ದೆಹಲಿಗೆ ತೆರಳಿದ ನಿಯೋಗಕ್ಕೆ ಸಂಸದರ ನೇತೃತ್ವ
ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದ ಬಿ.ವೈ ರಾಘವೇಂದ್ರರವರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರನ್ನು ಭೇಟಿಮಾಡಿಸಿ ವಸತಿಗೃಹಗಳ ಬಾಡಿಗೆ ಕಡಿತಗೊಳಿಸುವ ಸಂಬಂಧ ಚರ್ಚಿಸಿದ್ದಾರೆ.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ವಸತಿಗೃಹಗಳ ಬಾಡಿಗೆ ದರ ಕಡಿಮೆಗೊಳಿಸುವುದು ಹಾಗು ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಟ್ಟು ಬಾಡಿಗೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸಲ್ಲಿಸಲಾಗಿದ್ದ ಮನವಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವಾಲಯದಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ.
ನಿವೃತ್ತ ಕಾರ್ಮಿಕರ ವಸತಿಗೃಹಗಳಿಗೆ ಪ್ರತಿ ೧೧ ತಿಂಗಳಿಗೆ ಸ್ವಯಂಚಾಲಿತವಾಗಿ ಬಾಡಿಗೆದರ ಏರಿಕೆಯಾಗುತ್ತಿದ್ದು, ಅದರಲ್ಲೂ ಹೆಚ್ಚಿನ ಬಾಡಿಗೆ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆಗೊಳಿಸುವುದು. ಪ್ರಸ್ತುತ ೧೧ ತಿಂಗಳ ಬಾಡಿಗೆ ಪರಿಷ್ಕರಣೆಯನ್ನು ಪ್ರತಿ ೫ ವರ್ಷಗಳಿಗೆ ನಿಗದಿಪಡಿಸುವಂತೆ ಮತ್ತು ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಡುವಂತೆ ಕೋರಿ ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿದ್ದ ಸಂಸದರು ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರಿಗೆ ಪತ್ರ ಬರೆದು ಕೋರಿದ್ದರು. ಈ ನಡುವೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ತೆಕಾತ್ ಸಿಂಗ್ ಅವರನ್ನು ಭೇಟಿಮಾಡಿಸಿ ಚರ್ಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿದೆ.
ಈ ಕುರಿತು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಪತ್ರಿಕೆಗೆ ಮಾಹಿತಿ ನೀಡಿ, ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗು ಸಂಸದ ಬಿ.ವೈ ರಾಘವೇಂದ್ರರವರಿಗೆ ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ನಿವೃತ್ತ ಕಾರ್ಮಿಕರ ಮತ್ತಷ್ಟು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷ ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ