Monday, March 15, 2021

ಭೂ ಸೇನೆಗೆ ಉಚಿತ ದೈಹಿಕ, ಲಿಖಿತ ಪರೀಕ್ಷೆ ತರಬೇತಿ ಮುಕ್ತಾಯ

ಪೊಲೀಸ್ ಉಮೇಶ್ ನೇತೃತ್ವದಲ್ಲಿ ಯುವಕರಿಂದ ಗುರುವಂದನೆ

ಭದ್ರಾವತಿಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಮೂಲಕ ತರಬೇತಿದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಮಾ. ೧೫: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಸಲ್ಲಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು.
 ಹಲವಾರು ವರ್ಷಗಳಿಂದ ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಹ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ತರಬೇತಿ ನಡೆಯಿತು. ನಗರ ಹಾಗು ಗ್ರಾಮಾಂತರ ಭಾಗದ ಸುಮಾರು ೪೨ ಯುವಕರು ಪ್ರತಿದಿನ ಬೆಳಿಗ್ಗೆ ತರಬೇತಿಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
    ತರಬೇತಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ತರಬೇತುದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಗುರುವಂದನೆ ಮೂಲಕ ಕೃತಜ್ಞತೆ ಸಲ್ಲಿಸಿದರು.
   ಈ ಸಂದರ್ಭದಲ್ಲಿ ತರಬೇತಿ ಪಡೆದ ಯುವಕರು ಮಾತನಾಡಿ, ಭೂ ಸೇನೆಗೆ ಸೇರಲು ತರಬೇತಿ ಪಡೆಯಲು ದೂರದ ಊರುಗಳಿಗೆ ತೆರಳಬೇಕಾಗುತ್ತದೆ. ಅಲ್ಲದೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯೇ ಉಚಿತ ತರಬೇತಿ ನೀಡುತ್ತಿರುವುದರಿಂದ  ಹೆಚ್ಚಿನ ಅನುಕೂಲವಾಗಿದೆ. ಅಲ್ಲದೆ ತರಬೇತಿ ಅವಧಿಯಲ್ಲಿ ತರಬೇತಿದಾರರು ಹಾಗು ಆಯೋಜಕರ ಹೆಚ್ಚಿನ ಕಾಳಜಿ ಹಾಗು ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
   ಈ ಬಾರಿ ತರಬೇತಿ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಯುವಕರಿಗೆ ಸ್ಪೂರ್ತಿದಾಯಕರಾಗಿರುವ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಮಾತನಾಡಿ, ಯುವಕರು ತಮ್ಮ ಗುರಿ ತಲುಪಿದಾಗ ಮಾತ್ರ ತರಬೇತಿ ಸಾರ್ಥಕಗೊಳ್ಳುತ್ತದೆ. ಸೇನಾ ರ್‍ಯಾಲಿಯಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು. ಇದು ನಮ್ಮ ಆಶಯವಾಗಿದ್ದು, ಮುಂದಿನ ದಿನಗಳಲ್ಲಿ ತರಬೇತಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
   ಸಂಘದ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟಗಿರಿ, ಬೋರೇಗೌಡ, ಅಹಮದ್, ಗೋವಿಂದಪ್ಪ, ಹಿರಿಯ ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಮಾಜಿ ಸೈನಿಕರ ಸಂಘ ಹಾಗು ಸ್ನೇಹಿ ಜೀವಿ ಬಳಗದ ಪ್ರಮುಖರು ಉಪಸ್ಥಿತರಿದ್ದರು.

ಮಾ.೧೬ರಂದು ಮಹಿಳಾ ದಿನಾಚರಣೆ ಅಂಗವಾಗಿ ಯಕ್ಷಗಾನ ಪ್ರದರ್ಶನ

    ಭದ್ರಾವತಿ, ಮಾ. ೧೫: ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಮಾ.೧೬ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಪ್ಪರ್‌ಹುತ್ತಾ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲಾ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
    ಡಾ. ಶಿವಕುಮಾರ್ ಬೇಗಾರ್ ನಿರ್ದೇಶನದ ಮೋಹಿನಿ ಭಸ್ಮಾಸುರ ಪ್ರಸಂಗ ನಡೆಯಲಿದ್ದು, ಅಲ್ಲದೆ ಸಾಧಕರಿಗೆ ಸನ್ಮಾನ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಕನ್ನಡ ಅಂಕೋಲ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಹಾಗು ಜಾನಪದ ಕಲಾವಿದ ತುಳಸಿಗೌಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು ಆಗ್ರಹ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮಾ. ೧೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಿಸುವುದು ಅಥವಾ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗದಿಪಡಿಸುವುದು. ೨೦೧೫ರ ನಂತರ ನಿವೃತ್ತಿ ಹೊಂದಿದ ಸುಮಾರು ೭೨೯೪ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು ಹಾಗು ಕನಿಷ್ಠ ೫ ಸಾವಿರ ರು. ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸುವುದು.
   ಇಎಸ್‌ಐ ಸೌಲಭ್ಯ ಕಲ್ಪಿಸುವುದು. ಕಾರ್ಯಕರ್ತೆಯರಿಗೆ ತರಬೇತಿ ಹಾಗು ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಹಾಗು ಯುಕೆಜಿ ಪ್ರಾರಂಭಿಸುವುದು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸುವುದು ಹಾಗು ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಹಾಗು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಗೌರವಧನದಲ್ಲಿ ತಾರತಮ್ಯವಿಲ್ಲದಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
  ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಈಗಾಗಲೇ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಈ ಬಾರಿ ಬಜೆಟ್‌ನಲ್ಲಿ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಬಿಡಿಗಾಸು ಸಹ ನೀಡಿಲ್ಲ. ಈ ಹಿನ್ನಲೆಯಲ್ಲಿ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.  
   ಫೆಡರೇಷನ್ ತಾಲೂಕು ಅಧ್ಯಕ್ಷೆ ಸುಶೀಲಬಾಯಿ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್. ಭಾಗ್ಯಮಣಿ, ರಾಜ್ಯ ಸಮಿತಿ ಮುಖಂಡರಾದ ಕೆ.ಸಿ ವಿಶಾಲಾ, ಜಿ.ಕೆ ಸುಲೋಚನ ಹಾಗು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ಆರ್. ವೇದಾವತಿ ಸೇರಿದಂತೆ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ಬಜೆಟ್‌ನಲ್ಲಿ ಅನುದಾನವಿಲ್ಲ : ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ

ಅನುದಾನ ಬಿಡುಗಡೆಗೆ ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹ

ಈ ಬಾರಿ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಯಾವುದೇ ಅನುದಾನ ಮೀಸಲಿಡದ ಕಾರಣ ಮುಚ್ಚುವ ಹಂತಕ್ಕೆ ತಲುಪಿವೆ. ಈ ಹಿನ್ನಲೆಯಲ್ಲಿ ತಕ್ಷಣ ಅನುದಾನ ಬಿಡುಗಡೆಗೊಳಿಸುವ ಮೂಲಕ ಬಡವರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸೋಮವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.

   ಭದ್ರಾವತಿ, ಮಾ. ೧೫: ಈ ಬಾರಿ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಯಾವುದೇ ಅನುದಾನ ಮೀಸಲಿಡದ ಕಾರಣ ಮುಚ್ಚುವ ಹಂತಕ್ಕೆ ತಲುಪಿವೆ. ಈ ಹಿನ್ನಲೆಯಲ್ಲಿ ತಕ್ಷಣ ಅನುದಾನ ಬಿಡುಗಡೆಗೊಳಿಸುವ ಮೂಲಕ ಬಡವರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.
   ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಗತಿಕರು, ಕಡುಬಡವರು, ಕೂಲಿಕಾರ್ಮಿಕರು, ಶ್ರರ್ಮಿಕ ವರ್ಗದವರ ಬಗ್ಗೆ ಕಾಳಜಿವಹಿಸಿ ಅತಿ ಕಡಿಮೆ ಬೆಲೆಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಆರಂಭಿಸಿದ್ದರು. ಈ ಯೋಜನೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದ್ದು, ಪ್ರಸ್ತುತ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಡದಿರುವುದು ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ತಲುಪುವಂತಾಗಿವೆ ಎಂದು ಆತಂಕ ವ್ಯಕ್ತಪಡಿಸಲಾಯಿತು.
   ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಇಂದಿನ ಸರ್ಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಕೊರೊನಾ ವೈರಸ್ ಪರಿಣಾಮದಿಂದಾಗಿ ಕಳೆದ ಸುಮಾರು ೧ ವರ್ಷದಿಂದ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಬಡವರ ಸ್ಥಿತಿ ತೀರ ಹದಗೆಟ್ಟಿದೆ. ಕೆಲಸವಿಲ್ಲದೆ, ಯಾವುದೇ ಆರ್ಥಿಕ ವಹಿವಾಟುಇಲ್ಲವೆ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ ತಕ್ಷಣ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಯಿತು.
   ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌವರಾಧ್ಯಕ್ಷ ಮುಕುಂದಪ್ಪ, ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ, ತಾಲೂಕು ಕಾರ್ಯಾಧ್ಯಕ್ಷ ಮೊಹಮದ್ ಶಫಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಪ್ರಾನ್ಸಿಸ್, ಪ್ರಸನ್ನಕುಮಾರ್, ಕಾಂತರಾಜ್, ಎಚ್.ಎಂ ಮಹಾದೇವಯ್ಯ, ಸತೀಶ್, ಅಕ್ಬರ್ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ವಿಧಾನಸಭಾ ಕ್ಷೇತ್ರದ ಗೂಂಡಾಗಿರಿ ಮೆಟ್ಟಿನಿಲ್ಲಲು ಬಿಜೆಪಿ ಸಿದ್ದವಿದೆ : ಬಿ.ವೈ ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿಜಯೇಂದ್ರರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಮಾ. ೧೫: ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಮೆಟ್ಟಿನಿಲ್ಲಲು ಭಾರತೀಯ ಜನತಾ ಪಕ್ಷ ಎಲ್ಲಾ ರೀತಿಯಿಂದಲೂ ಸಿದ್ದವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
    ಅವರು ಸೋಮವಾರ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
    ಯಾವುದೇ ಕಬಡ್ಡಿ ಪಂದ್ಯಾವಳಿಯಲ್ಲಿ ಈ ರೀತಿಯ ಘಟನೆ ಎಲ್ಲೂ ಸಹ ನಡೆದಿಲ್ಲ. ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ನಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿರುವುದು ಶಿವಮೊಗ್ಗ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಎಂಬುದನ್ನು ಯಾರು ಮರೆಯುವಂತಿಲ್ಲ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಇಂತಹ ಅನೇಕ ಸವಾಲುಗಳನ್ನು ಮೀರಿ ಇಂದು ಜಿಲ್ಲೆಯಲ್ಲಿ ಪಕ್ಷದ ಭಾವುಟ ಎತ್ತರಕ್ಕೇರಿದೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು. ಯಾರ ದಬ್ಬಾಳಿಕೆಗೂ ಯಾರು ಸಹ ಹೆದರುವ ಅಗತ್ಯವಿಲ್ಲ. ಪಕ್ಷ ಎಂದೆಂದಿಗೂ ಕಾರ್ಯಕರ್ತರೊಂದಿಗಿದೆ ಎಂದರು.
   ಬೆಳಿಗ್ಗೆ ನಗರಕ್ಕೆ ಆಗಮಿಸಿದ ವಿಜಯೇಂದ್ರ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಎಂ ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಜಿ. ಆನಂದಕುಮಾರ್, ಕೆ. ಮಂಜುನಾಥ್, ಚನ್ನೇಶ್, ರಾಮನಾಥ್ ಬರ್ಗೆ, ಧನುಷ್ ಬೋಸ್ಲೆ, ನಾರಾಯಣಪ್ಪ ದೊಡ್ಮನೆ, ಎಂ.ಎಸ್ ಸುರೇಶಪ್ಪ, ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸಿತರಿದ್ದರು.

Sunday, March 14, 2021

ಹಿರಿಯ ಕ್ರೀಡಾಪಟು ಬಿ. ನಂಜೇಗೌಡಗೆ ೨ ಚಿನ್ನ, ೧ ಬೆಳ್ಳಿ ಪದಕ

೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ೮೦, ೩೦೦ ಮೀಟರ್ ಹರ್ಡಲ್ಸ್‌ನಲ್ಲಿ ಸಾಧನೆ


ಭದ್ರಾವತಿ ಹೊಸಮನೆ ನಿವಾಸಿ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್, ಹಿರಿಯ ಕ್ರೀಡಾಪಟು ಬಿ. ನಂಜೇಗೌಡ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ೩ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
   ಭದ್ರಾವತಿ, ಮಾ. ೧೪: ನಗರದ ಹೊಸಮನೆ ನಿವಾಸಿ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್, ಹಿರಿಯ ಕ್ರೀಡಾಪಟು ಬಿ. ನಂಜೇಗೌಡ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ೩ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ೭೦ ವರ್ಷ ಮೇಲ್ಪಟ್ಟವರ ವಿಭಾಗದ ೩೦೦ ಮೀಟರ್ ಹಾಗು ೮೦ ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಬಹುಮಾನದೊಂದಿಗೆ ೨ ಚಿನ್ನದ ಪದಕ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಬಹುಮಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
   ೭೩ರ ವಯೋಮಾನದ ಬಿ. ನಂಜೇಗೌಡ, ಇದುವರೆಗೂ ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗು ತೃತೀಯ ಸೇರಿದಂತೆ ಒಟ್ಟು ೨೦ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆಯನ್ನು ನಗರದ ಗಣ್ಯರು, ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
   ಭದ್ರಾವತಿ, ಮಾ. ೧೪: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
    ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಆರೋಗ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನೀಲೇಶ್‌ರಾಜ್‌ರವರು ಕೊರೋನಾ ಆರಂಭಗೊಂಡಾಗಿನಿಂದಲೂ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
    ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಜಿಲ್ಲಾಧ್ಯಕ್ಷ ಮಾ.ಸ. ನಂಜುಂಡಸ್ವಾಮಿ ಹಾಗೂ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.