ಸೋಮವಾರ, ಅಕ್ಟೋಬರ್ 6, 2025

ಜಗಳ ಬಿಡಿಸಲು ಹೋದ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ

ಗಣಪತಿ ವಿಸರ್ಜನೆ ವೇಳೆ ಘಟನೆ

 ಭದ್ರಾವತಿ ರಬ್ಬರ್ ಕಾಡು ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಹಲ್ಲೆಗೊಳಗಾದ ಯಲ್ಲಪ್ಪ ಮತ್ತು  ಕೃಷ್ಣೇಗೌಡ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಭದ್ರಾವತಿ : ತಾಲೂಕಿನ ರಬ್ಬರ್ ಕಾಡು ಗ್ರಾಮದಲ್ಲಿ ಘಟನೆ  ನಡೆದಿದ್ದು, ಪೇಪರ್ ಟೌನ್ ಪೊಲೀಸ್ ಠಾಣೆ  ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪ ಗಾಯಗೊಂಡಿದ್ದಾರೆ.
     ಗ್ರಾಮದ ಕನಕ ಯುವಕರ ಸಂಘದ ಗಣಪತಿ ವಿಸರ್ಜನೆ ವೇಳೆ ಗ್ರಾ. ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡರವರ ಮನೆಯ ಮುಂದೆ ಗಲಾಟೆಯಾಗಿದೆ. ಹಳೆ ವೈಷಮ್ಯ ಹಿನ್ನಲೆ ಕೃಷ್ಣೇಗೌಡ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಲಾಗಿದೆ.
    ಯುವಕರ ಗುಂಪೊಂದು  ಹಲ್ಲೆ ನಡೆಸಿದ್ದು, ಈ ವೇಳೆ ಗಲಾಟೆಯನ್ನು ಬಿಡಿಸಲು ಹೋದ ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪ  ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ ಕೃಷ್ಣೇಗೌಡ ಸಹ  ಗಾಯಗೊಂಡಿದ್ದಾರೆ.
    ಹಲ್ಲೆಗೊಳಗಾದ ಯಲ್ಲಪ್ಪ ಮತ್ತು  ಕೃಷ್ಣೇಗೌಡ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಪೇಪರ್ ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕಾಶ ದಾಖಲಾಗಿದೆ.

ಅರಕೆರೆ ಗ್ರಾಮದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ

ವಿಐಎಸ್‌ಎಲ್ ಕಾರ್ಖಾನೆಯಿಂದ ಆ ಯೋಜನೆ

ಶಿವಮೊಗ್ಗ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ  ಸಾಂಸ್ಥಿಕ ಸಾಮಾಜಿಕ ಕಳಕಳಿಯ (ಸಿಎಸ್ಆರ್) ಅಂಗವಾಗಿ ಆಯೋಜಿಸಲಾಗಿದ್ದ ಸಮಗ್ರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ  ಬಿ.ಎಲ್ ಚಂದ್ವಾನಿ  ಶಿಬಿರ ಉದ್ಘಾಟಿಸಿದರು.
    ಭದ್ರಾವತಿ: ಶಿವಮೊಗ್ಗ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ  ಸಾಂಸ್ಥಿಕ ಸಾಮಾಜಿಕ ಕಳಕಳಿಯ (ಸಿಎಸ್ಆರ್) ಅಂಗವಾಗಿ ಆಯೋಜಿಸಲಾಗಿದ್ದ ಸಮಗ್ರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
       ಹೃದಯ ರೋಗ,  ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರ ಹಾಗೂ ದಂತ  ಮತ್ತು ಸ್ತ್ರೀ ರೋಗ ತಪಾಸಣೆ ಹಾಗೂ ಸಮಾಲೋಚನೆ ಅನುಭವಿ ತಜ್ಞ ವೈದ್ಯರ ತಂಡದಿಂದ ನಡೆಸಲಾಯಿತು.
          ಅಲ್ಲದೆ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮತ್ತು 2ಡಿ ಎಕೋಕಾರ್ಡಿಯೋಗ್ರಫಿ (2ಡಿ ಎಕೋ) ಪರೀಕ್ಷೆಗಳನ್ನು ನಡೆಸಲಾಯಿತು. ತಪಾಸಣೆ ಮತ್ತು ಪರೀಕ್ಷೆ ಜೊತೆಗೆ ಉಚಿತ ಔಷಧಿಗಳನ್ನು ಸಹ ವಿತರಿಸಲಾಯಿತು.
      ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ  ಬಿ.ಎಲ್ ಚಂದ್ವಾನಿ  ಶಿಬಿರ ಉದ್ಘಾಟಿಸಿದರು. ಕಾರ್ಖಾನೆ ಅಧಿಕಾರಿಗಳಾದ  ಎಲ್. ಪ್ರವೀಣ್ ಕುಮಾರ್,  ಶೋಭಾ ಶಿವಶಂಕರನ್, ವೈದ್ಯರಾದ ಡಾ. ಕೆ.ಎಸ್. ಸುಜೀತ್ ಕುಮಾರ್, ಡಾ. ಎಸ್.ಎನ್. ಸುರೇಶ್,  ಎಮ್.ಎಲ್ ಯೋಗೀಶ್, ಅಪರ್ಣ, ಅರಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ  ರತ್ನಮ್ಮ ರುದ್ರೇಶ್, ಪಂಚಾಿತಿ  ಅಭಿವೃದ್ಧಿ ಅಧಿಕಾರಿ ಆರ್. ಶಿವಶಂಕರಮೂರ್ತಿ,  ಸದಸ್ಯರಾದ  ಎಸ್.ಎಲ್. ರವಿಕುಮಾರ್, ಟಿ.ಎಮ್ ಗುರುಮೂರ್ತಿ, ಟಿ. ಗಾಯತ್ರಿ ಶಂಕರಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಕಮಲಮ್ಮ ಅರಕೆರೆ, ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯರಾದ ಡಾ. ಹರ್ಷಗೌಡ, ಡಾ. ಚಂದನ್, ಡಾ. ಬಸವರಾಜ್ ಮತ್ತು ಗಣೇಶ್. ಶಂಕರ ಕಣ್ಣಿನ ಆಸ್ಪತ್ರೆಹರ್ಷ ಆರ್. ಗೌಡಮಾರಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ  ಡಾ. ಹರ್ಷಿತ, ತಾಲಕು  ಸಾರ್ವಜನಿಕ  ಸರ್ಕಾರಿ ಆಸ್ಪತ್ರೆಯ  ಕೆ.ಎಮ್ ಮಂಜುಳ, ನಾಗರತ್ನ, ಲಲಿತ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ  ಶ್ರೀನಿವಾಸ ಉಪಸ್ಥಿತರಿದ್ದರು. ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಸದುಪಯೋಗಪಡಿಸಿಕೊಂಡರು.
    ಇದೇ ಸಂದರ್ಭದಲ್ಲಿ   ಸೈಲ್-ವಿಐಎಸ್‌ಎಲ್  ‘ಹಸಿರೆಡೆಗೆ-ನಮ್ಮ ನಡೆ’  ಉಪಕ್ರಮದಡಿಯಲ್ಲಿ ನುಗ್ಗೆ ಮತ್ತು ಪಪ್ಪಾಯಿ ಉತ್ತಮ ತಳಿಯ 1500 ಬೀಜಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.

ಶನಿವಾರ, ಅಕ್ಟೋಬರ್ 4, 2025

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬದುಕು, ತತ್ವಾದರ್ಶಗಳು ನಮ್ಮೆಲ್ಲರ ದಿನನಿತ್ಯದ ಜೀವನದ ಅವಿಭಾಗ್ಯ ಅಂಗವಾಗಿರಲಿ

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ 

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಭದ್ರ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಇಸ್ಪಾತ್ ಮಹಿಳಾ ಸಮಾಜ ಉಪಾಧ್ಯಕ್ಷೆ ಶೋಭ ಶಿವಶಂಕರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬದುಕು, ತತ್ವಾದರ್ಶಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಸಮಾಜದಲ್ಲಿ ನಿರಂತರವಾಗಿ ಸುಧಾರಣೆ ತರಲು ಪ್ರಯತ್ನಿಸಬೇಕೆಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು. 
    ಅವರು ಕಾರ್ಖಾನೆಯ ನ್ಯೂಟೌನ್, ವಿಐಎಸ್‌ಎಲ್ ಭದ್ರ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
    ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿಯವರ ಬದುಕು ಅವಿಸ್ಮರಣೀಯವಾಗಿದೆ. ಈ ದೇಶದ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದರು. ಅಲ್ಲದೆ ದೇಶದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ಧೂರ್ ಶಾಸ್ತ್ರಿಯವರ ಬದುಕು ಸಹ ವೈಶಿಷ್ಟ್ಯಪೂರ್ಣವಾಗಿದ್ದು,  ಅವರ ಜೀವನಾದರ್ಶಗಳು ನಮಗೆ ದಾರಿದೀಪವಾಗಲೆಂದು ಆಶಿಸಿದರು.
ಧಾರ್ಮಿಕ ಗ್ರಂಥಗಳ ಆಯ್ದ ಭಾಗಗಳನ್ನು ಭಗವದ್ಗೀತೆ ಅಧಿತ್ರಿ ರಾಘವೇಂದ್ರ (ಕೆ.ಎಸ್. ರಾಘವೇಂದ್ರರವರ ಸುಪುತ್ರಿ), ಬೈಬಲ್ ಶಾಜಿ ಅಬ್ರಹಾಂ ಮತ್ತು ಕುರಾನ್ ರಿಯಾ ಅಂಜುಮ್ ಹಾಗೂ ರಿನಾಜ್ ಅಂಜುಮ್ (ರಿಜ್ವಾನ್ ಬೇಗ್‌ರವರ ಪುತ್ರಿಯರು) ಪಠಿಸಿದರು. ಸೈಲ್ ಶಭಾಷ್ ಯೋಜನೆಯಡಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಲಾಯಿತು.
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಇಸ್ಪಾತ್ ಮಹಿಳಾ ಸಮಾಜ ಉಪಾಧ್ಯಕ್ಷೆ ಶೋಭ ಶಿವಶಂಕರನ್, ವಿಐಎಸ್‌ಎಲ್ ಉದ್ಯೋಗಿಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಬಿಪಿಎಲ್ ಸಂಘದಿಂದ ಮಹಾತ್ಮಗಾಂಧಿ ಜಯಂತಿ

ಭದ್ರಾವತಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು. 
ಭದ್ರಾವತಿ: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ  ಈ ಬಾರಿ ಸಹ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು. 
ಸಂಘದ ಕಛೇರಿಯಲ್ಲಿ ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅಲ್ಲದೆ ವಿಶೇಷವಾಗಿ ಸಸಿ ನೆಡುವ ಮೂಲಕ ಸಿಹಿ ಹಂಚಲಾಯಿತು. ಸಂಘದಿಂದ ನಾಡಹಬ್ಬ ಹಾಗು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. 
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮ್, ಉಪಾಧ್ಯಕ್ಷ ಸಂಪತ್, ಸಹ ಕಾರ್ಯದರ್ಶಿ ದಾಸ್, ನಿರ್ದೇಶಕರಾದ ನಿರಂಜನ್, ರಘು, ಸಂತೋಷ್(ಶಾಸ್ತ್ರಿ), ಫಿಲೀಪ್, ಮುರುಳಿ ಹಾಗು ೨೬ನೇ ವಾಡ್ ಯುವ ಮುಖಂಡ ಯತೀಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.  
 

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಗೊಳಿಸುವಲ್ಲಿ ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ವಿಫಲ

ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಶಾಸಕ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಿ 

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಮಾತನಾಡಿದರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೇಂದ್ರ ಹಾಗು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳು ವಿಫಲವಾಗಿವೆ. ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳುವ ಮೂಲಕ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ. 
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ಯಶಸ್ಸು ಕಂಡಿಲ್ಲ.  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿ ಮತಗಳಿಕೆ ಮಾಡಿಕೊಳ್ಳುವ ಸಂಸದ ಬಿ.ವೈ ರಾಘವೇಂದ್ರರವರು ಕೇಂದ್ರ ಸರ್ಕಾರದ ಗಮನ ಸೆಳೆದು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು. 
    ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಸುಮಾರು ೧೫ ಸಾವಿರ ಕೋ.ರು. ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ಕಾರ್ಯದಲ್ಲಿ ಇದುವರೆಗೂ ಕುಮಾರಸ್ವಾಮಿಯವರು ಯಾವುದೇ ಯಶಸ್ಸು ಕಂಡಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಮೈಸೂರು ಕಾಗದ ಕಾರ್ಖಾನೆ ಪುನಶ್ಛೇತನಗೊಳಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ೪ ಕ್ಷೇತ್ರದ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ರವರಿಗೆ ಮತ ನೀಡಿದ್ದಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಎಂಪಿಎಂ ಕಾರ್ಖಾನೆ ಸಹ ಪುನಶ್ಚೇತನಗೊಂಡಿಲ್ಲ. ಅಲ್ಲದೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಹ ಲಭಿಸಿಲ್ಲ.  ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಸಹ ನಡೆದುಕೊಳ್ಳಬೇಕು.  ಪ್ರಸ್ತುತ ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಬದಲಾವಣೆ ಕುರಿತು ಚರ್ಚೆಯಾಗುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಸಂಗಮೇಶ್ವರ್‌ಗೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಕರುನಾಡ ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್, ವಿಜಯಕುಮಾರ್, ಪರಮೇಶ್ವರ್, ಇಂದ್ರಮ್ಮ, ಮಹಾದೇವಿ, ದಿವ್ಯಾಶ್ರೀ, ಜಟ್ಟೋಜಿರಾವ್ ಮತ್ತು ಶಿವಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶುಕ್ರವಾರ, ಅಕ್ಟೋಬರ್ 3, 2025

ಅ.4ರಂದು ವಿದ್ಯುತ್ ವ್ಯತ್ಯಯ



    ಭದ್ರಾವತಿ : ಶಿವಮೊಗ್ಗ 220 ಕೆವಿ ಎಮ್.ಆರ್.ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾರ್ಗ ಮುಕ್ತತೆ ಪಡೆಯಲು ನಗರದ ಜೆ.ಪಿ.ಎಸ್ ಕಾಲೋನಿಯಲ್ಲಿರುವ 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾಚೇನಹಳ್ಳಿ 110/11 ಕೆವಿ ಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಅ.4ರ ಶನಿವಾರ ಬೆಳಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ನ್ಯೂಟೌನ್, ನ್ಯೂ ಕಾಲೋನಿ, ವಿದ್ಯಾಮಂದಿರ, ಆಂಜನೇಯ ಅಗ್ರಹಾರ, ಆಕಾಶವಾಣಿ ಕೇಂದ್ರ ವ್ಯಾಪ್ತಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಸಂಪಿಗೆಶೆಟ್ಟಿ ಬಡಾವಣೆ, ಎನ್.ಟಿ.ಬಿ ಬಡಾವಣೆ, ಸರ್.ಎಂ.ವಿ ಬಡಾವಣಿ, ಹಳೇಸಿದ್ದಾಪುರ, ಹೊಸೂರು, ತಾಂಡ, ಸಂಕ್ಲೀಪುರ, ಹುತ್ತಾ ಕಾಲೋನಿ, ಐ.ಟಿ.ಐ, ಜನ್ನಾಪುರ, ಬಿ.ಎಚ್.ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಬಿಳಕಿ ತಾಂಡ, ಹೊಳೆ ಗಂಗೂರು, ಲಕ್ಷ್ಮೀಸಾಗರ(ರಬ್ಬರ್ ಕಾಡು), ಸುಲ್ತಾನ ಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಹಾಗಲಮನೆ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ಮಜ್ಜಿಗೇನಹಳ್ಳಿ, ಪದ್ಮೇನಹಳ್ಳಿ, ಲಕ್ಷ್ಮೀಪುರ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣಿ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ. ಅರಳಿಕೊಪ್ಪ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಹೇಡಿಕಟ್ಟೆ, ಹಳೆಜೇಡಿಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ ಕೈಗಾರಿಕಾ ಪ್ರದೇಶ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಶಿವರಾಮನಗರ, ವಿಶ್ವೇಶ್ವರಯ್ಯನಗರ, ಜೇಡಿಕಟ್ಟಿ ಹೊಸೂರು, ಜಯಂತಿ ಗ್ರಾಮ, ವೀರಾಪುರ, ಹುಲಿರಾಮನಕೊಪ್ಪ, ಹಾಗಲಮನೆ, ಸಂಕ್ಲಿಪುರ, ಸಿರಿಯೂರು. ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್, ವೀರಾಪುರ, ಮತಿಘಟ್ಟ ಮತ್ತು ಹಾತಿಕಟ್ಟೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಚಾಮುಂಡೇಶ್ವರಿ ದೇವಿ ಮನುಷ್ಯರ ಕೆಟ್ಟ ಗುಣಗಳನ್ನು ದೂರ ಮಾಡಿ ವಿಜಯ ಸಾಧಿಸುವ ಶಕ್ತಿ ನೀಡಲಿ : ಬಿ.ಕೆ ಸಂಗಮೇಶ್ವರ್

ನಾಡಹಬ್ಬ ದಸರಾ ಆಚರಣೆ : ಬನ್ನಿ ಮುಡಿದ ದಂಡಾಧಿಕಾರಿ ಪರಸಪ್ಪ ಕುರುಬರ

ಭದ್ರಾವತಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆ ಅಂತಿಮ ದಿನದ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಪರುಸಪ್ಪ ಕುರುಬರ ಅವರು ಬನ್ನಿ ಮುಡಿಯುವ ಮೂಲಕ ಆಚರಣೆಗೆ ತೆರೆ ಎಳೆದರು. 
    ಭದ್ರಾವತಿ : ಮನುಷ್ಯರಲ್ಲಿನ ಕೆಟ್ಟ ಗುಣಗಳನ್ನು ದೂರ ಮಾಡಿ, ಪ್ರತಿಯೊಂದರಲ್ಲೂ ವಿಜಯ ಸಾಧಿಸುವ ಶಕ್ತಿ ಚಾಮುಂಡೇಶ್ವರಿ ತಾಯಿ ಪ್ರತಿಯೊಬ್ಬರಿಗೂ ಕರುಣಿಸಲಿ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂತಿಮ ದಿನದ ಬನ್ನಿ ಮುಡಿಯುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಚಾಮುಂಡೇಶ್ವರಿ ತಾಯಿ ರಾಕ್ಷಸರನ್ನು ಸಂಹರಿಸಿದಂತೆ ಮನುಷ್ಯರಲ್ಲಿನ ಕ್ರೋಧ, ಆಶಾಂತಿ ಗುಣಗಳನ್ನು, ಧರ್ಮಾಂಧತೆಯನ್ನು ದೂರ ಮಾಡಿ ಪ್ರತಿಯೊಬ್ಬರು ಸೌಹಾರ್ದತೆಯಿಂದ, ಸಹೋದರತೆಯಿಂದ ಬದುಕುವಂತಾಗಲಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗಳು ನಡೆಯಲಿವೆ. ನಾಡಹಬ್ಬ ಯಶಸ್ವಿಗೊಳ್ಳಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ರಂಗನಾಥ ಶರ್ಮಾ ಮತ್ತು ಸಹಾಯಕ ಅರ್ಚಕ ಶ್ರೀನಿವಾಸ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಪರುಸಪ್ಪ ಕುರುಬರ ಅವರನ್ನು ಸಂಪ್ರದಾಯ ಬದ್ಧವಾಗಿ ಬನ್ನಿ ಮುಡಿಯುವ ಕಾರ್ಯಕ್ಕೆ ಆಹ್ವಾನಿಸಿತು. 
    ಬನ್ನಿ ಮಂಟಪಕ್ಕೆ ಆಗಮಿಸಿದ ತಹಸೀಲ್ದಾರ್ ಪರುಸಪ್ಪ ಕುರುಬರರವರು ಅರ್ಚಕ ನೇತೃತ್ವದ ತಂಡದೊಂದಿಗೆ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಅಂತಿಮವಾಗಿ ಬನ್ನಿ ಮುಡಿದರು. ನಂತರ ಸಿಡಿಮದ್ದು ಪ್ರದರ್ಶನದೊಂದಿಗೆ ರಾವಣ ಸಂಹಾರ ನಡೆಸಲಾಯಿತು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಚುನಾಯಿತ ಹಾಗು ನಾಮನಿರ್ದೇಶಿತ ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ವಿವಿಧ ದೇವಸ್ಥಾನಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ಗಣ್ಯರು ಸೇರಿದಂತೆ ಸ್ಥಳೀಯರು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.  ನಗರದ ವಿವಿಧೆಡೆಗಳಿಂದ ನಿವಾಸಿಗಳು ಆಗಮಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ವೀಕ್ಷಿಸಿ ಕಣ್ತುಂಬಿಕೊಂಡರು.