Sunday, August 16, 2020

ಭದ್ರಾವತಿ ತಾಲೂಕಿನ ವಿವಿಧೆಡೆ ವಿಶಿಷ್ಟವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ


ಭದ್ರಾವತಿ, ಆ. ೧೬: ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ನಗರದ ವಿವಿಧೆಡೆ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸರಳವಾಗಿ ಆಚರಿಸಲಾಯಿತು.
          ಶಿಕ್ಷಕರಿಂದಲೇ ಪಥ ಸಂಚಲನ:
      ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣ ಹಾಗು ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಜನರು ಸೇರದಂತೆ ನಿರ್ಬಂಧ ವಿಧಿಸಿರುವ ಹಿನ್ನಲೆಯಲ್ಲಿ ಈ ಬಾರಿ ವಿದ್ಯಾಸಂಸ್ಥೆಯ ಶಿಕ್ಷಕರು ಪಥಸಂಚಲನ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಗೊಳಿಸಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕಿಯರಿದ್ದು, ಪಥ ಸಂಚಲನದಲ್ಲಿ ಬೆರಗುಗೊಳಿಸಿದ್ದಾರೆ.
       ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಛೇರ‍್ಮನ್ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಹಿರಿಯರಾದ ಕೆ. ಶಾಮಣ್ಣ, ಪ್ರಧಾನ ಕಾರ್ಯದರ್ಶಿ ಎ.ಕೆ ಚಂದ್ರಪ್ಪ, ಆಡಳಿತಾಧಿಕಾರಿ ಬಸವರಾಜಪ್ಪ ಉಪಸ್ಥಿತರಿದ್ದರು. ಆರ್. ರವಿ ಸ್ವಾಗತಿಸಿದರು. ಶಶಿಕಲಾ ವಂದಿಸಿದರು. ಚಂದ್ರಕಲಾ ನಿರೂಪಿಸಿದರು.
         

         ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ವನಮಹೋತ್ಸವ:
    ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
   ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಪ್ರಭಾರಿ ನಂಜುಂಡಸ್ವಾಮಿ, ಕಾರ್ಯದರ್ಶಿ ನಕುಲ್‌ರೇವಣಕರ್, ತಾಲೂಕು ಮಂಡಲ ಕಾರ್ಯದರ್ಶಿ ಕೆ.ಆರ್ ಸತೀಶ್, ಪ್ರಮುಖರಾದ ಧನುಷ್ ಬೋಸ್ಲೆ, ಸಚಿನ್ ವರ್ಣೇಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


      ವಿಐಎಸ್‌ಎಲ್ ನಿವೃತ್ತ ನೌಕರರಿಂದ ಸ್ವಾತಂತ್ರ್ಯೋತ್ಸವ :
     ನಗರದ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
    ಸಂಘದ ಉಪಾಧ್ಯಕ್ಷ ನರಸಿಂಹಯ್ಯ ಧ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಮುಖರಾದ ಹನುಮಂತರಾವ್, ಮುಕುಂದಯ್ಯ, ನರಸಿಂಹಚಾರ್, ರವೀಂದ್ರ ರೆಡ್ಡಿ, ಕೆಂಪಯ್ಯ, ಲಾಸರ್, ನಂಜಪ್ಪ, ನಾಗರಾಜ, ಟಾಕಪ್ಪ, ಮಂಜುನಾಥರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


        ಕುಂಚ ಕಲಾವಿದರಿಂದ ಸ್ವಾತಂತ್ರ್ಯೋತ್ಸವ :
    ನಗರದ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕಂಚ ಕಲಾವಿದರ ಸಂಘದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
   ನಗರಸಭೆ ಪೌರಾಯುಕ್ತ ಮನೋಹರ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಮೊಹಮ್ಮದ್ ಸಮೀವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಹಳೇನಗರದ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ವಿ. ಚಂದ್ರು, ಹಿರಿಯ ಕಲಾವಿದ ಶಿವು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಖಜಾಂಚಿ ಹಫೀಜ್ ಉರ್ ರಹಮಾನ್ ನಿರೂಪಿಸಿದರು. ಭದ್ರಾವತಿ ಗುರು ವಂದಿಸಿದರು.
     
 
      ಪೌರಕಾರ್ಮಿಕರಿಂದ ಧ್ವಜಾರೋಹಣ:
       ಆಮ್ ಆದ್ಮಿ ಪಾರ್ಟಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿರುವ ಪಕ್ಷದ ಕಛೇರಿಯಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
      ಈ ಬಾರಿ ಮಹಿಳಾ ಪೌರಕಾರ್ಮಿಕರಾದ ನಂಜಮ್ಮರವರು ಧ್ವಜಾರೋಹಣ ನೆರವೇರಿಸಿದರು. ನಂತರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪ್ರಮುಖರಾದ ಪರಮೇಶ್ವರಚಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಜೋಸೆಫ್, ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


     ಪೌರಾಯುಕ್ತರಿಂದ ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ:
     ನಗರಸಭೆ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಭಾರತರತ್ನ,  ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
   ನಗರಸಭೆ ಪೌರಾಯುಕ್ತ ಮನೋಹರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.


    ಎಂಪಿಎಂ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ:
ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
  ಎಂಪಿಎಂ ಎಂಪ್ಲಾಯಿಸ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಕಾರ್ಯದರ್ಶಿ, ನಿರ್ದೇಶಕರುಗಳು ಪಾಲ್ಗೊಂಡಿದ್ದರು.


     ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯೋತ್ಸವ:
ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಪಕ್ಷದ ಖಾಲಿ ಜಾಗದಲ್ಲಿ ನೆರವೇರಿಸಲಾಯಿತು.
       ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಟಿ ನಾಗರಾಜ್, ಜನಾರ್ಧನ, ಎಂ. ಶಿವಕುಮಾರ್, ಬಿ.ಪಿ ರಾಘವೇಂದ್ರ, ದಿಲ್‌ದಾರ್, ಅಮೀರ್‌ಜಾನ್, ಬಿ. ಗಂಗಾಧರ್, ಶಂಕರ್‌ರಾವ್, ಸತೀಶ್, ಅಣ್ಣೋಜಿರಾವ್, ಎ.ಜಿ ರಾಧಮ್ಮ, ಕೃಷ್ಣನಾಯಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


     ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನ:
೭೪ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಲೂಕಿನ ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲೆಯ ಎಲ್‌ಕೆಜಿ, ಯುಕೆಜಿ ಸಂಸ್ಥಾಪಕರಾದ ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಪ್ರೇಮ್‌ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯ ಕೂಬಾನಾಯ್ಕ ಹಾಗು ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಇದೆ ರೀತಿ ತಾಲೂಕಿನ ಗೋಣಿಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಪಂಚಾಯಿತಿ ಸದಸ್ಯರಾದ ಯಶೋಧಮ್ಮ, ಉಷಾಕಿರಣ, ಶಾಲೆಯ ಮುಖ್ಯೋಪಾಧ್ಯಾಯ ಬಸವಕುಮಾರ್ ಹಾಗು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.


       ಹಿರಿಯ ಕಾರ್ಮಿಕನಿಂದ ಧ್ವಜಾರೋಹಣ:
     ಕಳೆದ ಸುಮಾರು ೬ ವರ್ಷಗಳಿಂದ ಯಂತ್ರಗಳು ಸ್ಥಗಿತಗೊಂಡು ಮುಚ್ಚಲ್ಪಟ್ಟಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಖಾನೆಯ ಮುಖ್ಯದ್ವಾರದಲ್ಲಿ ಜರುಗಿತು.
      ಕಾರ್ಖಾನೆಯ ಹಿರಿಯ ಕಾರ್ಮಿಕ ಟಿ.ಜಿ ಬಸವರಾಜಯ್ಯ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು. ಭದ್ರತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.


    ಛಲವಾದಿ ಸಮಾಜದಿಂದ ಸ್ವಾತಂತ್ರ್ಯೋತ್ಸವ:
   ನ್ಯೂಟೌನ್ ಜಯಶ್ರೀ ವೃತ್ತದ ಬಳಿ ಇರುವ ತಾಲೂಕು ಛಲವಾದಿ(ಪರಿಶಿಷ್ಟ) ಸಮಾಜದ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
   ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್, ಹಿರಿಯರಾದ ಎಸ್.ಎಸ್ ಭೈರಪ್ಪ, ಸತೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

    ಛಾಯಗ್ರಾಹಕರ ಸಂಘದಿಂದ ಸ್ವಾತಂತ್ರ್ಯೋತ್ಸವ:
೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ಪತ್ತಿನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಆಚರಿಸಲಾಯಿತು.
    ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮೇಘ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

     ಒಕ್ಕಲಿಗರ ಸಂಘದಿಂದ ಸ್ವಾತಂತ್ರ್ಯೋತ್ಸವ:
   ತಾಲೂಕು ಒಕ್ಕಲಿಗರ ಸಂಘ ಹಾಗೂ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದ ಉದ್ಯಾನವನದಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
    ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ ರಮೇಶ್, ಕಾರ್ಯದರ್ಶಿ ಪ್ರಶಾಂತ್, ಸಿ.ಎನ್ ರಾಮಕೃಷ್ಣ, ಮೂರ್ತಿ, ಉಮೇಶ್, ರಾಜಣ್ಣ, ಶ್ರೀನಿವಾಸ್, ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಉಪಾಧ್ಯಕ್ಷೆ ಲೋಹಿತ ನಂಜಪ್ಪ, ಕಾರ್ಯದರ್ಶಿ ಕೆ. ರಾಧಾ, ಶಕುಂತಲಾ ರಾಮಚಂದ್ರ, ಸರಸ್ವತಿ, ಹೇಮಲತಾ, ಗೀತಾ ಕುಮಾರ್, ಗೌರಿ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
       
      
         ನೀರುಗಂಟಿಗಳಿಗೆ ಸನ್ಮಾನ:
  ನಗರದ ಹೊಳೆಹೊನ್ನೂರು ರಸ್ತೆ ಅನ್ವರ್‌ಕಾಲೋನಿಯಲ್ಲಿರುವ ಕೆಜಿಎನ್ ನೌಜವಾನ್ ಕಮಿಟಿಯಿಂದ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ನೀರುಗಂಟಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
     ನಗರಸಭೆ ಇಂಜಿನಿಯರ್ ಎಸ್.ಆರ್ ಸತೀಶ್, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖದೀರ್, ಕಮಿಟಿ ಅಧ್ಯಕ್ಷ ಅಸದುಲ್ಲಾ ಖಾನ್, ಉಪಾಧ್ಯಕ್ಷ ಶಾಹಿದ್, ಗೌರವಾಧ್ಯಕ್ಷ ಮುಸ್ತಾಫ್, ಇಮ್ರಾನ್, ಜಹಿರುದ್ದಿನ್ ಹಾಜಿ, ರಂಗ, ಸಲೀಂ ಅಮ್ಜದ್, ಮುನೀರ್ ಅಹಮದ್ ಕುಂಸಿ, ನಜರುಲ್ಲಾ, ಇಬ್ರಾಹಿಂ ಸಾಬ್, ರಿಯಾಜ್ ನದೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


      ಕೇರಳ ಸಮಾಜದ ವತಿಯಿಂದ ಸ್ವಾತಂತ್ರ್ಯೋತ್ಸವ :
     ಪ್ರತಿವರ್ಷದಂತೆ ಈ ಬಾರಿ ಸಹ ತಾಲೂಕು ಕೇರಳ ಸಮಾಜಂ ವತಿಯಿಂದ ಸಂಘದ ಕಛೇರಿಯಲ್ಲಿ ೭೪ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
  ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಧ್ವಜಾರೋಹಣದೊಂದಿಗೆ ಪರಸ್ಪರ ಶುಭಾಶಯ ಕೋರಿದರು.

Saturday, August 15, 2020

೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪ ಲೋಕಾರ್ಪಣೆ

ಭದ್ರಾವತಿ ಹಳೇನಗರದಲ್ಲಿ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ, ಆ. ೧೫: ಸುಮಾರು ೫ ದಶಕಗಳಷ್ಟು ಹಳೇಯದಾದ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ರಂಗ ಚಟುವಟಿಕೆಗಳಿಗೆ ನೆಲೆಯಾಗಿರವ ಕನಕ ಮಂಟಪ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರ ಲೋಕಾರ್ಪಣೆಗೊಂಡಿತು.
         ಈ ಹಿಂದೆ ನಿರ್ಮಾಣಗೊಂಡಿದ್ದ ಕಟ್ಟಡ ಶಿಥಿಲಗೊಂಡ ಪರಿಣಾಮ ಸುಮಾರು ೨ ದಶಕಗಳಿಂದ ರಂಗ ಚಟುವಟಿಕೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಇಲ್ಲದೆ ಸಾಕಷ್ಟು ಕಲಾತಂಡಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿನ್ನಡೆ ಕಂಡುಕೊಂಡಿದ್ದವು.
         ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಕೈಗೊಂಡ ಪರಿಶ್ರಮದ ಫಲವಾಗಿ ಶಿಥಿಲಗೊಂಡ ಕಟ್ಟಡ ನೆಲಸಮಗೊಂಡು ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಈ ಕಟ್ಟಡ ೫೪ ಅಡಿ ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದು,  ೩೨ ಅಡಿ ವೇದಿಕೆಯನ್ನು ಹೊಂದಿದೆ. ೨ ಪ್ರತ್ಯೇಕ ಕೊಠಡಿ, ಮಧ್ಯಭಾಗದಲ್ಲಿ ವಿಶಾಲವಾದ ಕೊಠಡಿ, ೨ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಅಲ್ಲದೆ ಹೊರ ಭಾಗದಲ್ಲಿ ಆಕರ್ಷಕ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿದೆ.
    ಕಲಾವಿದರ ೨ ದಶಕಗಳ ಕನಸು ನನಸಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.

ವಿಐಎಸ್‌ಎಲ್ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕೇಂದ್ರ ಸರ್ಕಾರಿ ಸ್ವಾಮ್ಯದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
ಭದ್ರಾವತಿ, ಆ. ೧೫: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
     ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್  ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾ ಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
       ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಡಳಿ ಮತ್ತು ರಕ್ಷಣಾ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೈಟೆಕ್ ಶೌಚಾಲಯ ಸಾರ್ವಜನಿಕ ಸೇವೆಗೆ ಸಮರ್ಪಣೆ

ಭದ್ರಾವತಿ ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಭದ್ರಾವತಿ, ಆ. ೧೫: ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
      ಶೌಚಾಲಯ ಸಮೀಪದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ಕ್ಯಾಂಟೀನ್, ಪ್ರವಾಸಿ ವಾಹನ ನಿಲ್ದಾಣ, ಆಟೋ ನಿಲ್ದಾಣ ಹಾಗೂ ಅಂಗಡಿ ಮುಂಗಟ್ಟುಗಳಿದ್ದು, ಈ ಶೌಚಾಲಯದಿಂದ ಹೆಚ್ಚು ಪ್ರಯೋಜನವಾಗಲಿದೆ.
   ನಗರಸಭೆ ಪೌರಾಯುಕ್ತ ಮನೋಹರ್, ಗುತ್ತಿಗೆದಾರ ಜಿ. ಹಾಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ವೈರಸ್ ನಿರ್ಮೂಲನೆಯೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಿ : ಎಚ್.ಸಿ ಶಿವಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ  ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ, ಆ. ೧೫: ಎಲ್ಲರೂ ಒಗ್ಗಟ್ಟಾಗಿ ಕೊರೋನಾ ವೈರಸ್ ನಿರ್ಮೂಲನೆಗೆ ಪಣತೊಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ತಿಳಿಸಿದರು.
       ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವ್ಯಾಪಾರಕ್ಕಾಗಿ ದೇಶಕ್ಕೆ ಬಂದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಸುಧೀರ್ಘ ಹೋರಾಟ ನಡೆಸಲಾಗಿದೆ. ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಆಹಿಂಸಾ ಮಾರ್ಗದ ಹೋರಾಟದ ಜೊತೆಗೆ ತ್ಯಾಗ-ಬಲಿದಾನಗಳು ನಡೆದಿವೆ. ದೇಶದ ಸ್ವಾತಂತ್ರ್ಯದ ಮಹತ್ವ ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದರು.
    ಪ್ರಸ್ತುತ ವಿಶ್ವದೆಲ್ಲೆಡೆ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಬೇಕು. ದೇಶದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ, ಶಾಂತಿಯಿಂದ ಒಗ್ಗಟ್ಟಾಗಿ ಬದುಕಬೇಕಾಗಿದೆ. ಮಹಾತ್ಮಗಾಂಧಿ ಅವರ ರಾಮರಾಜ್ಯದ ಕನಸು ನನಸಾಗಬೇಕು. ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಜನರನ್ನು ಭಯಭೀತರನ್ನಾಸುತ್ತಿರುವ, ಸಂಕಷ್ಟಕ್ಕೆ ತಳ್ಳುತ್ತಿರುವ ಕೆಟ್ಟ ಮಹಾಮಾರಿ ಕೊರೋನಾ ವೈರಸ್ ದೇಶದಿಂದ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಇದರ ನಿರ್ಮೂಲನೆ ಮುಂದಾಗಬೇಕೆಂದರು.  
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಬೇಕು. ಪ್ರಸ್ತುತ ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಎಂಪಿಎಂ ಕಾರ್ಖಾನೆ ಪುನರ್ ಆರಂಭಗೊಳ್ಳಬೇಕು. ಆ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು ಎಂದರು.
     ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನಗರಸಭೆ ಪೌರಾಯುಕ್ತ ಮನೋಹರ್, ಜಿಲ್ಲಾಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ, ಎಪಿಎಂಸಿ ಅಧ್ಯಕ್ಷ ಐ.ಈ ಲವೇಶ್‌ಗೌಡ, ವಲಯ ಅರಣ್ಯಾಧಿಕಾರಿ ಮಂಜುನಾಥ್, ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ, ಮುಖಂಡರಾದ ರಮಾಕಾಂತ, ಗಂಗಾಧರ್, ಬಾಷಾ, ಮಂಜುಳರಾಮಚಂದ್ರಪ್ಪ, ರೂಪನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
       ಇದಕ್ಕೂ ಮೊದಲು ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಗರದ ಸಶಸ್ತ್ರ ಮೀಸಲುಪಡೆ ಪೊಲೀಸ್ ಠಾಣಾಧಿಕಾರಿ ರಂಗಸ್ವಾಮಿ ಧ್ವಜವಂದನೆ ಗೌರವ ಸ್ವೀಕರಿಸಿದರು. ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಪಾಲ್ಗೊಂಡಿದ್ದವು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಉಚಿತವಾಗಿ ಮಾಸ್ಕ್, ಹ್ಯಾಂಡ್‌ಗ್ಲೋಸ್‌ಗಳನ್ನು ವಿತರಿಸಲಾಯಿತು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು.

Friday, August 14, 2020

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋಂಕು : ಒಂದೇ ದಿನ ೫೬ ಪ್ರಕರಣ ಪತ್ತೆ


ಭದ್ರಾವತಿ, ಆ. ೧೪: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿದ್ದು, ಶುಕ್ರವಾರ ಒಟ್ಟು ೫೬ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿರುವುದು ನಗರ ಹಾಗು ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
          ವೇಲೂರ್ ಶೆಡ್‌ನಲ್ಲಿ ಓರ್ವ ವ್ಯಕ್ತಿ, ಜನ್ನಾಪುರದಲ್ಲಿ ಓರ್ವ ವ್ಯಕ್ತಿ, ಕೆ.ಸಿ. ಬ್ಲಾಕ್‌ನಲ್ಲಿ ಓರ್ವ ವ್ಯಕ್ತಿ, ಸಂಜಯ್ ಕಾಲೋನಿಯಲ್ಲಿ ಓರ್ವ ವ್ಯಕ್ತಿ, ಹುತ್ತಾಕಾಲೋನಿಯಲ್ಲಿ ಓರ್ವ ವ್ಯಕ್ತಿ, ಮಿಲಿಟರಿ ಕ್ಯಾಂಪಿನಲ್ಲಿ ಓರ್ವ ವ್ಯಕ್ತಿ ಮತ್ತು  ವಾಸವಿ ಕಾಲೋನಿಯಲ್ಲಿ ೩೨ ವರ್ಷದ ಓರ್ವ ಪುರುಷ ಸೋಂಕಿಗೆ ಒಳಗಾಗಿದ್ದಾರೆ.
        ಕನಕನಗರದಲ್ಲಿ ೫೬ ಮತ್ತು ೨೮ ವರ್ಷದ ಮಹಿಳೆಯರು ಸೇರಿದಂತೆ ಮೂವರು ಮಹಿಳೆಯರು, ಸುಣ್ಣದಹಳ್ಳಿಯಲ್ಲಿ ೨೮ ವರ್ಷದ ಮಹಿಳೆ, ಭೋವಿ ಕಾಲೋನಿಯ ೩೮ ವರ್ಷದ ಪುರುಷ, ಸಯ್ಯದ್ ಕಾಲೋನಿಯಲ್ಲಿ ೨೪ ವರ್ಷದ ಮಹಿಳೆ, ಹೊಸಮನೆಯಲ್ಲಿ ೪೬ ಮತ್ತು ೫೪ ವರ್ಷದ ವ್ಯಕ್ತಿಗಳು ಸೇರಿ ೩ ಮಂದಿಯಲ್ಲಿ ಹಾಗೂ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
      ಅಂಬೇಡ್ಕರ್ ಕಾಲೋನಿಯಲ್ಲಿ ೪೫ ವರ್ಷದ ವ್ಯಕ್ತಿ, ನಿರ್ಮಲಾ ಆಸ್ಪತ್ರೆಯಲ್ಲಿ ೨೮ ವರ್ಷದ ಸಿಸ್ಟರ್ ಹಾಗೂ ೨೪ ವರ್ಷದ ಯುವಕ, ಸಿದ್ಧಾರೂಢನಗರದ ೩೨ ವರ್ಷ ಓರ್ವ ವ್ಯಕ್ತಿ, ಓರ್ವ ಮಹಿಳೆ, ಕಾಗದನಗರದ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ ಓರ್ವ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
       ವಿದ್ಯಾಮಂದಿರದಲ್ಲಿ ೬೬ ವರ್ಷದ ವ್ಯಕ್ತಿ, ಜಿಂಕ್‌ಲೈನ್‌ನಲ್ಲಿ ೪೦ ವರ್ಷದ ವ್ಯಕ್ತಿ ಮತ್ತು ೩೬ ವರ್ಷದ ಮಹಿಳೆ, ಜನ್ನಾಪುರದಲ್ಲಿ ೫೭ ವರ್ಷದ ಮಹಿಳೆ, ಜೇಡಿಕಟ್ಟೆಯ ೨೬ ವರ್ಷದ ಇಬ್ಬರು ಯುವಕರು, ಕುವೆಂಪು ನಗರದಲ್ಲಿ ಓರ್ವ ಮಹಿಳೆ, ಕಡದಕಟ್ಟೆಯಲ್ಲಿ ೬೦ ವರ್ಷದ ವ್ಯಕ್ತಿ, ಅಪ್ಪರ್ ಹುತ್ತಾದಲ್ಲಿ ಓರ್ವ ವ್ಯಕ್ತಿ, ಭೋವಿಕಾಲೋನಿಯಲ್ಲಿ ಓರ್ವ ವ್ಯಕ್ತಿ, ಕೋಡಿಹಳ್ಳಿಯಲ್ಲಿ  ೬೨ ವರ್ಷದ ವ್ಯಕ್ತಿ, ೫೨ ವರ್ಷದ ಮಹಿಳೆ, ಅಮೀರ್‌ಜಾನ್ ಕಾಲೋನಿಯಲ್ಲಿ ೬೫ ವರ್ಷದ ಮಹಿಳೆ, ಹೊಳೆಹೊನ್ನೂರು ರಸ್ತೆಯಲ್ಲಿ ೪೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
       ಹೊಳೆಹೊನ್ನೂರಿನಲ್ಲಿ ೩೭, ೪೭, ೨೪ ವರ್ಷದ ಮೂವರು ವ್ಯಕ್ತಿಗಳು ಹಾಗೂ ೫೫ ವರ್ಷದ ಮಹಿಳೆ, ಮಾರಶೆಟ್ಟಿಹಳ್ಳಿಯಲ್ಲಿ ೯ ವರ್ಷದ ಬಾಲಕಿ, ೨೨, ೪೫, ೩೮ ವರ್ಷದ ಮೂವರು ಮಹಿಳೆಯರು, ೩೫ ವರ್ಷದ ವ್ಯಕ್ತಿ,  ಅರಬಿಳಚಿಯಲ್ಲಿ ೪೬ ವರ್ಷದ ವ್ಯಕ್ತಿ ಕೂಡ್ಲಿಗೆರೆಯಲ್ಲಿ ೧೮ ವರ್ಷದ ಯುವತಿ ಸೇರಿದಂತೆ ಒಟ್ಟು ೫೬ ಮಂದಿ ಸೊಂಕಿಗೆ ಒಳಗಾಗಿದ್ದಾರೆ.


ವಿಇಎಸ್ ವಿದ್ಯಾಸಂಸ್ಥೆ ಛೇರ‍್ಮನ್ ಎನ್. ಕೃಷ್ಣಪ್ಪ ಹುಟ್ಟುಹಬ್ಬ ಆಚರಣೆ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಆ. ೧೪: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
          ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ತಾಲೂಕು ಶಾಖೆ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಸರ್ಕಾರದ ಜಂಟಿ ಸಮಾಲೋಚನಾ ಸಮಿತಿ ಸದಸ್ಯರಾದ ಎನ್. ಕೃಷ್ಣನಪ್ಪರವರು ವಿದ್ಯಾಸಂಸ್ಥೆಯ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದು, ಇವರ ಸೇವೆ ಇನ್ನಷ್ಟು ಲಭಿಸುವಂತಾಗಲಿ ಎಂದು ಅಭಿನಂದಿಸಲಾಯಿತು.
         ಆಡಳಿತ ಮಂಡಳಿಯ ಪ್ರಮುಖರಾದ ರಂಗಸ್ವಾಮಿ, ಎ.ಕೆ ಚಂದ್ರಪ್ಪ, ಸಿ. ಜಯಪ್ಪ, ರಂಗನಾಥಪ್ರಸಾದ್, ಎಂ.ಎಸ್ ಬಸವರಾಜ್, ಶಿವಲಿಂಗೇಗೌಡ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.