ಶನಿವಾರ, ಸೆಪ್ಟೆಂಬರ್ 27, 2025

ವಿಐಎಸ್‌ಎಲ್ ನಿವೃತ್ತ ನೌಕರ ನಿಂಗಯ್ಯ ನಿಧನ

ನಿಂಗಯ್ಯ 
    ಭದ್ರಾವತಿ: ನಗರದ ಜನ್ನಾಪುರ ಕಿತ್ತೂರುರಾಣಿ ಚನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ನಿವಾಸಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ನಿಂಗಯ್ಯ(೭೬) ಶುಕ್ರವಾರ ರಾತ್ರಿ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ ಹಾಗು ಮೊಮ್ಮಕ್ಕಳು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆಪಡೆದು ಮನೆಗೆ ಮನೆಗೆ ಹಿಂದಿರುಗಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ  ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು, ವಿಐಎಸ್‌ಎಲ್ ನಿವೃತ್ತ ನೌಕರರು ಸಂತಾಪ ಸೂಚಿಸಿದ್ದಾರೆ. 

ಶುಕ್ರವಾರ, ಸೆಪ್ಟೆಂಬರ್ 26, 2025

ಮೆಸ್ಕಾಂ ಕಛೇರಿ ಮಹಿಳಾ ಸಿಬ್ಬಂದಿಗಳಿಂದ ನವರಾತ್ರಿ : ಬಣ್ಣ ಬಣ್ಣದ ಉಡುಪುಗಳಿಂದ ಸಂಭ್ರಮ

ನವರಾತ್ರಿ ಅಂಗವಾಗಿ ಮೆಸ್ಕಾಂ ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು. 
    ಭದ್ರಾವತಿ : ನವರಾತ್ರಿ ಅಂಗವಾಗಿ ಮೆಸ್ಕಾಂ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು. 
    ನವರಾತ್ರಿ ಆರಂಭಗೊಂಡ ದಿನದಿಂದಲೂ ಪ್ರತಿದಿನ ಒಂದೊಂದು ಬಣ್ಣದ ಉಡುಪುಗಳೊಂದಿಗೆ ಮಹಿಳಾ ಸಿಬ್ಬಂದಿಗಳು ನವ ದಿನಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶ್ವೇತ ವರ್ಣ, ನೀಲಿ, ಹಸಿರು ಬಣ್ಣದ ಉಡುಪುಗಳಲ್ಲಿ ಸಂಭ್ರಮಿಸಿದ್ದು, ಈ ಮೂಲಕ ನವರಾತ್ರಿ ಆಚರಣೆಗೆ ಮತ್ತಷ್ಟು ಮೆರಗು ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರಂದು ಪ್ರಬುದ್ದರ ಗೋಷ್ಠಿ

ಪ್ರಧಾನಿ ನರೇಂದ್ರ ಮೋದಿ

    ಭದ್ರಾವತಿ : ಬಿಜೆಪಿ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರ ಶನಿವಾರ ಸಂಜೆ ೫.೪೫ಕ್ಕೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಪ್ರಬುದ್ದರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. 
    ನವ ಭಾರತದ ಆರ್ಥಿಕ ಸುಧಾರಣೆಗಳು ಕುರಿತು ಚರ್ಚೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮತ್ತು ಡಿ.ಎಸ್ ಅರುಣ್ ಆಗಮಿಸಲಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಅಧ್ಯಕ್ಷತೆವಹಿಸಲಿದ್ದಾರೆ. ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಕೆ.ಎನ್ ಶ್ರೀಹರ್ಷ, ಸಾಗರ್ ಮತ್ತು ಭರತ್ ಆಗಮಿಸಲಿದ್ದಾರೆ. 

ಸೆ.೨೭ರಂದು ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್



    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರರ ಜನ್ಮದಿನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನ -೨೦೨೫ ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್(ಸ) ಕಾರ್ಯಕ್ರಮ ಸೆ.೨೭ರ ಶನಿವಾರ ನಗರದ ಬಿ.ಎಚ್ ರಸ್ತೆ, ತಿಮ್ಮಯ್ಯ ಮಾರುಕಟ್ಟೆ ಸಮೀಪದ ಆಯಿಷಾ ಮಸೀದಿಯಲ್ಲಿ ಏರ್ಪಡಿಸಲಾಗಿದೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ಜನಾಬ್ ರಿಯಾಜ್ ಅಹಮದ್ ರೋಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಹಳೇನಗರ ಪೊಲೀಸ್ ಠಾಣಾ ನಿರೀಕ್ಷಕ ಸುನೀಲ್ ಬಿ. ತೇಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆ ಅಧ್ಯಕ್ಷ ಜನಾಬ್ ಮೌಲಾನಾ ಸುಲ್ತಾನ್ ಬೇಗ್ ಮತ್ತು ಜಿಲ್ಲಾ ಸಂಚಾಲಕ ಜನಾಬ್ ಸಲೀಮ್ ಉಮ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿರಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

೪ ಲಕ್ಷ ರು. ಅನುದಾನ ಬಿಡುಗಡೆ : ಶಾಸಕ ಸಂಗಮೇಶ್ವರ್‌ಗೆ ಗೌರವಿಸಿ ಕೃತಜ್ಞತೆ

ಭದ್ರಾವತಿ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಹಾಗು ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ೪ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. 
    ಭದ್ರಾವತಿ: ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಹಾಗು ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ೪ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ.  
    ನಿಗಮದಿಂದ ಅನುದಾನ ಬಿಡುಗಡೆಗೊಳಿಸಿದ್ದು, ೪ ಲಕ್ಷ ರು. ಚೆಕ್ ಶ್ರೀ ಗುರುರಾಜ ಸೇವಾ ಸಮಿತಿಗೆ ನೀಡಿದರು. ಸಂಗಮೇಶ್ವರ್‌ರವರನ್ನು ಸೇವಾ ಸಮಿತಿಯಿಂದ ಸನ್ಮಾನಿಸಿ  ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. 
    ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ಶುಭ ಗುರುರಾಜ್ ವಿ.ಬ್ರಾ ಶ್ರೀ ಗೋಪಾಲಕೃಷ್ಣ ಆಚಾರ್ ಮತ್ತು ಸಮೀರಾಚಾರ್ ಹಾಗು ಮದ್ವ ಮಂಡಳಿ ಅಧ್ಯಕ್ಷ ಜಯತೀರ್ಥ, ಸುಧೀಂದ್ರ, ವಿದ್ಯಾನಂದನಾಯಕ್, ಶೇಷಗಿರಿ, ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿವಾಹ : ೧೯ ವರ್ಷ ಯುವಕನಿಗೆ ೨೦ ವರ್ಷ ಶಿಕ್ಷೆ

    ಭದ್ರಾವತಿ:  ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ವಿವಾಹವಾಗಿದ್ದ ೧೯ ವರ್ಷದ ಯುವಕನಿಗೆ ಕಲಂ ೬ ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 
    ೨೦೨೨ರಲ್ಲಿ ತಾಲೂಕಿನ ೧೫ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಆಕೆಯನ್ನು ಮದುವೆಯಾಗಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ಅಭಯ ಪ್ರಕಾಶ್ ಸೋಮನಾಳ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
    ಶಿವಮೊಗ್ಗ ಎಫ್‌ಟಿಎಸ್‌ಸಿ-೧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ದೃಡಪಟ್ಟ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್‌ರವರು ಕಲಂ ೬ ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಕಾರಾವಾಸ ಶಿಕ್ಷೆ ಮತ್ತು ರು. ೮೦,೦೦೦ದಂಡ ವಿಧಿಸಿದ್ದು,  ಆರೋಪಿಯಿಂದ ರು. ೮೦,೦೦೦ ದಂಡದ ಮೊತ್ತವನ್ನು ನೊಂದ ಬಾಲಕಿಗೆ ನೀಡುವಂತೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕಿಗೆ ರು. ೪,೦೦,೦೦೦ ಪರಿಹಾರ ನೀಡುವಂತೆ ಆದೇಶಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಆರ್ ಶ್ರೀಧರ್ ವಾದ ಮಂಡಿಸಿದ್ದರು. 

ದೈಹಿಕ ಆರೋಗ್ಯಕ್ಕೆ ಕುಸ್ತಿ ಕ್ರೀಡೆ ಹೆಚ್ಚು ಸಹಕಾರಿ : ಜೆ.ಸಿ ಗೀತಾರಾಜ್‌ಕುಮಾರ್



ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕುಸ್ತಿ ಅಖಾಡಕ್ಕಿಳಿದ ಬಾಲಕರನ್ನು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್‌ರವರು ಅಭಿನಂದಿಸಿದರು.  
    ಭದ್ರಾವತಿ : ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಅದರಲ್ಲೂ ಕುಸ್ತಿ ಕ್ರೀಡೆ ದೈಹಿಕ ಆರೋಗ್ಯಕ್ಕೆ ಹೆಚ್ಚು ನೆರವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಹೇಳಿದರು. 
    ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾಪಟುಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. 
    ಪಂದ್ಯಾವಳಿಯನ್ನು ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಪೌರಾಯುಕ್ತ ಎನ್.ಕೆ ಹೇಮಂತ್, ಪರಿಸರ ಅಭಿಯಂತರ ಪ್ರಭಾಕರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಕುಸ್ತಿಪಟುಗಳಾದ ಎಚ್.ಆರ್ ಧನಂಜಯ, ಲಚ್ಚಣ್ಣ, ಚನ್ನಬಸಪ್ಪ, ಯಲ್ಲಪ್ಪ, ವಾಜಿದ್, ರಾಜಣ್ಣ, ಕಬ್ಬಳಿಕಟ್ಟೆ ಹನುಮಂತಪ್ಪ, ಶಿವಮೊಗ್ಗ ಗೋವಿಂದಸ್ವಾಮಿ, ಭೈರಪ್ಪ, ಮಾಯಣ್ಣ,ನಂಜುಂಡಪ್ಪ, ಪ್ರಮುಖರಾದ ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಮೊದಲ ಬಾಲಕರ ಪಂದ್ಯಾವಳಿಯಲ್ಲಿ ಹಳೇನಗರದ ರಾಜು ಗೆಲುವು ಸಾಧಿಸಿದ್ದು, ಪೌರಾಯುಕ್ತ ಎನ್.ಕೆ ಹೇಮಂತ್ ಫಲಿತಾಂಶ ಘೋಷಿಸಿದರು.   
 

ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದ ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.