ಶುಕ್ರವಾರ, ಸೆಪ್ಟೆಂಬರ್ 26, 2025

ದೈಹಿಕ ಆರೋಗ್ಯಕ್ಕೆ ಕುಸ್ತಿ ಕ್ರೀಡೆ ಹೆಚ್ಚು ಸಹಕಾರಿ : ಜೆ.ಸಿ ಗೀತಾರಾಜ್‌ಕುಮಾರ್



ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕುಸ್ತಿ ಅಖಾಡಕ್ಕಿಳಿದ ಬಾಲಕರನ್ನು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್‌ರವರು ಅಭಿನಂದಿಸಿದರು.  
    ಭದ್ರಾವತಿ : ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಅದರಲ್ಲೂ ಕುಸ್ತಿ ಕ್ರೀಡೆ ದೈಹಿಕ ಆರೋಗ್ಯಕ್ಕೆ ಹೆಚ್ಚು ನೆರವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಹೇಳಿದರು. 
    ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾಪಟುಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. 
    ಪಂದ್ಯಾವಳಿಯನ್ನು ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಪೌರಾಯುಕ್ತ ಎನ್.ಕೆ ಹೇಮಂತ್, ಪರಿಸರ ಅಭಿಯಂತರ ಪ್ರಭಾಕರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಕುಸ್ತಿಪಟುಗಳಾದ ಎಚ್.ಆರ್ ಧನಂಜಯ, ಲಚ್ಚಣ್ಣ, ಚನ್ನಬಸಪ್ಪ, ಯಲ್ಲಪ್ಪ, ವಾಜಿದ್, ರಾಜಣ್ಣ, ಕಬ್ಬಳಿಕಟ್ಟೆ ಹನುಮಂತಪ್ಪ, ಶಿವಮೊಗ್ಗ ಗೋವಿಂದಸ್ವಾಮಿ, ಭೈರಪ್ಪ, ಮಾಯಣ್ಣ,ನಂಜುಂಡಪ್ಪ, ಪ್ರಮುಖರಾದ ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಮೊದಲ ಬಾಲಕರ ಪಂದ್ಯಾವಳಿಯಲ್ಲಿ ಹಳೇನಗರದ ರಾಜು ಗೆಲುವು ಸಾಧಿಸಿದ್ದು, ಪೌರಾಯುಕ್ತ ಎನ್.ಕೆ ಹೇಮಂತ್ ಫಲಿತಾಂಶ ಘೋಷಿಸಿದರು.   
 

ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದ ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಗುರುವಾರ, ಸೆಪ್ಟೆಂಬರ್ 25, 2025

ಚತುಷ್ಪಥ ರಸ್ತೆ ಕಾಮಗಾರಿ ಆರಂಭ : ನೂರಾರು ವರ್ಷಗಳ ಬೃಹತ್ ಮರಗಳ ತೆರವು

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಕಳೆದ ೨ ದಶಕಗಳಿಂದ ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ನಗರದ ಹೃದಯ ಭಾಗದ ರಸ್ತೆಗಳು ಹಾಗು ಬೈಪಾಸ್ ರಸ್ತೆ ಅಗಲೀಕರಣಗೊಳಿಸಲಾಗಿದ್ದು, ನೂರಾರು ವರ್ಷಗಳ ರಸ್ತೆ ಬದಿಯ ಬೃಹತ್ ಮರಗಳನ್ನು ತೆರವುಗೊಳಿಸಲಾಗಿದೆ. ಇದೀಗ ಮತ್ತಷ್ಟು ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಮೀಪದ ಕವಲಗುಂದಿ ಸೇತುವೆಯನ್ನು ಸಹ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ರಸ್ತೆ ಅಗಲೀಕರಣದಿಂದ ಭವಿಷ್ಯದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಸುಮಾರು ೨೫ ವರ್ಷಗಳ ಕಾಲದ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಸಿದ್ದಾರೆ

ನೂತನ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ಥಿತ್ವಕ್ಕೆ

ಸೆ.೨೮ರಂದು ಕೇಂದ್ರ ಕಾರ್ಯಾಲಯ, ನಾಮಫಲಕ ಉದ್ಘಾಟನೆ 

ಭದ್ರಾವತಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ.ವಿನೋದ್ ಮಾತನಾಡಿದರು.      
    ಭದ್ರಾವತಿ : ಸಮಾನ ಮನಸ್ಕ ಬಹುಜನರನ್ನು ಸೆಳೆದುಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಅಲೆಮಾರಿಗಳು, ಶೋಷಿತರು, ದಮನಿತರನ್ನು ಒಟ್ಟಿಗೆ ಬೆಸೆಯುವಂತೆ ಮಾಡಲು ಹಾಗೂ ಕಳಚಿಹೋದ ಕೊಂಡಿಗಳನ್ನು ಬೆಸೆಯಲು ಮತ್ತು ಅನ್ಯಾಯದ ವಿರುದ್ದ ಸ್ವಾಭಿಮಾನದಿಂದ ಸೆಟೆದು ನಿಲ್ಲಲು ನೂತನವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. 
    ಸೆ.೨೮ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಳುವಳಿಯ ಬೀಡಾದ ನಗರದಲ್ಲಿ ನ್ಯಾಯಯುತ ಹಕ್ಕುಗಳಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್‌ರವರ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಯುವ ಹೋರಾಟಗಾರರು, ಪ್ರಗತಿಪರ ಚಿಂತಕರನ್ನು ಒಗ್ಗೂಡಿಸಿಕೊಂಡು ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಪ್ರಸ್ತುತ ಹೊಸ ಸಂಘಟನೆ ಅಗತ್ಯತೆ ಮನಗಂಡು ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದರು. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯಾದ್ಯಕ್ಷ ವಿ.ವಿನೋದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಆರ್.ಟಿ.ಓ ಇಲಾಖೆ ನೌಕರ ದಲಿತ ಮುಖಂಡ ಎನ್. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ, ಶಿಕ್ಷಕ ಎಂ.ಆರ್ ರೇವಣಪ್ಪರವರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ಪ್ರಧಾನ ಹಾಗು ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಶಿಕ್ಷಕಿ ಭಾರತಿ ಗೋವಿಂದಸ್ವಾಮಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಡಿಎಸ್‌ಎಸ್ ಸಂಸ್ಥಾಪಕರಾದ ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ನಾಗತಿಬೆಳಗಲು ತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಎನ್ ನರಸಿಂಹಮೂರ್ತಿ, ಕಾಗದನಗರ ಜಿಯುಎಲ್‌ಪಿಎಸ್ ಶಿಕ್ಷಕ ಸಿ. ಚನ್ನಪ್ಪ, ಶಿಕ್ಷಕಿಯರಾದ ರಾಧಾಬಾಯಿ ಹಾಜ್ಯನಾಯ್ಕ, ಶಾರದ ಪ್ರೇಮ್ ಕುಮಾರ್ ಮತ್ತು ಎಸ್. ಭಾರತಿ ಅವರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ ಎಂದರು. 
    ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಪದಾಧಿಕಾರಿಗಳಾದ ಸುಶೀಲಮ್ಮ, ಜೆ. ಸೆಂದಿಲ್‌ಕುಮಾರ್, ಸುರೇಶ್, ನೇತ್ರಾವತಿ, ಎ. ಮಂಜು, ಗಿರೀಶ್, ಭಾಗ್ಯ, ಮಂಗಳ, ಜಿಲ್ಲಾಧ್ಯಕ್ಷ ಅರುಳ್, ಜಯಶೀಲ, ತಾಲೂಕು ಅಧ್ಯಕ್ಷ ರಾಕೇಶ್, ಗೋವಿಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ದಸರಾ ಆಹ್ವಾನ ಪತ್ರಿಕೆಯಲ್ಲಿ ವಿಎಚ್‌ಪಿ ಸೇವೆ, ಪ್ರತಿನಿಧಿ ಶ್ರಮ ಕಡೆಗಣನೆ

ತಪ್ಪು ಸರಿಪಡಿಸಿಕೊಂಡು ಮರುಮುದ್ರಿಸಲು ನಗರಸಭೆ ಆಡಳಿತಕ್ಕೆ ಮನವಿ 

ಭದ್ರಾವತಿ ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ : ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ನಗರಸಭೆಯಿಂದ ಪ್ರಸ್ತುತ ನಾಡಹಬ್ಬ ದಸರಾ ಆಚರಣೆ ಸಂಪ್ರದಾಯ ಬದ್ಧವಾಗಿ, ವೈಭವಯುತವಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯಾದ ಹಾ. ರಾಮಪ್ಪರವರ ನಿಸ್ವಾರ್ಥ ಸೇವೆ ಹೆಚ್ಚಿನದ್ದಾಗಿದೆ. ಹಬ್ಬ ಆರಂಭದಿಂದ ಹಿಡಿದು ಮುಕ್ತಾಯದವರೆಗೂ ಪ್ರತಿ ಹಂತದಲ್ಲೂ ಸಲಹೆ-ಸಹಕಾರ, ಮಾರ್ಗದರ್ಶನ ನೀಡುವ ಮೂಲಕ ಹಬ್ಬದ ಮಹತ್ವ ಹಾಗು ಪರಂಪರೆ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಪರಿಷತ್ ಇದನ್ನು ಸೇವೆಯ ಒಂದು ಭಾಗವಾಗಿ ಪರಿಗಣಿಸಿದೆ. ಪರಿಷತ್ ಸೇವೆ ಹಾಗು ಪ್ರತಿನಿಧಿಯ ಶ್ರಮ ಕಡೆಗಣಿಸಿರುವುದು ವಿಷಾದನೀಯ. 
    ಈ ಹಿಂದೆ ಸಹ ಇದೆ ರೀತಿಯ ತಪ್ಪು ನಡೆದಿದ್ದು, ಅದನ್ನು ನಾಡಹಬ್ಬ ದಸರಾ ಆಚರಣೆ ಸಮಿತಿಯವರು ಸರಿಪಡಿಸಿಕೊಂಡಿದ್ದರು. ಇದೀಗ ಪುನಃ ಉದ್ದೇಶಪೂರ್ವಕವಾಗಿ ಪರಿಷತ್ ಹಾಗು ಅದರ ಪ್ರತಿನಿಧಿ ಹೆಸರನ್ನು ನಮೂದಿಸದೆ ಸೇವೆ ಹಾಗು ಶ್ರಮ ಕಡೆಗಣಿಸಲಾಗಿದೆ. ತಕ್ಷಣ ತಪ್ಪು ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆಯಲ್ಲಿ ಮರುಮುದ್ರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 
    ವಿಶ್ವ ಹಿಂದೂ ಪರಿಷತ್ ಪ್ರತಿನಿಧಿ ಹಾ. ರಾಮಪ್ಪ, ಬಜರಂಗದಳ ಜಿಲ್ಲಾ ಸಂಚಾಲಕ ರಾಘವನ್ ವಡಿವೇಲು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬುಧವಾರ, ಸೆಪ್ಟೆಂಬರ್ 24, 2025

ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪ : ಪ್ರಿಯಕರ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು : ಪ್ರಿಯಕರ, ಆತನ ತಂದೆ ವಶಕ್ಕೆ ಪಡೆದ ಪೊಲೀಸರು

ಕೊಲೆಯಾದ ಸ್ವಾತಿ, ಭದ್ರಾ ಕಾಲುವೆ
    ಭದ್ರಾವತಿ:  ಪ್ರೇಯಸಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪದ ಮೇಲೆ ಪ್ರಿಯಕರ ಹಾಗು ಆತನ ತಂದೆಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 
    ತಾಲೂಕಿನ ಉಕ್ಕುಂದ ಗ್ರಾಮದ ಸಮೀಪದ ಭದ್ರಾ ಕಾಲುವೆಯಲ್ಲಿ ಕಳೆದ ೩ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರೇಯಸಿ ಸ್ವಾತಿಯನ್ನು ಸೂರ್ಯ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸ್ವಾತಿಯನ್ನು ಕಾಲುವೆಗೆ ತಳ್ಳಿದ ನಂತರ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾವೇ ನಡೆಸಿದ್ದ ಎನ್ನಲಾಗಿದೆ. ಸದ್ಯ ಆತನ ಬಣ್ಣ ಬಯಲಾಗಿದ್ದು, ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
    ಪ್ರಕರಣದ ವಿವರ: 
    ಸೂರ್ಯ ಮತ್ತು ಸ್ವಾತಿ ಇಬ್ಬರು ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಸೂರ್ಯ ಮದುವೆ ಆಗುವುದಕ್ಕೆ ಪೀಡಿಸುತ್ತಿದ್ದ. ಆದರೆ ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡ ಅಂದಿದ್ದಾರೆ. ಸೆ. ೨೧ ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.
    ಸೆ.೨೧ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. ೨೩ ರಂದು ಠಾಣೆಗೆ ದೂರು ನೀಡಿದ್ದರು.
    ಸದ್ಯ ಗ್ರಾಮಾಂತರ ಪೊಲೀಸರು ಎ೧ ಸೂರ್ಯ ಮತ್ತು ಎ೨ ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿದ್ದಾರ್ಥ ಅಂಧರ ಕೇಂದ್ರ, ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಆರ್‌ಎಎಫ್ ಸ್ವಚ್ಛತಾ ಕಾರ್ಯ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮಂದಿ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲಾ ಆವರಣದಲ್ಲಿ ಬೆಳೆದುನಿಂತ ಗಿಡಗಂಟಿಗಳನ್ನು ಕಿತ್ತು ಹಾಕಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೆ ತೆಂಗು, ಅಡಕೆ, ಹಣ್ಣು ಹಾಗು ಹೂವಿನ ಗಿಡಗಳಿಗೆ ನೀರೆರೆದರು. 
    ಆರ್‌ಎಎಫ್ ಕಮಾಂಡೆಂಟ್ ಕಮಲೇಶ್ ಕುಮಾರ್, ಉಪ ಕಮಾಂಡೆಂಟ್ ಸುನಿಲ್ ಕುಮಾರ್ ಹಾಗೂ ನಿರೀಕ್ಷಕ ದೀಪಕ್ ಕುಮಾರ್ ಹಾಗು ಸೇರಿದಂತೆ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು, ಕಿವುಡು ಮಕ್ಕಳ ಶಾಲೆ ಕಾರ್ಯದರ್ಶಿ ಸುಭಾಷ್ ಮತ್ತು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸಿ ವಿಶಿಷ್ಟ ಪ್ರತಿಭಟನೆ

ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರೋಧ ಆಕ್ರೋಶ

ಭದ್ರಾವತಿ ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ರಾಜ್ಯಾದ್ಯಂತ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷತನವಹಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿಯನ್ನು ಸಹ ಸರಿಯಾಗಿ ನೀಡದೆ, ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹ ಕೈಗೊಳ್ಳದೆ ಜನರ ಜನರ ಹಿತಕಾಪಾಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. 
    ಈ ನಡುವೆ ಪ್ರತಿಭಟನಾ ಸ್ಥಳದಲ್ಲಿಯೇ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಕರೆ ಮಾಡಿ ಚರ್ಚಿಸಲಾಯಿತು. ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಿಂದ ಕೆಲ ನಿಮಿಷ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 
    ಪ್ರತಿಭಟನೆಗೂ ಮೊದಲು  ಸರ್ ಎಂ. ವಿಶ್ವೇಶ್ವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ಹಿರಿಯ ಕಾರ್ಯಕರ್ತರಾದ ಎನ್ ವಿಶ್ವನಾಥರಾವ್, ಉಕ್ಕುಂದ ಶಾಂತಣ್ಣ, ಸಿದ್ದಾಪುರ ಪರಮೇಶಣ್ಣ, ಕರುಣಾಕರ್, ರಾಘವೇಂದ್ರ, ಸುಬ್ರಮಣಿ, ಎಂ.ಎಸ್ ಸುರೇಶಪ್ಪ, ಸಿದ್ದಾಪುರ ನಂಜಪ್ಪ,  ಸುಲೋಚನ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ಧನುಷ್ ಬೋಸ್ಲೆ, ಅನ್ನಪೂರ್ಣ, ರೇಖಾ ಪದ್ಮಾವತಿ, ಶಕುಂತಲ, ಪ್ರೇಮ ಸೇರಿದಂತೆ ಮಂಡಲ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು, ಹಿರಿಯ ಮುಖಂಡರು, ವಿವಿಧ ಮೋರ್ಚಗಳ, ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.