ಶುಕ್ರವಾರ, ಜುಲೈ 18, 2025

ಅರಣ್ಯ ಇಲಾಖೆಯಿಂದ ಬೃಹತ್ ಮರದ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ

ಭದ್ರಾವತಿ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಿ.ಎನ್ ರಸ್ತೆಗೆ ಚಾಚಿಕೊಂಡಿರುವ ಬೃಹತ್ ಮರದ ರೆಂಬೆ-ಕೊಂಬೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಶುಕ್ರವಾರ ಕಡಿತಲೆ ಮಾಡುವ ಮೂಲಕ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗು ವ್ಯಾಪಾರಸ್ಥರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ : ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಿ.ಎನ್ ರಸ್ತೆಗೆ ಚಾಚಿಕೊಂಡಿರುವ ಬೃಹತ್ ಮರದ ರೆಂಬೆ-ಕೊಂಬೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಶುಕ್ರವಾರ ಕಡಿತಲೆ ಮಾಡುವ ಮೂಲಕ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗು ವ್ಯಾಪಾರಸ್ಥರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಸುಮಾರು ೫೦-೬೦ ವರ್ಷಗಳಿಗೂ ಹಳೇಯದಾದ ಬೃಹತ್ ಮರದ ರೆಂಬೆ-ಕೊಂಬೆಗಳು ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಸಿ.ಎನ್ ರಸ್ತೆಗೆ ಚಾಚಿಕೊಂಡಿದ್ದು, ಕೆಳಭಾಗದಲ್ಲಿ ಅಂಗಡಿಮುಂಗಟ್ಟುಗಳು, ಸಾರ್ವಜನಿಕ ಶೌಚಾಲಯ, ಖಾಸಗಿ ಬಸ್ ನಿಲ್ದಾಣ, ಆಟೋ ನಿಲ್ದಾಣಗಳಿವೆ. ಪ್ರತಿದಿನ ಜನಸಂದಣಿಯಿಂದ ಕೂಡಿರುವ ಸ್ಥಳವಾಗಿದ್ದು, ಅಲ್ಲದೆ ವಿದ್ಯುತ್ ತಂತಿಗಳು ಸಹ ಹಾದು ಹೋಗಿವೆ. ಹಲವಾರು ಬಾರಿ ರೆಂಬೆ-ಕೊಂಬೆಗಳು ಮುರಿದು ಬಿದ್ದು ಅವಘಡಗಳು ಸಂಭವಿಸಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿವೆ. 
    ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗು ವ್ಯಾಪಾರಸ್ಥರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮರದ ರೆಂಬೆ-ಕೊಂಬೆಗಳ ಕಡಿತಲೆಗೆ ಗುತ್ತಿಗೆ ನೀಡಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗುತ್ತಿಗೆದಾರರಿಗೆ ನೆರವಾಗಿ ಬೆಳಿಗ್ಗೆಯಿಂದ ಸುಮಾರು ೫-೬ ಗಂಟೆಗಳ ಕಾರ್ಯಾಚರಣೆ ನಡೆಸಿ ರೆಂಬೆ-ಕೊಂಬೆಗಳ ತೆರವು ಕಾರ್ಯ ಕೈಗೊಂಡಿದೆ. 
    ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಡಿತಗೊಳಿಸಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವ ಮೂಲಕ ಕಡಿತಲೆಗೆ ಸಹಕರಿಸಿದ್ದು, ಸಂಚಾರಿ ಪೊಲೀಸರು ರಸ್ತೆಯ ಎರಡು ಬದಿ ವಾಹನ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಯಶಸ್ವಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. 

ಜು.೨೨ರಂದು ಪ್ರತಿಭಾ ಪುರಸ್ಕಾರ



    ಭದ್ರಾವತಿ : ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೈಗೊಳ್ಳುತ್ತಿರುವ ಕಾರುಣ್ಯ ದಾರಿದೀಪ ಯೋಜನೆಯಲ್ಲಿ ಭಾಗವಹಿಸಿರುವ ೩೨ ಸರ್ಕಾರಿ ಶಾಲೆಗಳಿಂದ ಅತಿ ಹೆಚ್ಚು ಅಂಕ ಗಳಿಸಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಜು.೨೨ರ ಮಂಗಳವಾರ ಬೆಳಿಗ್ಗೆ ೯.೩೦ಕ್ಕೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಕ್ಲಬ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಕೋರಿದೆ. 

ಗುರುವಾರ, ಜುಲೈ 17, 2025

ಕೆಂಪೇಗೌಡ ಜಯಂತಿ: ರಸ ಪ್ರಶ್ನೆ-ಪ್ರಬಂಧ ಸ್ಪರ್ಧೆ

    ಭದ್ರಾವತಿ : ಶ್ರೀ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಅಂಗವಾಗಿ ನ್ಯೂಟೌನ್ ಆದಿಚುಂಚನಗಿರಿ ವಿದ್ಯಾಸಂಸ್ಥೆ(ಎಸ್‌ಎವಿ)ಯಲ್ಲಿ ಜು.೨೨ರ ಮಂಗಳವಾರ ಬೆಳಗ್ಗೆ ೧೦.೩೦ಕ್ಕೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಮತ್ತು ಚಿತ್ರ ಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.  
    ಜಿಲ್ಲಾಧಿಕಾರಿಗಳು ಮತ್ತು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಸೂಚನೆಯಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಆಯೋಜಿಸಿಲಾಗಿದೆ. ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳ ತಲಾ ಇಬ್ಬರು ವಿದ್ಯಾರ್ಥಿಗಳಂತೆ ಭಾಗವಹಿಸಬಹುದಾಗಿದೆ. 

ವೈದ್ಯರು, ಸಿಬ್ಬಂದಿಗಳ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರ : ಕೆ. ಸುಶೀಲಬಾಯಿ

ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡವರಿಗೆ ಬೀಳ್ಕೊಡುಗೆ, ಹೊಸದಾಗಿ ಆಗಮಿಸಿದವರಿಗೆ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ರೋಗಿಗಳ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ವಿವಿಧ ಇಲಾಖೆಗಳ ನೌಕರರಿಗೆ ಸಂಘವು ಬೆನ್ನೆಲುಬಾಗಿ ನಿಂತು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಕೆ. ಸುಶೀಲಾಬಾಯಿ ಹೇಳಿದರು.
    ಅವರು ಹಳೇನಗರದ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದಿಂದ ರಾಷ್ಟ್ರೀಯ ವೈದ್ಯರ, ಶುಶ್ರೂಷಕರ, ಲಿಪಿಕ, ಪ್ರಯೋಗ ಶಾಲೆ, ತಾಂತ್ರಿಕ ಅಧಿಕಾರಿಗಳ, ಆರೋಗ್ಯ ನಿರೀಕ್ಷಕರ ಮತ್ತು ನೌಕರರ ದಿನಾಚರಣೆ ಹಾಗೂ ವರ್ಗಾವಣೆಗೊಂಡ ವೈದ್ಯ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಮತ್ತು ನೂತನವಾಗಿ ಆಗಮಿಸಿದವರಿಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆಸ್ಪತ್ರೆಯಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿ, ನೌಕರರಿಗೆ ಉತ್ತೇಜನ ನೀಡುವ ಕಾರ್ಯ ಸಂಘ ಮುನ್ನಡೆಸಿಕೊಂಡು ಬರುತ್ತಿದೆ ಎಂದರು. 
    ಸಂಘದ ಗೌರವಾಧ್ಯಕ್ಷ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಸಂಘ-ಸಂಸ್ಥೆಗಳಿಗೆ ಸಂಘಟನೆಯೇ ಶಕ್ತಿ ಎಂಬುದನ್ನು ಯಾರೂ ಮರೆಯಬಾರದು. ಸಂಘಟನೆ ಬಲವಾಗಿದ್ದರೆ ಎಂತಹ ಕ್ಲಿಷ್ಟ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಅಂತಹ ಕಾರ್ಯ ನಮ್ಮ ಸಂಘ ಮಾಡಿಕೊಂಡು ಬರುತ್ತಿದೆ. ಮುಂದೆಯೂ ಸಹ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು. 
    ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮಾತನಾಡಿ, ನೌಕರರು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಜೊತೆಗೆ ಸಂಘದ ಕಾರ್ಯಕ್ರಮಗಳು ನಿರಂತರವಾಗಿ ಮುನ್ನಡೆಯುವ ಮೂಲಕ ನೌಕರರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.  
     ಸಂಘದ ಪದಾಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್ ಬಾಗೋಡಿ, ಡಾ. ಅಚ್ಚುತ್, ಡಾ. ಎಚ್.ಎಸ್ ಗಿರೀಶ್, ಇ.ಎ ಅಹಮದ್ ಖಾನ್, ಶೀಲಾಮೇರಿ, ನಾಗರತ್ನ, ಹರೀಶ್, ಪ್ರಶಾಂತ್, ಆನಂದಮೂರ್ತಿ, ಉಮೇಶ್, ನಾಗರಾಜ್, ಧನಂಜಯ್ ಕಟವಾಕರ್ ಸೇರಿದಂತೆ ವಿವಿಧ ವೃಂದದ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು. 

ಕರಾಟೆ ಪಂದ್ಯಾವಳಿಯಲ್ಲಿ ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಕ್ರೀಡಾಪಟುಗಳಿಗೆ ಬಹುಮಾನ

ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಆಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ೨೦ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ನಗರದ ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್‌ನ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ : ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಆಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ೨೦ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್‌ನ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಅಧ್ಯಕ್ಷರಾದ ದೇವರಾಜ್ ನೇತೃತ್ವದಲ್ಲಿ ತರಬೇತಿದಾರರಾದ ಶಬರಿಷ್, ಮನ್ಸೂರ್, ಪ್ರೇಮ್ ಸಾಗರ್, ಪ್ರೇಮ್ ಕುಮಾರ್ ಮತ್ತು ಮನೋಜ್ ಕುಮಾರ್          ಮಾರ್ಗದರ್ಶನದಲ್ಲಿ ಸುಮಾರು ೩೫ ಕ್ರೀಡಾಪಟುಗಳು ಪಂದ್ಯಾವಳಿ ಭಾಗವಹಿಸಿದ್ದಾರೆ. 
    ಈ ಪೈಕಿ ೧೦ ಮೊದಲ ಬಹುಮಾನ, ೧೫ ದ್ವಿತೀಯ ಬಹುಮಾನ ಮತ್ತು ೫ ತೃತೀಯ ಬಹುಮಾನ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ. ಈ ಕ್ರೀಡಾಪಟುಗಳನ್ನು ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಅಧ್ಯಕ್ಷರು ಮತ್ತು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.   

ಜು.೧೮ರಂದು `ಭಾವಗೀತೆಗಳ ಗೀತಗಾಯನ' ಕಾರ್ಯಕ್ರಮ



    ಭದ್ರಾವತಿ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿವಂಗತ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿಯವರ ಸ್ಮರಣಾರ್ಥ ಜು.೧೮ರ ಶುಕ್ರವಾರ ಸಂಜೆ ೪.೩೦ಕ್ಕೆ ಹಳೇನಗರ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ `ಭಾವಗೀತೆಗಳ ಗೀತಗಾಯನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜನ್ನಾಪುರ ಸಂಗೀತ ಶಿಕ್ಷಕಿ ಗಾಯಿತ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ನಿವೃತ್ತ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ಉಪಸ್ಥಿತರಿರುವರು. 
ಸುಮತಿ ಕಾರಂತ್, ಕಮಲಾಕುಮಾರಿ, ಆರ್.ಜಿ ಭಾರ್ಗವಿ, ಎನ್.ಎಂ ಸುನಂದ, ಅನುಪಮ ಚನ್ನೇಶ್, ಎಚ್.ಸಿ ಸುನಂದ, ವಾಣಿಶ್ರೀ ನಾಗರಾಜ್, ಶ್ಯಾಮಲ, ಸುಚಿತ್ರ, ದಿವಾಕರ್, ಡಿ.ಆರ್ ಹರೀಶ್ ಮತ್ತು ರುದ್ರೇಶ್ ಸೇರಿದಂತೆ ಇನ್ನಿತರರು ಗಾಯನ ಪ್ರಸ್ತುತಪಡಿಸಲಿದ್ದಾರೆ.

ಸ್ತನ ಕ್ಯಾನ್ಸರ್ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ : ಡಾ. ಅನುರಾಧ ಪಟೇಲ್

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ರೋಟರಿ ಕ್ಲಬ್ ಸಹಯೋಗದೊಂದಿಗೆ ಶಿವಮೊಗ್ಗ ನಾರಾಯಣ ಹೃದಯಾಲಯ ವತಿಯಿಂದ ಸ್ತನ  ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.  
    ಭದ್ರಾವತಿ: ಮಹಿಳೆಯರು ಸ್ತನ ಕ್ಯಾನ್ಸರ್ ಕುರಿತು ಆತಂಕಪಡುವ ಅಗತ್ಯವಿಲ್ಲ. ಅಲ್ಲದೆ ಯಾವುದೇ ರೀತಿ ಹಿಂಜರಿಕೆಗೆ ಒಳಗಾಗದೆ ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು. 
    ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ರೋಟರಿ ಕ್ಲಬ್ ಸಹಯೋಗದೊಂದಿಗೆ ಶಿವಮೊಗ್ಗ ನಾರಾಯಣ ಹೃದಯಾಲಯ ವತಿಯಿಂದ ಏರ್ಪಡಿಸಲಾಗಿದ್ದ ಸ್ತನ  ಕ್ಯಾನ್ಸರ್ ತಪಾಸಣಾ ಶಿಬಿರದ ನೇತೃತ್ವವಹಿಸಿ ಮಾತನಾಡಿದರು. 
    ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿ ಮಹಿಳೆಯರು ಮೊದಲು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರು ಆರೋಗ್ಯವಂತರಾಗಿದ್ದರೆ ಕುಟುಂಬ ನೆಮ್ಮೆದಿಯಿಂದ ಇರಲು ಸಾಧ್ಯ ಎಂದರು. 
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ತಜ್ಞ ವೈದ್ಯೆ ಡಾ. ಸ್ವಾತಿ ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಗುಣಮುಖರಾಗುವಂತೆ ಕರೆ ನೀಡಿದರು.  ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಚ್ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಕ್ಲಬ್ ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಶ್ರೀನಿವಾಸ್, ದುಷ್ಯಂತ್‌ರಾಜ್, ಗಿರೀಶ್ ಮತ್ತು ರೋಟರಿ ಕ್ಲಬ್ ಪದಾಧಿಕಾರಿಗಳು, ನಿರ್ದೇಶಕರು, ನಾರಾಯಣ ಹೃದಯಾಲಯ ಆಸ್ಪತ್ರೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಗಣೇಶ್, ಶಿಬಿರದ ಸಂಯೋಜಕ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.