( ಜು.೨೯ ಅಂತರಾಷ್ಟ್ರೀಯ ಹುಲಿ ದಿನ ಅಂಗವಾಗಿ ವಿಶೇಷ ವರದಿ)
ಸುಮಾರು ೪೦ ಹುಲಿಗಳು, ವಾರ್ಷಿಕ ೧ ಕೋ. ರು. ಆದಾಯ
* ಅನಂತಕುಮಾರ್
ಭದ್ರಾ ಅಭಯಾರಣ್ಯದಲ್ಲಿ ವನ್ಯ ಜೀವಿ ಸಮಿತಿ ಸದಸ್ಯರು, ಛಾಯಾಗ್ರಾಹಕರು ಆಗಿರುವ ಬಿಆರ್ಪಿ ನಿವಾಸಿ ಸ್ವರೂಪ್ ಜೈನ್ರವರು ಛಾಯಾಗ್ರಹಣದ ಮೂಲಕ ಸೆರೆ ಹಿಡಿದಿರುವ ಹುಲಿ ಚಿತ್ರಗಳು.
ಭದ್ರಾವತಿ, ಜು. ೨೮: ನಮ್ಮ ದೇಶದ ರಾಷ್ಟ್ರ ಪಾಣಿ ಹುಲಿ ವಾಸಿಸಲು ಯೋಗ್ಯವಾದ ಸ್ಥಳಗಳಲ್ಲಿ ತಾಲೂಕಿನ ಭದ್ರಾ ಅಭಯಾರಣ್ಯ ಸಹ ಒಂದಾಗಿದ್ದು, ಅರಣ್ಯ ಇಲಾಖೆಯ ವನ್ಯಜೀವಿ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಅಭಯಾರಣ್ಯದಲ್ಲಿ ಸುಮಾರು ೪೦ ಹುಲಿಗಳಿವೆ.
ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳ ಪೈಕಿ ಹುಲಿ ಸಹ ಒಂದಾಗಿದ್ದು, ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಳೆದ ಸುಮಾರು ೧ ವರ್ಷದ ಹಿಂದೆ ಹುಲಿ ಗಣತಿಗೆ ಮುಂದಾಗಿದ್ದು, ವಿಶೇಷ ತಂತ್ರಜ್ಞಾನ ಬಳಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆದರೆ ಇಂದಿಗೂ ಹುಲಿ ಗಣತಿ ನಿಖರ ಮಾಹಿತಿ ಲಭ್ಯವಾಗಿಲ್ಲ.
ಭದ್ರಾ ಅಭಯಾರಣ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ ಛಾಯಾಗ್ರಹಣ(ಫೋಟೋಗ್ರಫಿ)ದ ಮೂಲಕ ಸೆರೆ ಹಿಡಿಯಲಾದ ಚಿತ್ರಗಳ ಆಧಾರದ ಮೇಲೆ ಇದುವರೆಗೂ ಸುಮಾರು ೪೦ ಹುಲಿಗಳಿರುವ ಮಾಹಿತಿ ಇದೆ. ಹುಲಿಗಳ ಜೊತೆಗೆ ಚಿರತೆ, ನರಿ ಸೇರಿದಂತೆ ಇನ್ನಿತರ ಪ್ರಾಣಿಗಳು ಅಭಯಾರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ಭದ್ರಾ ಅಭಯಾರಣ್ಯ :-
ತಾಲ್ಲೂಕಿನಲ್ಲಿ ಸುಮಾರು ೧೭೫ ಚ.ಕಿ.ಮೀ ವಿಸ್ತೀರ್ಣವನ್ನು ಹಂಚಿಕೊಂಡಿರುವ ಭದ್ರಾ ಆಭಯಾರಣ್ಯ ೧೯೯೮ ರಿಂದ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲ್ಪಟ್ಟಿದೆ. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದ್ದು, ೨೦೧೩ರ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ೩೨೦ಕ್ಕೂ ಅಧಿಕ ಹುಲಿಗಳಿದ್ದು, ಈ ಪೈಕಿ ಭದ್ರಾ ಅಭಯಾರಣ್ಯದಲ್ಲಿ ಸುಮಾರು ೨೬ ಹುಲಿಗಳಿವೆ. ಇದೀಗ ೪೦ಕ್ಕೆ ಏರಿಕೆಯಾಗಿದ್ದು, ಇಂದಿಗೂ ಹುಲಿಗಳ ವಾಸಕ್ಕೆ ಯೋಗ್ಯವಾದ ಅರಣ್ಯವೆಂದು ಗುರುತಿಸಲಾಗಿದೆ.
೫ ಹುಲಿ ಮೀಸಲು ಅರಣ್ಯ :
ರಾಜ್ಯದಲ್ಲಿ ಒಟ್ಟು ೫ ಹುಲಿ ಮೀಸಲು ಅರಣ್ಯಗಳಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನ-೮೭೨.೨೪ ಚ.ಕಿ.ಮೀ(೧೯೭೩ರಲ್ಲಿ), ಭದ್ರಾ ವನ್ಯಜೀವಿ ಅಭಯಾ ರಣ್ಯ -೫೦೦.೧೬ ಚ.ಕಿ.ಮೀ(೧೯೯೮ರಲ್ಲಿ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನ -೬೪೩.೩೯ ಚ.ಕಿ.ಮೀ (೨೦ ೦೦ದಲ್ಲಿ), ಆನ್ಶಿ ರಾಷ್ಟ್ರೀಯ ಉದ್ಯಾನವನ- ದಾಂಡೇಲಿ ವನ್ಯಜೀವಿ ಅಭಯಾರಣ್ಯ-೪೭೫ ಚ.ಕಿ.ಮೀ (೨೦ ೦೬ರಲ್ಲಿ) ಮತ್ತು ಬಿಆರ್ಟಿ ವನ್ಯಜೀವಿ ಅಭಯಾರಣ್ಯ -೫೩೯.೫೨ ಚ.ಕಿ.ಮೀ (೨೦೧೧ರಲ್ಲಿ)ಗಳಾಗಿವೆ.
ಭದ್ರಾ ಅಭಯಾರಣ್ಯ ಒಟ್ಟು ವಿಸ್ತೀರ್ಣ ೫೦೦.೨೬ ಚ.ಕಿ. ಮೀ:
ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು ೫೦೦.೧೬ ಚ.ಕಿ. ಮೀ.ಗಳಷ್ಟು ವಿಸ್ತೀರ್ಣ ಹೊಂದಿದೆ. ಈ ಅಭಯಾ ರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ. ೧೯೫೧ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಈ ಅಭಯಾ ರಣ್ಯವು ನಂತರ ೧೯೯೮ರಲ್ಲಿ ದೇಶದ ೨೫ನೇ ಹುಲಿ ಸಂರಕ್ಷಿತ ಪ್ರದೇಶವೆಂದು ಸರಕಾರ ಆದೇಶಿಸಿತು. ಮೊದಲು ಜಗರ ಕಣಿವೆ ಎಂದೇ ಹೆಸರಾಗಿದ್ದ ಈ ಅರಣ್ಯವು ನಂತರ ೧೯೭೪ರಲ್ಲಿ ಭದ್ರಾ ಅಭಯಾರಣ್ಯವೆಂದು ಮರುನಾಮಕರಣ ಗೊಂಡಿತು. ಹಲವಾರು ವನ್ಯಜೀವಿಗಳು, ಕಾಡುಪ್ರಾಣಿಗಳು, ಪಕ್ಷಿಗಳು, ಹಾವುಗಳನ್ನು, ಪಾತರಗಿತ್ತಿ ಸೇರಿದಂತೆ ವಿವಿಧ ಜಾತಿಯ ಗಿಡ, ಮರಗಳೊಂದಿಗೆ ಪ್ರಕೃತಿ ಸೌಂದರ್ಯದೊಂದಿಗೆ ನೋಡಿ ಆನಂದಿಸಬಹುದಾದ ಸುಂದರ ತಾಣ ಭದ್ರಾ ಅಭಯಾರಣ್ಯವಾಗಿದೆ. ೧೨೦ಕ್ಕೂ ವಿವಿಧ ಜಾತಿಯ ಗಿಡ, ಮರಗಳಿಗೆ ಆಶ್ರಯ ನೀಡಿರುವ ಈ ಅರಣ್ಯ ಪ್ರದೇಶ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣದಂತಿದೆ.
೧ ಲಕ್ಷಕ್ಕೂ ಅಧಿಕ ಚಿತ್ರ ಸೆರೆ :
ವನ್ಯ ಜೀವಿ ಸಮಿತಿ ಸದಸ್ಯರು, ಛಾಯಾಗ್ರಾಹಕರು ಆಗಿರುವ ಬಿಆರ್ಪಿ ನಿವಾಸಿ ಸ್ವರೂಪ್ ಜೈನ್ರವರು ಪ್ರತಿವಾರ ಅಭಯಾರಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹುಲಿ ಸೇರಿದಂತೆ ಬಗೆ ಬಗೆಯ ವನ್ಯ ಜೀವಿಗಳನ್ನು ಛಾಯಾಗ್ರಹಣದ ಮೂಲಕ ಸೆರೆ ಹಿಡಿದು ಸಂಗ್ರಹಿಸಿಟ್ಟು ಕೊಳ್ಳುತ್ತಿದ್ದಾರೆ. ಇದುವರೆಗೂ ಸುಮಾರು ೧ ಲಕ್ಷಕ್ಕೂ ಅಧಿಕ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ.
೧ ಕೋ. ರು. ಆದಾಯ:
ಭದ್ರಾ ಅಭಯಾರಣ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ ಸಫಾರಿ ಸೇರಿದಂತೆ ಇನ್ನಿತರ ಪ್ರವಾಸಿ ಮೂಲಗಳಿಂದ ಇಲಾಖೆಗೆ ಒಟ್ಟು ವಾರ್ಷಿಕ ಸುಮಾರು ೧ ಕೋ. ರು. ಆದಾಯ ಬರುತ್ತಿದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೆಲವು ತಿಂಗಳುಗಳಿಂದ ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸರ್ಕಾರ ಶೀಘ್ರದಲ್ಲಿಯೇ ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವ ವಿಶ್ವಾಸ ಅರಣ್ಯ ಇಲಾಖೆ ಹೊಂದಿದ್ದು, ಈ ನಡುವೆ ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಸಹ ಇದೀಗ ಎದುರಾಗಿದೆ.