ಗುರುವಾರ, ಸೆಪ್ಟೆಂಬರ್ 11, 2025

ಶಾಲಾ ನಿವೇಶನ ಭೂ ಪರಿವರ್ತನೆ, ಕಟ್ಟಡ ತೆರಿಗೆ ವಿನಾಯಿತಿ ಕೋರಿ ಶಾಸಕರಿಗೆ ಮನವಿ

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳ ನಿವೇಶನ ಭೂ ಪರಿವರ್ತನೆಗೆ ಅವಕಾಶ ಮತ್ತು ಶಾಲಾ ನಿವೇಶನ ಹಾಗೂ ಕಟ್ಟಡಗಳ ತೆರಿಗೆ ವಿನಾಯಿತಿ ಮತ್ತಿತರೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳ ನಿವೇಶನ ಭೂ ಪರಿವರ್ತನೆಗೆ ಅವಕಾಶ ಮತ್ತು ಶಾಲಾ ನಿವೇಶನ ಹಾಗೂ ಕಟ್ಟಡಗಳ ತೆರಿಗೆ ವಿನಾಯಿತಿ ಮತ್ತಿತರೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು. 
    ಒಕ್ಕೂಟದ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ಸು ಸಾಧಿಸಿ, ಅತ್ಯುತ್ತಮ ಫಲಿತಾಂಶ ನೀಡುವಲ್ಲಿ ಮುಂದಾಗಿರುವ ಖಾಸಗಿ ಶಾಲಾ-ಕಾಲೇಜುಗಳ ಸೇವೆ ಅನನ್ಯವಾಗಿದೆ.  ಸರ್ಕಾರ ಶಾಲಾ ಅಭಿವೃದ್ದಿಗೆ ಸಹಕರಿಸುವ ಬದಲು ಶಿಕ್ಷಣ ಇಲಾಖೆ ಮೂಲಕ ಹೊಸ ಹೊಸ ಕಾನೂನುಗಳ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳ ಕಿರಿಕಿರಿಗೆ ಕಾರಣವಾಗಿದೆ. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮಾನಸಿಕವಾಗಿ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು. 
  ನಗರ ಮತ್ತು ಗ್ರಾಮಾಂತರ ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳಿಗೂ ಒಂದೇ ಮಾದರಿಯಲ್ಲಿ ತೆರಿಗೆ ವಿನಾಯಿತಿ ನೀಡಬೇಕು. ಸಕ್ಷಮ ಪ್ರಾಧಿಕಾರದಿಂದ ಖಾತೆ ಅಥವಾ ಕಟ್ಟಡ ನಕ್ಷೆ ಅನುಮೋದನೆ, ಪರಿಗಣನೆ, ಶಾಲಾ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಬೇಕು. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ದಕ್ಷತೆ ಹೆಸರಲ್ಲಿ ಸರಳೀಕರಣ, ಪ್ರತಿ ೧೦ ವರ್ಷಕ್ಕೆ ಶಾಲಾ ಪರವಾನಗಿ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು. 
ಮನವಿಗೆ ಸ್ಪಂದಿಸಿದ ಶಾಸಕರು ಸಂಗಮೇಶ್ವರ್  ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
  ಒಕ್ಕೂಟದ ಉಪಾಧ್ಯಕ್ಷರಾದ ಡಾ. ವಿನೀತ್ ಆನಂದ್, ಲತಾ ರಾಬರ್ಟ್, ಕಾರ್ಯದರ್ಶಿ ಶಿವಲಿಂಗೇಗೌಡ, ಸಹ ಕಾರ್ಯದರ್ಶಿಗಳಾದ ಬಿ.ಎಂ ಸಂತೋಷ್, ಬಿ. ದೇವರಾಜ್, ಖಜಾಂಚಿ ಡಾ. ನಾಗರಾಜ್, ನಿರ್ದೇಶಕರುಗಳಾದ ಬಿ. ಜಗದೀಶ್, ಬಿ.ಸಿ ಪ್ರಸಾದ್, ಪ್ರಭಾಕರ್, ಜರೇನಾಬೇಗಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ : ವಿವಿಧ ಸಂಘ-ಸಂಸ್ಥೆಗಳ, ದೇವಸ್ಥಾನ ಸಮಿತಿಗಳೊಂದಿಗೆ ಸಭೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು. 
    ಸಭೆ ಆರಂಭದಲ್ಲಿ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆ ರೂಪುರೇಷೆಗಳನ್ನು ತಿಳಿಸಿದರು. ವಿವಿಧ ದೇವಸ್ಥಾನಗಳ ಸಮಿತಿ ಪ್ರಮುಖರು ಮಾತನಾಡಿ, ದಸರಾ ಮೆರವಣಿಗೆ ವ್ಯವಸ್ಥಿತವಾಗಿ ನಡೆಯಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಬೇಕು. ನಗರದ ಎಲ್ಲಾ ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನ ಸಮಿತಿಯವರು ಎಲ್ಲಾ ರೀತಿಯ ಸಿದ್ದತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಯಿತು. 
    ಈ ನಡುವೆ ಕೆಲವು ದೇವಸ್ಥಾನಗಳ ಸಮಿತಿಯವರು ಮಾತನಾಡಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನಗಳಿಗೆ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕು. ಈ ಹಿಂದೆ ಗೌರವಧನದ ಚೆಕ್ ಬೌನ್ಸ್ ಆಗಿದ್ದು, ಇದನ್ನು ವಿಚಾರಿಸಲು ನಗರಸಭೆಗೆ ಬಂದರೆ ಅಧಿಕಾರಿಗಳು ಅಗೌರವದಿಂದ ವರ್ತಿಸುತ್ತಾರೆಂದು ದೂರುವ ಮೂಲಕ ದೇವಸ್ಥಾನ ಸಮಿತಿಗಳಿಗೆ ಅವಮಾನ ಮಾಡುವ ಕೆಲಸ ಮಾಡಿಬೇಡಿ ಎಂದರು. 
    ಮೆರವಣಿಗೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ, ಸ್ವಸಹಾಯ ಸಂಘಗಳ ಮಹಿಳೆಯರು, ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಜೊತೆಗೆ ಮೆರವಣಿಗೆಯಲ್ಲಿ ಶಾಲಾ-ಕಾಲೇಜು, ಪೊಲೀಸ್ ಹಾಗು ಗೃಹರಕ್ಷಕ ದಳದಿಂದ ಪಥಸಂಚಲನ ನಡೆಸಬೇಕು. ಇದರಿಂದ ಮೆರವಣಿಗೆಗೆ ಮತ್ತಷ್ಟು ಮೆರಗು ಬರಲಿದೆ ಎಂದು ಸಲಹೆ ವ್ಯಕ್ತಪಡಿಸಲಾಯಿತು. 
    ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಾಡಹಬ್ಬ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ನಾಡಹಬ್ಬ ದಸರಾ ಆಚರಣೆಗೆ ವಿಶಿಷ್ಟವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಕೆ. ರಮಾಕಾಂತ ಮಾತನಾಡಿ, ನಾಡಹಬ್ಬಕ್ಕೆ ತಹಸೀಲ್ದಾರ್ ಅವರನ್ನು ಸಂಪ್ರದಾಯ ಬದ್ಧವಾಗಿ ಆಹ್ವಾನಿಸುವುದನ್ನು ಇಂದಿಗೂ ರೂಢಿಸಿಕೊಂಡು ಬರಲಾಗಿದೆ. ಇಂತಹ ಪದ್ದತಿ ಜಿಲ್ಲೆಯಲ್ಲಿ ಎಲ್ಲೂ ಸಹ ಆಚರಣೆಯಲ್ಲಿಲ್ಲ ಎಂಬುದು ವಿಶೇಷವಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಲ್ಲಿ ಇನ್ನೂ ಹೆಚ್ಚಿನ ವೈಭವಯುತವಾಗಿ ಆಚರಿಸಬಹುದು ಎಂದರು.
    ಸಭೆಯಲ್ಲಿ ಈ ಬಾರಿ ದಸರಾ ಆಚರಣೆಗೆ ಆನೆ ಅಂಬಾರಿ ಕುರಿತು ಸಹ ಚರ್ಚಿಸಲಾಯಿತು. ಈ ಸಂಬಂಧ ಕೆಲವು ಸದಸ್ಯರು ಮಾತನಾಡಿ, ಆನೆ ಅಂಬಾರಿ ದುಬಾರಿಯಾಗಲಿದ್ದು, ನಗರಸಭೆ ಬಜೆಟ್‌ನಲ್ಲಿ ಸಾಧ್ಯವಾಗುದಿಲ್ಲ. ಅಲ್ಲದೆ ಆನೆ ಅಂಬಾರಿಗಾಗಿ ಸಾಕಷ್ಟು ಕಾನೂನು ತೊಡಕುಗಳು ಎದುರಾಗಲಿವೆ. ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿದೆ ಎಂದರು. 
    ನಾಡಹಬ್ಬ ದಸರಾ ಆಚರಣೆ ಸಂಬಂಧ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಇಲಾಖೆಗಳು ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಪೊಲೀಸ್, ಶಿಕ್ಷಣ, ಲೋಕೋಪಯೋಗಿ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 
    ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಾಡಹಬ್ಬ ದಸರಾ ವಿವಿಧ ಸಮಿತಿಗಳ ಅಧ್ಯಕ್ಷರಾದ ಬಿ.ಎಂ ಮಂಜುನಾಥ, ಕೆ. ಸುದೀಪ್ ಕುಮಾರ್, ವಿ. ಕದಿರೇಶ್, ಚನ್ನಪ್ಪ, ಸರ್ವಮಂಗಳ ಭೈರಪ್ಪ, ಉದಯ್ ಕುಮಾರ್, ಬಷೀರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಬುಧವಾರ, ಸೆಪ್ಟೆಂಬರ್ 10, 2025

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಠೇವಣಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ‌: ಮುನ್ನೆಲೆಗೆ ಬರಲು ಅಪಪ್ರಚಾರ



    ಭದ್ರಾವತಿ : ನನ್ನ ಮಾತುಗಳಿಂದ ಕ್ಷೇತ್ರದಲ್ಲಿ ಯಾವುದೇ ಧರ್ಮಕ್ಕೆ, ಜಾತಿಗೆ, ಯಾರಿಗೂ ನೋವಾಗಿಲ್ಲ. ಯಾವುದೇ ರೀತಿ ಗೊಂದಲವಿಲ್ಲ, ಸಂಘರ್ಷವಿಲ್ಲ. ಇದು ಕೇವಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಗಲಾಟೆ ಅಷ್ಟೆ. ಕ್ಷೇತ್ರದ ಜನರು ಇಂತಹ ಕುತಂತ್ರಗಳಿಗೆ ಕಿವಿಗೊಡುವುದಿಲ್ಲ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ. 
    ಕ್ಷೇತ್ರದಲ್ಲಿ ಸರ್ವ ಧರ್ಮಿಯರು ಸುಖ, ಶಾಂತಿ ನೆಮ್ಮದಿಯಿಂದ  ಬದುಕುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನವರು ಅನಾವಶ್ಯಕವಾಗಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ಯಾರೂ ಸಹ ಇವರ ಅಪಪ್ರಚಾರಕ್ಕೆ  ಕಿವಿಗೊಡುವುದಿಲ್ಲ. ನಾನು ಗೆಲ್ಲಲು ಪ್ರಮುಖವಾಗಿ ಮುಸಲ್ಮಾನರು ಸೇರಿದಂತೆ ಎಲ್ಲಾ ಧರ್ಮದವರು ಕಾರಣರಾಗಿದ್ದಾರೆ ಎಂದರು.
   ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಠೇವಣಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ‌. ಹಾಗಾಗಿ ಈ ರೀತಿ ಮುನ್ನೆಲೆಗೆ ಬರಲು ಕಾರಣರಾಗಿದ್ದಾರೆಂದು ದೂರಿದರು. 

ನಾನು ಸರ್ವಧರ್ಮಗಳನ್ನು ಪ್ರೀತಿಸುವ ವ್ಯಕ್ತಿ, ನನ್ನ ವಿರುದ್ಧ ಅಪಪ್ರಚಾರ : ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್ 
    ಭದ್ರಾವತಿ : ನಾನು ಸರ್ವಧರ್ಮಗಳನ್ನು ಪ್ರೀತಿಸುವ ವ್ಯಕ್ತಿ. ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಹಲವಾರು ವರ್ಷಗಳಿಂದ ಎಲ್ಲಾ ಧರ್ಮದ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರ ನಗರದಲ್ಲಿ ನಡೆದ ಈದ್ ಮೆರವಣಿಗೆ ಸಂದರ್ಭದಲ್ಲಿ ನಾನು ಮಾತನಾಡಿರುವುದನ್ನು ಪೂರ್ಣವಾಗಿ ಪ್ರಸಾರ ಮಾಡದೆ ಕೆಲವರು ಅದನ್ನು ತಿರುಚಿ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸ್ಪಷ್ಟಪಡಿಸಿದ್ದಾರೆ. 
       ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಂ ಹಾಗು ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವ ನೀಚ ಬುದ್ದಿಯ ಬಿಜೆಪಿ, ಜೆಡಿಎಸ್‌ನವರ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. 
    ಪ್ರತಿಯೊಂದು ಧರ್ಮದಲ್ಲಿನ ಆಚರಣೆ, ಸಂಪ್ರದಾಯಗಳನ್ನು ಕಂಡಾಗ ಆ ಆಚರಣೆಗಳನ್ನು, ಆ ಸಂಪ್ರದಾಯಗಳನ್ನು ಅನುಭವಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಧರ್ಮಗಳಲ್ಲೂ ಹುಟ್ಟಬೇಕೆಂದು ಹೇಳುವುದು ಸಹಜ. ಇದೆ ರೀತಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕೆಂದು ಹೇಳಿರುವುದು ನಿಜ. ಆದರೆ ನಾನು ಮಾತನಾಡಿರುವುದನ್ನು ಪೂರ್ಣವಾಗಿ ಪ್ರಸಾರ ಮಾಡದೆ ಕೆಲವರು ನನ್ನ ಮಾತುಗಳನ್ನು ತಿರುಚಿದ್ದಾರೆ. 
    ನಾನು ಮಾತನಾಡಿದ ಸಂದರ್ಭದಲ್ಲಿ ಇತರೆ ಧರ್ಮದವರು ಸಹ ಇದ್ದರು. ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರು, ಬೌದ್ಧರಾಗಿ ಹುಟ್ಟಬೇಕೆಂದು ಸಹ ಹೇಳಿದ್ದೇನೆ. ಕೆಲವು ಕೇಡಿಗೇಡಿಗಳು ನಾನು ಮಾತನಾಡಿರುವುದನ್ನು ತಿರುಚಿ ಧರ್ಮಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಸಫಲವಾಗುವುದಿಲ್ಲ ಎಂದರು. 
    ಕ್ಷೇತ್ರದ ನನ್ನ ಮತದಾರ ದೇವರುಗಳ ಆಶಿರ್ವಾದ ಇರುವವರೆಗೂ ಯಾರು ಸಹ ನನಗೆ ಏನು ಮಾಡಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ನಾನು ಕೈಗೊಳ್ಳುತ್ತಿರುವ ಒಳ್ಳೆಯ ಕಾರ್ಯಗಳನ್ನು ಜನರಿಗೆ ತಿಳಿಸದೆ, ನನ್ನ ಜನ ಬೆಂಬಲವನ್ನು ಸಹಿಸದೇ ಈ ರೀತಿ ಅಪಪ್ರಚಾರ ಮಾಡುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಕಾಯಕವಾಗಿದೆ ಎಂದು ದೂರಿದರು. 

ದೇಶ ದ್ರೋಹಿಗಳನ್ನು ಪತ್ತೆ ಮಾಡಿ ಉಗ್ರ ಶಿಕ್ಷೆ ವಿಧಿಸಿ

ಕೇಸರಿಪಡೆ ಅಧ್ಯಕ್ಷ ಬಿ.ಆರ್ ಗಿರೀಶ್ ಆಗ್ರಹ 

ಬಿ.ಆರ್ ಗಿರೀಶ್ 
    ಭದ್ರಾವತಿ: ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು `ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ತಪ್ಪಿತಸ್ಥರನ್ನು ತಕ್ಷಣ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಸರಿಪಡೆ ಅಧ್ಯಕ್ಷ ಬಿ.ಆರ್ ಗಿರೀಶ್ ಆಗ್ರಹಿಸಿದ್ದಾರೆ.
    ನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಎಲ್ಲಾ ಹಬ್ಬ-ಹರಿದಿನಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೂ ಕೆಲವು ಕಿಡಿಗೇಡಿಗಳು ಆಶಾಂತಿ ವಾತಾವರಣ ಉಂಟು ಮಾಡುವ ಮೂಲಕ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ. 
    ಹಿಂದೂ ಧರ್ಮ, ಸಂಸೃತಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕೇಸರಿಪಡೆ ಯಾವುದೇ ಕಾರಣಕ್ಕೂ ಈ ರೀತಿಯ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. `ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿರುವುದು ಅಕ್ಷಮ್ಯ ಅಪರಾಧಿ ಕೃತ್ಯವಾಗಿದ್ದು, ತಕ್ಷಣ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಚರಂಡಿ ಸ್ವಚ್ಛಗೊಳಿಸುವಾಗ ಬಾರಿ ಗಾತ್ರದ ಹೆಬ್ಬಾವು ಪತ್ತೆ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಸುಮಾರು ೬ ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಇದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ನಡೆದಿದೆ. 
    ಭದ್ರಾವತಿ : ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಸುಮಾರು ೬ ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಇದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ನಡೆದಿದೆ. 
    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಸ್ಥಳೀಯ ನಿವಾಸಿ ಟಿ.ಡಿ ಶಶಿಕುಮಾರ್‌ರವರು ಪಂಚಾಯಿತಿ ವಾರ್ಡ್ ವ್ಯಾಪ್ತಿಯ ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಹಾವು ರಕ್ಷಕರಿಗೆ ಮಾಹಿತಿ ನೀಡಿದ್ದು, ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. 
    ಈ ಕುರಿತು ಮಾಹಿತಿ ನೀಡಿರುವ ಶಶಿಕುಮಾರ್‌ರವರು ಹೆಬ್ಬಾವು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಾರ್ಡ್‌ಗಳಲ್ಲಿ  ಚರಂಡಿಗಳು ಸದಾ ಸ್ವಚ್ಛತೆಯಿಂದ ಕೂಡಿರಬೇಕು. ಇಲ್ಲವಾದಲ್ಲಿ ರೋಗರುಜಿನಗಳ ಜೊತೆಗೆ ಅಪಾಯಕಾರಿ ಜೀವಿಗಳ ಆಶ್ರಯ ತಾಣಗಳಾಗಿ ಮಾರ್ಪಡಲಿವೆ ಎಂದು ನಿವಾಸಿಗಳಿಗೆ ಎಚ್ಚರಿಸಿದ್ದಾರೆ. 

ಅನುದಾನಿತ ಶಾಲೆಗಳ ವಲಯ ಮಟ್ಟದ ೧೪ ವರ್ಷ ವಯೋಮಿತಿಯೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ

೧೫ ಶಾಲೆಗಳ ಒಟ್ಟು ೫೦೦ಕ್ಕೂ ಅಧಿಕ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆ

ಭದ್ರಾವತಿ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಅನುದಾನಿತ ಶಾಲೆಗಳ ವಲಯ ಮಟ್ಟದ ೧೪ ವರ್ಷ ವಯೋಮಿತಿಯೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ ಏರ್ಪಡಿಸಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ:  ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಅನುದಾನಿತ ಶಾಲೆಗಳ ವಲಯ ಮಟ್ಟದ ೧೪ ವರ್ಷ ವಯೋಮಿತಿಯೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ ಏರ್ಪಡಿಸಲಾಯಿತು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕ್ರೀಡಾಕೂಟ ಉದ್ಘಾಟಿಸಿದರು. ಲ್ಲಿ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಸಿಸ್ಟರ್ ಎಲಿಜಬೆತ್ ಫರ್ನಾಂಡಿಸ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸುಮಾರು ೧೫ ಶಾಲೆಗಳ ಒಟ್ಟು ೫೦೦ಕ್ಕೂ ಅಧಿಕ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿಗಳನ್ನು ಪಡೆದುಕೊಂಡರು. 
  ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯ ಷಡಾಕ್ಷರಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜನಾಯ್ಕ, ಅನುದಾನಿತ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಟಿ.ಪಿ.ಓ ಮಂಜೀರ ಕೌಸರ್, ಸೈಂಟ್ ಚಾರ್ಲ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಾರ್ಗರೀಟ್ ಡಿಸಿಲ್ವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ರೀಡಾಕೂಟ ಯಶಸ್ವಿಗೊಳಿಸಲು ಸಹಕರಿಸಿದ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗು ತಾಲೂಕಿನ ಎಲ್ಲಾ ಅನುದಾನಿತ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಕಾರಿ ಎ.ಕೆ ನಾಗೇಂದ್ರಪ್ಪ ಕೃತಜ್ಞತೆ ಸಲ್ಲಿಸಿದ್ದು, ಅಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.