ಕೋವಿಡ್ ಮಾದರಿಯಲ್ಲಿ ನಗರಸಭೆವತಿಯಿಂದ ಅಂತ್ಯ ಸಂಸ್ಕಾರ
ಭದ್ರಾವತಿ, ಆ. ೯: ನಗರಸಭೆ ವ್ಯಾಪ್ತಿಯ ಜನ್ನಾಪುರದ ಎನ್‌ಟಿಬಿ ಲೇ ಔಟ್‌ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.
ಸುಮಾರು ೬೯ ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣ ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಿದ್ದರು. ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದು, ತಪಾಸಣೆ ನಡೆಸಿದ ಆಸ್ಪತ್ರೆ ಸಿಬ್ಬಂದಿಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಕುಟುಂಬ ಸದಸ್ಯರು ಮೃತ ದೇಹವನ್ನು ವಾಪಾಸ್ಸು ನಗರಕ್ಕೆ ತಂದಿದ್ದು, ಈ ನಡುವೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ನಗರಸಭೆ ಪೌರಾಯುಕ್ತ ಮನೋಹರ್ ಹಾಗೂ ಸಿಬ್ಬಂದಿಗಳು, ಮೃತ ದೇಹವನ್ನು ಮನೆಗೆ ಕೊಂಡೊಯ್ಯಲು ಅವಕಾಶ ನೀಡದೆ ಮಿಲ್ಟ್ರಿಕ್ಯಾಂಪ್ ಸಮೀಪ ಬೈಪಾಸ್ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಕೋವಿಡ್ ಮಾದರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಪತ್ರಿಕೆಗೆ ಮಾಹಿತಿ ನೀಡಿದ ಪೌರಾಯುಕ್ತರು, ಮೃತಪಟ್ಟ ವ್ಯಕ್ತಿಯಲ್ಲಿ ಸೋಂಕು ಇರುವುದು ಕುಟುಂಬ ಸದಸ್ಯರಿಗೆ ತಿಳಿದು ಬಂದಿಲ್ಲ. ಮೃತಪಟ್ಟ ನಂತರ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಕುಟುಂಬ ಸದಸ್ಯರನ್ನು ನಿಗಾದಲ್ಲಿರಸಲಾಗಿದ್ದು, ಮನೆಯ ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಲಾಗಿದೆ ಎಂದರು.
ಭದ್ರಾವತಿಯಲ್ಲಿ ೨೪ ಸೋಂಕು ಪತ್ತೆ:
ತಾಲೂಕಿನಲ್ಲಿ ಪುನಃ ಸೋಂಕು ಸ್ಪೋಟಗೊಳ್ಳುತ್ತಿದ್ದು, ಭಾನುವಾರ ಒಂದೇ ದಿನ ೨೪ ಪ್ರಕರಣಗಳು ಪತ್ತೆಯಾಗಿವೆ. ಹೊಸಮನೆಯಲ್ಲಿ ೫೪ ವರ್ಷದ ವ್ಯಕ್ತಿ, ಜೇಡಿಕಟ್ಟೆ ಹೊಸೂರಿನಲ್ಲಿ ೩೭ ವರ್ಷದ ವ್ಯಕ್ತಿ, ೩೦ ವರ್ಷದ ಮಹಿಳೆ, ಹೊಸಮನೆ ಕುವೆಂಪು ನಗರದಲ್ಲಿ ೩೦ ವರ್ಷದ ಮಹಿಳೆ, ಕೇಶವಪುರ ಬಡಾವಣೆಯಲ್ಲಿ ೩೩, ೩೫, ೨೭ ಮತ್ತು ೪೨ ವರ್ಷದ ಪುರುಷರು, ಭಂಡಾರಹಳ್ಳಿಯಲ್ಲಿ ೫೬ ವರ್ಷದ ವ್ಯಕ್ತಿ, ಲೋಯರ್ ಹುತ್ತಾದಲ್ಲಿ ೩೭ ವರ್ಷದ ಮಹಿಳೆ, ೪೭ ವರ್ಷದ ವ್ಯಕ್ತಿ, ಹನುಮಂತನಗರದಲ್ಲಿ ೧೯ ವರ್ಷದ ಯುವತಿ, ಹೊಸಮನೆ ಮೊದಲ ಕ್ರಾಸ್‌ನಲ್ಲಿ ೩೯ ವರ್ಷದ ಮಹಿಳೆ, ಮಾವಿನಕೆರೆಯಲ್ಲಿ ೪೩ ವರ್ಷದ ವ್ಯಕ್ತಿ, ಎರೇಹಳ್ಳಿಯಲ್ಲಿ ೨೯ ಮತ್ತು ೬೯ ವರ್ಷದ ಪುರುಷರು, ಮೈದೊಳಲು ೪೩ ವರ್ಷದ ವ್ಯಕ್ತಿ, ಹೊಳೆಹೊನ್ನೂರು ೫೦ ವರ್ಷದ ವ್ಯಕ್ತಿ, ಹೊಸಮನೆ ಗಣಪತಿ ದೇವಸ್ಥಾನದ ಬಳಿ ೬೩ ವರ್ಷದ ಮಹಿಳೆ, ಸಿದ್ದಾರೂಢ ನಗರದಲ್ಲಿ ೭೯ ವರ್ಷ ವೃದ್ಧ, ಸಂಜಯ ಕಾಲೋನಿಯಲ್ಲಿ ೨೯ ವರ್ಷದ ವ್ಯಕ್ತಿ ಹಾಗೂ ನಗರದ ಇತರೆಡೆ ೬೪ ವರ್ಷದ ವ್ಯಕ್ತಿ ಮತ್ತು ೪ ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು ೨೪ ಮಂದಿ ಸೋಂಕಿಗೆ ಒಳಗಾಗಿದ್ದಾರೆ.