ಗುರುವಾರ, ಆಗಸ್ಟ್ 14, 2025

ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರುವ ಹುನ್ನಾರ : ಆ.೧೫ರಂದು ಬೃಹತ್ ಸಹಿ ಸಂಗ್ರಹ ಅಭಿಯಾನ


    ಭದ್ರಾವತಿ : ಕೋಟ್ಯಾಂತರ ಹಿಂದುಗಳ ಪವಿತ್ರ ಕ್ಷೇತ್ರ  ಶ್ರೀ ಮಂಜುನಾಥಸ್ವಾಮಿ ಪುಣ್ಯ ಸನ್ನಿಧಿಗೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ಬಳಗದ ವತಿಯಿಂದ ಆ.೧೫ರಂದು ಬೆಳಿಗ್ಗೆ ೧೦.೩೦ಕ್ಕೆ ಬೃಹತ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. 
`    ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ನಿಲ್ಲಲಿ! ನಿಲ್ಲಲಿ!' ಎಂಬ ಘೋಷ ವಾಕ್ಯದೊಂದಿಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಮೀಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಕಲಾ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಿ : ಅಪೇಕ್ಷ ಮಂಜುನಾಥ್

ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯ ವೇನ್ಸ್ ಹಾಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸೋನಿ ಗಾಯನ ಕಲಾವೃಂದದ ೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸೋನಿ ರಾಜ್ಯ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ  ಅಪೇಕ್ಷ ಮಂಜುನಾಥ್ ಉದ್ಘಾಟಿಸಿದರು.    
    ಭದ್ರಾವತಿ : ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಕಲಾ ಕ್ಷೇತ್ರದ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಕರೆ ನೀಡಿದರು.
  ಅವರು ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯ ವೇನ್ಸ್ ಹಾಲ್ ಸಭಾಂಗಣದಲ್ಲಿ ಗುರುವಾರ ಸೋನಿ ಗಾಯನ ಕಲಾವೃಂದದ ೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸೋನಿ ರಾಜ್ಯ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ನಗರದಲ್ಲಿ ನೂರಾರು ಮಂದಿ ರಂಗಭೂಮಿ, ಸಂಗೀತ, ನೃತ್ಯ, ಜಾನಪದ ಸೇರಿದಂತೆ ಹಲವಾರು ವಿಭಿನ್ನ ಕಲೆಗಳಲ್ಲಿ ಹಾಗು ಕುಸ್ತಿ, ಕಬ್ಬಡಿ ಸೇರಿದಂತೆ ಮುಂತಾದ ಕ್ರೀಡೆಗಳಲ್ಲಿ ರಾಷ್ಷ್ರಮಟ್ಟದವರೆಗೂ ಹೆಸರು ಮಾಡಿದ್ದರು. ಇದು ಕಲೆಗಳ ಬೀಡಾಗಿತ್ತು. ಕ್ರಮೇಣ ಎರಡು ಕಾರ್ಖಾನೆಗಳ ದು:ಸ್ಥಿತಿಯಿಂದಾಗಿ ಕಲಾ ಕ್ಷೇತ್ರದ ಬೆಳವಣಿಗೆ ಪೋತ್ಸಾಹವಿಲ್ಲದೆ ಹಿನ್ನಡೆಯಾಗುವ ಜೊತೆಗೆ ಕಲಾವಿದರು, ಕಲೆಗಳು ಕಣ್ಮರೆಯಾಗುತ್ತಿವೆ.  ಕಲೆಯ ಬೀಡನ್ನು ಪುನಹ ಪ್ರತಿಷ್ಟಾಪಿಸಲು ಇಂತಹ ಕಲಾವಿದರಿಂದ ಸಾಧ್ಯವಿದೆ ಎಂದರು.
    ಲಯನ್ಸ್ ಶುಗರ್‌ಟೌನ್ ಅಧ್ಯಕ್ಷ ಡಾ. ಗುರುರಾಜ್, ಲಯನ್ಸ್ ವಿಭಾಗೀಯ ಅಧ್ಯಕ್ಷ ಎಲ್. ದೇವರಾಜ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಪ್ರಸೂತಿ ತಜ್ಞ ವೈದ್ಯೆ ಡಾ. ವರ್ಷ, ನ್ಯಾಯವಾದಿ ಎ. ನಾರಾಯಣಸ್ವಾಮಿ ಮತ್ತು ಜನ್ನಾಪುರ ಸೌಂದರ್ಯ ವರ್ಧನ ತರಬೇತುದಾರರಾದ ಜಿ. ಸುಮಾ ಅವರನ್ನು ಸನ್ಮಾನಿಸಿ ಸೋನಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೋನಿ ಗಾಯನ ಕಲಾವೃಂದದ ಅಧ್ಯಕ್ಷ ಸೋನಿ ಹರೀಶ್ ಅಧ್ಯಕ್ಷತೆವಹಿಸಿ ಕೃತಜ್ಞತೆ ಸಲ್ಲಿದರು. ಕಲಾವಿದ ಅರುಣ್ ಕಾರ್ಯಕ್ರಮ ನಿರೂಪಿಸಿದರು. 

ತಾಲೂಕು ಆಡಳಿತದ ವಿರುದ್ಧ ಜೆಡಿಎಸ್ ಪ್ರತಿಭಟನೆ : ಉಪವಿಭಾಗಾಧಿಕಾರಿಗೆ ದೂರು

ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ 

ಭದ್ರಾವತಿಯಲ್ಲಿ ತಾಲೂಕು ಕಛೇರಿ ಆವರಣದಲ್ಲಿ ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗುರುವಾರ ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ : ತಾಲೂಕು ಆಡಳಿತ ಯಂತ್ರ ಕುಸಿದಿದ್ದು, ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ರೈತರು ಹಾಗು ಕೃಷಿ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಜೆಡಿಎಸ್ ಮುಖಂಡರು ಆರೋಪಿಸಿದರು. 
    ಗುರುವಾರ ತಾಲೂಕು ಕಛೇರಿ ಆವರಣದಲ್ಲಿ ಜಾತ್ಯತೀತ ಜನತಾದಳ ವತಿಯಿಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ, ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಮುಖರಾದ ಗೊಂದಿ ಜಯರಾಂ, ಎಂ.ಎ ಅಜಿತ್, ತಿಮ್ಮೇಗೌಡ, ಸುರೇಶ್, ಎ. ಮಸ್ತಾನ್, ಎಚ್.ಬಿ ರವಿಕುಮಾರ್ ಸೇರಿದಂತೆ ಇನ್ನಿತರರು, ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಭೂಮಿ ಜಂಟಿ ಸರ್ವೇ ಮಾಡದೆ, ರೈತರಿಗೆ ಯಾವುದೇ ಪೋಡಿ ದುರಸ್ತಿ ಮಾಡದೆ ಇರುವುದರಿಂದ ಹಲವರಿಗೆ ಖಾತೆ ಬದಲಾವಣೆ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಭೂಮಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿದ್ದು, ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಟ್ಟಿ ಮತ್ತು ನೆಟ್ಟಕಲ್ಲಹಟ್ಟಿ ಗ್ರಾಮಗಳಲ್ಲಿ ಕಂದಾಯ ಹಾಗು ಅರಣ್ಯ ಭೂಮಿಯನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೇರೆಯವರು ಕಬಳಿಸುತ್ತಿದ್ದಾರೆ. ತಾಲೂಕು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು. 

    
    ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆ ಗಂಗೂರು ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಏಕಾಏಕಿ ನೂರಾರು ಅಡಕೆ ಸಸಿಗಳನ್ನು ಕಡಿದು ಹಾಕಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಯಾವುದೇ ನೋಟಿಸ್ ಸಹ ನೀಡಿರುವುದಿಲ್ಲ. ಜಮೀನಿನ ಮಾಲೀಕರೊಂದಿಗೆ ಚರ್ಚಿಸದೆ, ಯಾವುದೇ ಪರಿಹಾರ ಸಹ ನೀಡದೇ ದೌರ್ಜನ್ಯವೆಸಗಿರುವುದು ಖಂಡನೀಯ. ಅಲ್ಲದೆ ವಿನಾಕಾರಣ ಕೆಲವರ ವಿರುದ್ಧ ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸದೆ ಒತ್ತಡಕ್ಕೆ ಮಣಿದು ದೌರ್ಜನ್ಯವೆಸಗುತ್ತಿದ್ದಾರೆಂದು ದೂರಿದರು.   
    ತಾಲೂಕು ಆಡಳಿತದ ವಿರುದ್ಧ ಉಪವಿಭಾಗಾಧಿಕಾರಿಗಳ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಚಂದ್ರೇಗೌಡ, ಧರ್ಮೇಗೌಡ, ಡಿ ಆನಂದ, ಜಯರಾಮ, ಮಧುಸೂದನ್, ಮೋಹನ್ ರಾವ್, ಧರ್ಮರಾಜ್, ಭಾಗ್ಯಮ್ಮ, ಸುಬ್ಬಣ್ಣ, ಉದಯಕುಮಾರ್, ಆರ್. ಮೋಹನ್ ಕುಮಾರ್, ಗುಣಶೇಖರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಬುಧವಾರ, ಆಗಸ್ಟ್ 13, 2025

ಮಜ್ಜಿಗೆಹಳ್ಳಿ ಗೊಂದಿ ಚಾನಲ್ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ

    ಭದ್ರಾವತಿ : ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಕಾಲೋನಿ-ಬಾಬಳ್ಳಿ ನಡುವಿನ ಮಜ್ಜಿಗೆಹಳ್ಳಿ ಗ್ರಾಮದ ಗೊಂದಿ ಚಾಲನ್ ಬಳಿ ನಗ್ನ ಸ್ಥಿತಿಯಲ್ಲಿ  ಅಪರಿಚಿತ ಮಹಿಳೆಯ ಮೃತದೇಹ ಬುಧವಾರ ಸಂಜೆ ಪತ್ತೆಯಾಗಿದೆ.  
    ಮೃತದೇಹ ಕೊಳತೆ ಸ್ಥಿತಿಯಲ್ಲಿದ್ದು, ಮೃತ ದೇಹದ ಗುರುತು ಪತ್ತೆಯಾಗಬೇಕಿದೆ. ಮಹಿಳೆಯ ವಯಸ್ಸು ೩೫ ರಿಂದ ೪೫ರ ಆಸುಪಾಸಿನಲ್ಲಿರಬಹುದೆಂದು ಅಂದಾಜಿಸಲಾಗಿದ್ದು, ಮೇಲ್ನೋಟಕ್ಕೆ ಅನುಮಾನಸ್ಪದವಾಗಿ ಮೃತಪಟ್ಟಿರುವುದು ಕಂಡು ಬರುತ್ತಿದೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಅನುಮಾನಸ್ಪದ ಸಾವಿನ ಪ್ರಕರಣ ಎಂದು ದಾಖಲಿಸಿಕೊಳ್ಳಲಾಗಿದೆ. 

ಆ.೧೪ರಂದು ಸೋನಿ ಗಾಯನ ಕಲಾ ವೃಂದ ೨ನೇ ವರ್ಷದ ವಾರ್ಷಿಕೋತ್ಸವ

    ಭದ್ರಾವತಿ : ನಗರದ ಸೋನಿ ಗಾಯನ ಕಲಾ ವೃಂದ ೨ನೇ ವರ್ಷದ ವಾರ್ಷಿಕೋತ್ಸವ ಹಾಗು ಸೋನಿ ರಾಜ್ಯ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಸಮಾರಂಭ ಆ.೧೪ರಂದು ಗುರುವಾರ ಮಧ್ಯಾಹ್ನ ೧೨.೧೫ಕ್ಕೆ ನ್ಯೂಟೌನ್ ವೇನ್ಸ್ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಸೋನಿ ಗಾಯನ ಕಲಾ ವೃಂದ ಅಧ್ಯಕ್ಷ ಆರ್. ಸೋನಿ ಹರೀಶ್ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಪೇಕ್ಷ ಮಂಜುನಾಥ್ ಸಮಾರಂಭ ಉದ್ಘಾಟಿಸಲಿದ್ದಾರೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ. ವರ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನ್ಯಾಯವಾದಿ ಎ. ನಾರಾಯಣ ಸ್ವಾಮಿ ಮತ್ತು ಸೌಂದರ್ಯ ವಧನ ತರಬೇತಿದಾರರಾದ ಜಿ. ಸುಮಾ ಅವರಿಗೆ ಸೋನಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಬೈಕ್‌ರ್‍ಯಾಲಿ

ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳಿಂದ ಅರಿವು 

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್)-೯೭ ಬೆಟಾಲಿಯನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹರ್ ಘರ್ ತಿರಂಗ ಬೈಕ್‌ರ್‍ಯಾಲಿ ನಡೆಸಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.       
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್)-೯೭ ಬೆಟಾಲಿಯನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹರ್ ಘರ್ ತಿರಂಗ ಬೈಕ್‌ರ್‍ಯಾಲಿ ನಡೆಸಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.       
    ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ದೇಶದ ಸ್ವಾತಂತ್ರ್ಯದ ಮಹತ್ವ ತಿಳಿಸಲು ಮತ್ತು ತ್ರಿವರ್ಣ ಧ್ವಜದ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಹೆಚ್ಚಿಸಲು ಬೆಟಾಲಿಯನ್ ಕಮಾಂಡರ್ ಕಮಲೇಶ್ ನೇತೃತ್ವದಲ್ಲಿ ರ್‍ಯಾಲಿ ನಡೆಸಲಾಯಿತು. .
    ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗು ಶಿಕ್ಷಕರೊಂದಿಗೆ ಸಂವಾದ ಮತ್ತು ದೇಶ ಭಕ್ತಿ ವಿಚಾರದ ಅರಿವು ಮೂಡಿಸಿ ಪ್ರತಿ ಮನೆಯ ಮೇಲೂ ದೇಶ ಭಕ್ತಿಗಾಗಿ ತಿರಂಗ ಬಾವುಟ ಹಾರಿಸಲು ಕರೆ ನೀಡಲಾಯಿತು. 
    ಆರ್‌ಎಎಫ್ ಕಮಾಂಡರ್-೨ ಸಂತೋ ಹಾಗು ಸಿಬ್ಬಂದಿ ವರ್ಗದವರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಶಾಲಾ ಮಕ್ಕಳು ಮತ್ತು ಶಿಕ್ಷಕರು ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ತ್ರಿವರ್ಣ ಧ್ವಜ ಹಿಡಿದು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಂತಸ ವ್ಯಕ್ತ ಪಡಿಸಿದರು.
 

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ತ್ರಿವರ್ಣ ಧ್ವಜ ಹಿಡಿದು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಂತಸ ವ್ಯಕ್ತ ಪಡಿಸಿದರು.


ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ : ಆ.೧೬ರಂದು ವಿವಿಧ ಕಾರ್ಯಕ್ರಮ

ಭದ್ರಾವತಿಯಲ್ಲಿ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗದಿಂದ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದಕುಮಾರ್ ಮಾತನಾಡಿದರು.  
    ಭದ್ರಾವತಿ: ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬದ ಪ್ರಯುಕ್ತ ಆ.೧೬ರಂದು ನಗರದ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದಕುಮಾರ್ ತಿಳಿಸಿದರು. 
    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಬಿ.ವೈ ರಾಘವೇಂದ್ರರವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂಬ ಆಶಾಭಾವನೆ ನಮ್ಮದಾಗಿದೆ. ಅವರ ಅಭಿಮಾನಿ ಬಳಗದಿಂದ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದೆ ಎಂದರು. 
    ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೮.೩೦ಕ್ಕೆ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಜಿ. ಆನಂದಕುಮಾರ್ ಮತ್ತು ತಂಡದಿಂದ ಕುಂಕುಮಾರ್ಚನೆ, ೯ಕ್ಕೆ ಬಿ.ಎಚ್ ರಸ್ತೆ, ಕಡದಕಟ್ಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ೯.೩೦ಕ್ಕೆ ರವಿ ಮತ್ತು ಸ್ನೇಹಿತರಿಂದ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ೧೧ ಗಂಟೆಗೆ ಪ್ರಸನ್ನ ಮತ್ತು ಸ್ನೇಹಿತರಿಂದ ಬಾರಂದೂರು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗು ಪ್ರಸಾದ ವಿನಿಯೋಗ ಮತ್ತು ಮಧ್ಯಾಹ್ನ ೧ಕ್ಕೆ ಮಂಗೋಟೆ ರುದ್ರೇಶ್ ಮತ್ತು ಸಾಗರ್ ಅವರಿಂದ ತಾಲೂಕಿನ ದೊಡ್ಡೇರಿ, ಉದ್ದಾಮ ಕ್ಷೇತ್ರ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. 
ಈ ನಡುವೆ ಬೆಳಿಗ್ಗೆ ೮ ಗಂಟೆಗೆ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ತಿಂಡಿ ವ್ಯವಸ್ಥೆ, ೧೦ ಗಂಟೆಗೆ ತಾಲೂಕಿನ ಹೊಸಮನೆ, ಗುಡ್ಡದ ನೇರಲೇಕೆರೆ, ಸಿಂಗನಮನೆ ಮತ್ತು ಕೂಡ್ಲಿಗೆರೆ ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಪೆನ್ ವಿತರಣೆ, ಮಧ್ಯಾಹ್ನ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆ ಹಾಗು ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೊಮ್ಮನಕಟ್ಟೆ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಹಾಗು ಬೈಪಾಸ್ ರಸ್ತೆ, ಎಂಪಿಎಂ ಬಡಾವಣೆಯ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಸಿಹಿ ಮತ್ತು ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು.  
ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಹುಟ್ಟುಹಬ್ಬ ಆಚರಣೆ, ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ೬ಕ್ಕೆ ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಹಾಗು ರಾತ್ರಿ ೮ಕ್ಕೆ ನ್ಯೂಟೌನ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ. ಆನಂದಕುಮಾರ್, ದುಗ್ಗೇಶ್ ತೇಲ್ಕರ್, ಹನುಮಂತನಾಯ್ಕ, ಮಂಗೋಟೆ ರುದ್ರೇಶ್, ಬಿ.ಜಿ ರಾಮಲಿಂಗಯ್ಯ, ಛಲವಾದಿ ಕೃಷ್ಣ, ಎಂ. ಮಂಜುನಾಥ್, ರಘುರಾವ್, ಚನ್ನೇಶ್, ವಿನೋದ್ ಕುಮಾರ್, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.