Thursday, July 16, 2020

ಭದ್ರಾವತಿಯಲ್ಲಿ ೩ ಕೊರೋನಾ ಸೋಂಕು ಪತ್ತೆ

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ೧,೫೦೦ ರು. ದಂಡ 

ಭದ್ರಾವತಿ, ಜು. ೧೬: ತಾಲೂಕಿನಲ್ಲಿ ಬುಧವಾರ ಒಂದೇ ದಿನ ೫ ಪ್ರಕರಣಗಳು ಪತ್ತೆಯಾಗಿದ್ದವು. ಗುರುವಾರ ಪುನಃ ೩ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಒಟ್ಟು ೫೧ ಕೊರೋನಾ ಸೋಂಕು ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಇದರಿಂದಾಗಿ ನಿವಾಸಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. 
ನಗರಸಭೆ ವ್ಯಾಪ್ತಿಯ ಸುಭಾಷ್‌ನಗರದಲ್ಲಿ ೨೧ ವರ್ಷದ ಯುವಕನಿಗೆ, ಅರಳಿಕೊಪ್ಪ ಗ್ರಾಮದಲ್ಲಿ ೩೨ ವರ್ಷದ ವ್ಯಕ್ತಿಗೆ ಹಾಗೂ ದೇವರನರಸೀಪುರ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದಿರುವ ೨೦ ವರ್ಷದ ಯುವತಿಗೆ ಸೋಂಕು ತಗುಲಿದ್ದು, ಈ ೩ ಜನರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಎಲ್ಲಾ ಸ್ಥಳಗಳಿಗೂ ಖುದ್ದಾಗಿ ತಹಸೀಲ್ದಾರ್ ಶಿವಕುಮಾರ್, ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. 
ನಗರಸಭೆ ಪ್ರಸ್ತುತ ೧೨ ಕಂಟೈನ್ಮೆಂಟ್ ವಲಯಗಳಿದ್ದು, ಈಗಾಗಲೇ ಸುಮಾರು ೫ಕ್ಕೂ ಹೆಚ್ಚು ವಲಯಗಳನ್ನು ತೆರವುಗೊಳಿಸಲಾಗಿದೆ. ಗುರುವಾರ ಮಧ್ಯಾಹ್ನದಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ನಡುವೆ ಸುಮಾರು ೫-೬ ಮಂದಿ ಲಾಕ್‌ಡೌನ್ ಉಲ್ಲಂಘಿಸಿದ್ದು ತಲಾ ೧,೫೦೦ ರು. ದಂಡ ವಿಧಿಸಲಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ. 

No comments:

Post a Comment