Friday, January 29, 2021

ವಿವಿಧ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಪರಿಶೀಲನಾ ಸಭೆ

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ, ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ

ನಗರದ ವಿವಿಧ ಇಲಾಖೆಗಳ ವಿವಿಧ ಅನುದಾನಗಳಡಿಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.
   ಭದ್ರಾವತಿ, ಜ. ೨೯: ನಗರದ ವಿವಿಧ ಇಲಾಖೆಗಳ ವಿವಿಧ ಅನುದಾನಗಳಡಿಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.
   ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರಿ ನಿವೇಶನಗಳ ಒಟ್ಟು ೨೩ ಎಕರೆ ಜಾಗವನ್ನು ಗುರುತಿಸಿ ಸರ್ವೆ ಮಾಡಿ ಗಡಿ ನಿಗದಿಪಡಿಸುವ ಸಂಬಂಧ ಕೈಗೊಂಡ ಕ್ರಮಗಳ ಕುರಿತು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ರವರು ಸಭೆಗೆ ಮಾಹಿತಿ ನೀಡಿ, ನಗರಸಭೆ ವ್ಯಾಪ್ತಿಯ ತಿಮ್ಲಾಪುರ, ಬೊಮ್ಮನಕಟ್ಟೆ ಮತ್ತು ಉಜ್ಜನಿಪುರದಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಈ ಬಾರಿ ಪೂರ್ಣ ಬಂದೋಬಸ್ತ್ ಮಾಡಿಕೊಂಡು ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಶಾಸಕರು,  ನಮಗೆ ಬೇಕಾಗಿರುವುದು ಕೇವಲ ೨೩ ಎಕರೆ ಖಾಲಿ ಜಾಗ ಮಾತ್ರ. ಈ ಸಂಬಂಧ ಸುಮಾರು ಒಂದು ವರ್ಷದಿಂದ ಖಾಲಿ ಇರುವ ಸರ್ಕಾರಿ ಜಾಗ ಗುರುತಿಸುವಂತೆ ತಾಲೂಕು ಆಡಳಿತಕ್ಕೆ ತಿಳಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆ ಸತ್ತು ಹೋಗಿರುವಂತೆ ಕಂಡು ಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಗೊತ್ತಾಗುತ್ತಿಲ್ಲ. ಮುಂದಿನ ಒಂದು ವಾರದೊಳಗೆ ಜಾಗವನ್ನು ಗುರುತಿಸಿ ಸರ್ವೆ ಮಾಡಿ ಗಡಿ ನಿಗದಿಪಡಿಸಿ ಕಂದಾಯ ಇಲಾಖೆ ಸ್ವತ್ತು ಎಂದು ಫಲಕ ಹಾಕುವಂತೆ ಎಚ್ಚರಿಸಿದರು.  
   ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ರಸ್ತೆ, ತಾಲೂಕು ಕಚೇರಿ ರಸ್ತೆ ಮತ್ತು ಹೊಸ ಸೇತುವೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಸೀಗೆಬಾಗಿಯಿಂದ ರಂಗಪ್ಪ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಬಿಳಕಿ ಕ್ರಾಸ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಮತ್ತು ಜಯಶ್ರೀ ಸರ್ಕಲ್ ರಸ್ತೆ ಮತ್ತು ವೇಲೂರು ಶೆಡ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಸಾರ್ವಜನಿಕರಿಂದ ಸಾಕಷ್ಟು ದೂರುಗಳಿಗೆ ಕೇಳಿ ಬರುತ್ತಿವೆ. ಜನರು ರಸ್ತೆ ಹಾಳಾಗಿರುವ ಸಂಬಂಧ ಪೌರಾಯುಕ್ತರನ್ನು ಪ್ರಶ್ನಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯವರು ಒಂದು ವರ್ಷ ಕಳೆದರೂ ಸಹ  ಒಂದು ಸಾಮಾನ್ಯ ಸೀಮೆಂಟ್ ರಸ್ತೆ ನಿರ್ಮಾಣ ಮಾಡಿಲ್ಲ. ಶಿವಾಜಿ ಸರ್ಕಲ್‌ನಿಂದ ಕಬಳಿಕಟ್ಟೆ ವರೆಗೆ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿತಲೆಗೊಳಿಸಿಲ್ಲ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಕೆಇಬಿ ಇಲಾಖೆ ಒಂದು ದರಿದ್ರ ಇಲಾಖೆಯಾಗಿದೆ. ವಿದ್ಯುತ್ ಬಿಲ್ ಕಟ್ಟಲಿಲ್ಲ ಎಂದರೆ ವಿದ್ಯುತ್ ಕಡಿತ ಮಾಡುತ್ತಾರೆ. ಆದರೆ ಅವರು ಮಾಡಬೇಕಾಗಿರುವ ಕೆಲಸ ಮಾತ್ರ ಸರಿಯಾಗಿ ಮಾಡುವುದಿಲ್ಲ. ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.  
    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಂಬಂಧಿಸಿದಂತೆ ಅಮೃತ್ ಯೋಜನೆಯಡಿ ಕೈಗೊಳ್ಳುತ್ತಿರುವ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳು ಹಾಗು ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಒಳಚರಂಡಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿಗೆ ಅಗತ್ಯವಿರುವ ಸೀಮೆಂಟ್, ಜಲ್ಲಿಕಲ್ಲು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಾಮಗಾರಿ ಸಮರ್ಪಕವಾಗಿ ನಡೆಸುವ ಮೂಲಕ ಶೀಘ್ರವಾಗಿ ಮುಕ್ತಾಯಗೊಳಿಸಬೇಕೆಂದರು.
     ಈ ನಡುವೆ ಶಾಸಕರು ಕೆಎಸ್‌ಆರ್‌ಟಿಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಗೆ ಹಣ ಮುಖ್ಯ ಅಲ್ಲ. ಜನರಿಗೆ ಸೇವೆ ಕೊಡುವುದು ಮುಖ್ಯ. ಆದಾಯ ಬರುವುದಿಲ್ಲ ಎಂದು ಅಗತ್ಯವಿರುವ ಕಡೆ ಬಸ್‌ಗಳನ್ನು ಬಿಡದಿರುವುದು ಸರಿಯಲ್ಲ. ಶಾಲೆಗಳು ಆರಂಭಗೊಂಡು ಹಲವು ದಿನಗಳು ಕಳೆದಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಪ್ರತಿಭಟನೆ ಮಾಡಿದ ನಂತರ ಇಲಾಖೆಗೆ ಜ್ಞಾನೋದಯವಾಗಿದೆ. ಇಲಾಖೆ ಅಧಿಕಾರಿಗಳು ಇದಕ್ಕೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಸಾರಿಗೆ ವ್ಯವಸ್ಥೆಯನ್ನು ಸೂಕ್ತ ರೀತಿ ಕಲ್ಪಿಸಿಕೊಡಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
     ಉಳಿದಂತೆ ನಗರಸಭೆವತಿಯಿಂದ ಕೈಗೊಳ್ಳಲಾಗುತ್ತಿರುವ ಕೆಎಂಆರಪಿ ಯೋಜನೆಯಡಿ ರು. ೨೧ ಕೋ. ಅನುದಾನದದ ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ, ನಗರದ ವಿವಿಧ ವೃತ್ತಗಳ ಅಭಿವೃದಧಿ, ನಗರಸಭೆ ಕಛೇರಿಯ ನೂತನ ಕಟ್ಟಡ, ಸ್ಟ್ರೀಟ್ ವೆಂಡಿಂಗ್ ಜೋನ್ ಕಾಮಗಾರಿ, ಮೀನು ಮಾರುಕಟ್ಟೆ ಅಭಿವೃದ್ಧಿ, ಬಸವೇಶ್ವರ ವೃತ್ತದ ಅಭಿವೃದ್ಧಿ, ನಗರೋತ್ಥಾನ ಹಂತ-೩ರ ಉಳಿಕೆ ಅನುದಾನದ ಕಾಮಗಾರಿಗಳು ಮತ್ತು ವಸತಿ ಯೋಜನೆಗಳ ಪ್ರಗತಿ ಹಾಗು ಕೆಆರ್‌ಐಡಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮತ್ತು ಮೆಸ್ಕಾಂ ನಗರ ಉಪ ವಿಭಾಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
     ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶರತ್ಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಂಗನವಾಡಿ ಕಟ್ಟಡಗಳ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ವಾಗ್ವಾದ

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವರ್ತನೆಗೆ ಸದಸ್ಯರ ಆಕ್ರೋಶ

ಭದ್ರಾವತಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಶುಕ್ರವಾರ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ದೇವಿ ಅಧ್ಯಕ್ಷತೆಯಲ್ಲಿ ನಡೆಯಿತು.
     ಭದ್ರಾವತಿ, ಜ. ೨೯: ತಾಲೂಕಿನಲ್ಲಿರುವ ಅಂಗನವಾಡಿ ಕಟ್ಟಡಗಳ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯಿತಿ ಸದಸ್ಯರು ವಾಗ್ವಾದಕ್ಕೆ ಇಳಿದ ಘಟನೆ ಶುಕ್ರವಾರ ನಡೆಯಿತು.
    ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌ರವರು ಇಲಾಖೆ ವರದಿ ಮಂಡಿಸಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಹೊಸದಾಗಿ ೨೬ ಅಂಗನವಾಡಿ ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು, ಪ್ರಗತಿ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯರಾದ ಪ್ರೇಮ್‌ಕುಮಾರ್, ಅಣ್ಣಾಮಲೈ, ತಿಪ್ಪೇಶ್‌ರಾವ್ ಸೇರಿದಂತೆ ಇನ್ನಿತರರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಸದಸ್ಯರ ಗಮನಕ್ಕೆ ತರುತ್ತಿಲ್ಲ. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಕೊಡಿಸಲು ಮಾತ್ರ ನಾವು ಬೇಕು. ಉಳಿದಂತೆ ನಮ್ಮನ್ನು ಕಾಮಗಾರಿ ಆರಂಭ ಮಾಡುವಾಗ, ಕಾಮಗಾರಿ ಪರಿಶೀಲನೆ ನಡೆಸುವಾಗ ಹಾಗು ಪೂರ್ಣಗೊಂಡಾಗ ಯಾವ ಮಾಹಿತಿಯನ್ನು ನೀಡದೆ ಕಡೆಗಣಿಸಲಾಗುತ್ತಿದೆ. ನಾವು ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಹಣ ಕೊಡಿ ಎಂದು ಕೇಳುತ್ತಿಲ್ಲ. ಇಲಾಖೆ ಅಧಿಕಾರಿಗಳು ನಮಗೆ ಕಾಮಗಾರಿ ಕುರಿತು ಮಾಹಿತಿ ನೀಡುವ ಜೊತೆಗೆ ಗೌರವದಿಂದ ವರ್ತಿಸಿ ಎಂದು ಕೇಳುತ್ತಿದ್ದೇವೆ. ಈ ಸಂಬಂಧ ಹಲವಾರು ಬಾರಿ ಸಭೆಯಲ್ಲಿ ಚರ್ಚಿಸಿದ್ದರೂ ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ಲಕ್ಷ್ಯ ಧೋರಣೆಯಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ನಡುವೆ ಸೂಕ್ತ ಉತ್ತರ ನೀಡದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಅಧ್ಯಕ್ಷರು ಸಹ ಅಸಮದಾನ ವ್ಯಕ್ತಪಡಿಸಿ, ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ. ಸಭೆಗೆ ಬಂದಿರುವುದು ವರದಿ ನೀಡುವುದಕ್ಕೆ ಹೊರತು ರಾಜಕಾರಣ ಮಾಡುವುದಕ್ಕಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ ಎಂದರು.
    ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರಾದ ಪ್ರೇಮ್‌ಕುಮಾರ್ ಮತ್ತು ಕೆ. ಮಂಜುನಾಥ್‌ರವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಶುಲ್ಕ ವಸೂಲಾತಿ ಮಾಡುತ್ತಿವೆ. ಪ್ರಸ್ತಕ್ತ ಸಾಲಿನ ಶೈಕ್ಷಣಿಕ ಶಿಕ್ಷಣ ಆರಂಭಗೊಂಡಿಲ್ಲ. ಈಗಾಗಲೇ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅಲ್ಲದೆ ಸರ್ಕಾರದ ಮಾರ್ಗಸೂಚಿಯಂತೆ ಯಾವ ಖಾಸಗಿ ಶಾಲೆಗಳು ಸಹ ಶುಲ್ಕ ವಸೂಲಿ ಮಾಡುತ್ತಿಲ್ಲ. ಅಲ್ಲದೆ ಶಿಲ್ಕ ಮಾಹಿತಿಯನ್ನು ಸರ್ಕಾರದ ಸುತ್ತೋಲೆಯಂತೆ ಪ್ರಕಟಣಾ ಫಲಕಗಳಲ್ಲಿ ಪ್ರದರ್ಶಿಸುತ್ತಿಲ್ಲ.  ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ತಕ್ಷಣ ಗಮನಹರಿಸುವಂತೆ ಆಗ್ರಹಿಸಿದರು.
     ಇದಕ್ಕೆ ಉತ್ತರಿಸಿದ ಟಿ.ಟನ್ ಸೋಮಶೇಖರಯ್ಯ, ಈಗಾಗಲೇ  ಸರ್ಕಾರದ ಸುತ್ತೋಲೆ ಖಾಸಗಿ ಶಾಲೆಗಳ ಗಮನಕ್ಕೆ ತರುವ ಮೂಲಕ ಎಚ್ಚರಿಸಲಾಗಿದೆ. ಉಳಿದಂತೆ ಮುಂದಿನ ೪ ದಿನಗಳಲ್ಲಿ ಎಲ್ಲಾ ಖಾಸಗಿ ಶಾಲೆಗಳು ಶುಲ್ಕ ಮಾಹಿತಿಗೆ ಕುರಿತಂತೆ ಫಲಕಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗುವುದು ಎಂದರು.
   ಇದೆ ಸಂದರ್ಭದಲ್ಲಿ ದೇವರನರಸೀಪುರ ಮುರಾರ್ಜಿದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಬಸವರಾಜಪ್ಪ ಮಾಹಿತಿ ನೀಡಿ, ವಸತಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಶಾಲೆಗಳನ್ನು ಆರಂಭಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು. ಇದೆ ಸಂದರ್ಭದಲ್ಲಿ ಆರ್‌ಎಎಫ್ ಸಿಬ್ಬಂದಿಗಳಿಗೆ ವಸತಿ ಶಾಲೆಯಲ್ಲಿ ಸುಮಾರು ೧ ವರ್ಷದ ವರೆಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ಸಂಬಂಧ ಅಧ್ಯಕ್ಷೆ ಲಕ್ಷ್ಮೀದೇವಿ ತೀವ್ರ ಅಸಮಧಾನ ವ್ಯಕ್ತಪಡಿಸಿ ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಆತಂಕ ವ್ಯಕ್ತಪಡಿಸಿದರು.
    ಇದಕ್ಕೆ ಉತ್ತರಿಸಿದ ಬಸವರಾಜಪ್ಪ, ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದಂತೆ ಆರ್‌ಎಎಫ್ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಉಳಿದು ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
    ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಮಾಹಿತಿ ನೀಡಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರು.
   ಇದೆ ರೀತಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾಬಾಯಿ, ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು.

Thursday, January 28, 2021

ಬನದ ಹುಣ್ಣಿಮೆ ಪ್ರಯುಕ್ತ ಹೋಮ-ಪೂಜೆ

ಭದ್ರಾವತಿ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
   ಭದ್ರಾವತಿ, ಜ. ೨೮: ನಗರದ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
    ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಗಣಪತಿ ಹೋಮ, ದುರ್ಗಾಹೋಮ ಹಾಗೂ ಕಳಾಹೋಮ ಏರ್ಪಡಿಸಲಾಗಿತ್ತು. ಪೂರ್ಣಾಹುತಿಯ ನಂತರ ಮಹಾಮಂಗಳಾರತಿ ಮತ್ತು ಮಹಾಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ರಾಜಬೀದಿ ಉತ್ಸವ ಏರ್ಪಡಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
      ತಾಲೂಕು ಕಚೇರಿ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲೂ ಸಹ ದೇವಿಗೆ  ಅಭಿಷೇಕ, ವಿಶೇಷಪೂಜೆ ಏರ್ಪಡಿಸಲಾಗಿತ್ತು. ನೂರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.


ಭದ್ರಾವತಿ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

ಯಲ್ಲಮ್ಮ ದೇವಿಗೆ ೧ ಕೆ.ಜಿ ತೂಕದ ಬೆಳ್ಳಿ ಮುಖವಾಡ ಸಮರ್ಪಣೆ

ಭದ್ರಾವತಿ ಹಳೇನಗರದ ದೊಡ್ಡಕುರುಬರಬೀದಿಯಲ್ಲಿ (ರೇಣುಕಮ್ಮ ಕಾಂಪೌಂಡ್) ಮಾಲಾ ಜೋಗಮ್ಮ ರವರು ಲೋಕ ಕಲ್ಯಾಣಾರ್ಥವಾಗಿ ಪ್ರತಿಷ್ಠಾಪಿಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಸುಮಾರು ೧ ಕೆ.ಜಿ ತೂಕದ ಬೆಳ್ಳಿ ಮುಖವಾಡ ಸಮರ್ಪಿಸಿರುವುದು.
     ಭದ್ರಾವತಿ, ಜ. ೨೮ : ಹಳೇನಗರದ ದೊಡ್ಡಕುರುಬರಬೀದಿಯಲ್ಲಿ (ರೇಣುಕಮ್ಮ ಕಾಂಪೌಂಡ್) ಮಾಲಾ ಜೋಗಮ್ಮ ರವರು ಲೋಕ ಕಲ್ಯಾಣಾರ್ಥವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯನ್ನು ಅನೇಕ ವರ್ಷಗಳಿಂದ ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರುತ್ತಿದ್ದು,
     ಭಕ್ತರ ಕೋರಿಕೆಯಂತೆ ಶ್ರೀ ಯಲ್ಲಮ್ಮ ದೇವಿಗೆ ಸುಮಾರು ೧ ಕೆ.ಜಿ ತೂಕದ ಬೆಳ್ಳಿಯ ನೂತನ ಮುಖವಾಡವನ್ನು ಬನದ ಹುಣ್ಣಿಮೆಯಂದು ಗುರುವಾರ ಸಮರ್ಪಿಸಿದರು.  
    ಕಾರ್ಯಕ್ರಮದ ಅಂಗವಾಗಿ ಮಂಗಳವಾದ್ಯದೊಂದಿಗೆ ಭದ್ರಾನದಿಯಿಂದ ಗಂಗೆಪೂಜೆಯೊಂದಿಗೆ ಉತ್ಸವ ನಡೆಸಲಾಯಿತು .
    ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಯಸ್ಸಿಗೆ ಸಹಕರಿಸಿದ ಭಕ್ತರಿಗೆ ಮಾಲಾ ಜೋಗಮ್ಮ ಕೃತಜ್ಞತೆ ಸಲ್ಲಿಸಿದರು.

೧೭ ದಿನಗಳ ಹೋರಾಟಕ್ಕೆ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರ

ಅಂಬೇಡ್ಕರ್ ಭವನ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಭರವಸೆ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಸುಮಾರು ೧೭ ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಸಂಸದ ಬಿ.ವೈ ರಾಘವೇಂದ್ರ ಗುರುವಾರ ಸ್ಪಂದಿಸಿದರು.
    ಭದ್ರಾವತಿ, ಜ. ೨೮: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಸುಮಾರು ೧೭ ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಸಂಸದ ಬಿ.ವೈ ರಾಘವೇಂದ್ರ ಸ್ಪಂದಿಸಿದ್ದಾರೆ.  
    ಸಮಿತಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ೫.೫೦ ಕೋ. ರು. ಬಿಡುಗಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಾರ್ಯಕ್ರಮ ನಿಮಿತ್ತ ಗುರುವಾರ ನಗರಕ್ಕೆ ಆಗಮಿಸಿದ್ದ ಸಂಸದರು ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಮಿತಿಗೆ ನೀಡಿದರು.
    ಸಮಿತಿ ವತಿಯಿಂದ ಸಂಸದರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಮುಖರಾದ ಆರ್. ಬಸವರಾಜ್, ಐ.ಎಲ್ ಅರುಣ್‌ಕುಮಾರ್, ಎಂ.ವಿ ಚಂದ್ರಶೇಖರ್, ಸುಬ್ಬೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ : ಜಾಗೃತಿ ಜಾಥಾ

೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಭದ್ರಾವತಿಯಲ್ಲಿ ಸಂಚಾರಿ ಪೊಲೀಸ್ ಸಹಯೋಗದೊಂದಿಗೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
   ಭದ್ರಾವತಿ, ಜ. ೨೮: ೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ನಗರದ ಸಂಚಾರಿ ಪೊಲೀಸ್ ಸಹಯೋಗದೊಂದಿಗೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
    ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಸಿ.ಎನ್ ರಸ್ತೆ ರಂಗಪ್ಪವೃತ್ತದ ವರೆಗೆ ಜಾಥಾ ನಡೆಯಿತು. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.
ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
    ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎನ್ ಗಿರೀಶ್, ಜೋನಲ್ ಲೆಫ್ಟಿನೆಂಟ್ ಕೆ. ನಾಗರಾಜ್, ಸುಂದರ್ ಬಾಬು, ತೀರ್ಥಯ್ಯ, ರಾಘವೇಂದ್ರ ಉಪಾಧ್ಯಾಯ, ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಬಿಜೆಪಿ ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಸಂಚಾರಿ ಠಾಣಾಧಿಕಾರಿ ಕವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೂರು ಪುಟಾಣಿ ಮಕ್ಕಳಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾಣಿಕೆ ಹುಂಡಿ ಸಮರ್ಪಣೆ

ಭದ್ರಾವತಿ, ಜ. ೨೮: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಗರದ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
     ಹೊಸಮನೆ ನಿವಾಸಿಗಳಾದ ಗಿರೀಶ್ ಪುಟ್ಟೇಗೌಡ ಹಾಗೂ ಮೋಹನ್ ಪುಟ್ಟೆಗೌಡರ ಮಕ್ಕಳಾದ ಶಿಖರ್, ಕೌಶಿಕ್ ಮತ್ತು ದಿಗಂತ್ ಅಯೋಧ್ಯೆ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿರುವ ಮಾಹಿತಿ ಅರಿತು ಪ್ರತಿದಿನ ಕಾಣಿಕೆ ಹುಂಡಿಯಲ್ಲಿ ಹಣ ಸಂಗ್ರಹಿಸಿದ್ದರು. ಒಟ್ಟು ೩,೦೧೦ ರು. ಹಣ ನೀಡುವ ಗಮನ ಸೆಳೆದಿದ್ದಾರೆ.
   ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಮುಖರಾದ ರಾಮನಾಥ್ ಬರ್ಗೆ, ಸುಬ್ರಮಣ್ಯ, ಸುನಿಲ್‌ಗಾಯಕ್‌ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭದ್ರಾವತಿ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.