ಲಯನ್ಸ್ ಕ್ಲಬ್ ಉಪ ಗವರ್ನರ್ ಕೆ.ಸಿ ವೀರಭದ್ರಪ್ಪ ಭದ್ರಾವತಿ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶುಗರ್ಟೌನ್ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಭದ್ರಾವತಿ. ಜು, ೧೨: ಸಮಾಜ ಸೇವೆಯಲ್ಲೂ ಸವಾಲುಗಳನ್ನು ಎದುರಿಸಿದಾಗ ಮಾತ್ರ ಹೊಸತನ, ಬದಲಾವಣೆಗಳನ್ನು ತರಲು ಸಾಧ್ಯ ಎಂದು ಲಯನ್ಸ್ ಕ್ಲಬ್ ಉಪ ಗವರ್ನರ್ ಕೆ.ಸಿ ವೀರಭದ್ರಪ್ಪ ತಿಳಿಸಿದರು.
ಅವರು ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶುಗರ್ಟೌನ್ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸವಾಲುಗಳು ಎದುರಾಗಿದ್ದು, ಸೇವಾ ಕಾರ್ಯಗಳಲ್ಲೂ ಬಹಳಷ್ಟು ಸವಾಲುಗಳು ಎದುರಾಗುತ್ತಿವೆ. ಕ್ಲಬ್ ಮುನ್ನಡೆಸುವವರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಸಮಾಜಕ್ಕೆ ತಮ್ಮ ಸೇವೆಯನ್ನು ನಿರಂತರವಾಗಿ ಸಲ್ಲಿಸಲು ಮುಂದಾಗಬೇಕೆಂದರು.
ಬಹಳಷ್ಟು ವೈದ್ಯರು ತಮ್ಮ ವೃತ್ತಿ ಬದುಕಿನ ಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು ಲಯನ್ಸ್ ಕ್ಲಬ್ನಂತಹ ಸೇವಾ ಸಂಸ್ಥೆಗಳೊಂದಿಗೆ ಸೇರಿ ಕೈಗೊಳ್ಳುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಈ ಮೂಲಕ ಸಮಾಜದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿರುವುದು ಶ್ಲಾಘನೀಯ ಎಂದರು.
ವೈದ್ಯ ಡಾ. ಸೆಲ್ವರಾಜ್ ಮಾತನಾಡಿ, ಪ್ರಸ್ತುತ ವಿಶ್ವದಾದ್ಯಂತ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿನ ಬಗ್ಗೆ ಯಾರು ಸಹ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಸಹ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ, ಮುಖಗವಸು ಧರಿಸುವುದರಿಂದ ಹಾಗೂ ಸ್ಯಾನಿಟೈಸರ್ ಬಳಕೆಯಿಂದ ಸೋಂಕು ಹರಡದಂತೆ ನಿಯಂತ್ರಣಕ್ಕೆ ತರಬಹುದಾಗಿದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕೆಂದರು.
ಡಾ. ಬಿ.ಸಿ ರಾಯ್ ಪ್ರಶಸ್ತಿ ಪುರಸ್ಕೃತ ಡಾ.ಟಿ ನರೇಂದ್ರ ಭಟ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಟೋ ಚಾಲಕರಿಗೆ ಮುಖಗವಸು ಹಾಗು ಸ್ಯಾನಿಟೈಸರ್ ಸೇರಿದಂತೆ ಕೊರೋನಾ ವೈರಸ್ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲು ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಲಾಯಿತು.
ಎಚ್.ಜಿ ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅನಂತ ಕೃಷ್ಣನಾಯಕ್, ವಲಯಾಧ್ಯಕ್ಷ ಎಡೆಹಳ್ಳಿ ಪಾಲಾಕ್ಷಪ್ಪ, ಟಿ. ಶ್ರೀನಿವಾಸ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಬಿ. ನಿತ್ಯಾನಂದ ಪೈ, ಕಾರ್ಯದರ್ಶಿಯಾಗಿ ತಮ್ಮೇಗೌಡ, ಖಜಾಂಚಿಯಾಗಿ ಎಂ.ಸಿ ಯೋಗೀಶ್, ಉಪಾಧ್ಯಕ್ಷರಾಗಿ ಡಾ.ಸಿ.ಆರ್ ಗುರುರಾಜ್, ಆರ್. ಉಮೇಶ್, ಕ್ಲಬ್ ವಿವಿಧ ಸೇವಾ ಚಟುವಟಿಕೆಗಳ ಪ್ರಮುಖರಾಗಿ ಡಾ.ಟಿ ನರೇಂದ್ರ ಭಟ್, ಡಾ.ಪಿ ಸೆಲ್ವರಾಜ್, ಕೆ.ಎ ನಾಯಕ್, ಆರ್. ಮದಿಯಾಳಗನ್, ಶ್ರೀನಿವಾಸ್, ಡಾ.ಕೆ.ಜಿ ಪಂಚಾಕ್ಷರಿ, ನಿರ್ದೇಶಕರುಗಳಾಗಿ ಎಸ್. ಯುವರಾಜ್, ಆರ್. ಸುಬ್ರಮಣಿ, ಜಗನ್ನಾಥ್ ಕಾಮತ್, ಗೋಕುಲ್ ಕೃಷ್ಣ, ಸಿ. ನಾಗರಾಜ್ ಪದಗ್ರಹಣ ಸ್ವೀಕರಿಸಿದರು. ಸಿಂಧುಪ್ರಾರ್ಥಿಸಿದರು. ಡಾ. ವೃಂದಾ ಭಟ್ ನಿರೂಪಿಸಿದರು. ತಮ್ಮೇಗೌಡ ವಂದಿಸಿದರು.