Wednesday, June 18, 2025

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದೆ.    
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 4000 ಸಸಿಗಳನ್ನು ವಿತರಿಸಲಾಗಿದೆ. 
     ಕಾರ್ಖಾನೆ ವತಿಯಿಂದ ಸಾಮಾಜಿಕ ಕಾರ್ಯ ಯೋಜನೆಯಡಿ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕರಿಬೇವು, ಹಲಸು, ಪಪ್ಪಾಯಿ, ನುಗ್ಗೆ ಸೇರಿದಂತೆ ಹಲವು ರೀತಿಯ ಸಸಿಗಳನ್ನು ಬೆಳೆಸುವ ಮೂಲಕ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸಿ ಸಸಿಗಳನ್ನು ನೆಡುವ ಮೂಲಕ ಪೋಷಿಸಿ ಬೆಳೆಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. 
     2024ರ ಸಾಲಿನಲ್ಲಿ ಒಟ್ಟು ಸುಮಾರು 2000 ಸಸಿಗಳನ್ನು ಕಾರ್ಖಾನೆ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಹಾಗು ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಿಗೆ ಉಚಿತವಾಗಿ ವಿತರಿಸಲಾಗಿದೆ. 
     ಈ ಬಾರಿ ಪ್ರಸಕ್ತ ಸಾಲಿನಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ ಸುಮಾರು 4000 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಪೈಕಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಮಾರು 750ಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. 
     ಬುಧವಾರ ಬೆಳಿಗ್ಗೆ ಕಾರ್ಖಾನೆ ಮುಖ್ಯದ್ವಾರದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುವ ಮೂಲಕ ಪೋಷಿಸಿ ಬೆಳೆಸುವಂತೆ ಮನವಿ ಮಾಡಿದರು. 
 ಪ್ರಸಕ್ತ ಸಾಲಿನಲ್ಲಿ ಗುರಿ ಮೀರಿ ಸಸಿಗಳನ್ನು ವಿತರಣೆ ಮಾಡಲಾಗಿದ್ದು, ಆದರೂ ಸಹ ಸಸಿ ವಿತರಣೆ ಮುಂದುವರೆಯಲಿದೆ. ಸಭೆ, ಸಮಾರಂಭ, ರಾಷ್ಟ್ರೀಯ   ಹಬ್ಬಗಳ ಆಚರಣೆ ಸೇರಿದಂತೆ ಇನ್ನಿತರ ವಿಶೇಷ ದಿನಗಳಂದು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 

Tuesday, June 17, 2025

ಕೆರೆ ಒತ್ತುವರಿಗೆ ತಾಲೂಕು ಆಡಳಿತಕ್ಕೆ ಆದೇಶಿಸಿ : ಜಿಲ್ಲಾಧಿಕಾರಿಗೆ ಮನವಿ

ಭದ್ರಾವತಿ ತಾಲೂಕಿನ ವ್ಯಾಪ್ತಿಯಲ್ಲಿನ ಕೆರೆಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ತಾಲೂಕು ಆಡಳಿತಕ್ಕೆ ಒತ್ತುವರಿ ತೆರವುಗೊಳಿಸಲು ಆದೇಶಿಸಬೇಕೆಂದು ಸಾಮಾಜಿಕ ಹೋರಾಟಗಾರ ತೀರ್ಥೇಶ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. 
    ಭದ್ರಾವತಿ : ತಾಲೂಕಿನ ವ್ಯಾಪ್ತಿಯಲ್ಲಿನ ಕೆರೆಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ತಾಲೂಕು ಆಡಳಿತಕ್ಕೆ ಒತ್ತುವರಿ ತೆರವುಗೊಳಿಸಲು ಆದೇಶಿಸಬೇಕೆಂದು ಸಾಮಾಜಿಕ ಹೋರಾಟಗಾರ ತೀರ್ಥೇಶ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. 
    ನಗರ ವ್ಯಾಪ್ತಿಯಲ್ಲಿರುವ ಸೀಗೆಬಾಗಿ ಸರ್ವೆ ನಂ.೫೭ */* ಕಸಬಾ-೧ರ ಸರ್ಕಾರಿ ಕೆರೆ(ಬೆಂಡೆಕಟ್ಟೆ ಕೆರೆ) ಸಂಪೂರ್ಣ ಒತ್ತುವರಿಯಾಗಿರುತ್ತದೆ. ಅಲ್ಲದೆ ಕಸಬಾ-೧ರ ಸರ್ವೆ ನಂ.೨೧೬ರಲ್ಲಿನ ಕೆರೆ ಸಹ ಒತ್ತುವರಿಯಾಗಿರುತ್ತದೆ. ಕೆರೆಗಳನ್ನು ಒತ್ತುವರಿ ಮಾಡಿ ನಿವೇಶನ, ಮನೆ ಹಾಗು ಇನ್ನಿತರ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ. ಆದರೆ ಇಲ್ಲಿಯವರೆಗೂ ಯಾವುದೇ ನೋಟಿಸ್ ನೀಡುವುದು, ಸ್ವಯಂ ದೂರು ದಾಖಲಿಸುವುದು ಮಾಡಿರುವುದಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. 
    ತಕ್ಷಣ ತಾಲೂಕು ಆಡಳಿತಕ್ಕೆ ಕೆರೆಗಳ ಒತ್ತುವರಿ ತೆರವುಗೊಳಿಸಲು ಆದೇಶಿಸಬೇಕು. ಒತ್ತುವರಿ ಮಾಡದೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ಸರ್ಕಾರದ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 

ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಕಾಮಗಾರಿ ಅವೈಜ್ಞಾನಿಕ

ಜೂ.೧೮ರಂದು ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಪ್ರತಿಭಟನೆ, ಧರಣಿ ಸತ್ಯಾಗ್ರಹ 

ಭದ್ರಾ ಜಲಾಶಯ
    ಭದ್ರಾವತಿ : ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಮಾಡುತ್ತಿರುವ ಕಾಮಗಾರಿ ವಿರುದ್ಧ ಜೂ.೧೮ರ ಬುಧವಾರ ಬೆಳಿಗ್ಗೆ ೧೧ ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ, ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ರೈತ ಮುಖಂಡ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಮಧ್ಯ ಕರ್ನಾಟಕದ ಇಂತಹ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ  ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಲು ಮಾಡುತ್ತಿರುವ ಕಾಮಗಾರಿಯ ಅವೈಜ್ಞಾನಿಕವಾಗಿರುತ್ತದೆ.
    ಸರ್ಕಾರವು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು ರೈತರು ಯಾವುದೇ ತಕರಾರು ಮಾಡುತ್ತಿಲ್ಲ. ಆದರೇ ಭದ್ರಾ ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿಯಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿರುವುದನ್ನು ರೈತಸಂಘ ಹಾಗೂ ಭದ್ರಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಖಂಡಿಸುತ್ತವೆ. 
    ಸರ್ಕಾರ ಕೂಡಲೇ ನಿರ್ಬಂಧಿತ ಪ್ರದೇಶದಲ್ಲಿ ಜಲಾಶಯಕ್ಕೆ ಆಪತ್ತು ತಂದೊಡ್ಡುವ ಕಾಮಗಾರಿಯನ್ನು ಶಾಶ್ವತವಾಗಿ ಕೈಬಿಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಭದ್ರಾ ಬಲದಂಡೆ ನಾಲೆಯ ಅಚ್ಚುಕಟ್ಟುದಾರರು. ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆಯಲ್ಲಿ ಹಲವಾರು ದೂರುಗಳು ಸಲ್ಲಿಕೆ

ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ವತಿಯಿಂದ ಭದ್ರಾವತಿ ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಹಲವಾರು ದೂರುಗಳು ಸಲ್ಲಿಕೆಯಾದವು. 
    ಭದ್ರಾವತಿ : ಸಂಬಂಧಪಟ್ಟ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಯಾವುದೇ ಪ್ರಕರಣವಾಗಿರಲಿ ಇತ್ಯರ್ಥಪಡಿಸಿಕೊಡಲಾಗುವುದು. ಎಲ್ಲಾ ದೂರುಗಳನ್ನು ಸ್ವೀಕರಿಸಲಾಗುವುದು. ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೆ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆ ಯಶಸ್ವಿಗೊಳಿಸುವಂತೆ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಮನವಿ ಮಾಡಿದರು. 
    ಅವರು ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯ ನೇತೃತ್ವವಹಿಸಿ ಮಾತನಾಡಿದರು. 
    ಪ್ರಮುಖವಾಗಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜುರವರು ತಮ್ಮ ದೂರುಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಕಳೆದ ಹಲವಾರು ವರ್ಷಗಳಿಂದ ಲೋಕಾಯುಕ್ತ ಅಧಿಕಾರಿಗಳಿಗೆ ಸಭೆಯಲ್ಲಿ ದೂರು ಸಲ್ಲಿಸಲಾಗುತ್ತಿದೆ. ಆದರೆ ಯಾವುದೇ ದೂರುಗಳು ಇತ್ಯರ್ಥಗೊಂಡಿಲ್ಲ. ಕೇವಲ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಆದರೆ ಯಾವುದೇ ಕ್ರಮ ಅನುಷ್ಠಾನಗೊಳ್ಳುತ್ತಿಲ್ಲ ಎಂದು ದೂರಿದರು. 
ಇದಕ್ಕೆ ಪ್ರತಿಯಾಗಿ ಮಾತನಾಡಿದ ಚಂದ್ರಶೇಖರ್, ಬೇರೆ ಅಧಿಕಾರಿಗಳ ರೀತಿ ನಾನಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ದೂರು ಸಲ್ಲಿಸಿ. ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.  
    ಸಾಮಾಜಿಕ ಕಾರ್ಯಕರ್ತರಾದ ಶಶಿಕುಮಾರ್ ಗೌಡ ದೂರು ಸಲ್ಲಿಸಿ, ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ನದಿ ದಡದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇವರಿಗೆ ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವಂತೆ ಸೂಚಿಸುವುದು. ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಹಾಗು ವಿದ್ಯುತ್ ತಂತಿಗಳು ಕೆಳಗೆ ಬಿದ್ದು ದುರ್ಘಟನೆಗಳು ಸಂಭವಿಸದಂತೆ ಎಚ್ಚರವಹಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸುವುದು. ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಹಾಗು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ನಗರಸಭೆ ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದು. ಜನ್ನಾಪುರ ಅಂತರಘಟ್ಟಮ್ಮ ಸಮುದಾಯ ಭವನ ಹಾಗು ಮಲ್ಲೇಶ್ವರ ಸಮುದಾಯ ಭವನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದರೂ ಸಹ ನೀಡಿರುವುದಿಲ್ಲ. ಈ ಹಿನ್ನಲೆಯಲ್ಲಿ ದಾಖಲೆಗಳನ್ನು ನೀಡುವಂತೆ ಸೂಚಿಸುವುದು. ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬಿ.ಆರ್.ಎಲ್.ಸಿ-೩ ಕಛೇರಿ ವತಿಯಿಂದ ಜನ್ನಾಪುರ ಅಂತರಘಟ್ಟಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವ ಕುರಿತು ಸರ್ಕಾರದ ಮಾನದಂಡಗಳ ಆದೇಶದ ಪ್ರತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದು ಹಾಗು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ಬಸ್, ಆಟೋ ಸೇರಿದಂತೆ ಶಾಲಾ ವಾಹನಗಳ ದಾಖಲೆಗಳನ್ನು ಪರಿಶೀಲನೆ ನಡೆಸುವಂತೆ ಹಾಗು ವಾಹನ ಚಾಲಕರುಗಳಿಗೆ ಸಂಚಾರಿ ನಿಯಮಗಳನ್ನು ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಿಂದ ತಿಳಿಸಿಕೊಡುವಂತೆ ಸೂಚಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. 


    ಸಾಮಾಜಿಕ ಕಾರ್ಯಕರ್ತ ತೀರ್ಥೇಶ್ ದೂರು ಸಲ್ಲಿಸಿ, ತಾಲೂಕಿನ ಕಸಬಾ-೧ರ ಸೀಗೆಬಾಗಿ ಗ್ರಾಮದ ಬೆಂಡೆಕಟ್ಟೆ ಕೆರೆ ಒತ್ತುವರಿಯಾಗಿದ್ದು, ಕೆರೆ ಜಾಗದಲ್ಲಿ ನಿವೇಶನಗಳು, ಮನೆ, ಸಾಮಿಲ್ ಹಾಗು ಕಟ್ಟಡಗಳು ನಿರ್ಮಾಣವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ತೆರವುಗೊಳಿಸದೆ ನಿರ್ಲಕ್ಷ್ಯತನ ವಹಿಸಿದ್ದಾರೆ. ಅಲ್ಲದೆ ಕೆರೆ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾಲೂಕು ಆಡಳಿತದಿಂದ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಬೇಕು. ಮತ್ತೊಂದು ಪ್ರಕರಣದಲ್ಲಿ ನಗರಸಭೆ ವ್ಯಾಪ್ತಿಯ ಖಲಂದರ್ ನಗರದಲ್ಲಿ ೩ ಎಕರೆ ೧೬ ಗುಂಟೆ ವಿಸ್ತೀರ್ಣದ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ಹಾಗು ಇನ್ನಿತರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. 
    ದಲಿತ ಮುಖಂಡ ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ತಮ್ಮ ದೂರುಗಳನ್ನು ಸಲ್ಲಿಸಿ ಇತ್ಯರ್ಥಪಡಿಸುವಂತೆ ಸಭೆಯಲ್ಲಿ ಮನವಿ ಮಾಡಿದರು. 
    ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಗುರಾಜ್ ಎನ್. ಮೈಲಾರಿ ಉಪಸ್ಥಿತರಿದ್ದರು. 
    ಶಿಕ್ಷಣ, ಕಂದಾಯ, ನಗರಸಭೆ, ಲೋಕೋಪಯೋಗಿ, ನೀರಾವರಿ, ಕೃಷಿ, ಅರಣ್ಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಹಾಗು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Monday, June 16, 2025

ಸುದರ್ಶನ್ ಬಿ. ಓಂಕಾರ್‌ಗೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ

ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಹಾಗು ಯೋಗ ಶಿಕ್ಷಕರ ತರಬೇತಿದಾರ ಭದ್ರಾವತಿ ನಗರದ ಸುದರ್ಶನ್ ಬಿ. ಓಂಕಾರ್ ಅವರಿಗೆ ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ ನೀಡಿ ಗೌರವಿಸಿದೆ. 
    ಭದ್ರಾವತಿ: ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಹಾಗು ಯೋಗ ಶಿಕ್ಷಕರ ತರಬೇತಿದಾರ ನಗರದ ಸುದರ್ಶನ್ ಬಿ. ಓಂಕಾರ್ ಅವರಿಗೆ ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ ನೀಡಿ ಗೌರವಿಸಿದೆ. 
    ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ ಅಧ್ಯಕ್ಷ ವಿಶ್ವನಾಥ್ ಕುಲಕರ್ಣಿ ಮತ್ತು ಭಾರತದ ಎವಿಐವೈಎ ಅಕಾಡೆಮಿ ಅಧ್ಯಕ್ಷ ತೀರ್ಥರಾಜ್ ಹೋಳೂರು ಅವರಿಂದ ಹುಚಿ ಮಿನ್ಹ್ ಸಿಟಿ ಸ್ಟಾರ್ ಫಸ್ಟ್ ಹೋಟೆಲ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜೂ.೭ರಂದು ನಡೆದ ೨ನೇ ಅಂತರಾಷ್ಟ್ರೀಯ ಯೋಗ ಉತ್ಸವ ಮತ್ತು ಸಾಂಸ್ಕೃತಿಕ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 
ಇವರು ನಗರದಲ್ಲಿ ಕಳೆದ ೩೦ ವರ್ಷಗಳಿಂದ ಯೋಗಾಭ್ಯಾಸ ನಡೆಸುವ ಜೊತೆಗೆ ಪ್ರಸ್ತುತ ಬೆಂಗಳೂರಿನಲ್ಲಿ ಸಹ ಯೋಗ ಶಿಕ್ಷಕರ ತರಬೇತಿದಾರರಾಗಿ, ಯೋಗ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೂ.೧೭ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ


    ಭದ್ರಾವತಿ : ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜೂ. ೧೭ರ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ  ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿದೆ. 
    ಇತ್ತೀಚೆಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಲೋಕಾಯುಕ್ತ ಕಚೇರಿಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. 
    ದೂರುಗಳಿದ್ದಲ್ಲಿ ಸಾರ್ವಜನಿಕರು ಅಹವಾಲು ಸ್ವೀಕಾರ ಸಭೆಗೆ ಖುದ್ದಾಗಿ ಆಗಮಿಸಿ ಸಲ್ಲಿಸುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.  ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ರವರು ಕೋರಿದ್ದಾರೆ.

ವೈಎಂಸಿಎ ಸಂಸ್ಥಾಪಕರ ದಿನಾಚರಣೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ನಗರದ ನ್ಯೂಟೌನ್ ವೈಎಂಸಿಎ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ  ಅಭಿನಂದಿಸಲಾಯಿತು.
    ಭದ್ರಾವತಿ : ನಗರದ ನ್ಯೂಟೌನ್ ವೈಎಂಸಿಎ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ  ಅಭಿನಂದಿಸಲಾಯಿತು.
    ನ್ಯೂಟೌನ್ ವೇನ್ಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಕ್ರೈಸ್ತ ಅಭಿವೃದ್ಧಿ ಮಂಡಳಿ ನಿರ್ದೇಶಕ, ಬಿಗ್ ಜೆಟಿವಿ ಮಾಲೀಕ ಪ್ರಶಾಂತ್ ಜತನ್ನ ಉದ್ಘಾಟಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಅಶ್ರಿತ ರೆಬೆಲ್ಲೊ, ರೈಯಾನ್ ಮಥಾಯ್ , ಎಸ್.ಜೆ ಶೈನಿ ಅಂಗೆಲ್, ಜೆ.ಎ ಎಸ್ತರ್ ಮತ್ತು ಎ. ಡಾಲ್ವಿನ್ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ದೀಕ್ಷಾ, ಜಾಸ್ವಾ ಥಾಮಸ್, ಸಾಮ್ಯುಯೆಲ್, ಸಂಧ್ಯಾ, ತೆರೇಸಾ ಡೆಲ್ಸಿ, ಜೆಮಿಮಾ ಜಾಸ್ಫರ್, ಕೃಪ ಶರೋನ್ ಮತ್ತು ಸಹನಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಮೋಸಸ್ ರೋಸಯ್ಯ ಅಧ್ಯಕ್ಷತೆ ವಹಿಸಿದ್ದರು. 
    ಕೆಪಿಸಿಸಿ ಕಾರ್ಯದರ್ಶಿ, ವೈದ್ಯರ ಘಟಕದ ರಾಜ್ಯಾಧ್ಯಕ್ಷ ಡಾ. ಪ್ರದೀಪ್ ಡಿ' ಮೆಲ್ಲೋ, ಜೋಸೆಫ್ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಲತಾ ರಾಬರ್ಟ್ ಡಿ'ಸೋಜಾ, ಯುವ ಮುಖಂಡ ಬಿ.ಎಸ್ ಗಣೇಶ್, ವೈಎಂಸಿಎ ಉಡುಪಿ ಯೋಜನಾ ವಿಭಾಗದ ಕಾರ್ಯದರ್ಶಿ ರೇವರೆಂಡ್ ಧನರಾಜ್, ವೆಸ್ಲಿ ಕಾರ್ಕಡ, ಯುಸಿಎ ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯ ಐ.ವಿ ಸಂತೋಷ್, ಮಾಜಿ ಸದಸ್ಯ ಫ್ರಾನ್ಸಿಸ್, ಟಿಸಿಡಬ್ಲ್ಯುಎ ಭಾಸ್ಕರ್ ಬಾಬು, ಮುಖಂಡರಾದ ದಾಸ್, ಎಂ.ಜಿ ರಾಮಚಂದ್ರನ್ ಮತ್ತು ಅಭಿ ಮತ್ತು ವೈಎಂಸಿಎ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.