Thursday, December 24, 2020

ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ಪ್ರಕರಣದಲ್ಲಿ ಬಲಿಪಶು ಮಾಡುವ ಹುನ್ನಾರ

ಎಸ್‌ಡಿಪಿಐ ಕಾರ್ಯಕರ್ತರಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಡಿ. ೨೪: ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
     ಪ್ರವಾದಿ ಮಹಮದ್ ಪೈಗಂಬರ್‌ರವರ ನಿಂದನೆಯಿಂದಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಹಿಂಸಾಚಾರ ನಡೆದಿದ್ದು, ಈ ಪ್ರಕರಣ ರಾಜಕೀಯ ದುರುದ್ದೇಶದ ಒಂದು ಭಾಗವಾಗಿರುತ್ತದೆ. ಪ್ರಕರಣಕ್ಕೆ  ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ರಾಜ್ಯ ಪೊಲೀಸ್ ಹಾಗು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆದಿದ್ದು, ಎಸ್‌ಡಿಪಿಐ ಕಾರ್ಯಕರ್ತರು ತನಿಖೆಯಲ್ಲಿ ನಿರಂತವಾಗಿ ಪಾಲ್ಗೊಂಡು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಅಲ್ಲದೆ ತನಿಖೆ ಸಂದರ್ಭದಲ್ಲಿ ಎಸ್‌ಡಿಪಿಐ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿರುವುದಿಲ್ಲ. ಇದೀಗ ಕೇಂದ್ರ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಎಸ್‌ಡಿಪಿಐ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಬಲಿಪಶುಗಳನ್ನಾಗಿ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ವಾಸ್ತವವಾಗಿ ಎಸ್‌ಡಿಪಿಐ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಂ, ದಲಿತ ಹಾಗು ಇನ್ನಿತರ ಶೋಷಿತ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಈ ನಡುವೆ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಂಡು ಈ ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಇತ್ತೀಚೆಗೆ ಎಸ್‌ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಮಹಮದ್ ಶರೀಫ್ ಹಾಗು ಸ್ಥಳೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆ ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಈಗಾಗಲೇ ಪ್ರಕರಣದಲ್ಲಿ ಬಂಧಿಸಲಾಗಿರುವ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
   ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಹಿರ್, ಕಾರ್ಯದಶಿ ಗೌಸ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೊರೋನಾ ಸೋಂಕು ಹರಡುವ ಭೀತಿ : ವೈಕುಂಠ ಏಕಾದಶಿ ಸಂಭ್ರಮ ಮೊಟಕು

   ಭದ್ರಾವತಿ, ಡಿ. ೨೪: ಹೊಸ ರೂಪಾಂತರಗೊಂಡಿರುವ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಹಿನ್ನಲೆಯಲ್ಲಿ ಈ ಬಾರಿ ನಗರದೆಲ್ಲೆಡೆ ಡಿ.೨೫ರಂದು ನಡೆಯಲಿರುವ ವೈಕುಂಠ ಏಕಾದಶಿ ಸಂಭ್ರಮ ಮೊಟಕುಗೊಳಿಸಲಾಗಿದೆ.
     ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರ ಭಕ್ತಾಧಿಗಳು ಆಕರ್ಷಕವಾದ ವೈಕುಂಠನಾಥನ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ದೇವಸ್ಥಾನದ ಹೊರಭಾಗದಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ವಿಶೇಷವಾಗಿ ಸಾವಿರಾರು ಭಕ್ತಾಧಿಗಳಿಗೆ ದೇವಸ್ಥಾನ ಪ್ರಸಾದ ಸಮಿತಿಯಿಂದ ಲಾಡು ವಿತರಣೆ ಮಾಡಲಾಗುತ್ತಿತ್ತು. ಅದ್ದೂರಿಯಾಗಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮಗಳಿಗೆ ಕಡಿವಾಣ ಹಾಕಲಾಗಿದೆ.
    ಕೊರೋನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಲವು ನಿರ್ಬಂಧಗಳೊಂದಿಗೆ ವೈಕುಂಠ ಏಕಾದಶಿ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ ಹೆಚ್ಚಿನ ಭಕ್ತಾಧಿಗಳು ಸೇರುವಂತಿಲ್ಲ. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸುವಂತಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸುವುದು. ದೇವಸ್ಥಾನದ ಆವರಣದಲ್ಲಿಯೇ ಉತ್ಸವ ನಡೆಸುವುದು ಸೇರಿದಂತೆ ಇತ್ಯಾದಿ ನಿರ್ಬಂಧಗಳನ್ನು ವಿಧಿಸಲಾಗಿದೆ.
     ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವೈಕುಂಠ ಏಕಾದಶಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಎಲ್ಲರೂ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಭಕ್ತಾಧಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
      ನಗರದ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಕಾಗದನಗರದಲ್ಲಿರುವ ೭ನೇ ವಾರ್ಡಿನಲ್ಲಿರುವ ಅರಳಿಕಟ್ಟೆ ದೇವಸ್ಥಾನ ಹಾಗು ಬಾರಂದೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ ಹಾಗು ದೊಡ್ಡಗೊಪ್ಪೇನ ಹಳ್ಳಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿ ವರ್ಷ ವೈಕುಂಠ ಏಕಾದರ್ಶಿ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ  ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಡಿ. ೨೪:  ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸರಳವಾಗಿ ನಡೆಯಿತು.
    ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾಸಂಸ್ಥೆಯ ಬಿ.ಇಡಿ ವಿಭಾಗದ ಪ್ರಾಂಶುಪಾಲರು, ಪ್ರಭಾರಿ ಆಡಳಿತಾಧಿಕಾರಿಗಳು,  ಸಹಾಯಕ ಆಡಳಿತಾಧಿಕಾರಿಗಳು, ಹಾಗೂ ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು, ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  
  ಕಾರ್ಯಕ್ರಮದಲ್ಲಿ ರೇಣುಕಪ್ಪ ನಿರೂಪಣೆ, ಆಶಾ ಪ್ರಾರ್ಥನೆ, ರವಿ ಸ್ವಾಗತ ಮತ್ತು ರೇವತಿ ವಂದನಾರ್ಪಣೆ ನೆರವೇರಿಸಿಕೊಟ್ಟರು.

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಕಡೆ ಪ್ರತಿಯೊಬ್ಬರು ಗಮನ ಹರಿಸಿ : ಕೆಎಲ್‌ಎಸ್ ರಾವ್

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಒಂದು ತಿಂಗಳವರೆಗೆ ನಡೆದ ಮಾಸಾಚರಣೆ


ಪರಿಸರ ಮಾಸಾಚರಣೆ ಅಂಗವಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿದರು.
    ಭದ್ರಾವತಿ, ಡಿ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನ.೧೯ ರಿಂದ ಒಂದು ತಿಂಗಳವರೆಗೆ ಪರಿಸರ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
    ಮಾಸಾಚರಣೆ ಅಂಗವಾಗಿ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ, ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು.  ಪ್ರತಿಯೊಂದು ವಿಭಾಗದಲ್ಲಿಯೂ ೩ ಮೊದಲ ಮಂದಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಪ್ರತಿದಿನದ ಚಟುವಟಿಕೆಗಳಲ್ಲಿ, ವಾಸಿಸುವ ಹಾಗು ಕೆಲಸ ಮಾಡುವ ಸ್ಥಳದ ಸುತ್ತಮುತ್ತ, ಪರಿಸರ ಕಾಳಜಿ ವಹಿಸಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯ. ಅಲ್ಲದೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದಾಗಿದೆ ಎಂದರು.  
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮಹಾಪ್ರಬಂಧಕ(ಈ.ಎಮ್.ಡಿ) ಡಿ. ಲೋಕೇಶ್ವರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ಉನ್ನಿಕೃಷ್ಣನ್ ಪ್ರಾಥಿಸಿದರು. ಆರ್. ಸತೀಶ್ ವಂದಿಸಿದರು.

Wednesday, December 23, 2020

ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ : ಡಾ. ಎಂ.ವಿ ಅಶೋಕ್

ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ಭದ್ರಾವತಿ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೨೨: ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ  ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ಕಾರ್ಯದರ್ಶಿ ಎಚ್.ಎನ್ ಯೋಗೇಶ್ ಕುಮಾರ್ ೨೯ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
     ಕಾರ್ಯಕ್ರಮದಲ್ಲಿ ಏರಿಯಾ-೧೦೭ರ ಅಧ್ಯಕ್ಷ ಡಿ.ಬಿ ವಿನಯ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ.ಎಸ್. ದುಗ್ಗೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್, ಮುಖಂಡರಾದ ಡಿ.ಟಿ ಶ್ರೀಧರ್, ಡಾ. ಸಾತ್ವಿಕ್, ಧರಣೇಂದ್ರ ದಿನಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮ ಚುನಾವಣೆ ಭದ್ರಾವತಿಯಲ್ಲಿ ಶೇ.೮೨ರಷ್ಟು ಮತದಾನ

ಕೋವಿಡ್ ನಿಯಮ ಪಾಲಿಸದ ಮತದಾರರು, ಮತದಾರರನ್ನು ಸೆಳೆಯಲು ಹಲವು ಅಮಿಷ, ಈ ಸಹ ಹಾಲಿ-ಮಾಜಿ ಶಾಸಕರ ಅಲೆ

ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
   ಭದ್ರಾವತಿ, ಡಿ. ೨೨: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಮತದಾನ ಕಾರ್ಯ ಬಹುತೇಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ೧೦೭೦ ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸುಮಾರು ಶೇ.೮೨ರಷ್ಟು ಮತದಾನ ನಡೆದಿದೆ.
  ಬೆಳಿಗ್ಗೆ ಮತದಾನ ಬಿರುಸಿನಿಂದ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.೫೦ರಷ್ಟು ಪ್ರಮಾಣಕ್ಕೆ ತಲುಪಿತ್ತು. ನಂತರ ಮಂದಗತಿಯಲ್ಲಿ ಸಾಗಿ ಪುನಃ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಅರಣ್ಯ ವ್ಯಾಪ್ತಿಯ ಅಂತರಗಂಗೆ, ಗುಡ್ಡದ ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಬಿಸಿಲುಮನೆ, ಬೆಳ್ಳಿಗೆರೆ, ಬದನೆಹಾಳು, ಉದಯಪುರ, ದೊಡ್ಡೇರಿ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದು ಗಮನ ಸೆಳೆದಿದೆ.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
   ಎರೇಹಳ್ಳಿ, ಮಾವಿನಕೆರೆ, ಬಾರಂದೂರು, ಕಾರೇಹಳ್ಳಿ, ಹಳ್ಳಿಕೆರೆ, ಹಿರಿಯೂರು, ಅರಳಿಕೊಪ್ಪ, ಕಲ್ಲಹಳ್ಳಿ, ಕಂಬದಾಳು ಹೊಸೂರು, ಸಿಂಗನಮನೆ, ತಾವರಘಟ್ಟ, ಬಿಳಕಿ, ದೊಣಬಘಟ್ಟ, ಗುಡಮಘಟ್ಟ, ತಡಸ, ಕಾಗೆಕೋಡಮಗ್ಗೆ, ಕಲ್ಲಹಳ್ಳಿ, ಕೂಡ್ಲಿಗೆರೆ, ಮಂಗೋಟೆ, ಮಾರಶೆಟ್ಟಿಹಳ್ಳಿ, ಮೈದೊಳಲು, ನಿಂಬೆಗೊಂದಿ, ಸೈದರಕಲ್ಲಹಳ್ಳಿ, ಯಡೇಹಳ್ಳಿ, ಸನ್ಯಾಸಿಕೋಡಮಗ್ಗೆ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮತದಾನ ಯಶಸ್ವಿಯಾಗಿ ನಡೆದಿದೆ.
     ಕೋವಿಡ್ ನಿಯಮ ಪಾಲಿಸದ ಮತದಾರರು:
  ಈ ಶತಮಾನದ ಮಹಾಮಾರಿ ಕೋವಿಡ್-೧೯ ಸೋಂಕು ಕಳೆದ ಸುಮಾರು ೧೦ ತಿಂಗಳಿನಿಂದ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುವ ಮೂಲಕ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಏರಿಕೆಯಾಗುವ ಜೊತೆಗೆ ಇದೀಗ ಹೊಸ ರೂಪಾಂತದಲ್ಲಿ ಪುನಃ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಕೋವಿಡ್-೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಚುನಾವಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಚುನಾವಣೆಯಲ್ಲಿ ನಿಯಮಗಳು ಕೇವಲ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಮೀಸಲಿರುವಂತೆ ಕಂಡು ಬಂದಿತು. ಅಭ್ಯರ್ಥಿಗಳು ಮತ್ತು ಮತದಾರರು ಮಾತ್ರ ಯಾವುದೇ ನಿಯಮ ಪಾಲನೆ ಮಾಡದೆ, ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡದೆ ಗುಂಪು ಸೇರಿರುವುದು ಕಂಡು ಬಂದಿತು. ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದರು.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆಗಳ ಬಳಿ ಕೋವಿಡ್-೧೯ರ ನಿಯಮ ಪಾಲನೆ ಮಾಡದೆ ಗುಂಪು ಸೇರಿರುವ ಮತದಾರರು.
       ಮತದಾರರನ್ನು ಸೆಳೆಯಲು ಹಲವು ಅಮಿಷಗಳು:
     ಗ್ರಾಮ ಪಂಚಾಯಿತಿ ಚುನಾವಣೆ ಸಹ ಯಾವುದೇ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ನಡೆದಿದ್ದು, ಈ ಬಾರಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಕಸರತ್ತು ನಡೆಸಿದ್ದು, ಕಳೆದ ೨ ದಿನಗಳಿಂದ ಮತದಾರರಿಗೆ ವಿವಿಧ ರೀತಿಯ ಅಮಿಷದೊಂದಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ವಿತರಣೆ, ಮತದಾನದಂದು ಮದ್ಯ, ಬಾಡೂಟ ವ್ಯವಸ್ಥೆ ಹಾಗು ಹಣದ ಹೊಳೆ ಹರಿಸಿರುವುದು ತಿಳಿದು ಬಂದಿದೆ.
     ಕೆಲವೆಡೆ ಅನುಕಂಪದ ಅಲೆ, ಕೆಲವೆಡೆ ಪ್ರತಿಷ್ಠೆಯ ಅಲೆ:
    ಮತದಾನ ಮುಕ್ತಾಯದ ನಂತರ ಸಮೀಕ್ಷೆಯಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಸಹ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿರುವುದು ಕಂಡುಬಂದಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೇಲಿನ ಅನುಕಂಪದ ಅಲೆ ಕಂಡು ಬಂದಿದೆ. ಕೆಲವು ಕಡೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆಯ ಅಲೆ ಇರುವುದು ಕಂಡು ಬಂದಿದೆ. ಉಳಿದಂತೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿನ ಸಾಧನೆ ಕಾಯ್ದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚು ಪ್ರಬಲವಾಗಿದ್ದು, ಈ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ೨ ಮತ್ತು ೩ನೇ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾನ ನಡೆಸಿದರು.


Monday, December 21, 2020

ನಗರ ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರಿಗೆ ಪೌರಾಯುಕ್ತ ಮನೋಹರ್ ಅಭಿನಂದನೆ

ಭದ್ರಾವತಿ ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
  ಭದ್ರಾವತಿ, ಡಿ. ೨೧: ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
   ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಹಿಂದುಳಿದ ವರ್ಗದಿಂದ ಹುತ್ತಾ ಕಾಲೋನಿ ನಿವಾಸಿ ಸತೀಶ್‌ಕುಮಾರ್, ಅಲ್ಪ ಸಂಖ್ಯಾತರ ವರ್ಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್‌ರಾಜ್ ಬಾಂಟಿಯಾ ಮತ್ತು ಪರಿಶಿಷ್ಟ ಜಾತಿ ವರ್ಗದಿಂದ ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದ ನಿವಾಸಿ ಗೌರಮ್ಮರವರು ನಾಮನಿರ್ದೇಶನಗೊಂಡಿದ್ದಾರೆ. ಈ ೪ ಸದಸ್ಯರನ್ನು ಪೌರಾಯುಕ್ತರು ಅಭಿನಂದಿಸುವ ಮೂಲಕ ಸಮಿತಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಜೊತೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
   ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಕೆ. ಮಂಜಪ್ಪ, ರಾಜು, ಸುನಿತಾ, ಸರಸ್ವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.