ಶನಿವಾರ, ಜೂನ್ 28, 2025

ಭದ್ರಾ ಜಲಾಶಯದಲ್ಲಿ ಒಂದೆಡೆ ಅವೈಜ್ಞಾನಿಕ, ಮತ್ತೊಂದೆಡೆ ಕಳಪೆ ಕಾಮಗಾರಿ ಭೀತಿ

ಜಲಾಶಯದಲ್ಲಿ ನೀರಿದ್ದರೂ ಬೆಳೆ ಬೆಳೆಯದಂತಹ ಸ್ಥಿತಿ 

ಭದ್ರಾ ಜಲಾಶಯ 

    * ಅನಂತಕುಮಾರ್ 
    ಭದ್ರಾವತಿ: ತಾಲೂಕಿನ ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಇದೀಗ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ಸಹ ಎಡದಂಡೆ ನಾಲೆ ರೈತರು ಬೆಳೆ ಬೆಳೆಯದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ರೈತರು ಆತಂಕಕ್ಕೆ ಒಳಗಾಗಿದ್ದರೆ, ಮತ್ತೊಂದೆಡೆ ಜಲಾಶಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 
    ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ : 
    ಮಧ್ಯ ಕರ್ನಾಟಕದ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ  ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ನಡೆಸುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿರುತ್ತದೆ.
    ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಸುರೇಶ್, ರೈತ ಮುಖಂಡರು. 

ಭದ್ರಾ ಜಲಾಶಯದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಎರಡು ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ ರೈತರ ಹಿತಾಸಕ್ತಿ ಕಾಪಾಡುವಂತೆ ಹಾಗು ಜಲಾಶಯದ ಸುರಕ್ಷತೆಗೆ ಗಮನ ಹರಿಸುವಂತೆ ಜಲಾಶಯದ ಬಳಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಹಿಂದೆ ಸಹ ಕಳಪೆ ಕಾಮಗಾರಿ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಾರಿ ಯಾರ ಗಮನಕ್ಕೂ, ಕಾಮಗಾರಿ ಕುರಿತು ಯಾವ ವಿಚಾರವೂ ತಿಳಿಸದೆ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕು. ಪ್ರಸ್ತುತ ಕೈಗೊಂಡಿರುವ ಕಾಮಗಾರಿಯಿಂದ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕು. 
                                                                                                          -ಸುರೇಶ್, ರೈತ ಮುಖಂಡರು.
       ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ : 
    ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 
    ಎಡದಂಡೆ ನಾಲೆಯ ಮುಖ್ಯ ಗೇಟ್‌ನಲ್ಲಿ ನೀರಿನ ಸೋರಿಕೆ ತಡೆಯಲು ಕಾಮಗಾರಿ ನಡೆಸಲಾಗುತ್ತಿದ್ದು, ದೊಡ್ಡ ಮಟ್ಟದ ಅಂಡರ್ ವಾಟರ್ ಮತ್ತು ದೊಡ್ಡ ಮಟ್ಟದ ಗೇಟ್ ಅಳವಡಿಸಿರುವ ಕಾಮಗಾರಿಗಳನ್ನು ನಿರ್ವಹಿಸಿರುವ ಪ್ರಮಾಣ ಪತ್ರ ಪಡೆಯದಿರುವ ಉತ್ತರ ಪ್ರದೇಶದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗೆ ಕಾಮಗಾರಿ ನಡೆಸಿರುವ ಕುರಿತು ಅನುಭವ ಇಲ್ಲದಿರುವುದು ಆರಂಭದಲ್ಲಿಯೇ ತಿಳಿಯುತ್ತಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಅವಧಿಯಲ್ಲಿ ಕಾಮಗಾರಿ ನಡೆಸಬೇಕಿತ್ತು. ಆದರೆ ಅದನ್ನು ಮಾಡದೆ ಜಲಾಶಯ ಭರ್ತಿಯಾಗುತ್ತಿರುವ ಸಂದರ್ಭದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಜಲಾಶಯದ ಮುಖ್ಯಗೇಟ್ ತೆಗೆದು ಹಾಕಲಾಗಿದ್ದು, ಅಂದಾಜಿನ ಪ್ರಕಾರ ಈ ಕಾಮಗಾರಿ ಮುಕ್ತಾಯಗೊಳ್ಳಲು ಇನ್ನೂ ೨-೩ ತಿಂಗಳ ಬೇಕಾಗಿರುತ್ತದೆ. ಆದರೆ ೪೫ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ರೈತ ಮುಖಂಡರದ್ದಾಗಿದೆ. 
    ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ: 
    ಎಡದಂತೆ ನಾಲೆಯಲ್ಲಿ ಮುಖ್ಯಗೇಟ್ ಅಳವಡಿಸುವ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ೪೫ ದಿನಗಳ ವರೆಗೆ ನಾಲೆಯಲ್ಲಿ ನೀರು ಹರಿಸುವುದಿಲ್ಲ.  ಈ ಹಿನ್ನಲೆಯಲ್ಲಿ ರೈತರು ಯಾವುದೇ ಬೆಳೆ ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ. 
    ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಜಲಾಶಯದ ನೀರನ್ನು ನಂಬಿಕೊಂಡು ಬದುಕುತ್ತಿರುವ ರೈತರು ಭತ್ತ, ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುಮುಖ್ಯವಾಗಿ ಭತ್ತದ ಬೆಳೆ ಬೆಳೆಯಲೇ ಬೇಕಾಗಿದೆ. ಜಾನುವಾರುಗಳಿಗೆ ಮೇವು ಅಗತ್ಯವಿರುವುದರಿಂದ ಭತ್ತದ ಬೆಳೆ ಅನಿವಾರ್ಯವಾಗಿದೆ. ಬಹುತೇಕ ಕೃಷಿಕರು ಹಾಲು ಮಾರಾಟ ಮಾಡಿ ಬದುಕುತ್ತಿದ್ದಾರೆ. ಬೆಳೆ ಬೆಳೆಯದಿದ್ದರೆ ಸಂಕಷ್ಟ ಎದುರಾಗಲಿದೆ. ಈ ಹಿನ್ನಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ರೈತರಿಗೆ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿ ಮುಂದುವರೆಸಬೇಕೆಂಬುದು ರೈತರ ಮುಖಂಡರ ಒತ್ತಾಯವಾಗಿದೆ.  
- ಎಚ್.ಆರ್ ಬಸವರಾಜಪ್ಪ, ರೈತ ಮುಖಂಡರು. 

ಕುಡಿಯುವ ನೀರಿಗಾಗಿ ಕಾಮಗಾರಿ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಅವೈಜ್ಞಾನಿಕ ಕಾಮಗಾರಿ ಕೈಬಿಟ್ಟು ನದಿ ಪಾತ್ರದಿಂದಲ್ಲೇ ಜಾಕ್ವೆಲ್ ಮೂಲಕ ನೀರು ಹರಿಸುವ ಕಾಮಗಾರಿ ಕೈಗೊಳ್ಳಬಹುದಾಗಿದೆ. ತಕ್ಷಣ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಬಲದಂಡೆ ನಾಲೆಗೆ ಯಾವುದೇ ರೀತಿ ಅಪಾಯಗಳು ಸಂಭವಿಸದಂತೆ ಎಚ್ಚರವಹಿಸಬೇಕು. ಅಲ್ಲದೆ ಎಡದಂಡೆ ನಾಲೆಯ ಮುಖ್ಯಗೇಟ್ ಕಾಮಗಾರಿ ತಕ್ಷಣ ಮುಕ್ತಾಯಗೊಳಿಸಿ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.  
                                                                                  - ಎಚ್.ಆರ್ ಬಸವರಾಜಪ್ಪ, ರೈತ ಮುಖಂಡರು. 

    ದೊಡ್ಡ ಅಪಾಯ ಎದುರಾಗುವ ಸಾಧ್ಯತೆ : 
    ಪ್ರಸ್ತುತ ಜಲಾಶಯದಲ್ಲಿ ಕೈಗೊಳ್ಳಲಾಗುತ್ತಿರುವ ಬಲದಂಡೆ ಅವೈಜ್ಞಾನಿಕ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಕೈಗೊಂಡಿರುವ ಕಾಮಗಾರಿ ಸ್ಥಳವನ್ನು ಮೊದಲಿನಂತೆ ಭದ್ರಪಡಿಸಬೇಕಾಗಿದೆ. ಒಂದು ವೇಳೆ ವಿಳಂಬದಲ್ಲಿ ಮಳೆ ಅಧಿಕವಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಬಲದಂಡೆಯೇ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ. ಮತ್ತೊಂದೆಡೆ ಎಡದಂಡೆ ಮುಖ್ಯ ಗೇಟ್ ಅಳವಡಿಕೆ ಕಾಮಗಾರಿ ಸಹ ಮೊದಲಿನಂತೆ ಕಾಯ್ದುಕೊಳ್ಳಬೇಕಾಗಿದೆ. ಒಂದು ವೇಳೆ ವಿಳಂಬವಾದಲ್ಲಿ ಹೊಸಪೇಟೆ ಜಲಾಶಯದಲ್ಲಿ ಕಳೆದ ವರ್ಷ ಸಂಭವಿಸಿದ ದುರಂತ ಮರುಕಳುಹಿಸುವ ಸಾಧ್ಯತೆ ಇಲ್ಲಿ ತಳ್ಳಿಹಾಕುವಂತಿಲ್ಲ. ಜಲಾಶಯದಲ್ಲಿನ ಅಪಾರ ಪ್ರಮಾಣದ ನೀರು ಪೋಲಾಗುವ ಭೀತಿ ಎದುರಾಗಿದೆ. 
    ಒಟ್ಟಾರೆ ಭದ್ರಾ ಜಲಾಶಯ ವ್ಯಾಪ್ತಿಯ ರೈತರು ಒಂದಡೆ ಅವೈಜ್ಞಾನಿಕ ಕಾಮಗಾರಿ, ಮತ್ತೊಂದೆಡೆ ಕಳಪೆ ಕಾಮಗಾರಿ ಭೀತಿಯಲ್ಲಿ ನಲುಗಿಹೋಗಿದ್ದಾರೆ. ಸರ್ಕಾರ ರೈತರ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. 

ಶುಕ್ರವಾರ, ಜೂನ್ 27, 2025

ತಾಲೂಕು ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಶುಕ್ರವಾರ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿದರು. 
    ಭದ್ರಾವತಿ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಶುಕ್ರವಾರ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. 
    ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕೆಂಪೇಗೌಡರ ಆಡಳಿತ ವ್ಯವಸ್ಥೆ, ಭವಿಷ್ಯದ ಚಿಂತನೆ, ನಾಡಿಗೆ ನೀಡಿರುವ ಕೊಡುಗೆ ಸ್ಮರಿಸಲಾಯಿತು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್, ಸದಸ್ಯರಾದ ಬಿ.ಕೆ ಮೋಹನ್, ಮಂಜುಳ ಸುಬ್ಬಣ್ಣ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಪರುಸಪ್ಪ ಕುರುಬರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉಪತಹಸೀಲ್ದಾರ್ ಮಂಜಾನಾಯ್ಕ,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಆಟೋ ಮಾಲೀಕರು, ಚಾಲಕರು, ಅಪ್ಪಾಜಿ ಅಭಿಮಾನಿಗಳಿಂದ ಕೆಂಪೇಗೌಡ ಜಯಂತಿ ಆಚರಣೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣದಲ್ಲಿ ಶುಕ್ರವಾರ ಆಟೋ ಮಾಲೀಕರು, ಚಾಲಕರು ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣದಲ್ಲಿ ಶುಕ್ರವಾರ ಆಟೋ ಮಾಲೀಕರು, ಚಾಲಕರು ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಿಸಲಾಯಿತು. 
    ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿ, ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿ ಸಾರ್ವಜನಿಕರಿಗೆ ಲಾಡು ಹಂಚಲಾಯಿತು. 
    ಮುಖಂಡರಾದ ತಿಮ್ಮೇಗೌಡ, ಆಟೋ ಚಾಲಕ ಸಂಘದ ಲಕ್ಷ್ಮಣ್, ಅರುಣ್, ವಿಶ್ವೇಶ್ವರ ಗಾಯಕ್ವಾಡ್, ಕಾರ್ಮಿಕ ಮುಖಂಡ ಎನ್. ಶ್ರೀನಿವಾಸ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಾಡಪ್ರಭು ಕೆಂಪೇಗೌಡರ ಜಯಂತಿ : ಭವ್ಯ ಮೆರವಣಿಗೆ

ಭದ್ರಾವತಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಕೆಂಪೇಗೌಡರ ಹಾಗು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಮತ್ತು ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಕೆಂಪೇಗೌಡರ ಹಾಗು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಮತ್ತು ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. 
    ಮೆರವಣಿಗೆಗೆ ಸಂಘದ ಗೌರವಾಧ್ಯಕ್ಷೆ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿದ್ದರು. 
    ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಲೋಯರ್ ಹುತ್ತಾದಿಂದ ಆರಂಭಗೊಂಡ ಮೆರವಣಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತದವರೆಗೆ ಸಾಗಿತು. 
    ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಎಸ್. ಆನಂದ್ ಹಾಗು ಪದಾಧಿಕಾರಿಗಳು, ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮೆರವಣಿಯಲ್ಲಿ ಪಾಲ್ಗೊಂಡಿದ್ದರು. 
 

ನಾಡಪ್ರಭು ಕೆಂಪೇಗೌಡರ ಆದರ್ಶತನ ಮೈಗೂಡಿಸಿಕೊಳ್ಳಿ : ಶಾರದ ಅಪ್ಪಾಜಿ

ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆಯಿಂದ ಜಯಂತಿ ಕಾರ್ಯಕ್ರಮ 


ಭದ್ರಾವತಿ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಾರದ ಅಪ್ಪಾಜಿ  ಉದ್ಘಾಟಿಸಿದರು.
    ಭದ್ರಾವತಿ : ನಾಡಪ್ರಭು ಕೆಂಪೇಗೌಡರು ನಾಡುಕಂಡ ಅಪ್ರತಿಮ ನಾಯಕರಾಗಿದ್ದು, ಇಂತಹ ನಾಯಕನ ಆದರ್ಶತನಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಾರದ ಅಪ್ಪಾಜಿ ಹೇಳಿದರು. 
    ಅವರು ನಗರದ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕೆಂಪೇಗೌಡರ ಜನ್ಮದಿನ ನಾವೆಲ್ಲರೂ ಒಗ್ಗಟ್ಟಾಗಿ ಮನೆ ಮಕ್ಕಳಂತೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲರಿಗೂ ಕೆಂಪೇಗೌಡರ ಜಯಂತಿ ಶುಭಾಶಯಗಳು ಎಂದರು. 


ಭದ್ರಾವತಿ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
        ವೇದಿಕೆ ಅಧ್ಯಕ್ಷ, ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ವೇದಿಕೆ ವತಿಯಿಂದ ಕೆಂಪೇಗೌಡರ ಜಯಂತಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 
    ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಿಕೆ ಪ್ರಧಾನ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಖಜಾಂಚಿ ವೆಂಕಟೇಶ್, ಉಪಾಧ್ಯಕ್ಷರಾದ ಕಬಡ್ಡಿ ಕೃಷ್ಣೇಗೌಡ, ಮಣಿ ಎಎನ್‌ಎಸ್, ಶಶಿಕುಮಾರ್, ಕಾರ್ಯದರ್ಶಿ ದೇವರಾಜ್, ನಗರಸಭೆ ಮಾಜಿ ಸದಸ್ಯ ಮಹೇಶ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಒಕ್ಕಲಿಗ ಸಮಾಜದ ಮುಖಂಡರು, ಗಣ್ಯರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

ಗುರುವಾರ, ಜೂನ್ 26, 2025

ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಆರೋಪ : ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಪ್ರತಿಭಟನೆ

ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಭದ್ರಾವತಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ನಗರದ ಜನ್ನಾಪುರ ಶ್ರೀ ಅಂತರ ಘಟ್ಟಮ್ಮ ಸಾರ್ವಜನಿಕ ಸಮುದಾಯ ಭವನದ ಕಾಮಗಾರಿಗೆ  ೨೦೧೯-೨೦೨೦ರಲ್ಲಿ ೧೫ ಲಕ್ಷ ರು. ಅನುದಾನ ಬಿಡುಗಡೆಯಾಗಿರುತ್ತದೆ. ಟ್ರಸ್ಟ್ ಅಧಿಕೃತವಾಗಿ ನೋಂದಣಿಯಾಗಿರುವುದಿಲ್ಲ. ಅಲ್ಲದೆ ಸರ್ಮಪಕ ದಾಖಲೆಗಳಿರುವುದಿಲ್ಲ. ಆದರೂ ಸಹ ಅನುದಾನ ಬಿಡುಗಡೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
    ಸಮುದಾಯ ಭವನದ ಟ್ರಸ್ಟ್ ನೋಂದಣಿಯಾಗಿರುವುದು ೨೦೨೨-೨೩ರಲ್ಲಿ ಭವನಕ್ಕೆ ನಗರಸಭೆಯವರು ವಿಐಎಸ್‌ಎಲ್‌ಗೆ ಸೇರಿದ ಜಾಗಕ್ಕೆ ಆಕ್ರಮವಾಗಿ ಸರ್ಕಾರಿ ಜಾಗವೆಂದು ಖಾತೆ ಮಾಡಿ ಕೊಟ್ಟಿರುವುದು ದುರಂತ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿವಾಗಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
    ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಿವ್ಯಶ್ರೀ, ಇಂದ್ರಮ್ಮ, ಮಾಲಮ್ಮ, ಮುನಿಯಮ್ಮ, ಮಾದೇವಿ, ಸುರೇಶ್, ಪರಮೇಶ್ವರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಪ್ರಧಾನಿ ಮೋದಿ ಆಡಳಿತದಲ್ಲಿ ಬಡವ, ರೈತ, ಮಹಿಳೆ, ಯುವಕರ ಅಭಿವೃದ್ಧಿ

ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್

ಬಿಜೆಪಿ ಪಕ್ಷದ ಭದ್ರಾವತಿ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಇರುವುದು ಕೇವಲ ನಾಲ್ಕು ಜಾತಿ. ಮೊದಲು ಬಡವ, ಎರಡನೇಯದು ರೈತ, ಮೂರನೇಯದು ಮಹಿಳೆ ಮತ್ತು ನಾಲ್ಕನೇಯದು ಯುವಕರು. ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಹೇಳಿದರು. 
    ಅವರು ಗುರುವಾರ ಪಕ್ಷದ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.  ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷದ ಯಶಸ್ವಿ ಆಡಳಿತದ ಅವಧಿಯಲ್ಲಿ ಅವರು ಕೈಗೊಂಡ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು. ಭಾರತ ಜಗತ್ತಿನಲ್ಲಿಯೇ ರ್ವಶಕ್ತ ರಾಷ್ಟ್ರವಾಗಬೇಕು ಎಂಬುದಾಗಿ ಸಂಕಲ್ಪ ಮಾಡಿದ್ದಾರೆ. ಅವರೊಂದಿಗೆ ನಾವೆಲ್ಲ ಕೈಜೋಡಿಸೋಣ ಎಂದು ಕರೆ ನೀಡಿದರು. 
    ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ಕಾರ್ಯದರ್ಶಿ ಭರತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಹರಿಕೃಷ್ಣ,  ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಖಜಾಂಚಿ ಸತೀಶ್, ಮಂಡಲ ಪ್ರಧಾನ ಕಾರ್ಯದರ್ಶಿ ಮೊಸರಳ್ಳಿ ಅಣ್ಣಪ್ಪ,  ಶಾಂತಣ್ಣ, ತೀರ್ಥಪ್ಪ, ಹನುಮಂತ ನಾಯ್ಕ, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಕಾರ್ಯಕರ್ತರು, ಉಪಸ್ಥಿತರಿದ್ದರು..