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಕಾಳಿಯಪ್ಪ, ಖಜಾಂಚಿ ಡಿ. ಶಬರಿವಾಸನ್, ನಿರ್ದೇಶಕರಾದ ದೊರೆಸ್ವಾಮಿ, ಧರ್ಮಪ್ಪ, ಮುರುಗನ್, ಕುಪ್ಪರಾಜ್, ಪಳನಿಸ್ವಾಮಿ, ಕೆ. ರವಿ, ಶ್ರೀನಿವಾಸ್, ಜೆ. ಬಾಲು, ವಿಕ್ರಂ, ರಮೇಶ್, ಧನಶೇಖರ್ ಮತ್ತು ಎ. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜನ್ನಾಪುರ, ನ್ಯೂಟೌನ್, ವಿದ್ಯಾಮಂದಿರ, ಗಣೇಶ್ ಕಾಲೋನಿ, ಹುಡ್ಕೋಕಾಲೋನಿ, ಆಂಜನೇಯ ಅಗ್ರಹಾರ, ಸುರಗಿತೋಪು, ಬಾಲಭಾರತಿ, ಜೆಪಿಎಸ್ ಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 

ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿ : ಕೃಷ್ಣಕುಮಾರ್ ಮಾನೆ

ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಕಾರ್ಯಕ್ರಮ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಪೊಲೀಸ್ ತರಬೇತಿಯಲ್ಲಿ ಧ್ಯಾನ ಸಹ  ಒಂದು ಕಲಿಕೆಯ ವಿಭಾಗವಾಗಿರುತ್ತದೆ ಎಂದು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಹೇಳಿದರು.
  ಅವರು  ಭಾನುವಾರ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಉದ್ಘಾಟಿಸಿ ಮಾತನಾಡಿದರು. 
    ಪ್ರಸ್ತುತ ಧ್ಯಾನದ ಮಹತ್ವ ಪೊಲೀಸ್ ಇಲಾಖೆಗೆ ಸದಾ ಅತ್ಯವಶ್ಯಕವಾಗಿದ್ದು, ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿಯಾಗಿದೆ. ದೇಹವನ್ನು ಮನಸ್ಸು ಒಂದುಗೂಡಿಸುವುದು ಧ್ಯಾನ. ಹಣವೆಂಬುದು ಸಂಬಂಧಕ್ಕೆ ಬೆಲೆ ಕಡಿಮೆ ಮಾಡುತ್ತದೆ. ಇದನ್ನು ಕಡಿವಾಣ ಹಾಕಲು ಧ್ಯಾನ ಅವಶ್ಯಕ ಎಂದರು.
    ಪ್ರಸ್ತುತ ಮೊಬೈಲ್ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿವೆ. ಇದರಿಂದಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ಕಾಲಹರಣ ಮಾಡುವವರು ಧ್ಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಯ ಮೀಸಲಿಡಬೇಕು. ಮಾಂಸಹಾರ ಸೇವನೆಯಿಂದ ದೂರವಿದ್ದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯದೊಂದಿಗೆ ಬದಕಲು ಸಾಧ್ಯ ಎಂದರು. 
    ವಿಶ್ವ ಮಿತ್ರ ಲೈಟ್ ಫೌಂಡೇಷನ್ ದಾವಣಗೆರೆ ಹಿರಿಯ ಮಾರ್ಗದರ್ಶಕ ಮಾರುತಿ ರಾವ್ ಮಾತನಾಡಿ, ಧ್ಯಾನವು ಋಷಿಗಳಿಂದ ಪ್ರಾರಂಭವಾಗಿದೆ. ಪ್ರಸ್ತುತ ಜಟಿಲತೆಯಿಂದ ಬಳಲುವ ಮನಸ್ಸಿಗೆ ಭೇದಭಾವವಿಲ್ಲದ ಧ್ಯಾನವೊಂದೇ ಮಾರ್ಗವಾಗಿದ್ದು, ಋಷಿ ಮುನಿಗಳು ಧ್ಯಾನದ ಮೂಲಕ ತಪಸ್ಸನ್ನು ಮಾಡಿ ಪ್ರಪಂಚಕ್ಕೆ ಒಳಿತನ್ನು ತಂದು ಕೊಟ್ಟವರು ಅದನ್ನು ಉಳಿಸಿಕೊಳ್ಳಲು ನಾವಿಂದು ಧ್ಯಾನ ಮಾಡುವುದು ಆತ್ಯವಶ್ಯಕ ಎಂದರು. 
    ಧ್ಯಾನಕ್ಕೆ ವಯಸ್ಸಿನ ಅಂತರವಿಲ್ಲ, ಯಾವುದೇ ಸ್ಥಳದಲ್ಲಾದರೂ ಧ್ಯಾನ ಮಾಡಬಹುದು. ಧ್ಯಾನ ಯಾವುದೇ ಧರ್ಮ ಅಥವಾ ಆಚರಣೆ ಅಲ್ಲ. ಶ್ವಾಸದ ಮೇಲೆ ಸಂಪೂರ್ಣ ಗಮನ ನೀಡುವ ಮೂಲಕ ನಾವು ಆತ್ಮಜ್ಞಾನ ಹೊಂದಬಹುದು. ಇದು ಈ ಜನ್ಮದ ಪರಮ ಉದ್ದೇಶ ಎಂದರು.  
    ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಧ್ಯಾನ ಮರೆತರೆ ನಮ್ಮನ್ನು ನಾವು ಕಳೆದುಕೊಂಡಂತೆ. ಇದರಿಂದಾಗಿ ಪರಿಸರ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಮೈ ಮನಸ್ಸುಗಳಿಗೆ ಧ್ಯಾನವೇ ಉತ್ತಮವಾದ ಆರೋಗ್ಯಕರವಾದ ಔಷಧಿ. ಧ್ಯಾನಕ್ಕೆ ಬರುವಾಗ ತಮ್ಮ ಅಕ್ಕಪಕ್ಕದವರನ್ನು, ಸ್ನೇಹಿತರನ್ನು, ಬಂಧುಗಳನ್ನು ಕರೆತಂದು ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದರು. 
      ಆರ್ಯವೈಶ್ಯ ಸಮಾಜದ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು. ವಿಸ್ಮಯ ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಶುಭ ಗಿರಿರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಗೌಡ ಮಾತನಾಡಿ, ಧ್ಯಾನ ಕುರಿತು ಅಂತರ್ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದ್ದು,  ಸೇರಲು ಇಚ್ಚಿಸುವರು ಮೊಬೈಲ್ ೮೯೭೧೩೩೫೯೫೫ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದರು. 
    ಜಾಥಾ ಶಿವಾಜಿ ಸರ್ಕಲ್ ಮಾರ್ಗವಾಗಿ, ಮಾರಿಯಮ್ಮ ದೇವಸ್ಥಾನ ಮತ್ತು ಸಂತೆ ಮೈದಾನ ಮೂಲಕ ರಂಗಪ್ಪ ವೃತ್ತದವರೆಗೂ ನಡೆಯಿತು.