Sunday, June 7, 2020

ಅರ್ಚಕರಿಗೆ ದಿನಸಿ ಸಾಮಗ್ರಿ ವಿತರಣೆ


ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಮುಜರಾಯಿ ಇಲಾಖೆ ಆದೇಶದಂತೆ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜೂ. ೭: ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಮುಜರಾಯಿ ಇಲಾಖೆ ಆದೇಶದಂತೆ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಸುಮಾರು ೭೮ ಅರ್ಚಕರ ಪೈಕಿ ಶನಿವಾರ ಸುಮಾರು ೩೦ ಅರ್ಚಕರಿಗೆ ಹಳೇನಗರ ವೀರಶೈವ ಸಭಾಭವನದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ತಾಲೂಕು ಕಛೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸದ್ಯಕ್ಕಿಲ್ಲ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದರ್ಶನ

ಭದ್ರಾವತಿ ಹೃದಯ ಭಾಗದಲ್ಲಿರುವ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ. 
ಭದ್ರಾವತಿ, ಜೂ. ೭: ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ, ನಗರದ ಹೃದಯ ಭಾಗದಲ್ಲಿರುವ ಹಳೇನಗರದ ೧೨ನೇ ಶತಮಾನದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋಮವಾರದಿಂದ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದುವರೆಗೂ ದೇವಸ್ಥಾನ ಆರಂಭಿಸುವ ಸಂಬಂಧ ಯಾವುದೇ ಆದೇಶ ಮುಜರಾಯಿ ಇಲಾಖೆಯಿಂದ ಬಂದಿಲ್ಲ. 
ತಾಲೂಕಿನಲ್ಲಿ ಒಟ್ಟು ೭೧ ದೇವಸ್ಥಾನಗಳು ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಎಲ್ಲಾ ದೇವಸ್ಥಾನಗಳು ‘ಸಿ’ ಗ್ರೂಪ್ ಶ್ರೇಣಿಯಲ್ಲಿವೆ. ಇವುಗಳಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನ ಪ್ರಮುಖವಾಗಿದ್ದು, ವಾರ್ಷಿಕ ಸುಮಾರು ೧೦ ಲಕ್ಷದ ವರೆಗೆ ಆದಾಯ ಬರುತ್ತದೆ. ತಾಲೂಕಿನ ಇತಿಹಾಸವನ್ನು ಈ ದೇವಸ್ಥಾನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ವಿಶೇಷ ಎಂದರೆ ನಗರಕ್ಕೆ ಆಗಮಿಸುವ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ನಟರು, ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಮಹಾರಥೋತ್ಸವ, ವೈಕುಂಠ ಏಕಾದಶಿಗಳಂದು ಸಾವಿರಾರು ಭಕ್ತಧಿಗಳು ಪಾಲ್ಗೊಳ್ಳುತ್ತಾರೆ. 
ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ಸುಮಾರು ೨ ತಿಂಗಳಿನಿಂದ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ದೇವಸ್ಥಾನ ಅರ್ಚಕರು, ಕುಟುಂಬದವರು ಮಾತ್ರ ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಸಮಯ ದೇವಸ್ಥಾನ ಬಾಗಿಲು ತೆರೆದು ನಿತ್ಯದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ರಾಜ್ಯದ ಇತರೆಡೆ ಪ್ರಮುಖ ಧಾರ್ಮಿಕ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಗಳನ್ವಯ ಸೋಮವಾರದಿಂದ ಆರಂಭಗೊಳ್ಳುತ್ತಿವೆ. ಆದರೆ ಈ ದೇವಸ್ಥಾನದಲ್ಲಿ ಇದುವರೆಗೂ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಅಷ್ಟಕ್ಕೂ ಈ ದೇವಸ್ಥಾನದಲ್ಲಿ ಇನ್ನೂ ಉಸ್ತುವಾರಿ ಸಮಿತಿ ರಚನೆಯಾಗಿಲ್ಲ. ಎಲ್ಲಾ ಸಿದ್ದತೆಗಳನ್ನು ಮುಜರಾಯಿ ಇಲಾಖೆಯೇ ಕೈಗೊಳ್ಳಬೇಕಾಗಿದೆ. 
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್, ಮುಜರಾಯಿ ಇಲಾಖೆಯಿಂದ ಈ ಹಿಂದೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇವಸ್ಥಾನ ಮುಚ್ಚಲು ಆದೇಶ ಬಂದಿತ್ತು.  ಆದರೆ ಆರಂಭಕ್ಕೆ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಯಾವುದೇ ಸಿದ್ದತೆ ಮಾಡಬೇಕಾದರೂ ಮುಜರಾಯಿ ಇಲಾಖೆಯೇ ಮಾಡಬೇಕಾಗಿದೆ ಎಂದರು. 
ಸರ್ಕಾರದಿಂದ ಇದುವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಮಾರ್ಗಸೂಚಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಅಧಿಕಾರಿಯಾಗಿರುವ ತಾಲೂಕು ದಂಡಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. 

Saturday, June 6, 2020

ಅನೈತಿಕ ಸಂಬಂಧ : ಪ್ರೀತಿ ವಿವಾಹವಾದ ಗೃಹಿಣಿ ಆತ್ಮಹತ್ಯೆ

ಗಂಡನ ಅನೈತಿಕ ಸಂಬಂಧ ಸೇರಿದಂತೆ ಕೌಟುಂಬಿಕ ಕಲಹದಿಂದ ನೊಂದ ಭದ್ರಾವತಿ ತಾಲೂಕಿನ ಪದ್ಮೇನಹಳ್ಳಿಯ ರೂಪಾ ಎಂಬ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು. 
ಭದ್ರಾವತಿ, ಜೂ. ೬: ಗಂಡನ ಅನೈತಿಕ ಸಂಬಂಧ ಸೇರಿದಂತೆ ಕೌಟುಂಬಿಕ ಕಲಹದಿಂದ ನೊಂದ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪದ್ಮೇನಹಳ್ಳಿಯಲ್ಲಿ ನಡೆದಿದೆ. 
ರೂಪ(೧೯) ಮೃತಪಟ್ಟಿದ್ದು, ಪದ್ಮೇನಹಳ್ಳಿಯ ನಿವಾಸಿ ಕಿರಣ ಎಂಬಾತನನ್ನು ಪ್ರೀತಿಸಿ ಕಳೆದ ೧೦ ತಿಂಗಳ ಹಿಂದೆ ವಿವಾಹವಾಗಿದ್ದಳು. ಜೂ.೪ರಂದು ಬೆಳಿಗ್ಗೆ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 
ಕಿರಣ ರೂಪಾಳಿಗೆ ತವರು ಮನೆಯಿಂದ ಹಣ ತರುವಂತೆ ದೈಹಿಕ ಹಾಗು ಮಾನಸಿಕವಾಗಿ ಕಿರುಕುಳ ನೀಡುವ ಜೊತೆಗೆ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಈ ಹಿನ್ನಲೆಯಲ್ಲಿ ಬೇಸತ್ತ ರೂಪ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಧನ

ಭದ್ರಾವತಿ, ಜೂ. ೬ : ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ  ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ೧೫ ಸಾವಿರ ರು. ಪರಿಹಾರ ಧನ ಘೋಷಿಸಿದೆ. 
ಹಣ್ಣಿನ ಬೆಳೆಗಳಾದ ಅನಾನಸ್, ಪಪ್ಪಾಯಿ, ಅಂಜೂರ, ಕಲ್ಲಂಗಡಿ, ಬಾಲೆ, ಖರ್ಬೂಜ ಮತ್ತು ತರಕಾರಿ ಬೆಳೆಗಳಾದ ಬೂದುಗುಂಬಳ, ಎಲೆಕೋಸು, ಹೂಕೋಸು, ಹಸಿರುಮೆಣಸಿನಕಾಯಿ, ಟೊಮ್ಯಾಟೊ ಬೆಳೆಗಳನ್ನು ಬೆಳೆದು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ರೈತರು ಪರಿಹಾರ ಧನ ಪಡೆಯಲು  ಅರ್ಹರಾಗಿದ್ದು,  ಬೆಳೆಗಾರರು ಜೂ. ೧೬ ರೊಳಗಾಗಿ ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಬುಕ್ ನಕಲು ಪ್ರತಿ ಹಾಗೂ ಸ್ವಯಂ ದೃಢೀಕೃತ ಘೋಷಣಾ ಪತ್ರದೊಂದಿಗೆ ಅರ್ಜಿ ಸಲ್ಲಿಸುವುದು. 
ಓರ್ವ ರೈತ ಒಂದು ಹೆಕ್ಟೇರ್‌ವರೆಗೆ ಮಾತ್ರ ೧೫ ಸಾವಿರ  ರು. ಪರಿಹಾರ ಧನ ಪಡೆಯಲು ಅವಕಾಶವಿದೆ. ಬಾಳೆ ಬೆಳೆಗೆ ಸಂಬಂಧಿಸಿದಂತೆ ಮಾರ್ಚ್ ೨ನೇ ವಾರದ ನಂತರದ ಕಟಾವಿಗೆ ಬಂದಿರುವ ಬೆಳೆಗೆ ಮಾತ್ರ ಪರಿಹಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ನಗರದ ತರೀಕೆರೆ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆ ಕಛೇರಿ ಸಂಪರ್ಕಿಸಲು ಕೋರಲಾಗಿದೆ. 

ಬಿಜೆಪಿ ಕೇಂದ್ರ ಸರ್ಕಾರ ಒಂದು ವರ್ಷದ ಸಾಧನೆ

ಸಾಧನಾ ಪತ್ರದ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ೨ನೇ ಅವಧಿಯ ಮೊದಲ ವರ್ಷದ ಸಾಧನೆ ಹಾಗೂ ಶಿವಮೊಗ್ಗ  ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರರವರ ಸಾಧನೆ ಮನೆ ಮನೆಗೆ ತಿಳಿಸುವ ೩ ದಿನಗಳ ಕಾರ್ಯಕ್ರಮಕ್ಕೆ ಶನಿವಾರ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಭದ್ರಾವತಿ, ಜೂ. ೬: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ೨ನೇ ಅವಧಿಯ ಮೊದಲ ವರ್ಷದ ಸಾಧನೆ ಹಾಗೂ ಶಿವಮೊಗ್ಗ  ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರರವರ ಸಾಧನೆ ಪ್ರತಿಯೊಬ್ಬರಿಗೂ ತಿಳಿಸಿಕೊಡುವ ನಿಟ್ಟಿನಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಮನೆ ಮನೆಗೆ ಸಾಧನಾ ಪತ್ರ ವಿತರಿಸುವ ೩ ದಿನಗಳ ಕಾರ್ಯಕ್ರಮಕ್ಕೆ ಶನಿವಾರ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. 
ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಹಾಗೂ ಸಂಸದರ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಸಂದೇಶಗಳನ್ನು ತಿಳಿಸಿದರು. 
ತಾಲೂಕು ಬಿಜೆಪಿ ಮಂಡಲ ಪ್ರಭಾರಿ ಜ್ಞಾನೇಶ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್,  ಮುಖಂಡರಾದ ಎಂ. ಮಂಜುನಾಥ್, ಹನುಮಂತನಾಯ್ಕ, ರಾಮನಾಥ ಬರ್ಗೆ, ಬಿ.ಎಸ್ ಶ್ರೀನಾಥಚಾರ್, ಗಣೇಶ್ ಹಾಗೂ ಹೊಸಮನೆ ಬೂತ್ ೯೩ರ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಹಾಗೂ ಸಂಸದರ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಸಂದೇಶಗಳನ್ನು ತಿಳಿಸಿದರು. 

ಸರ್ಕಾರಿ ಕಾಲೇಜು, ಆಸ್ಪತ್ರೆ ಸೇರಿದಂತೆ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸೇರಿದಂತೆ ನಗರದ ವಿವಿಧೆಡೆ ವಿಶ್ವ ಪರಿಸರ ದಿನ ಆಚರಿಸಲಾಯಿತು. 
ಭದ್ರಾವತಿ, ಜೂ. ೬: ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸೇರಿದಂತೆ ನಗರದ ವಿವಿಧೆಡೆ ವಿಶ್ವ ಪರಿಸರ ದಿನ ಆಚರಿಸಲಾಯಿತು. 
ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್, ರೋವರ‍್ಸ್ ಲೀಡರ್ ಪ್ರೊ. ವರದರಾಜ, ರೇಂಜರ‍್ಸ್ ಲೀಡರ್ ಡಾ. ದಾಕ್ಷಾಯಿಣಿ ಎಂ ಡೊಂಗ್ರೆ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 
ನಗರಸಭೆ ವ್ಯಾಪ್ತಿಯ ಸುರಗಿತೋಪು ಕೊಳಚೆ ಪ್ರದೇಶದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪರಿಸರ ದಿನ: 
ನಗರಸಭೆ ವ್ಯಾಪ್ತಿಯ ಸುರಗಿತೋಪು ಕೊಳಚೆ ಪ್ರದೇಶದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪ್ರಮುಖರಾದ ಶಿವರಾಜ್, ಉಮೇಶ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನ ವಿಶಿಷ್ಟವಾಗಿ ಆಚರಿಸಲಾಯಿತು. 
ಸರ್ಕಾರಿ ಆಸ್ಪತ್ರೆಯಲ್ಲಿ ಪರಿಸರ ದಿನ: 
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನ ವಿಶಿಷ್ಟವಾಗಿ ಆಚರಿಸಲಾಯಿತು. ಆಸ್ಪತ್ರೆಯ ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸುಂದರ್‌ಬಾಬುರವರ ಪುತ್ರಿ ಶ್ರೇಷ್ಠ ಹುಟ್ಟುಹಬ್ಬದ ಅಂಗವಾಗಿ ಸಸಿಗಳನ್ನು ನೆಡಲಾಯಿತು. 
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ವೈದ್ಯರಾದ ಡಾ. ವೀರಭದ್ರಪ್ಪ, ಡಾ. ಕವಿತ, ಡಾ. ಮಯೂರಿ, ಡಾ. ಪ್ರೀತಿ, ಡಾ. ಸುದರ್ಶನ್ ರಾವ್, ಡಾ. ಕಿರಣ್, ಡಾ. ಪವನ್, ಡಾ. ವರ್ಷ, ಡಾ. ಜ್ಞಾನಮೂರ್ತಿ, ವಿವಿಧ ವಿಭಾಗಗಳ ಸಿಬ್ಬಂದಿಗಳಾದ ಶೀಲಾ ಮೇರಿ, ಶ್ರೀದೇವಿ, ಶಿಲ್ಪ, ವೆಂಕಟೇಶ್, ಕಿರಣ್, ಸೋಮ, ರಾಜೇಶ್, ಪ್ರವೀಣ್, ಮೋಹನ್, ನಾಗರಾಜ್, ರಾಧಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, June 5, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತಾ ಸಭೆ : ಸಾರಿಗೆ ವ್ಯವಸ್ಥೆ ಕುರಿತು ಚರ್ಚೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತೆ ಹಿನ್ನಲೆಯಲ್ಲಿ ಪರಿಶೀಲನಾ ಸಭೆ ಶುಕ್ರವಾರ ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ನಡೆಯಿತು.   
ಭದ್ರಾವತಿ, ಜೂ. ೫: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತೆ ಹಿನ್ನಲೆಯಲ್ಲಿ ಪರಿಶೀಲನಾ ಸಭೆ ಶುಕ್ರವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ನಡೆಯಿತು. 
ಒಂದೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಆದರೂ ಸಹ ಪೂರ್ಣಪ್ರಮಾಣದಲ್ಲಿ ಸಡಿಲಗೊಳ್ಳದ ಕಾರಣ ಹಲವು ಸಮಸ್ಯೆಗಳು ಎದುರಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳು ಹಾಜರಾಗಲು ಅನುಕೂಲವಾಗುವ ಸ್ಥಿತಿ ರೂಪಿಸಿಕೊಳ್ಳುವುದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. 
  ಸಭೆಯಲ್ಲಿ ಪ್ರಮುಖವಾಗಿ ಮಕ್ಕಳು ಪರೀಕ್ಷೆಗೆ  ಹಾಜರಾಗಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಕೈಗೊಳ್ಳುವ ಸಂಬಂಧ ಚರ್ಚಿಸಲಾಯಿತು. ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸೌಲಭ್ಯವಿಲ್ಲದ ಕಾರಣ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ಬಸ್ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾರ್ಗ ನಕ್ಷೆ ರಚಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು. 
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಶಿರಸ್ತೆದಾರ್ ಮಂಜಾನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಚಿದಾನಂದ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.