ಎಂಪಿಎಂ ನೊಂದ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಆಗ್ರಹ
ರಾಷ್ಟ್ರೀಯ ಸಂಘರ್ಷ ಸಮಿತಿಯು (ಎನ್‌ಎಸಿ) ಕೇಂದ್ರ ಸರ್ಕಾರದ ವಿರುದ್ದ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗು ಸಮಾವೇಶದಲ್ಲಿ ಭದ್ರಾವತಿ ಎಂಪಿಎಂ ನೊಂದ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ: ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರರಿಗೆ ಭವಿಷ್ಯ ನಿಧಿ ಕನಿಷ್ಠ ಪಿಂಚಣಿಯನ್ನು ಪ್ರತಿ ತಿಂಗಳಿಗೆ ೭,೫೦೦ ರು. ಹೆಚ್ಚಿಸುವಂತೆ ಲೋಕಸಭೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಎಂಪಿಎಂ ನೊಂದ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಆಗ್ರಹಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿಯು (ಎನ್‌ಎಸಿ) ಕೇಂದ್ರ ಸರ್ಕಾರದ ವಿರುದ್ದ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ನಿವೃತ್ತ ನೌಕರರಿಗೆ ಭವಿಷ್ಯ ನಿಧಿ ಕನಿಷ್ಠ ಪಿಂಚಣಿ ಹೆಚ್ಚಿಸಬೇಕು. ಪ್ರಸ್ತುತ ನಿವೃತ್ತ ನೌಕರರಿಗೆ ನೀಡಲಾಗುತ್ತಿರುವ ಪಿಂಚಣಿ ಕಡಿಮೆ ಪ್ರಮಾಣದಲ್ಲಿದ್ದು, ಇದರಿಂದಾಗಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ನಿವೃತ್ತ ನೌಕರರಿಗೆ ನ್ಯಾಯಯುತವಾಗಿ ಲಭಿಸಬೇಕಾದ ಪಿಂಚಣಿ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸುಮಾರು ೩೦ ರಿಂದ ೪೦ ವರ್ಷಗಳ ಕಾಲ ದುಡಿದಿರುವ ನೌಕರರಿಗೆ ಅತ್ಯಂತ ಕಡಿಮೆ ಪಿಂಚಣಿ ನೀಡುವುದು ಸರಿಯಲ್ಲ. ಗೌರವಯುತ ಜೀವನ ನಡೆಸಲು ಕನಿಷ್ಠ ಪಿಂಚಣಿ ಪ್ರತಿ ತಿಂಗಳಿಗೆ ೭,೫೦೦ ರು. ಹೆಚ್ಚಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಗರದಿಂದ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಸಂಚಾಲಕರಾದ ವಿ. ಗೋವಿಂದಪ್ಪ ಮತ್ತು ಆರ್.ಎ ಬಾಪುರವರು ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.