ಭಾನುವಾರ, ನವೆಂಬರ್ 22, 2020

ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ರು. ೬೨,೪೮೫ ಲಾಭ

ಭದ್ರಾವತಿ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ೫೪ನೇ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.
ಭದ್ರಾವತಿ, ನ. ೨೨: ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪರಿಶ್ರಮದಿಂದ ಸ್ಥಾಪಿತವಾಗಿ ೫ ದಶಕಗಳನ್ನು ಪೂರೈಸಿರುವ ನಗರದ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರು. ೬೨,೪೮೫ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಹೊಸ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್ ಸಿದ್ದಯ್ಯ ತಿಳಿಸಿದರು.
    ಅವರು ಭಾನುವಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ ೫೪ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸದಸ್ಯರುಗಳಿಂದ ಒಟ್ಟು ರು. ೪೬ ಲಕ್ಷ ಠೇವಣಿ ಇದ್ದು, ರು. ೧೦.೬೭ ಲಕ್ಷ ಷೇರು ಬಂಡವಾಳ ಹೊಂದಲಾಗಿದೆ. ಒಟ್ಟು ರು.೬೮,೯೯,೩೭೦ ಸಾಲ ನೀಡಲಾಗಿದ್ದು, ರು. ೫೯,೧೦,೮೮೬ ವಸೂಲಾತಿ ಮಾಡಲಾಗಿದೆ. ಬಾಕಿ ಸಾಲದ ಮೊತ್ತ ರು.೭೩,೫೦,೩೯೮ ಬರಬೇಕಾಗಿದ್ದು, ಈ ನಡುವೆ ಬೈಲಾ ತಿದ್ದುಪಡಿ ಮಾಡಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೂ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸದಸ್ಯರುಗಳಿಗೆ ಸಂಬಳ ಆಧಾರ ಸಾಲ, ಜಾಮೀನು ಆಧಾರ ಸಾಲ, ನಿವೇಶನ/ಗೃಹ ಖರೀದಿ/ರಿಪೇರಿ ಸಾಲ ಸ್ವಸಹಾಯ ಗುಂಪುಗಳ ಸಾಲ ಮತ್ತು ವ್ಯಾಪಾರ ಉತ್ತೇಜಕ ಸಾಲಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
   ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪುತ್ರ, ಸಂಘದ ಅಧ್ಯಕ್ಷರಾಗಿದ್ದ ಸಿ.ಕೆ ಅಸ್ಮತ್‌ಪಾಷರವರು ಕಳೆದ ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಇವರಿಗೆ ಸಂತಾಪ ಸೂಚಿಸಲಾಯಿತು.
    ಸಂಘದ ಛೇರ‍್ಮನ್ ಬೋರೇಗೌಡ, ಕಾರ್ಯದರ್ಶಿ ಮುಕುಂದಪ್ಪ, ಖಜಾಂಚಿ ಸಿ. ದಾಸಿ, ನಿರ್ದೇಶಕರಾದ ಎನ್. ರಂಗಸ್ವಾಮಿ, ಎಚ್. ಮಲ್ಲೇಶ್, ರಾಜ, ಗಂಗಾಧರ ಗೌಡ, ಮಹಮ್ಮದ್  ಬುಡೇನ್, ಮಂಜುನಾಥ ಮತ್ತು ಶಾರದಮ್ಮ ಉಪಸ್ಥಿತರಿದ್ದರು.

ಬಸ್ ನಿಲ್ದಾಣ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ನಗರಸಭೆಗೆ ಮನವಿ

ಭದ್ರಾವತಿ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೨: ನಗರದ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಯಾವುದೇ ರೀತಿ ಟೆಂಡರ್ ಕರೆಯದೆ ಬಸ್ ನಿಲ್ದಾಣಗಳನ್ನು ಅನಧಿಕೃತವಾಗಿ ನೆಲಸಮ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತಕ್ಷಣ ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕೆಂದು ಹಾಗು ಕಾನೂನು ಬಾಹಿರವಾಗಿ ಬಸ್ ನಿಲ್ದಾಣಗಳನ್ನು ನೆಲಸಮಗೊಳಿಸಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ಮನವಿ ಸ್ವೀಕರಿಸಿದ ನಗರಸಭೆ ಇಂಜಿನಿಯರ್ ರಂಗರಾಜಪುರೆ ಮುಂದಿನ ಕ್ರಮ ಕೈಗೊಳ್ಳುವ ಭರವಸೆ  ನೀಡಿದರು. ಘಟಕದ ಅಧ್ಯಕ್ಷ ದೀಕ್ಷಿತ್, ಕಾರ್ಯಕರ್ತರಾದ ಸುದೈವ, ಮನೋಜ್, ಮಂಜುನಾಥ್, ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ನವೆಂಬರ್ 21, 2020

ಪ್ರೇಮಪಾಶ ಪುಸ್ತಕ ಬಿಡುಗಡೆ

ಭದ್ರಾವತಿ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಿಂದೂ ಯುವ ಜಾಗೃತಿವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚೈತ್ರಾ ಕುಂದಾಪುರರವರ ಪ್ರೇಮಪಾಶ (ಪ್ರೀತಿಯೆಂಬ ಜಿಹಾದಿನ ಪರದೆ) ಪುಸ್ತಕ ಬಿಡುಗಡೆಗೊಳಿಸಲಾಯಿತು.
     ಭದ್ರಾವತಿ, ನ. ೨೧: ದೇಶದ ಸನಾತನ ಧರ್ಮ, ಸಂಸ್ಕೃತಿ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಚೈತ್ರಾ ಕುಂದಾಪುರರವರ ಪ್ರೇಮಪಾಶ (ಪ್ರೀತಿಯೆಂಬ ಜಿಹಾದಿನ ಪರದೆ) ಪುಸ್ತಕ ಬಿಡುಗಡೆ ಸಮಾರಂಭ ಶನಿವಾರ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಿಂದೂ ಯುವ ಜಾಗೃತಿವತಿಯಿಂದ ಆಯೋಜಿಸಲಾಗಿತ್ತು.
ಎಂ.ಎಸ್.ಎಂ.ಇ ನಿರ್ದೇಶಕ ಎಚ್.ಸಿ ರಮೇಶ್ ಪುಸ್ತಕ ಬಿಡುಗಡೆಗೊಳಿಸಿದರು. ಲೇಖಕಿ ಚೈತ್ರಾ ಕುಂದಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಸುದರ್ಶನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಯುವ ಉದ್ಯಮಿ ಎನ್. ಗೋಕುಲ್‌ಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್

ಟಿ.ಎಸ್ ದುಗ್ಗೇಶ್
ಭದ್ರಾವತಿ, ನ. 21: ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ನಗರದ ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
   ಶನಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ದುಗ್ಗೇಶ್‌ರವರು ಹಲವಾರು ವರ್ಷಗಳಿಂದ ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಗುರುತಿಸಿಕೊಂಡಿದ್ದರು.  ಇತ್ತೀಚಿಗೆ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ಗೆ ತಾಲೂಕಿನ ಅರಕೆರೆ ಎಚ್.ಎಲ್ ಷಡಾಕ್ಷರಿ, ಗೊಂದಿ ಜಯರಾಮ್, ಎಚ್.ಎಸ್ ಸಂಜೀವಕುಮಾರ್ ಮತ್ತು ಟಿ.ಎಸ್ ದುಗ್ಗೇಶ್ ಸೇರಿದಂತೆ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಯೂನಿಯನ್ ಒಟ್ಟು 14 ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದು, ಈ ಹಿಂದೆ ತಾಲೂಕಿನ ಅರಕೆರೆ ಎಚ್.ಎಲ್ ಷಡಾಕ್ಷರಿಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಸ್ ದುಗ್ಗೇಶ್‌ರವರಿಗೆ  ನಗರದ ಟವನ್ ಭಾವಸಾರ ಕ್ಷತ್ರಿಯ ಕೊ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಡಿ ಯುವಕರಿಗೆ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿ ಕೊಡಿ

ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಮನವಿ

ಭದ್ರಾವತಿ, ನ. ೨೧: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮನವಿ ಸಲ್ಲಿಸಿದ್ದಾರೆ.
   ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದ ಸರ್ವೆ ನಂ. ೭೧ರ ಬ್ರಹ್ಮದೇವರಕಟ್ಟೆ ಕೆರೆ ಅಭಿವೃದ್ಧಿಗೆ ರು.೯ ಲಕ್ಷ,  ಸರ್ವೆ ನಂ.೨೫ರ ಎರೆಕಟ್ಟೆ ಕೆರೆ ಅಭಿವೃದ್ಧಿಗೆ ರು. ೯ ಲಕ್ಷ ಅನುದಾನ ಮಂಜೂರಾತಿಯಾಗಿದೆ. ಪ್ರಸ್ತುತ ಕೋವಿಡ್-೧೯ರ ಹಿನ್ನಲೆಯಲ್ಲಿ ಗ್ರಾಮದ ಯುವಕರು ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ನಡುವೆ ಕೆಲವರು ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದು, ಈ ಹಿನ್ನಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಹಿತ ಕಾಪಾಡಬೇಕು.
   ಪ್ರಸ್ತುತ ಗ್ರಾಮದಲ್ಲಿ ಭತ್ತದ ಕಟಾವು ಮುಗಿದಿದ್ದು, ಇದೀಗ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಕ್ತ ಸಮಯವಾಗಿದೆ. ಕೆರೆಗಳು ಅಭಿವೃದ್ಧಿಗೊಂಡಲ್ಲಿ ಶುದ್ದ ನೀರು ಸರಬರಾಜು ಜೊತೆಗೆ ಸ್ವಚ್ಛತೆಯಿಂದ ಗ್ರಾಮದಲ್ಲಿ ರೋಗರುಜಿನ ಹರಡದಂತೆ ತಡೆಗಟ್ಟೆ ಬಹುದಾಗಿದೆ.  ಅಲ್ಲದೆ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯುವಕರು ಉತ್ಸುಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಎರಡು ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದ್ದಾರೆ.

ಶುಕ್ರವಾರ, ನವೆಂಬರ್ 20, 2020

ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹ.

ರಾಜು ಆರ್ ದೊಂಬಿದಾಸ

ಭದ್ರಾವತಿ, ಅ. ೨೦: ರಾಜ್ಯದಲ್ಲಿರುವ ದೊಂಬಿದಾಸ ಜನಾಂಗದ ಅಭಿವೃದ್ಧಿಗಾಗಿ ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆ ರಾಜ್ಯಾಧ್ಯಕ್ಷ ರಾಜು ಅರ್ ದೊಂಬಿದಾಸ ಅಗ್ರಹಿಸಿದ್ದಾರೆ.
ದೊಂಬಿದಾಸ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ದೃಷ್ಟಿಯಿಂದ ನಿಗಮ ಸ್ಥಾಪಿಸಿ ಅನುದಾನದ ಮೀಸಲಿಡಬೇಕು. ಅರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಭದ್ರಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
ಭದ್ರಾವತಿ, ನ. ೨೦ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
      ಸುಮಾರು ೧೦ ರಿಂದ ೧೨ ಅಡಿಯಷ್ಟು ಉದ್ದವಿರುವ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದ್ದು,  ಸೇತುವೆ ಮೇಲೆ ಸಂಚರಿಸುತ್ತಿದ್ದ ಪಾದಚಾರಿಗಳು, ವಾಹನ ಸವಾರರು ಕೆಲ ಕ್ಷಣ ಮೊಸಳೆಯನ್ನು ಕುತೂಹಲದಿಂದ ವೀಕ್ಷಿಸಿದರು.
    ಈ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿದ್ದು ಆಗಾಗ ಕಂಡು ಬರುತ್ತಿವೆ. ಈ ಹಿಂದೆ ಮೊಸಳೆಗಳು ನದಿ ದಡದಲ್ಲಿ ತಿರುಗಾಡುವವರು, ಸ್ನಾನ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಬರುವವರ ಮೇಲೆ  ಹಾಗು ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಗಳು ನಡೆದಿವೆ. ನಗರಸಭೆ ಆಡಳಿತ ನದಿಗೆ ಯಾವುದೇ ರೀತಿಯ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಈ ಭಾಗದಲ್ಲಿ ರಾತ್ರಿ ವೇಳೆ ಕಣ್ತಪ್ಪಿಸಿ ಮಾಂಸದಂಗಡಿಗಳ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.
     ಮುಂದಿನ ದಿನಗಳ ಮೊಸಳೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಗತ್ಯವಿದೆ.