Saturday, October 24, 2020

ಕರುಮಾರಿಯಮ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ದುರ್ಗಾ ಹೋಮ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದಲ್ಲಿರುವ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ನಡೆಯುತ್ತಿದ್ದು, ಶನಿವಾರ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಹೋಮ ನಡೆಯಿತು.
ಭದ್ರಾವತಿ, ಅ. ೨೪: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದಲ್ಲಿರುವ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ನಡೆಯುತ್ತಿದ್ದು, ಶನಿವಾರ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಹೋಮ ನಡೆಯಿತು.
     ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ. ಕುಪ್ಪಸ್ವಾಮಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಮ್ಮನವರಿಗೆ ಮೊದಲನೇ ದಿನ ಕಾಮಾಕ್ಷಿ, ಎರಡನೇ ದಿನ ಮೀನಾಕ್ಷಿ, ಮೂರನೇ ದಿನ ವಿಶಾಲಾಕ್ಷಿ, ನಾಲ್ಕನೇ ದಿನ ಅನ್ನಪೂರ್ಣೇಶ್ವರಿ, ಐದನೇ ದಿನ ಸರಸ್ವತಿ, ಆರನೇ ದಿನ ಅಖಿಲಾಂಡೇಶ್ವರಿ, ಏಳನೇ ದಿನ ಲಕ್ಷ್ಮೀ ಮತ್ತು ಎಂಟನೇ ದಿನ ದುರ್ಗಾದೇವಿ ಅಲಂಕಾರ ಕೈಗೊಳ್ಳಲಾಗಿತ್ತು.
    ದೇವಸ್ಥಾನದ ಪ್ರಧಾನ ಅರ್ಚಕ ಕಾಶಿನಾಥ್, ವಿಜಯ್‌ಕುಮಾರ್ ಹಾಗು ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ಕೊರೋನಾ ವಾರಿಯರ್ಸ್‌ಗಳಾಗಿ ಶ್ರಮಿಸಿದವರಿಗೆ ಸನ್ಮಾನ

ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಜನ ಜಾಗೃತಿ ಕಾರ್ಯಕ್ರಮದಲ್ಲಿ ಕಳೆದ ೬ ತಿಂಗಳಿನಿಂದ ಕೊರೋನಾ ವಾರಿಯರ್ಸ್‌ಗಳಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಭದ್ರಾವತಿ, ಅ. ೨೪: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಜನ ಜಾಗೃತಿ ಕಾರ್ಯಕ್ರಮದಲ್ಲಿ ಕಳೆದ ೬ ತಿಂಗಳಿನಿಂದ ಕೊರೋನಾ ವಾರಿಯರ್ಸ್‌ಗಳಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
     ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕೊರೋನಾ ಸಂಕಷ್ಟದ ಸಮಯದಲ್ಲಿ ಶ್ರೀಸಾಮಾನ್ಯರ ನೆರವಿಗೆ ಧಾವಿಸಿದ ವಿವಿಧ ಸೇವಾ ಸಂಸ್ಥೆಗಳ ಮುಖಂಡರು, ಪತ್ರಕರ್ತರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರನ್ನು ಗುರುತಿಸಿ ಸನ್ಮಾನಿಸಿದರು.
    ಜನ ಜಾಗೃತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ನಗರಸಭೆ ಸದಸ್ಯರಾದ ವಿ. ಕದಿರೇಶ್, ಲಕ್ಷ್ಮೀದೇವಿ, ಮುಖಂಡರಾದ ನರಸಿಂಹಚಾರ್, ರಮಾಕಾಂತ್, ಬಾಲಕೃಷ್ಣ, ಶಿವಬಸಪ್ಪ, ಜೆಬಿಟಿ ಬಾಬು ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆ ವಸತಿ ಗೃಹಗಳ ತೆರವಿಗೆ ನೋಟಿಸ್ : ಕಾರ್ಮಿಕ ವಲಯದಲ್ಲಿ ಆತಂಕ

ಭದ್ರಾವತಿ ಎಂಪಿಎಂ ಕಾರ್ಖಾನೆಯ ವಸತಿಗೃಹಗಳಲ್ಲಿ ವಾಸಿಸುತ್ತಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ನೌಕರರನ್ನು ತಕ್ಷಣ ಮನೆ ಖಾಲಿ ಮಾಡುವಂತೆ ನಗರಾಡಳಿ ಇಲಾಖೆ ನೋಟಿಸ್ ನೀಡಿರುವುದು.
ಭದ್ರಾವತಿ, ಅ. ೨೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಾವಿರಾರು ವಸತಿ ಗೃಹಗಳು ಈಗಾಗಲೇ ಪಾಳು ಬಿದ್ದಿದ್ದು, ಈ ನಡುವೆ ಕೆಲವು ಮನೆಗಳಲ್ಲಿ ವಾಸಿಸುತ್ತಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ನೌಕರರನ್ನು ಸಹ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
    ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ಕಾರ್ಖಾನೆಯ ನಗರಾಡಳಿತ ಇಲಾಖೆ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಎಲ್ಲರನ್ನು ಏಕಾಏಕಿ ಖಾಲಿ ಮಾಡಿಸಲು ಮುಂದಾಗಿದ್ದು, ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಈ ನಡುವೆ ನಗರಾಡಳಿತ ವ್ಯಾಪ್ತಿಯಲ್ಲಿರುವ ಅಂಗಡಿಮುಂಗಟ್ಟುಗಳನ್ನು ಸಹ ತೆರವುಗೊಳಿಸಲು ಸೂಚಿಸಲಾಗಿದೆ. ಕೋವಿಡ್-೧೯ ಪರಿಣಾಮ ವ್ಯಾಪಾರ ವಹಿವಾಟು ಕುಸಿದಿದ್ದು, ಈಗಾಗಲೇ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಕಾರ್ಮಿಕ ಮುಖಂಡರು ಪ್ರಶ್ನಿಸಿದ್ದಾರೆ.
    ಕಳೆದ ಸುಮಾರು ೫ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಇದುವರೆಗೂ ಆರಂಭಗೊಂಡಿಲ್ಲ. ಪುನಃ ಆರಂಭಗೊಳ್ಳುವ ನಿರೀಕ್ಷೆ ಇಲ್ಲ. ಈಗಾಗಲೇ ೨೦೧೭ ವಿಶೇಷ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸುವ ಮೂಲಕ ಶೇ.೯೦ ರಷ್ಟು ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಲಾಗಿದೆ. ವಸತಿ ಗೃಹಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಖಾಲಿ ಮಾಡಿಸಲಾಗಿದೆ. ಇದರಿಂದಾಗಿ ೩-೪ ವರ್ಷಗಳಿಂದ ಸಾವಿರಾರು ಮನೆಗಳು ಪಾಳುಬಿದ್ದಿದ್ದು, ಸಂಪೂರ್ಣವಾಗಿ ಹಾಳಾಗಿವೆ. ಅಲ್ಲದೆ ನಗರಾಡಳಿತ ವ್ಯಾಪ್ತಿಯಲ್ಲಿನ ಆರ್ಥಿಕ ಚಟುವಟಿಕೆಗಳು ಸಹ ಸ್ಥಗಿತಗೊಂಡಿವೆ. ಇದೀಗ ಕೆಲವು ಮನೆಗಳಲ್ಲಿ ಉಳಿದುಕೊಂಡಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಗಳನ್ನು ಸಹ ಖಾಲಿ ಮಾಡಲು ನೋಟಿಸ್ ನೀಡಲಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ವಸತಿ ಗೃಹಗಳು ಹಾಳಾಗುವ ಭೀತಿ ಎದುರಾಗಿದೆ.  ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Friday, October 23, 2020


 

ಹಿರಿಯ ಕಾರ್ಮಿಕ ಮುಖಂಡ ಎಚ್.ಜಿ ಉಮಾಪತಿ ಸ್ಮರಣೆ

ಭದ್ರಾವತಿ ಅಭಿವೃದ್ಧಿ ವೇದಿಕೆಯಿಂದ ಶ್ರದ್ದಾಂಜಲಿ, ಗೌರವ

ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್.ಜಿ ಉಮಾಪತಿಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಅ. ೨೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರದ ಅಧೀನಕ್ಕೆ ವಹಿಸಿಕೊಡುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರ್ಮಿಕ ಮುಖಂಡ ದಿವಂಗತ ಎಚ್.ಜಿ ಉಮಾಪತಿಯವರಿಗೆ ಶುಕ್ರವಾರ ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಯಿತು.
     ಇತ್ತೀಚೆಗೆ ಬೆಂಗಳೂರಿನಲ್ಲಿ ಉಮಾಪತಿಯವರು ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿದ ವೇದಿಕೆ ಮುಖಂಡರು ಉಮಾಪತಿಯವರು ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ಸೇವೆ ಸಲ್ಲಿಸುವ ಮೂಲಕ ಕಾರ್ಮಿಕ ಮುಖಂಡರಾಗಿ ಬೆಳೆದು ಎಲ್ಲರ ಒಡನಾಡಿಯಾಗಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾದಳ ಘಟಕದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸ್ಮರಿಸಿದರು.
    ಶ್ರದ್ದಾಂಜಲಿ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಹಕಾರ ಧುರೀಣ ಕೆ.ಎನ್ ಭೈರಪ್ಪಗೌಡ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯ ರಂಗ ಕಲಾವಿದ ಜವರೇಗೌಡ ಕೊರೋನಾ ಸೋಂಕಿಗೆ ಬಲಿ


ಜವರೇಗೌಡ
ಭದ್ರಾವತಿ, ಅ. ೨೩: ನಗರದ ಹಿರಿಯ ರಂಗ ಕಲಾವಿದ, ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಜವರೇಗೌಡ(೬೭) ಶುಕ್ರವಾರ ನಿಧನ ಹೊಂದಿದರು.
        ಪತ್ನಿ, ಮೂವರು ಹೆಣ್ಣು ಮಕ್ಕಳು, ಅಳಿಯಂದಿರನ್ನು ಹೊಂದಿದ್ದರು. ಕೆಲವು ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಜವರೇಗೌಡರವರು ವಿಕಸಂ ರಂಗ ತಂಡದ ಹಿರಿಯ ಕಲಾವಿದರಾಗಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.      ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆ ನೌಕರರು, ರಂಗಕಲಾವಿದರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಿರೋಧಿಸಿ ಹೋರಾಟ

ಪೂರಕ ಸ್ಪಂದನೆ : ೯ನೇ ದಿನಕ್ಕೆ ಹೋರಾಟ ತಾತ್ಕಾಲಿಕ ಅಂತ್ಯ

ಜನತಾದಳ(ಸಂಯುಕ್ತ) ವತಿಯಿಂದ  ಭದ್ರಾವತಿ ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ  ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದ್ದು, ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಜೆ ನಾಗರಾಜ್‌ರವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಜನತಾದಳ(ಸಂಯುಕ್ತ) ವತಿಯಿಂದ  ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ  ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
    ತಾಲೂಕಿನ ಸಿಎಲ್-೨ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಗಿಂತ ಹೆಚ್ಚಿನ ದರ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅ.೧೫ ರಿಂದ ಹೋರಾಟ ಆರಂಭಿಸಲಾಗಿತ್ತು. ಹೋರಾಟಕ್ಕೆ ತಾಲ್ಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ಪೂರಕವಾಗಿ ಸ್ಪಂದಿಸಿದ್ದು, ಶೇ.೮೦ರಷ್ಟು ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಸೂಲಾತಿ ಮಾಡದಂತೆ ಫಲಕಗಳನ್ನು ಹಾಕಲಾಗಿದೆ. ಈ ಹಿನ್ನಲೆಯಲ್ಲಿ  ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.
    ಉಜ್ಜನಿಪುರದ ಎಂಎಸ್‌ಐಎಲ್ ಮದ್ಯದಂಗಡಿ ತೆರವುಗೊಳಿಸುವುದು, ಮೈಕ್ರೋ ಫೈನಾನ್ಸ್‌ಗಳಿಂದ ಮಹಿಳೆಯರಿಗೆ ಉಂಟಾಗುತ್ತಿರುವ ಕಿರುಕುಳ ತಪ್ಪಿಸುವುದು, ಅಬಕಾರಿ ಕಾಯ್ದೆಗಳಿಗೆ ಚ್ಯುತಿ ಬರುವಂತೆ ಹಾಗು ಹೋರಾಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳು ಬಾಕಿ ಉಳಿದಿದ್ದು, ಈ ಹಿನ್ನಲೆಯಲ್ಲಿ ನ.೪ರಂದು ತಾಲೂಕು ಕಚೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಛೇರಿ ಮತ್ತು ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಛೇರಿವರೆಗೂ ಪಾದಯಾತ್ರೆ ನಡೆಸಲಾಗುವುದು. ಹೋರಾಟಕ್ಕೆ ಸಹಕರಿಸಿದ ಪಕ್ಷದ ರಾಜಾಧ್ಯಕ್ಷ ಮಹಿಮಾ ಜೆ. ಪಟೇಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಸೇರಿದಂತೆ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ, ತಾಲೂಕು ಆಡಳಿತಕ್ಕೆ, ಅಬಕಾರಿ ಇಲಾಖೆ ಹಾಗು ಪೊಲೀಸ್ ಇಲಾಖೆಗೆ ಶಶಿಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
    ಹೋರಾಟ ಅಂತ್ಯಗೊಳಿಸುವ ಸಂಬಂಧ ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆರವರಿಗೆ ಮನವಿ ಸಲ್ಲಿಸಲಾಯಿತು.
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸಂದೇಶ್‌ಕುಮಾರ್, ಚಂದ್ರಶೇಖರ್, ಅಬ್ದುಲ್ ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.