ಭದ್ರಾವತಿ, ಫೆ. ೮: ಸುರಗಿತೋಪಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಮುನೇಶ್ವರ ಸ್ವಾಮಿಯ ೫೧ನೇ ವರ್ಷದ ೨ ದಿನಗಳ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು.
ಬೆಳಿಗ್ಗೆ ನಾಗರಕಟ್ಟೆಯಿಂದ ದೇವಸ್ಥಾನಕ್ಕೆ ಗಂಗೆ ತರುವ ಕಾರ್ಯಕ್ರಮ ಜರುಗಿತು. ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ ಹಾಗು ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಫೆ.೯ರಂದು ಬೆಳಿಗ್ಗೆ ಪೊಲೀಸ್ ಉಮೇಶ್‌ರವರಿಂದ ಆ ದಿನದ ಪೂಜೆಗೆ ಚಾಲನೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎಂ. ಪ್ರಭಾಕರ್, ಜಿ. ಧರ್ಮಪ್ರಸಾದ್, ಎನ್. ಗೋಕುಲ್ ಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಮಧ್ಯಾಹ್ನ ೧ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಭದ್ರಾವತಿ ಸುರಗಿತೋಪಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಮುನೇಶ್ವರ ಸ್ವಾಮಿಯ ೫೧ನೇ ವರ್ಷದ ೨ ದಿನಗಳ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು.