Friday, July 31, 2020

ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೧೮ ಸೋಂಕು ಪತ್ತೆ


ಭದ್ರಾವತಿ, ಜು. ೩೧: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ಸ್ಪೋಟಗೊಳ್ಳುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಒಂದೇ ದಿನ ೧೮ ಪ್ರಕರಣಗಳು ಪತ್ತೆಯಾಗಿವೆ. 
ಕಾಗದನಗರದ ೬ನೇ ವಾರ್ಡ್‌ನಲ್ಲಿ ೩೫ ವರ್ಷದ ಪುರುಷ, ಬಿ.ಎಚ್ ರಸ್ತೆಯಲ್ಲಿ ೪೫ ವರ್ಷದ ವ್ಯಕ್ತಿ, ದೊಡ್ಡಗೊಪ್ಪೇನಹಳ್ಳಿಯಲ್ಲಿ ೨೫ ವರ್ಷದ ಯುವಕ, ಗಾಂಧಿನಗರದಲ್ಲಿ ೭೭ ವರ್ಷದ ವೃದ್ಧೆ, ಉಜ್ಜನಿಪುರದಲ್ಲಿ ೧೯ ವರ್ಷದ ಯುವತಿ, ಭೂತನಗುಡಿಯಲ್ಲಿ ೩೦ ಮತ್ತು ೩೪ ವರ್ಷದ ಇಬ್ಬರು ಸಹೋದರರು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಿಲ್ಟ್ರಿಕ್ಯಾಂಪ್‌ನಲ್ಲಿ ವಾಸವಿರುವ ೨೮ ವರ್ಷದ ಪುರುಷ, ದೊಡ್ಡೇರಿ ಗ್ರಾಮದಲ್ಲಿ ೫೨ ವರ್ಷದ ವ್ಯಕ್ತಿ, ಆಂಜನೇಯ ಅಗ್ರಹಾರದಲ್ಲಿ ೩೫ ವರ್ಷದ ಪುರುಷ, ಅಂಬೇಡ್ಕರ್ ನಗರದಲ್ಲಿ ೫೪ ವರ್ಷ ವ್ಯಕ್ತಿ, ಸೀಗೆಬಾಗಿಯಲ್ಲಿ ೩೯ ವರ್ಷದ ಮಹಿಳೆ, ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದಲ್ಲಿ ೬೫ ವರ್ಷದ ವ್ಯಕ್ತಿ, ಸಿದ್ದರೂಢನಗರದಲ್ಲಿ ೬೨ ವ್ಯಕ್ತಿ ಹಾಗೂ ೫೮ ವರ್ಷದ ಈತನ ಪತ್ನಿ, ಖಾಜಿಮೊಹಲ್ಲಾ ಕೋಟೆ ಏರಿಯಾದಲ್ಲಿ ೬೯ ವರ್ಷದ ವೃದ್ಧೆ, ಅರಣ್ಯ ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ ತರೀಕೆರೆ ಗೋಪಾಲ ಕಾಲೋನಿ ನಿವಾಸಿ ೩೩ ವರ್ಷದ ಪುರುಷ ಹಾಗೂ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದ ಶಿವಮೊಗ್ಗ ಅಶೋಕ ನಗರದ ೨೬ ವರ್ಷದ ಯುವಕ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.  
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.

ಇತಿಹಾಸ ವಿಷಯ ಬದಲಾವಣೆ ತಪ್ಪು ನಿರ್ಧಾರ : ಮುಸ್ವೀರ್ ಬಾಷ

ಮುಸ್ವೀರ್ ಬಾಷ
ಭದ್ರಾವತಿ, ಜು. ೩೧: ರಾಜ್ಯ ಸರ್ಕಾರ ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಇತಿಹಾಸ ಪಠ್ಯ ಪುಸ್ತಕದಲ್ಲಿ ಕೆಲವು ವಿಷಯಗಳನ್ನು ಬದಲಾವಣೆ ಮಾಡಿರುವುದು ಮೂಲ ಇತಿಹಾಸ ಅಧ್ಯಾಯನಕ್ಕೆ ಧಕ್ಕೆಯನ್ನುಂಟು ಮಾಡಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಸರಿಯಾಗಿ ಇತಿಹಾಸ ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಗಿದೆ ಎಂದು ಎನ್‌ಎಸ್‌ಯುಐ ಮುಖಂಡ ಮುಸ್ವೀರ್ ಬಾಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಇತಿಹಾಸ ಪಠ್ಯ ಪುಸ್ತಕದಲ್ಲಿ ಕೈ ಬಿಟ್ಟಿರುವ ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ರಾಣಿಅಬಕ್ಕ ಮತ್ತು ಹೈದರಾಲಿ ವಿಷಯಗಳನ್ನು ಅಧ್ಯಯನ ಮಾಡದೆ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಮೂಲ ಇತಿಹಾಸದಿಂದ ವಂಚನೆ ಮಾಡಿದಂತೆ. ಈ ಹಿನ್ನಲೆಯಲ್ಲಿ  ರಾಜ್ಯ ಸರ್ಕಾರ ಈ ಕೂಡಲೇ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ. 

ರಾಮ ಮಂದಿರ ಭೂಮಿ ಪೂಜೆ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ

ಭದ್ರಾವತಿ, ಜು. ೩೧: ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಆ.೫ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಎಲ್‌ಇಡಿ ಪರದೆ ವ್ಯವಸ್ಥೆ ಕೈಗೊಳ್ಳಲಾಗಿದೆ. 
ಹೊಸಮನೆ ಮುಖ್ಯರಸ್ತೆಯಲ್ಲಿರುವ ಸಮಿತಿಯ ಹಿಂದೂ ಮಹಾಸಭಾ ಸಭಾಭವನದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್ ಭವಾನಿಕುಮಾರ್ ಕೋರಿದ್ದಾರೆ.

೫.೫೦ ಕೋ. ರು. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಭದ್ರಾವತಿ ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಭದ್ರಾವತಿ, ಜು. ೩೧:  ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಗ್ರಾಮೀಣ ಭಾಗದಲ್ಲೂ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಈಗಾಗಲೇ ಬಹುತೇಕ ರಸ್ತೆಗಳು ಪೂರ್ಣಗೊಂಡಿವೆ. ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. 
ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಸದಸ್ಯರಾದ ಟಿ.ಡಿ ಶಶಿಕುಮಾರ್, ಜೆ. ಸುಜಾತ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಗರಕ್ಕೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖ್ ಪ್ರವೀಣ್ ವಾಲ್ಕೆ ಆಗಮನ

ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆ ಪರಿಶೀಲನೆ

ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ಭದ್ರಾವತಿ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಭದ್ರಾವತಿ, ಜು. ೩೧: ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಹೊಸಮನೆ ಓಂ ಹಿಂದು ಕೋಟೆ ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸೂಚಿಸಿದರು. 
ಜಿಲ್ಲಾಧ್ಯಕ್ಷ ಬಿ.ವಿ. ಚಂದನ್ ರಾವ್, ಜಿಲ್ಲಾ ಗೋರಕ್ಷಾ ಪ್ರಮುಖ್ ಚರಣ್ ದೇವಾಂಗ, ಜಿಲ್ಲಾ ಮಾಧ್ಯಮ ಪ್ರಮುಖ್ ಲತೇಶ್ ಶೆಟ್ಟಿ, ಶಿವಮೊಗ್ಗ ತಾಲೂಕು ಅಧ್ಯಕ್ಷ ಕಿರಣ್ ಗೌಡ, ಭದ್ರಾವತಿ ತಾಲೂಕು ಅಧ್ಯಕ್ಷ ಮನು ಗೌಡ, ಗ್ರಾಮಾಂತರ ಅಧ್ಯಕ್ಷ ನವೀನ್ ಕುಮಾರ್ ಹಾಗೂ ಇನ್ನಿತರರಿಗೆ ಜವಾಬ್ದಾರಿಗಳನ್ನು ಘೋಷಿಸಿದರು.  
ಓಂ  ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಯೋಗೇಶ್, ರಂಗನಾಥ, ಟೀ ಗೋಪಾಲ, ಪರಶುರಾಮ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. 

ಬಿಜೆಪಿ ಓಬಿಸಿ ಮೋರ್ಚಾದಿಂದ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ವತಿಯಿಂದ ನಗರಸಭೆ ವ್ಯಾಪ್ತಿ ಹಳೇನಗರದ ೬ನೇ ವಾರ್ಡ್ ಜಟ್‌ಪಟ್‌ನಗರದಲ್ಲಿರುವ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 
ಭದ್ರಾವತಿ, ಜು. ೩೧: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ವತಿಯಿಂದ ನಗರಸಭೆ ವ್ಯಾಪ್ತಿ ಹಳೇನಗರದ ೬ನೇ ವಾರ್ಡ್ ಜಟ್‌ಪಟ್‌ನಗರದಲ್ಲಿರುವ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 
ಒಬಿಸಿ ಮೋರ್ಚಾ ಜಿಲ್ಲಾ ಪ್ರಮುಖರಾದ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಮಾಲತೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಅಧ್ಯಕ್ಷ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. 
  ತಾಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಕೆ.ಆರ್ ಸತೀಶ್, ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಪಿ ವೆಂಕಟೇಶ್, ಉಪಾಧ್ಯಕ್ಷರಾದ ಈಶ್ವರ್, ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ, ಪ್ರಮುಖರಾದ ರುದ್ರಪ್ಪ, ತೀರ್ಥಪ್ಪ, ಪರಶುರಾಮ್, ಮುರುಳಿ, ಕರಿಬಸಪ್ಪ, ರವಿ, ನಾಗೇಂದ್ರಪ್ರಸಾದ್ ಮತ್ತು ಚಂದ್ರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Thursday, July 30, 2020

ಜು.೩೧ರಿಂದ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮ

ಭದ್ರಾವತಿ, ಜು. ೩೦: ಎಲ್ಲೆಡೆ ಕೋವಿಡ್-೧೯ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿರುವ ಹಿನ್ನಲೆಯಲ್ಲಿ ಹಾಗೂ ಸರ್ಕಾರದ ಆದೇಶದಂತೆ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಜು.೩೧ ರಿಂದ ಆ.೧೩ರ ವರೆಗೆ ಹಮ್ಮಿಕೊಳ್ಳಲಾಗಿದೆ. 
ಆನ್‌ಲೈನ್ ತರಬೇತಿ ಪ್ರತಿದಿನ ಬೆಳಿಗ್ಗೆ ೧೧ ರಿಂದ ೧೨.೩೦ರವರೆಗೆ ನಡೆಯಲಿದ್ದು, ಜು.೩೧ರಂದು ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ಅನುಷ್ಠಾನ ಏಕೆ? ಹೇಗೆ? ವಿಷಯ ಕುರಿತು ಬಿಆರ್‌ಸಿ ಗಣೇಶ್ ಮಾಹಿತಿ ನೀಡಲಿದ್ದಾರೆ. 
ಆ.೩ರಂದು ಸೇತುಬಂಧ ಮತ್ತು ಎಸ್‌ಎಪಿ ಪರಿಚಯ ಕುರಿತು ಅಂತರಗಂಗೆಯ ಇಮ್ತಿಯಾಜ್ ಅಹ್ಮದ್ ಹಾಗೂ ೪ರಂದು ಹದಿಹರೆಯ/ತಾರುಣ್ಯ ಪರಿಚಯ, ಸವಾಲು, ಹದಿಹರೆಯ ಸಾಧಕರು, ವೈಯಕ್ತಿಕ ನೈರ್ಮಲ್ಯ, ಸಕಾರಾತ್ಮಕ ಮನೋಭಾವನೆ ಕುರಿತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್ ಭಟ್ ಮಾಹಿತಿ ನೀಡಲಿದ್ದಾರೆ. 
೫ರಂದು ಜೀವನ ಕೌಶಲಗಳು-ಮಹತ್ವ ಡಬ್ಲ್ಯೂಎಚ್‌ಓ ಅನುಮೋದಿಸಿರುವ ೧೦ ಜೀವನ ಕೌಶಲಗಳು ಏನು?ಏಕೆ?ಹೇಗೆ? ವಿಷಯ ಕುರಿತು ಅರಹತೊಳಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಣ್ಣಪ್ಪ ಮಾಹಿತಿ ನೀಡಲಿದ್ದು, ೬ರಂದು ರಚನಾವಾದಿ ತರಗತಿ ಪ್ರಕ್ರಿಯೆ ಚರ್ಚೆ ಶಾಲಾ ಅಭ್ಯಾಸಗಳಲ್ಲಿ ಮೌಲ್ಯಮಾಪನ ಕುರಿತು ಹಳೇನಗರ ಕನಕ ವಿದ್ಯಾಸಂಸ್ಥೆಯ ಸಹ ಶಿಕ್ಷಕ ಪ್ರಶಾಂತ್ ಸಣ್ಣಕ್ಕಿ ಮಾಹಿತಿ ನೀಡಲಿದ್ದಾರೆ.
೭ರಂದು ಕೆಎಸ್‌ಕ್ಯೂಎಎಸಿ/ಸಿಎಸ್‌ಎಎಸ್ ಸಾಮರ್ಥ್ಯಗಳ ಪರಿಚಯ, ಪ್ರಶ್ನೆ ಸ್ವರೂಪದ ನೆಲೆಗಳು, ಕಲಿಕಾ ಫಲಗಳು, ಏನು?ಯಾವುವು?ಏಕೆ?ಹೇಗೆ? ವಿಷಯ ಕುರಿತು ಚಿಕ್ಕಮಗಳೂರು ಕಡೂರು ತಾಲೂಕಿನ ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಜಿ ರಾಜಶೇಖರ್ ಮಾಹಿತಿ ನೀಡಲಿದ್ದು, ೧೦ರಂದು ಎನ್‌ಸಿಎಫ್-೨೦೦೫, ಸಿಸಿಇ ಅರ್ಥ ಮತ್ತು ಹೊಸ ಆಯಾಮಗಳ ಚರ್ಚೆ, ಕಲಿಕೆ ಹಾಗೂ ಮೌಲ್ಯಮಾಪನ ಕುರಿತು ಹೊಳೆಹೊನ್ನೂರು ಸರ್ಕಾರಿ ಉರ್ದು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಶಬನಾ ಅಂಜುಂ ಮಾಹಿತಿ ನೀಡಲಿದ್ದಾರೆ. 
೧೧ರಂದು ಸಿಸಿಇ ಮೌಲ್ಯಮಾಪನದ ತಂತ್ರಗಳು, ಸಾಧನಗಳು, ಸಾಂದರ್ಭಿಕ ದಾಖಲೆಗಳ ನಿರ್ವಹಣೆ ಮತ್ತು ನಿಯೋಜಿತ ಕಾರ್ಯಗಳು ವಿಷಯ ಕುರಿತು ಯಡೇಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಜಯಕುಮಾರ್ ಮಾಹಿತಿ ನೀಡಲಿದ್ದು, ೧೨ರಂದು ಎಸ್‌ಡಿಪಿ ಮತ್ತು ಫಲಿತಾಂಶ ಕ್ರಿಯಾ ಯೋಜನೆ ಶಾಲಾ ಗ್ರಂಥಾಲಯ ಮತ್ತು ಶಾಲಾ ವಿವಿಧ ಕ್ಲಬ್‌ಗಳ ನಿರ್ವಹಣೆ ಹೇಗೆ? ಏಕೆ? ವಿಷಯ ಕುರಿತು ಹಳೇನಗರ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ದಿವಾಕರ್ ಮತ್ತು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು, ರಸ್ತೆ ಬಳಕೆದಾರರ ವರ್ತನೆಗಳು ಮತ್ತು ಪ್ರಥಮ ಚಿಕಿತ್ಸೆ ಕುರಿತು ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ್ ಮಾಹಿತಿ ನೀಡಲಿದ್ದಾರೆ.