ಶುಕ್ರವಾರ, ಅಕ್ಟೋಬರ್ 10, 2025

ಅಯ್ಯಂಗಾರ್ ಕೇಕ್ ಮನೆ ಮಳಿಗೆಗೆ ಬೆಂಕಿ ಲಕ್ಷಾಂತರ ರು. ನಷ್ಟ

    ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯ ಸಮೀಪ ಶಂಕರಘಟ್ಟ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಯ್ಯಂಗಾರ್ ಕೇಕ್ ಮನೆ ಮಳಿಗೆಯಲ್ಲಿ ಶುಕ್ರವಾರ ಬೆಳಗಿನಜಾವ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ. 
    ಬೇಕರಿ ಮಳಿಗೆಯಲ್ಲಿ ಬೆಳಗಿನ ಜಾವ ೩ ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಎಚ್ಚರಗೊಂಡು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಳಿಗೆಯಲ್ಲಿದ್ದ ಬಹುಬೇಕ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಮಳಿಗೆ ಅರಸಿಕೆರೆ ಶ್ರೀಧರ್ ಎಂಬುವರಿಗೆ ಸೇರಿದ್ದಾಗಿದ್ದು,  ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಎನ್ನಲಾಗಿದೆ.


ಭದ್ರಾವತಿ ಕುವೆಂಪು ವಿಶ್ವವಿದ್ಯಾಲಯ ಸಮೀಪ ಶಂಕರಘಟ್ಟ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಯ್ಯಂಗಾರ್ ಕೇಕ್ ಮನೆ ಮಳಿಗೆಯಲ್ಲಿ ಶುಕ್ರವಾರ ಬೆಳಗಿನಜಾವ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ. 

ಗುರುವಾರ, ಅಕ್ಟೋಬರ್ 9, 2025

ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಾ ತಿಳುವಳಿಕೆ ಸಪ್ತಾಹ ಅಂಗವಾಗಿ ವಿವಿಧ ಸ್ಪರ್ಧೆಗಳು

 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಅ.೨೭ ರಿಂದ ನ.೨ರವರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ-೨೦೨೫ರ ಅಂಗವಾಗಿ "ಜಾಗರೂಕತೆ-ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂಬ ವಿಷಯದೊಂದಿಗೆ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
      ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆ : 
  ಅ.೨೫ರಂದು ಬೆಳಿಗ್ಗೆ ೯.೩೦ ರಿಂದ ೧೧.೩೦ರವರೆಗೆ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ೨ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಮೊದಲನೇ ವಿಭಾಗದಲ್ಲಿ ೫ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ `ದೈನಂದಿನ ಜೀವನದಲ್ಲಿ ನೈತಿಕ ಮೌಲ್ಯಗಳು ಮತ್ತು ತತ್ವಗಳನ್ನು ಅಭ್ಯಾಸ ಮಾಡುವುದು' ವಿಷಯ ಕುರಿತು ಹಾಗು ಎರಡನೇ ವಿಭಾಗದಲ್ಲಿ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ `ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪಾತ್ರಗಳು ಮತ್ತು ಜವಾಬ್ದಾರಿಗಳು' ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. 
    ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯುವ ಸ್ಪರ್ಧೆ; 
      ಬೆಳಿಗ್ಗೆ ೧೧.೩೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ೮ ರಿಂದ ೧೦ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ 'ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪಾತ್ರಗಳು ಮತ್ತು ಜವಾಬ್ದಾರಿಗಳು' ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. ಪ್ರಬಂಧ ಪದಮಿತಿ ೧೦೦೦ ಪದಗಳು ಮೀರಬಾರದು.
      ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಪರ್ಧೆ; 
      ಅ.೨೬ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨.೩೦ರವರೆಗೆ ವಿಐಎಸ್‌ಎಲ್ ಭದ್ರಾ ಅತಿಥಿಗೃಹದಲ್ಲಿ ೮ ರಿಂದ ೧೦ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ. 'ಜಾಗೃತಾ ತಿಳುವಳಿಕೆ ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿಯಾಗಿ ನನ್ನ ಜವಾಬ್ದಾರಿಗಳು' ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. ಭಾಷಣಮಾಡಲು ೩ ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ.
      ರಸಪ್ರಶ್ನೆ ಸ್ಪರ್ಧೆ
   ಅ.೨೭ರಂದು ಬೆಳಿಗ್ಗೆ ೯.೩೦ಕ್ಕೆ ವಿಐಎಸ್‌ಎಲ್ ಭದ್ರಾ ಅತಿಥಿಗೃಹದಲ್ಲಿ ೮ ರಿಂದ ೧೦ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ಪ್ರತಿ ಶಾಲೆಯಿಂದ ಒಂದು ತಂಡದಲ್ಲಿ ಇಬ್ಬರಿರುವ ಮೂರು ತಂಡಗಳು ಭಾಗವಹಿಸಬಹುದು. ಪ್ರಾಥಮಿಕ ಹಂತದಲ್ಲಿ ಲಿಖಿತ ರಸಪ್ರಶ್ನೆ, ತದನಂತರ ಅಂತಿಮ ಹಂತಕ್ಕೆ ೪ ಅಥವಾ ೬ ತಂಡಗಳ ಆಯ್ಕೆ ನಡೆಯಲಿದೆ. 
      ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಷ್ಟಾಚಾರ ವಿರೋಧಿ ಚಳುವಳಿಗಳು, ಭಷ್ಟಾಚಾರ ವಿರೋಧಿ ಹೋರಾಟದ ಏಜೆನ್ಸಿಗಳು, ಕಾನೂನುಗಳು ಮತ್ತು ನಿಯಮಗಳು, ಭಾರತದ ಇತಿಹಾಸ, ಸಂವಿಧಾನ ಮತ್ತು ಸಾಧನೆಗಳು, ಭಷ್ಟಾಚಾರ ವಿರೋಧಿ ಹೋರಾಟದ ತಂತ್ರಜ್ಞಾನಗಳು, ನೈತಿಕ ಮೌಲ್ಯಗಳು, ಸಾಮಾನ್ಯ ಜಾಗೃತಿಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಾಮಾನ ಮತ್ತು ಇತ್ಯಾದಿಗಳು ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. 
     ಎಲ್ಲಾ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿ ಬರತಕ್ಕದ್ದು, ಜೊತೆಗೆ ಶಾಲಾ ಗುರುತಿನ ಪತ್ರ ತರತಕ್ಕದ್ದು. ಚಿತ್ರಬರೆಯುವ ಮತ್ತು ಪ್ರಬಂಧ ಸ್ಪರ್ಧೆಗಳಿಗೆ ಪ್ರತೀ ಶಾಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷಣ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಪ್ರತಿ ಭಾಷೆಯಲ್ಲಿ ಭಾಗವಹಿಸಲು ಗರಿಷ್ಠ ೩ ಸ್ಪರ್ಧಿಗಳನ್ನು ಕಳುಹಿಸತಕ್ಕದ್ದು. ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತೀ ಶಾಲೆಯಿಂದ ಗರಿಷ್ಠ ಒಂದು ತಂಡದಲ್ಲಿ ೨ ಸ್ಪರ್ಧಿಗಳಿರುವ ೩ ತಂಡಗಳಳನ್ನು ಕಳುಹಿಸತಕ್ಕದ್ದು. ಮೊಬೈಲ್ ೯೪೮೦೮೨೯೦೧೮ / ೯೪೮೦೮೨೯೨೧೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಪ್ರತಿ ಸ್ಪರ್ಧೆಯಲ್ಲಿ ೩ ಬಹುಮಾನಗಳಿದ್ದು, ಬಹುಮಾನ ವಿತರಣಾ ಸಮಾರಂಭ ನ.೩, ಮಧ್ಯಾಹ್ನ ೨.೩೦ ಭದ್ರಾ ಅತಿಥಿಗೃಹ ನಡೆಯಲಿದೆ.



ಬುಧವಾರ, ಅಕ್ಟೋಬರ್ 8, 2025

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ನೂತನ ತಾಲೂಕು ಘಟಕ ಅಸ್ತಿತ್ವಕ್ಕೆ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಓಂಕಾರಪ್ಪ ಎಂ. ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ನೂತನವಾಗಿ ಭದ್ರಾವತಿ ತಾಲೂಕು ಘಟಕ ರಚಿಸಲಾಯಿತು. 
    ಭದ್ರಾವತಿ : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಓಂಕಾರಪ್ಪ ಎಂ. ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ನೂತನ ತಾಲೂಕು ಘಟಕ ರಚಿಸಲಾಯಿತು. 
    ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ನಾಗರಾಜ್ ಕುಮಾರ್, ಉಪಾಧ್ಯಕ್ಷೆ ಲಕ್ಷ್ಮೀ ಕಳಸಣ್ಣ, ಕಾರ್ಯದರ್ಶಿ ಭಾಗ್ಯ ಪಿ.ಗೌಡ, ಸಂಘಟನಾ ಕಾರ್ಯದರ್ಶಿ ಸಿ. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನೂತನ ತಾಲೂಕು ಘಟಕ : 
    ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಈ.ಪಿ ಬಸವರಾಜು, ಅಧ್ಯಕ್ಷರಾಗಿ ಪ್ರೇಮಾಕುಮಾರಿ, ಉಪಾಧ್ಯಕ್ಷರಾಗಿ ಟಿ.ವಿ ಜೋಸೆಫ್, ಎನ್.ಪಿ ಡೇವಿಡ್, ಶೃತಿ ನವೀನ್, ನೂರುಲ್ಲಾ, ಕಾರ್ಯದರ್ಶಿಯಾಗಿ ಆಶಾರಾಣಿ ಕೆ.ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ಆರೀಫ್ ಹುಸೇನ್, ಪವನ್ ಬಾಬು, ಕಾನೂನು ಸಲಹೆಗಾರರಾಗಿ ಸೈಯದ್ ಜಮೀರ್ ಮತ್ತು ಜಿ. ವಿಜಯಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. 

ಮಂಗಳವಾರ, ಅಕ್ಟೋಬರ್ 7, 2025

ಉಮೇಶ್ ಗುಜ್ಜಾರ್


ಉಮೇಶ್ ಗುಜ್ಜಾರ್ 
    ಭದ್ರಾವತಿ : ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಮಾಜಿ ನಿರ್ದೇಶಕ ಹಾಗು ಗುಜ್ಜಾರ್ ಸಮಿತಿ ಉಪಾಧ್ಯಕ್ಷ ಉಮೇಶ್ ಗುಜ್ಜಾರ್(೫೮) ಹೃಧಯಾಘಾತದಿಂದ ಅವರ ನಿವಾಸದಲ್ಲಿ ನಿಧನ ಹೊಂದಿದರು. 
    ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ, ಪತ್ನಿ ಕಲ್ಪನಾ ಇದ್ದಾರೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಸಂಜೆ ನೆರವೇರಿತು.
    ಇವರ ನಿಧನಕ್ಕೆ ಪಾಂಡುರಂಗ ಸೇವಾ ಬಳಗ, ಭಾವಸಾರ ಸಮಾಜ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಭರಣ ವ್ಯಾಪಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಗತಿಪರ ಕೃಷಿಕ ಶ್ರೀಧರ್‌ರವರ ಜಮೀನಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ

 

ಭದ್ರಾವತಿ ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಶ್ರೀಧರ್‌ರವರು ಪ್ರತಿ ವರ್ಷದಂತೆ ಈ ಬಾರಿ ಸಹ ತಮ್ಮ ಜಮೀನಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮದಿಂದ ಆಚರಿಸಿದರು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಶ್ರೀಧರ್‌ರವರು ಪ್ರತಿ ವರ್ಷದಂತೆ ಈ ಬಾರಿ ಸಹ ತಮ್ಮ ಜಮೀನಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮದಿಂದ ಆಚರಿಸಿದರು. 
    ಭೂ ತಾಯಿಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಸಿಹಿ ತಿನಿಸುಗಳೊಂದಿಗೆ ಧಾರ್ಮಿಕ ಆಚರಣೆಗಳ ಮೂಲಕ ಆರಾಧಿಸಲಾಯಿತು. ಶ್ರೀಧರ್‌ರವರು ತಮ್ಮ ಜಮೀನಿನಲ್ಲಿ ವಿಭಿನ್ನ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಹಲವು ಸಾಧನೆಗಳನ್ನು ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಕುಟುಂಬಸ್ಥರೊಂದಿಗೆ ಭೂಮಿ ಹುಣ್ಣಿಮೆ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. 

ಶ್ರೀ ಮಹರ್ಷಿ ವಾಲ್ಮೀಕಿ ಮೌಲ್ಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾ.ಪಂ., ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳು ಸಹಯೋಗದೊಂದಿಗೆ ಹಳೇನಗರದ ವೀರಶೈವ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಶ್ರೀ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಮೌಲ್ಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು  ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. 
    ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾ.ಪಂ., ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳು ಸಹಯೋಗದೊಂದಿಗೆ ಹಳೇನಗರದ ವೀರಶೈವ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶ್ರೀ ಮಹರ್ಷಿ ವಾಲ್ಮೀಕಿಯವರು ಮೊದಲ ಮೌಲ್ಯಾಧಾರಿತ ಮಹಾಕಾವ್ಯ ರಚಿಸುವ ಮೂಲಕ ಜನರ ಮೌಲ್ಯಯುತ ಬದುಕಿಗೆ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದರು. 
    ವಾಲ್ಮೀಕಿ ಸಮಾಜದವರು ಹೆಚ್ಚು ಸಂಘಟಿತಗೊಳ್ಳಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು. ಕ್ಷೇತ್ರದಲ್ಲಿ ವಾಲ್ಮೀಕಿ ಸಮಾಜದವರ ಏಳಿಗೆಗೆ ಬದ್ಧನಾಗಿದ್ದೇನೆ ಎಂದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಶಶಿಕಲಾ ನಾರಾಯಣಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಬಸವರಾಜ್ ಆನೆಕೊಪ್ಪ, ಶಿವಕುಮಾರ್ ಆರ್. ನಾಗೋಲಿ,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಭಾ ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಹುತ್ತಾ ಕಾಲೋನಿಯಿಂದವೀರಶೈವ ಸಭಾಭವನದವರಗೆ ನಡೆಯಿತು.  

ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಯಶಸ್‌ಗೆ ಚಿನ್ನದ ಪದಕ

ಪಿ.ಬಿ ಯಶಸ್ 
    ಭದ್ರಾವತಿ: ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯಿಂದ ೩ ದಿನಗಳ ಕಾಲ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಿ.ಬಿ ಯಶಸ್ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಯಶಸ್ ಜಿಲ್ಲಾಮಟ್ಟ, ರಾಜ್ಯಮಟ್ಟ, ವಿಭಾಗೀಯಮಟ್ಟ ಹಾಗೂ ರಾಷ್ಟೀಯಮಟ್ಟದಲ್ಲಿ ಸತತವಾಗಿ ೪ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನಗರದ ಬಿ.ಎಂ ಪ್ರಭುಶಂಕರ್- ಎಸ್.ಎ ಶೋಭ ದಂಪತಿ ಪುತ್ರರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.