ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು.
ಭದ್ರಾವತಿ: ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು.
ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಇ-ಸ್ವತ್ತು ಖಾತೆ ಮಾಡಿಕೊಡಲು ನಿರ್ಲಕ್ಷ್ಯವಹಿಸಿದ್ದು, ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕಾನೂನಿನ ಪ್ರಕಾರ ನಡೆಸದೆ ಗ್ರಾಮಸ್ಥರಿಗೆ ಭಿತ್ತಿ ಪತ್ರದ ಮೂಲಕ ಪ್ರಚಾರಪಡಿಸಿ ತಿಳಿಸದೆ ಕೆಲವು ಗ್ರಾಮಸ್ಥರು ಮತ್ತು ಸದಸ್ಯರು ಹಾಗು ಅಧಿಕಾರಿಗಳು ತಮ್ಮಿಷ್ಟಕ್ಕನುಸಾರ ಸಭೆ ನಡೆಸಿದ್ದಾರೆಂದು ದೂರಲಾಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನಗಳು ಕೆಲಸ ನೀಡಬೇಕೆಂಬ ಆದೇಶವಿದ್ದರು ಹಲವು ವರ್ಷಗಳಿಂದ ೧೦ ರಿಂದ ೨೦ ದಿನಗಳು ಮಾತ್ರ ಕೆಲಸ ನೀಡಲಾಗುತ್ತಿದೆ. ಈ ಮೂಲಕ ಬಡವರ್ಗದವರಿಗೆ ಅನ್ಯಾಯವೆಸಲಾಗುತ್ತಿದೆ ಎಂದು ಆರೋಪಿಸಲಾಯಿತು.
ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಡಕುಟುಂಬದವರು ವಾಸವಿದ್ದು, ಮನೆ ಇಲ್ಲದೆ ಕುಟುಂಬಗಳು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬಿಳಿಕಿ, ಮಜ್ಜಿಗೇನಹಳ್ಳಿ, ಬಿಳಿಕಿ ತಾಂಡ್ಯ, ಪದ್ಮೇನಹಳ್ಳಿ, ನವಲೆ ಬಸಾಪುರ, ನೇರಲೇಕೆರೆ ಸೇರಿದಂತೆ ಇತ್ಯಾದಿ ಗ್ರಾಮಗಳಲ್ಲಿ ವಾಸವಿರುವ ನಿವೇಶನ ರಹಿತರನ್ನು ಇದುವರೆಗೂ ಗುರುತಿಸದೆ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿವೇಶನ ರಹಿತರ ಹೆಸರನ್ನು ಕಳುಹಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಲಾಯಿತು.
ಪಂಚಾಯಿತಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಂಡ ದುಸ್ಥಿತಿಗೆ ತಲುಪಿದೆ. ಈ ಸಂಬಂಧ ಹಲವಾರು ಮನವಿ ಸಲ್ಲಿಸಲಾಗಿದೆ. ಅಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಆದರೂ ಸಹ ಇದುವರೆಗೂ ಶಾಲಾ ಕಟ್ಟಡ ದುರಸ್ತಿಗೊಳಿಸದೆ ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಗ್ರಾಮ ಪಂಚಾಯಿತಿ ತಕ್ಷಣ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು. ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವ ಮೂಲಕ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಸಲ್ಲಿಸುವ ಮೂಲಕ ಎಚ್ಚರಿಸಲಾಯಿತು.
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು. ಎನ್. ಮಂಜುನಾಥ್, ಬಿ.ಜೆ ಪಾಲಾಕ್ಷ, ಶಂಕ್ರಪ್ಪ, ಆರ್. ಗಣೇಶ್, ವಿ. ಈರೇಶ್, ಜಯಮ್ಮ, ಲಕ್ಷ್ಮೀವೇಲು, ಸರೋಜ, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.