ಬೆಂಗಳೂರಿನಿಂದ ಬಂದಿದ್ದ ಇಬ್ಬರು ಸಹೋದರರಲ್ಲಿ ಸೋಂಕು ಪತ್ತೆ
ಭದ್ರಾವತಿ, ಜು. ೧೨: ನಗರದ ಹೊಸಮನೆ ಭಾಗದಲ್ಲಿ ಪುನಃ ೨ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಭಾಗದ ನಾಗರಿಕರಲ್ಲಿ ಆತಂಕ ಹೆಚ್ಚಾಗಿದ್ದು, ಈಗಾಗಲೇ ಈ ಭಾಗದ ೧೨ ಮತ್ತು ೧೩ನೇ ವಾರ್ಡ್ ಹಾಗೂ ಗಾಂಧಿನಗರ ವ್ಯಾಪ್ತಿಯ ಕೆಲವು ಭಾಗಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಶನಿವಾರ ರಾತ್ರಿ ಹೊಸಮನೆ ಎನ್‌ಎಂಸಿ ೩ನೇ ಅಡ್ಡರಸ್ತೆಯಲ್ಲಿ ೫೮ ಮತ್ತು ೫೪ ವರ್ಷದ ಇಬ್ಬರು ಸಹೋದರರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಿಂದ ಆಗಮಿಸಿದ್ದ ಇಬ್ಬರು ಸ್ವಯಂ ಪ್ರೇರಿತರಾಗಿ ಜು.೯ರಂದು ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದರು. ಇಬ್ಬರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಸೋಂಕು ತಗುಲಿರುವುದು ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಇಬ್ಬರು ಸಹೋದರರು ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಯಾನಿಟೈಸರ್ ಕೈಗೊಳ್ಳಲಾಗಿದೆ. ಉಳಿದಂತೆ ಈ ವ್ಯಾಪ್ತಿಗೆ ಒಳಪಡುವ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸದ ಮುಂಭಾಗದ ೨ ಮತ್ತು ೩ನೇ ಅಡ್ಡ ರಸ್ತೆ ಸೀಲ್‌ಡೌನ್ ಮಾಡಲಾಗಿದೆ. ಹೊಸಮನೆ ವ್ಯಾಪ್ತಿಯಲ್ಲಿಯೇ ಸುಮಾರು ೧೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
No comments:
Post a Comment