ಶುಕ್ರವಾರ, ಜೂನ್ 13, 2025

ಜೂ.೨೦ರವರೆಗೆ ಆನ್‌ಲೈನ್ ಯೋಗಾಸನ ಶಿಬಿರ


    ಭದ್ರಾವತಿ: ಕರ್ನಾಟಕ ರಾಜ್ಯ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ವತಿಯಿಂದ ಶಿವಮೊಗ್ಗ ಓಬಿಜಿ ಸೊಸೈಟಿ ಸಹಯೋಗದೊಂದಿಗೆ ಜೂ.೧೪ ರಿಂದ ೨೦ರ ವರೆಗೆ ಆನ್‌ಲೈನ್ ಯೋಗಾಸನ ಶಿಬಿರ ಆಯೋಜಿಸಲಾಗಿದೆ. 
    ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ಅಧ್ಯಕ್ಷರು ಹಾಗು ಯೋಗಾಸನ ಬೋಧಕಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ), ನಯನ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವೀಣಾ ಎಸ್ ಭಟ್‌ರವರ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ ೬ ರಿಂದ ೭ ಗಂಟೆವರೆಗೆ ಶಿಬಿರ ನಡೆಯಲಿದೆ. 
    ಓಬಿಜಿ ಸೊಸೈಟಿ ಶಿವಮೊಗ್ಗ ಕಾರ್ಯದರ್ಶಿ ಡಾ. ಸ್ವಾತಿ ಕಿಶೋರ್ ಮತ್ತು ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ಕಾರ್ಯದರ್ಶಿ ಡಾ. ರಾಜಲಕ್ಷ್ಮಿ ಸೇರಿದಂತೆ ಇನ್ನಿತರರು ಶಿಬಿರದಲ್ಲಿ ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿ ಹಾಗು ಆನ್‌ಲೈನ್ ಸಂಪರ್ಕದಲ್ಲಿ ಪಾಲ್ಗೊಳ್ಳಲು ಡಾ. ವೀಣಾಭಟ್ ಮೊ: ೯೪೮೦೩೫೩೮೭೮ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ವಿಜೃಂಭಣೆಯಿಂದ ಜರುಗಿದ ಕಾರೇಹಳ್ಳಿ ಜಾತ್ರಾ ಮಹೋತ್ಸವ

ಭದ್ರಾವತಿ ತಾಲೂಕಿನ ಕಾರೇಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ತಾಲೂಕಿನ ಕಾರೇಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. 
    ಭಕ್ತರು ಹರಕೆ, ಪ್ರಾರ್ಥನೆಗಳನ್ನು ಸಂತರ ಮುಂದೆ ಸಲ್ಲಿಸಲು ಹೂವಿನ ಹಾರ ಹಾಗೂ ಮೊಂಬತ್ತಿಗಳನ್ನು ಹಿಡಿದು ಬೆಳಗ್ಗೆ ೭ ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸುತ್ತಿದ್ದರು. 
    ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋ ರವರಿಂದ ಪೂಜಾ ವಿಧಿವಿಧಾನಗಳು ನೆರವೇರಿದವು. ಹಳೇನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾರವರಿಂದ ಪ್ರಭೋದನೆ, ಶಿವಮೊಗ್ಗ ಕ್ಷೇತ್ರದ ಗುರು ಶ್ರೇಷ್ಠರಾದ ಫಾದರ್ ಸ್ಟ್ಯಾನಿ ಡಿಸೋಜ, ಫಾದರ್ ಸ್ಟೀವನ್ ಅಲ್ಬುಕರ್ಕ್‌ರವರಿಂದ ಆಶೀರ್ವಚನ ನೀಡಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿತು. 
    ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ ಮೇಡಾ, ನೆರೆಯ ಧರ್ಮಕೇಂದ್ರದ ಗುರುಗಳು, ಸೈಂಟ್ ಚಾರ್ಲ್ಸ್ ಸೈಂಟ್ ಡೊಮಿನಿಕ್ ಧರ್ಮಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಗುರುವಾರ, ಜೂನ್ 12, 2025

ಕಾರೇಹಳ್ಳಿ ಜಾತ್ರಾ ಮಹೋತ್ಸವ : ಸಂತ ಅಂತೋಣಿಯವರ ಅಲಂಕೃತ ತೇರಿನ ಮೆರವಣಿಗೆ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಗ್ರಾಮದ ಬೀದಿಗಳಲ್ಲಿ ಅಲಂಕೃತ ತೇರಿನ ಮೆರವಣಿಗೆ ನಡೆಯಿತು.
    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಗ್ರಾಮದ ಬೀದಿಗಳಲ್ಲಿ ಅಲಂಕೃತ ತೇರಿನ ಮೆರವಣಿಗೆ ನಡೆಯಿತು.
    ಶಿವಮೊಗ್ಗ ಧರ್ಮಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್ ಡಿಸೋಜಾರವರಿಂದ ಪೂಜಾ ವಿಧಿ ವಿಧಾನಗಳು ನೆರವೇರಿದವು. ಹಳೇನಗರ, ನ್ಯೂಟೌನ್, ಕಾಗದನಗರ, ಮಾವಿನಕೆರೆ ಧರ್ಮ ಕೇಂದ್ರಗಳಿಂದ ಭಕ್ತರು ಆಗಮಿಸಿದ್ದರು. 
    ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ, ಫಾದರ್ ಅನಿಲ್ ರಿಚರ್ಡ್, ಫಾದರ್ ಪಿಯೂಸ್, ಸೈಂಟ್ ಡೊಮಿನಿಕ್ ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಜೂ.೧೩ರ ಶುಕ್ರವಾರ ಸಂತ ಅಂತೋಣಿಯವರು ಮೃತಪಟ್ಟ ದಿನವಾಗಿದ್ದು, ಅವರ ಸ್ಮರಣೆಗಾಗಿ ವಾರ್ಷಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.  ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರಿಂದ ಭಕ್ತಿಭಾವದ ವಿಶೇಷ ಪೂಜಾ ವಿಧಿ-ವಿಧಾನಗಳು, ಪ್ರಾರ್ಥನೆಗಳು, ಪ್ರಭೋದನೆಗಳು, ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. 

ಸರ್ಕಾರಿ ಶಾಲೆ ಮಕ್ಕಳಿಗೆ ಕಳೆದ ೮ ವರ್ಷಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

ಮಾದರಿಯಾದ ಸಮಾಜ ಸೇವಕ ಎ. ಧಮೇಂದ್ರ : ಜೂ. ೧೪ರಂದು ಉಚಿತ ನೋಟ್ ಪುಸ್ತಕ ವಿತರಣೆ 

ಎ. ಧಮೇಂದ್ರ 
    ಭದ್ರಾವತಿ : ಕಳೆದ ೮ ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಸಮಾಜ ಸೇವಕ ಎ. ಧಮೇಂದ್ರರವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
    ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಧಮೇಂದ್ರರವರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ೮ ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ೫೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಇದೀಗ ೫೦೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. 
    ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು ೧೫ ರಿಂದ ೧೬ ಸಾವಿರ ಪುಸ್ತಕಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. 
    ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಧಮೇಂದ್ರರವರು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣ ಪಡೆಯಲು ನನ್ನಂತೆ ಸಂಕಷ್ಟಕ್ಕೆ ಒಳಗಾಗಬಾರದು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಪ್ರತಿ ವರ್ಷ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಳೆದ ೮ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.  
    ಉಚಿತ ನೋಟ್ ಪುಸ್ತಕ ವಿತರಣೆ ಮಾತ್ರವಲ್ಲದೆ ಮಹಾಮಾರಿ ಕೋವಿಡ್-೧೯ರ ಸಂದರ್ಭದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಮೇಂದ್ರರವರು ಮುಂದಾಗಿದ್ದಾರೆ.
    ಜೂ.೧೪ರಂದು ಉಚಿತ ನೋಟ್ ಪುಸ್ತಕ ವಿತರಣೆ :
    ಜೂ.೧೪ರ ಬೆಳಿಗ್ಗೆ ೯ ರಿಂದ ೧೦ ಗಂಟೆವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳಿಹಳ್ಳಿ ಮತ್ತು ೧೧.೩೦ ರಿಂದ ೧೨.೩೦ರ ವರೆಗೆ ಹರಿಹರೇಶ್ವರ ಪ್ರೌಢಶಾಲೆ, ಕೂಡ್ಲಿಗೆರೆ ಹಾಗೂ ಮಧ್ಯಾಹ್ನ ೨ ಗಂಟೆಯಿಂದ ೩ ಗಂಟೆವರೆಗೆ ನಂಜುಂಡೇಶ್ವರ ಪ್ರೌಢಶಾಲೆ, ನಾಗತಿಬೆಳಗಲು  ಉಚಿತ ನೋಟ್ ಪುಸ್ತಕ ವಿತರಣೆ ನಡೆಯಲಿದೆ.
    ಶಾಲಾ ಮಕ್ಕಳ ಪೋಷಕರು, ಹಿತೈಷಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎ. ಧರ್ಮೇಂದ್ರ ಕೋರಿದ್ದಾರೆ. 

ಬುಧವಾರ, ಜೂನ್ 11, 2025

ಎಸ್.ಆರ್ ನಾಗರಾಜ್ ನಿಧನ

ಎಸ್.ಆರ್ ನಾಗರಾಜ್  
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಅಧ್ಯಕ್ಷ ಎಸ್.ಆರ್ ನಾಗರಾಜ್(೬೫) ಬುಧವಾರ ಸಂಜೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 
    ಇಬ್ಬರು ಪತ್ನಿಯರು, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಗಾಂಧಿನಗರದಲ್ಲಿರುವ ಇವರ ನಿವಾಸಕ್ಕೆ ಗುರುವಾರ ಮೃತದೇಹ ತರಲಿದ್ದು, ಸಂಜೆ ೪ ಗಂಟೆಗೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ.  
    ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ಪಡಿತರ ವಿತರಕರು ಸಂತಾಪ ಸೂಚಿಸಿದ್ದಾರೆ.

ಗೌರಮ್ಮ ನಿಧನ

ಗೌರಮ್ಮ 
    ಭದ್ರಾವತಿ : ತಾಲೂಕಿನ ಕಡದಕಟ್ಟೆ ನಿವಾಸಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ನಂಜುಂಡಪ್ಪನವರ ಪತ್ನಿ ಗೌರಮ್ಮ(೮೨) ಬುಧವಾರ ಬೆಳಗಿನ ಜಾವ ನಿಧನ ಹೊಂದಿದರು. 
    ಇವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸಿರಿಯೂರು ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಭದ್ರಾವತಿ ನಗರದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಹಾಗು ಬೆಂಗಳೂರಿನ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ತಾಲೂಕಿನ ಸಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. 
    ಭದ್ರಾವತಿ : ನಗರದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಹಾಗು ಬೆಂಗಳೂರಿನ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ತಾಲೂಕಿನ ಸಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. 
    ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲತಾ ಚಂದ್ರಶೇಖರ್, ಖಜಾಂಚಿ ಮಾಲಾ ರಾಮು, ನಿರ್ದೇಶಕರಾದ ಭಾಗ್ಯಲಕ್ಷ್ಮಿ ಬಸವರಾಜ್, ವಸಂತ ಪುರುಷೋತ್ತಮ್, ಆಶಾ ಶ್ರೀಕಂಠ, ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಸಹಶಿಕ್ಷಕರಾದ ಬಿ. ಸತ್ಯನಾರಾಯಣ, ಜಿ. ಗೀತಾ ಹಾಗು ನಕ್ಷತ್ರ ಮೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರಾದ ಚಂದ್ರಶೇಖರ್ ಹಾಗು ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.