ಶನಿವಾರ, ಸೆಪ್ಟೆಂಬರ್ 19, 2020

ಟಿ.ಬಿ ಧನಂಜಯ ನಿಧನ

ಟಿ.ಬಿ ಧನಂಜಯ
ಭದ್ರಾವತಿ, ಸೆ. ೧೯: ತಾಲೂಕಿನ ಸಿಂಗನ ಮನೆ ಗ್ರಾಮ ಜಯ ಕರ್ನಾಟಕ ಶಾಖೆ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಡಿ ಶಶಿಕುಮಾರ್‌ರರ ತಂದೆ ಟಿ.ಬಿ ಧನಂಜಯ(೭೩) ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದರು.  ಕರ್ನಾಟಕ ವಿದ್ಯುತ್ ನಿಗಮ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಶಂಕರಘಟ್ಟದಲ್ಲಿ ನೆರವೇರಿತು.
       ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಸಿಂಗನಮನೆ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷ ತ್ಯಾಗರಾಜ್, ಗ್ರಾ.ಪಂ. ಅಧ್ಯಕ್ಷೆ ಆರ್. ಉಮಾ, ದೀನ ಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ರಮೇಶ್, ಶಂಕರ್ ರೈಸ್ ಮಿಲ್ ಮಾಲೀಕ ನಂದೀಶ್‌ಕುಮಾರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಸರ್.ಎಂ.ವಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಸರ್.ಎಂ ವಿಶ್ವೇಶ್ವರಯ್ಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಕಾರ್ಯಕ್ರಮವನ್ನು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಉದ್ಘಾಟಿಸಿದರು.
ಭದ್ರಾವತಿ, ಸೆ. ೧೯: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗು ಪ್ರೌಢ ಶಾಲಾ ವಿಭಾಗದ ಸಹಯೋಗದೊಂದಿಗೆ ಶನಿವಾರ ಸರ್.ಎಂ ವಿಶ್ವೇಶ್ವರಯ್ಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಉದ್ಘಾಟಿಸಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಕಾರ್ಯದಶಿ ಸಿ. ಚನ್ನಪ್ಪ ಆಶಯ ನುಡಿಗಳನ್ನಾಡಿದರು. ಆಧುನಿಕ ಸಮಾಜಕ್ಕೆ ಸರ್‌ಎಂವಿರವರ ಕೊಡುಗೆ ಕುರಿತು ಉಪನ್ಯಾಸ ನೀಡಲಾಯಿತು.
    ದತ್ತಿ ದಾನಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಕರಿಗೌಡ್ರ ನಾಗರಾಜಪ್ಪ ಆರುಂಡಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪರಿಷತ್ ಪ್ರಮುಖರಾದ ಧನಂಜಯ, ಯು. ಮಹಾದೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಎಸ್‌ಎಂಇ ನಿರ್ದೇಶಕರಾಗಿ ಉದ್ಯಮಿ ಎಚ್.ಸಿ ರಮೇಶ್ ನೇಮಕ

ಭದ್ರಾವತಿ ಬಿಜೆಪಿ ಮುಖಂಡ, ಉದ್ಯಮಿ ಎಚ್.ಸಿ ರಮೇಶ್‌ರವರನ್ನು ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಗೆ ನಿರ್ದೇಶಕರನ್ನಾಗಿ ನೇಮಕಗೊಳಿಸಿದ್ದು, ಅವರಿಗೆ ಸಂಸ್ಥೆಯ ಅಧ್ಯಕ್ಷ ಹರಿನಾರಾಯಣ ರಾಜ್‌ಬಾರ್  ಆದೇಶ ಪತ್ರ ವಿತರಿಸಿದರು.
ಭದ್ರಾವತಿ, ಸೆ. ೧೯: ಬಿಜೆಪಿ ಮುಖಂಡ, ಉದ್ಯಮಿ ಎಚ್.ಸಿ ರಮೇಶ್‌ರವರನ್ನು ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಗೆ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. 
ಕೇಂದ್ರ ಸಚಿ ನಿತಿನ್ ಗಡ್ಕರ್‌ರವರ ಆದೇಶದ ಮೇರೆಗೆ ಸಂಸ್ಥೆಯ ಅಧ್ಯಕ್ಷ, ಉತ್ತರ ಪ್ರದೇಶದ ಲೋಕಸಭಾ ಸದಸ್ಯ ಹರಿನಾರಾಯಣ ರಾಜ್‌ಬಾರ್ ೩ ವರ್ಷಗಳ ಅವಧಿಗೆ ರಮೇಶ್‌ರವರನ್ನು ನಿರ್ದೇಶಕರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
ಎಚ್.ಸಿ ರಮೇಶ್‌ರವರು ನಗರದ ಹಿರಿಯ ಕ್ರೀಡಾಪಟು ರಾಷ್ಟ್ರ ಪ್ರಶಸ್ತಿ ವಿಜೇತ ಎಚ್.ಸಿ ಚನ್ನಯ್ಯರವರ ಪುತ್ರರಾಗಿದ್ದು, ಆರಂಭದಿಂದಲೂ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಂತರ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಇವರು ಪಕ್ಷಕ್ಕೆ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಹಾಗು ಉದ್ಯಮ ಕ್ಷೇತ್ರದಲ್ಲಿ ಹೊಂದಿರುವ ಅನುಭವ ಪರಿಗಣಿಸಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ ಎನ್ನಲಾಗಿದೆ. 
ನಿರ್ದೇಶಕರಾಗಿ ನೇಮಕಗೊಳ್ಳಲು ಕಾರಣಕರ್ತರಾಗಿರುವ ಕೇಂದ್ರ ಸಚಿವರಿಗೆ, ಪಕ್ಷದ ವರಿಷ್ಠರಿಗೆ, ಕಾರ್ಯಕರ್ತರಿಗೆ ಎಚ್.ಸಿ ರಮೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. 
ಸೆ.೨೦ರಂದು ಎಚ್.ಸಿ ರಮೇಶ್ ನಗರಕ್ಕೆ ಆಗಮನ: 
ಎಂಎಸ್‌ಎಂಇ ನಿರ್ದೇಶಕರಾಗಿ ನೇಮಕಗೊಂಡಿರುವ ಎಚ್.ಸಿ ರಮೇಶ್‌ರವರಿಗೆ ನಗರದ ಸ್ನೇಹಿತರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಸೆ.೨೦ರಂದು ಎಚ್.ಸಿ ರಮೇಶ್‌ರವರು ನಗರಕ್ಕೆ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ನಗರದ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆಗಳು ನಡೆದಿವೆ. 
ಮಹಾತ್ಮಗಾಂಧಿ ವೃತ್ತದಿಂದ ನಂತರ ಮೆರವಣಿಗೆ ನಡೆಯಲಿದ್ದು, ನ್ಯೂಟೌನ್ ಲಯನ್ಸ್  ಕ್ಲಬ್‌ನಲ್ಲಿ ಸಂಜೆ ೫.೩೦ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಆರೋಗ್ಯವಂತ ಮಗು ದೇಶದ ಆಸ್ತಿ : ಪೋಷಣ್ ಮಾಸಾಚರಣೆಗೆ ಚಾಲನೆ

ಭದ್ರಾವತಿಯಲ್ಲಿ ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಚಾಲನೆ ನೀಡಿದು.  
ಭದ್ರಾವತಿ, ಸೆ. ೧೯: ಆರೋಗ್ಯವಂತ ಮಗು ದೇಶದ ಆಸ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಮಗುವಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಹೇಳಿದರು.
    ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ತಾಯಂದಿರು ಗರ್ಭಾವಸ್ಥೆಯಲ್ಲಿ ಇರುವಾಗಲೇ ಪೌಷ್ಟಿಕ ಆಹಾರ ಸೇವಿಸಬೇಕು. ಇದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ  ಎಂದರು.
      ಶಾಲೆಯ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದು, ಸಾರ್ವಜನಿಕರು ಇಂತಹ ಯೋಜನೆಗಳ ಸದುಪಯೋಗಪಡೆದುಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
      ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಭಾವಂತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
     ಶಾಲೆಯ ಶಿಕ್ಷಕರಾದ ವಿಶ್ವನಾಥ್, ಉಷಾರಾಣಿ, ಸುಜಾತ, ಪ್ರಮೀಳಾ, ಸುಶ್ಮಿತಾ, ವಿಜಯಕುಮಾರಿ, ಶಾಬಾನ, ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

ಶುಕ್ರವಾರ, ಸೆಪ್ಟೆಂಬರ್ 18, 2020

ಸಿಲಿಂಡರ್ ಸೋರಿಕೆ ಮಾರುತಿ ಓಮ್ನಿ ಬೆಂಕಿಗಾಹುತಿ

ಭದ್ರಾವತಿ: ತಾಲ್ಲೂಕಿನ ಬಿ.ಆರ್.ಪಿ ಸಮೀಪದ ಸಿಂಗನ ಮನೆ ಗ್ರಾಮದಲ್ಲಿ ಮಾರುತಿ ಓಮ್ನಿ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
       ಸಿಂಗನ ಮನೆ ಗ್ರಾಮದ  ಸತೀಶ್ ಎಂಬುವರ ಮನೆಯ ಮುಂಭಾಗದಲ್ಲಿ ಮಾರುತಿ ಓಮ್ನಿ ವಾಹನಕ್ಕೆ ಸಿಲೆಂಡರ್ ಡಂಪ್ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಮಾರುತಿ ಓಮ್ನಿ ವಾಹನಕ್ಕೆ ಹತ್ತಿದ ಬೆಂಕಿಯ ಜ್ವಾಲೆ ಮನೆಯ ಕಿಟಕಿ ಹಾಗೂ ಟೈಲ್ಸ್ ಗಳನ್ನು  ಆಹುತಿ ಪಡೆದಿದೆ.
     ಅಗ್ನಿಶಾಮಕ ಠಾಣಾಧಿಕಾರಿ ಎನ್.ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಎಸ್.ರಮೇಶ್, ಸುರೇಶಾಚಾರ್, ಡಿ.ಎನ್.ಸುರೇಶ್  ಮತ್ತು  ಎಂ.ಸಿ.ಮಹೇಂದ್ರ ರವರುಗಳು ಬೆಂಕಿ ನಿಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
      ಘಟನೆ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಭದ್ರಾವತಿ ಗ್ರಾಮಾಂತರ ಠಾಣೆಯ ಪಿಎಸ್ಐ ದೆವರಾಜ್ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸ ಸೀಲ್‌ಡೌನ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಹೋದರ ಬಿ.ಕೆ ಮೋಹನ್ ನಿವಾಸ ಸೀಲ್‌ಡೌನ್ ಮಾಡಿರುವುದು.
ಭದ್ರಾವತಿ, ಸೆ. ೧೮: ನಗರದ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಹೋದರ ಬಿ.ಕೆ ಮೋಹನ್‌ರವರ ನಿವಾಸಗಳನ್ನು ಶುಕ್ರವಾರ ಸೀಲ್‌ಡೌನ್ ಮಾಡಲಾಗಿದೆ.
        ಸಂಗಮೇಶ್ವರ್ ಮತ್ತು ಮೋಹನ್‌ರವರ ಮನೆಗಳಲ್ಲಿ ಕೆಲಸ ಮಾಡುವ ೪ ಜನ ಕೆಲಸಗಾರರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
       ಮನೆಗಳ ಮುಂದೆ ಬ್ಯಾರಿಗೇಡ್ ಅಳವಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೆ ಎರಡು ಮನೆಗಳ ಕುಟುಂಬಸ್ಥರನ್ನು ಮನೆಯಲ್ಲಿಯೇ ನಿಗಾದಲ್ಲಿರಲು ಸೂಚಿಸಲಾಗಿದೆ.  
      ಈ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಅಂಗಡಿವಾಡಿ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅಂದು ಶಾಸಕ ನಿವಾಸವನ್ನು ಸ್ಯಾನಿಟೈಜರ್ ಮಾಡಲಾಗಿತ್ತು.

ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ವಿಷ್ಣು ಜನ್ಮ ದಿನಾಚರಣೆ

ಭದ್ರಾವತಿಯಲ್ಲಿ ಡಾ. ವಿಷ್ಣುವರ್ಧನ್ ೭೦ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಡಾ. ವಿಷ್ಣು ಸೇವಾ ಸಮಿತಿ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
ಭದ್ರಾವತಿ, ಸೆ. ೧೮:  ಚಲನಚಿತ್ರ ನಟ, ಸಾಹಸ ಸಿಂಹ ದಿವಂಗತ ಡಾ. ವಿಷ್ಣುವರ್ಧನ್ ೭೦ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಡಾ. ವಿಷ್ಣು ಸೇವಾ ಸಮಿತಿ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
     ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧೆಡೆ ಸಸಿ ನೆಡಲಾಯಿತು.
      ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖಯ್ಯ, ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಜ್ಯೂನಿಯರ್ ವಿಷ್ಣುವರ್ಧನ್, ಕಲಾವಿದ ಅಪೇಕ್ಷ ಮಂಜುನಾಥ್, ಸಿಆರ್‌ಪಿ ಸಿ. ಚನ್ನಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಎಲ್. ದೇವರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ವಿಷ್ಣು ಸೇನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮ ದಿನ ಆಚರಿಸಲಾಯಿತು
       ಹೊಸಮನೆಯಲ್ಲಿ ವಿಷ್ಣು ಜನ್ಮ ದಿನಾಚರಣೆ:
      ವಿಷ್ಣು ಸೇನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮ ದಿನ ಆಚರಿಸಲಾಯಿತು.
      ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಮುಖಂಡರಾದ ವೆಂಕಟೇಶ್, ಶಿವು, ವಿನಯ್, ಅವಿ, ಕಂಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.