ಗುರುವಾರ, ಜುಲೈ 16, 2020

ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದಿಂದ ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ

ಭದ್ರಾವತಿಯಲ್ಲಿ ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆರಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಭದ್ರಾವತಿ, ಜು. ೧೬: ನಗರದ ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದ ವತಿಯಿಂದ ಗುರುವಾರ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆರಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮಾಜದ ಎಲ್ಲರೂ ಮತ್ತಷ್ಟು ಚೈತನ್ಯ ತುಂಬುವ ನಿಟ್ಟಿನಲ್ಲಿ ಮುಂದಾಗಬೇಕೆಂಬ ಉದ್ದೇಶದೊಂದಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಆಶಾ ಕಾರ್ಯಕರ್ತೆಯರಾದ ಶೃತಿ, ನಾಗರತ್ನ ಭಾಯಿ ಮತ್ತು ಯಶಸ್ವಿನಿ ಸೇರಿ ೩ ಮಂದಿಗೆ ತಲಾ ೩ ಸಾವಿರ ರು. ಆರ್ಥಿಕ ನೆರವು ಅಭಿನಂದಿಸಲಾಯಿತು.
ಕಾರ್ಯದರ್ಶಿ ಲೋಕೇಶ್, ಸಿಬ್ಬಂದಿಗಳಾದ ಶಂಕರನಾರಾಯಣ, ಹನುಮಂತಪ್ಪ, ದೇವರಾಜ್ ಮತ್ತು ರಮೇಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿಯಲ್ಲಿ ೩ ಕೊರೋನಾ ಸೋಂಕು ಪತ್ತೆ

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ೧,೫೦೦ ರು. ದಂಡ 

ಭದ್ರಾವತಿ, ಜು. ೧೬: ತಾಲೂಕಿನಲ್ಲಿ ಬುಧವಾರ ಒಂದೇ ದಿನ ೫ ಪ್ರಕರಣಗಳು ಪತ್ತೆಯಾಗಿದ್ದವು. ಗುರುವಾರ ಪುನಃ ೩ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಒಟ್ಟು ೫೧ ಕೊರೋನಾ ಸೋಂಕು ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಇದರಿಂದಾಗಿ ನಿವಾಸಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. 
ನಗರಸಭೆ ವ್ಯಾಪ್ತಿಯ ಸುಭಾಷ್‌ನಗರದಲ್ಲಿ ೨೧ ವರ್ಷದ ಯುವಕನಿಗೆ, ಅರಳಿಕೊಪ್ಪ ಗ್ರಾಮದಲ್ಲಿ ೩೨ ವರ್ಷದ ವ್ಯಕ್ತಿಗೆ ಹಾಗೂ ದೇವರನರಸೀಪುರ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದಿರುವ ೨೦ ವರ್ಷದ ಯುವತಿಗೆ ಸೋಂಕು ತಗುಲಿದ್ದು, ಈ ೩ ಜನರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಎಲ್ಲಾ ಸ್ಥಳಗಳಿಗೂ ಖುದ್ದಾಗಿ ತಹಸೀಲ್ದಾರ್ ಶಿವಕುಮಾರ್, ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. 
ನಗರಸಭೆ ಪ್ರಸ್ತುತ ೧೨ ಕಂಟೈನ್ಮೆಂಟ್ ವಲಯಗಳಿದ್ದು, ಈಗಾಗಲೇ ಸುಮಾರು ೫ಕ್ಕೂ ಹೆಚ್ಚು ವಲಯಗಳನ್ನು ತೆರವುಗೊಳಿಸಲಾಗಿದೆ. ಗುರುವಾರ ಮಧ್ಯಾಹ್ನದಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ನಡುವೆ ಸುಮಾರು ೫-೬ ಮಂದಿ ಲಾಕ್‌ಡೌನ್ ಉಲ್ಲಂಘಿಸಿದ್ದು ತಲಾ ೧,೫೦೦ ರು. ದಂಡ ವಿಧಿಸಲಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ. 

ಡಾ. ಸುಭದ್ರಮ್ಮ ಮನ್ಸೂರ್ ನಿಧನಕ್ಕೆ ಸಂತಾಪ

ಡಾ. ಸುಭದ್ರಮ್ಮ ಮನ್ಸೂರ್
ಭದ್ರಾವತಿ, ಜು. ೧೬: ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್‌ರವರ ನಿಧನಕ್ಕೆ ನಗರದ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ. 
ಡಾ. ಸುಭದ್ರಮ್ಮ ಮನ್ಸೂರ್‌ರವರು ಪೌರಾಣಿಕ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದು, ಪ್ರಮುಖವಾಗಿ ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತವೆ. ಇವರ ಅಮೋಘ ಗಾಯನ ಇದೀಗ ನೆನಪಾಗಿ ಉಳಿದುಕೊಂಡಿದೆ. ರಂಗಜ್ಯೋತಿಯನ್ನು ಕಳೆದುಕೊಂಡು ನಾಡು ಬಡವಾಗಿದೆ ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಶಾಂತಲಾ ಕಲಾ ವೇದಿಕೆಯ ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಪ್ರಾರ್ಥಿಸಿದ್ದಾರೆ.  
ಅದ್ಭುತ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡು ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಅಭಿಮಾನಿಗಳಿಗೆ, ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಕಲಾವಿದ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಪ್ರಾರ್ಥಿಸಿದ್ದಾರೆ. 
ನಗರದ ಹಲವು ರಂಗ ಸಂಸ್ಥೆಗಳು, ಕಲಾವಿದರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಸ್ವಾಮೀಜಿ ನಿಧನಕ್ಕೆ ಶಾಸಕ ಸಂಗಮೇಶ್ವರ್ ಸಂತಾಪ

ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ
ಭದ್ರಾವತಿ, ಜು. ೧೬: ದಾವಣಗೆರೆ ಹೊನ್ನಾಳಿ ತಾಲೂಕಿನ ರಾಂಪುರ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
ಶ್ರೀಗಳು ಅನಾರೋಗ್ಯದಿಂದ ನಿಧನ ಹೊಂದಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಶ್ರೀಗಳ ನಿಧನದಿಂದ ಧಾರ್ಮಿಕ ಕ್ಷೇತ್ರಕ್ಕೆ, ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಭಕ್ತವೃಂದಕ್ಕೆ ದುಖಃ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸಿದ್ದಾರೆ. 

ಕೆರೆಗಳ ಬೌಂಡರಿ ನಿಗದಿಪಡಿಸಲು ಇಬ್ಬರು ಸರ್ವೆಯರ್ ನೇಮಕಗೊಳಿಸಲು ಮನವಿ

ಇಬ್ಬರು ಸರ್ವೆಯವರನ್ನು ನಿಯೋಜಿಸಿ ನಗರಸಭೆ ವ್ಯಾಪ್ತಿಯ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜು. ೧೬: ಇಬ್ಬರು ಸರ್ವೆಯವರನ್ನು ನಿಯೋಜಿಸಿ ನಗರಸಭೆ ವ್ಯಾಪ್ತಿಯ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
  ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ಕ್ಕೂ ಅಧಿಕ ಕೆರೆಗಳಿದ್ದು, ಸುಮಾರು ೨೫ ವರ್ಷಗಳಿಂದ ಬೌಂಡರಿ ನಿಗದಿಪಡಿಸದೇ ಇರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ. ಪ್ರಸ್ತುತ ನಗರಸಭೆ ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಉತ್ಸುಕರಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸಿ ದನಗಾಹಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ನಗರಸಭೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಮೀನುಗಾರಿಕೆ ಇಲಾಖೆ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದೊಂದಿಗೆ ಬೌಂಡರಿ ನಿಗದಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಕೋರಲಾಗಿದೆ.
  ತಕ್ಷಣ ಇಬ್ಬರು ಸರ್ವೆಯವರನ್ನು ನೇಮಿಸಿ ಬೌಂಡರಿ ನಿಗದಿ ಪಡಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.

ಬುಧವಾರ, ಜುಲೈ 15, 2020

ಒಂದೇ ದಿನ ೫ ಸೋಂಕು ಪತ್ತೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿಯಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಭದ್ರಾವತಿ, ಜು. ೧೫: ಉಕ್ಕಿನ ನಗರದಲ್ಲಿ ಪುನಃ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬುಧವಾರ ಒಂದೇ ದಿನ ೫ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 
ನಗರಸಭೆ ವ್ಯಾಪ್ತಿಯ ಕನಕನಗರದಲ್ಲಿ ೨೩ ವರ್ಷದ ಯುವತಿಗೆ, ಹುಡ್ಕೋ ಕಾಲೋನಿ ೬೫ ವರ್ಷ ವೃದ್ಧನಿಗೆ, ಸಿರಿಯೂರು ತಾಂಡದ ೩೬ ವರ್ಷದ ಪುರುಷನಿಗೆ, ಗೋಲ್ಡನ್ ಜ್ಯೂಬಿಲಿ ೫೨ ವರ್ಷದ ವ್ಯಕ್ತಿಗೆ ಹಾಗೂ ತಾಲೂಕಿನ ಹೊಳೆಹೊನ್ನೂರಿನ ೩೩ ವರ್ಷದ ಯುವಕನಿಗೆ ಸೋಂಕು ತಗುಲಿದೆ. 
ಕೊರೋನಾ ಸೋಂಕು ಕಾಣಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಸ್ಯಾನಿಟೈಸರ್ ಕೈಗೊಳ್ಳಲಾಗಿದ್ದು, ಕಂಟೈನ್ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್ ಘೋಷಿಸಲಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸೋಂಕು ಪತ್ತೆಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕೆ. ರಾಜಶೇಖರ್ ದ್ವಿತೀಯ ಪಿಯುಸಿಯಲ್ಲಿ ೭ನೇ ಸ್ಥಾನ : ಸನ್ಮಾನ, ಅಭಿನಂದನೆ

ಭದ್ರಾವತಿಯಲ್ಲಿ ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ೭ನೇ ಸ್ಥಾನ ಕಾಯ್ದುಕೊಂಡಿರುವ ಜಾವಳ್ಳಿ ಶ್ರೀ ಅರೋಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ,ಕೆ. ರಾಜ್‌ಶೇಖರ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸನ್ಮಾನಸಿ ಅಭಿನಂದಿಸಲಾಯಿತು.
ಭದ್ರಾವತಿ, ಜು. ೧೫: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ೭ನೇ ಸ್ಥಾನ ಕಾಯ್ದುಕೊಂಡಿರುವ ಜಾವಳ್ಳಿ ಶ್ರೀ ಅರೋಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರಾಜ್‌ಶೇಖರ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಭಿನಂದಿಸಿದೆ. 
ಗಾಂಧಿನಗರ ನಿವಾಸಿ ನ್ಯಾಯವಾದಿ ಎನ್.ಎಸ್ ಕುಮಾರ್ ಹಾಗೂ ಸಿ.ಎಸ್ ವಿಶಾಲಾಕ್ಷಿ ದಂಪತಿ ಪುತ್ರ  ಕೆ. ರಾಜ್‌ಶೇಖರ್ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ಕ್ಕೆ ೫೮೬ ಅಂಕಗಳೊಂದಿಗೆ ಶೇ.೯೭.೬೭ ಫಲಿತಾಂಶ ಪಡೆದುಕೊಂಡಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಇವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಿಳಿಕಿ ಹಿರೇಮಠ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. 
       ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಉಪಾಧ್ಯಕ್ಷ ವಾಗೀಶ್, ಜಿಲ್ಲಾ ನಿದೇ೯ಶಕರಾದ ಜಿ.ಸಿ ಸುಕುಮಾರ್ ಹಾಗೂ ಯುವ ಮುಖಂಡರಾದ ಎಚ್. ಮಂಜುನಾಥ್, ಆನಂದ್ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.