ಭದ್ರಾವತಿ, ಮೇ. ೧೧: ಜನದಟ್ಟಣೆ ಅಧಿಕಗೊಳ್ಳುವ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ೨ನೇ ಹಂತದ ಔಷಧಿ ಸಿಂಪಡಣೆ ಕಾರ್ಯ ಸೋಮವಾರದಿಂದ ನಡೆಯುತ್ತಿದೆ.
ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಉಲ್ಬಣಗೊಂಡ ಪರಿಣಾಮ ಆರಂಭಿಕ ಹಂತದಲ್ಲಿಯೇ ಸ್ಥಳೀಯ ಸಂಸ್ಥೆಗಳು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಒಂದು ಹಂತದಲ್ಲಿ ನೀರಿನೊಂದಿಗೆ ಸೋಡಿಯಂ ಹೈಪೋ ಕ್ಲೋರೈಟ್ ಮಿಶ್ರಣದ ಔಷಧಿ ಸಿಂಪಡಣೆ ಕಾರ್ಯ ಕೈಗೊಳ್ಳಲಾಗಿತ್ತು.
ಇದೀಗ ೨ನೇ ಹಂತವಾಗಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಸಿಂಪಡಣೆ ಕಾರ್ಯ ನಡೆಯಿತು. ಘಟಕ ವ್ಯವಸ್ಥಾಪಕಿ ಅಂಬಿಕಾ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಮಧ್ಯಾಹ್ನ ಚನ್ನಗಿರಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಸದಸ್ಯ ಡಾ. ಎನ್‌ಟಿಸಿ ನಾಗೇಶ್, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.