ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಲಕ್ಷ್ಮಿ.
ಭದ್ರಾವತಿ : ಸುಮಾರು ೯ ವರ್ಷಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಹಾಗು ಓರ್ವನಿಗೆ ೭ ವರ್ಷ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿಗಳಾದ ಲಕ್ಷ್ಮಿ(೩೮) ಮತ್ತು ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ(೩೯) ಮರಣ ದಂಡನೆ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಶಿವರಾಜ ಅಲಿಯಾಸ್ ಶಿಷು ಅಲಿಯಾಸ್ ಶಿವರಾಜು(೪೧)ಗೆ ೭ ವರ್ಷ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷಕ ಇಮ್ತಿಯಾಜ್ ಅಹಮದ್ ಖಾನ್ ಕೊಲೆಯಾದ ದುರ್ದೈವಿಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಇವರ ಸಹೋದರ(ತಮ್ಮ) ಜು.೮, ೨೦೧೬ರ ರಾತ್ರಿ ದೂರು ನೀಡಿ ಉದ್ದೇಶ ಪೂರ್ವಕವಾಗಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಹೊಳೆಗೆ ಎಸೆದಿದ್ದು, ಹುಡುಕಿ ಕೊಡುವಂತೆ ಕೋರಿದ್ದರು.
ಇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಂದಿನ ಠಾಣಾಧಿಕಾರಿಯಾಗಿದ್ದ ತನಿಖಾಧಿಕಾರಿ ಟಿ.ಕೆ ಚಂದ್ರಶೇಖರ್ ಮತ್ತು ಮಹಿಳಾ ಕಾನ್ಸ್‌ಸ್ಟೇಬಲ್ ಸಹಾಯಕ ತನಿಖಾಧಿಕಾರಿಯಾಗಿದ್ದ ಅನ್ನಪೂರ್ಣರವರು ೩ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಘಟನೆ ವಿವರ :
ಇಮ್ತಿಯಾಜ್ ಅಹಮದ್ ಖಾನ್ ಗುಲ್ಬರ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಇಮ್ತಿಯಾಜ್ ಸೊರಬ ತಾಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾನೆ. ಲಕ್ಷ್ಮಿ ತಾಲೂಕಿನ ಅಂತರಗಂಗೆ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾಳೆ. ಇಮ್ತಿಯಾಜ್ ತನ್ನ ತಮ್ಮನ ಮನೆಯಲ್ಲೇ ಇದ್ದು, ಅಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದನು. ಲಕ್ಷ್ಮಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ವಾಸವಿದ್ದಳು. ಈ ನಡುವೆ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ಚಾಲಕ ಕೃಷ್ಣಮೂರ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಈ ಹಿನ್ನಲೆಯಲ್ಲಿ ಲಕ್ಷ್ಮೀ ಮನೆ ಸಮೀಪದಲ್ಲಿಯೇ ಈತನ ಸಹ ವಾಸವಿದ್ದನು ಎನ್ನಲಾಗಿದೆ. ಈ ವಿಚಾರ ಇಮ್ತಿಯಾಜ್‌ಗೆ ತಿಳಿದು ಆಗಾಗ ಲಕ್ಷ್ಮಿ ಜೊತೆಗೆ ಜಗಳ ಸಹ ನಡೆದಿದೆ.
ಜು.೭, ೨೦೧೬ರ ರಾತ್ರಿ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಇಮ್ತಿಯಾಜ್ ಕೊಲೆಯೊಂದಿಗೆ ಅಂತ್ಯವಾಗಿದೆ. ಈ ವಿಚಾರ ಲಕ್ಷ್ಮಿ ಇಮ್ಮಿಯಾಜ್ ತಮ್ಮನಿಗೆ ತಿಳಿಸಿದ್ದು, ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಬೈಪಾಸ್ ರಸ್ತೆಯ ಭದ್ರಾ ಸೇತುವೆ ಬಳಿ ನದಿಗೆ ಎಸೆದಿದ್ದರು. ಈ ಕೃತ್ಯಕ್ಕೆ ಸಹಕರಿಸಿದ್ದ ಶಿವರಾಜುನನ್ನು ಸಹ ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು.