Thursday, May 13, 2021

ಹಸಿದವರ ಸಂಕಷ್ಟಕ್ಕೆ ಸ್ಪಂದಿಸಿದ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್

ಭದ್ರಾವತಿಯಲ್ಲಿ ಗುರುವಾರ ನಗರಸಭೆ ೧೨ನೇ ವಾರ್ಡ್ ನಿವಾಸಿಗಳಿಗೆ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು.
     ಭದ್ರಾವತಿ, ಮೇ. ೧೩: ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಗುರುವಾರ ನಗರಸಭೆ ವಾರ್ಡ್ ನಂ. ೧೨ರಲ್ಲಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಅಲ್ಲದೆ ವಾರ್ಡ್‌ನ ಪ್ರತಿಯೊಂದು ಮನೆಗೂ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು. ವಾರ್ಡ್ ಪ್ರಮುಖರಾದ ಗಿರೀಶ್, ನವೀನ್, ಪ್ರಕಾಶ್, ಅಶೋಕ್, ಚರಣ್, ರಘು, ಆಕಾಶ್, ಸುನಿಲ್, ಕಿಶೋರ್ ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
   ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲೂ ಸುದೀಪ್‌ಕುಮಾರ್ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಒಂದೇ ದಿನ ೨೭೭ ಮಂದಿಗೆ ಸೋಂಕು : ೪ ಮಂದಿ ಬಲಿ

೧೦೦ ಹಾಸಿಗೆಯುಳ್ಳ ಆರೈಕೆ ಕೇಂದ್ರ ಮೇ.೧೪ ರಿಂದ ಕಾರ್ಯಾರಂಭ


ಕಳೆದ ೪ ದಿನಗಳ ಹಿಂದೆ ಭದ್ರಾವತಿ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ
   ಭದ್ರಾವತಿ, ಮೇ. ೧೩: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ೪ ದಿನ ಕಳೆದಿದ್ದು, ಈ ನಡುವೆ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ ೨೭೭ ಸೋಂಕು ಪತ್ತೆಯಾಗಿದೆ.
   ಸೋಂಕಿನ ಪ್ರಮಾಣ ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ೪ ದಿನಗಳಿಂದ ಏರಿಕೆ ಹಂತದಲ್ಲಿಯೇ ಸಾಗುತ್ತಿದೆ. ಒಟ್ಟು ೩೩೮ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೭೭ ಸೋಂಕು ದೃಢಪಟ್ಟಿದೆ. ಈ ನಡುವೆ ೭೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ೪ ಜನ ಬಲಿಯಾಗಿದ್ದಾರೆ.
   ಇದುವರೆಗೂ ಒಟ್ಟು ೫೮ ಮಂದಿ ಮೃತಪಟ್ಟಿದ್ದು, ೨೮೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.
       ಆರೈಕೆ ಕೇಂದ್ರ ಖಾಲಿ:
    ಕಳೆದ ೪ ದಿನಗಳ ಹಿಂದೆ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ. ಪ್ರಸ್ತುತ ವಿಐಎಸ್‌ಎಲ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ೧೨ ಮಂದಿ ಇದ್ದು, ಇವರನ್ನು ಶುಕ್ರವಾರ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದ್ದಾರೆ.

ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಜರ್ ಸಿಂಪಡಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು.
    ಭದ್ರಾವತಿ, ಮೇ. ೧೩: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಕ್ಕಪ್ಪನ ಕ್ಯಾಂಪ್, ಅಟಗಾರಿ ಕ್ಯಾಂಪ್, ಕಲ್ಪನಹಳ್ಳಿ, ಹಳೇ ಕೂಡ್ಲಿಗೆರೆ, ಕೂಡ್ಲಿಗೆರೆ ಹಾಗು ಕೋಡಿಹಳ್ಳಿ ಒಟ್ಟು ೬ ಗ್ರಾಮಗಳಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲಕ್ ವೀರಪ್ಪನ್, ಸದಸ್ಯರಾದ ಎಂ. ಜಯಣ್ಣ, ಆರ್.ಎನ್ ರುದ್ರೇಶ್, ಸಿ. ವಿಶ್ವನಾಥ್, ಗೌರಮ್ಮ ಮಹಾದೇವ, ಉಮಾದೇವಿ ತಿಪ್ಪೇಶ್, ಸಿದ್ದಮ್ಮ ನಾಗೇಶ್, ಮುಖಂಡರಾದ ಕೂಡ್ಲಿಗೆರೆ ಎಸ್ ಮಹಾದೇವ, ಎಸ್‌ಡಿಎಂಸಿ ಅಧ್ಯಕ್ಷ ವೀರಪ್ಪನ್, ಆಶಾ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, May 12, 2021

ಕೊರೋನಾ ಸಂಕಷ್ಟ : ವಿವಿಧ ಸೇವಾ ಸಂಸ್ಥೆಗಳಿಂದ ಹಸಿದವರಿಗೆ ಅನ್ನ

ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭದ್ರಾವತಿಯಲ್ಲಿ ಬುಧವಾರದಿಂದ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
   ಭದ್ರಾವತಿ, ಮೇ. ೧೨: ಸೆಮಿ ಲಾಕ್‌ಡೌನ್ ನಡುವೆ ಹಸಿವಿನಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಸ್ವಯಂ ಪ್ರೇರಣೆಯಿಂದ ವಿವಿಧ ಸಂಘ-ಸಂಸ್ಥೆಗಳು ಮುಂದೆ ಬರುತ್ತಿದ್ದು, ಇದರಿಂದಾಗಿ ಹಸಿವಿನಿಂದ ಬಳಲುತ್ತಿರುವ ಬಹಳಷ್ಟು ಮಂದಿ ನಿಟ್ಟುಸಿರು ಬಿಡುವಂತಾಗಿದೆ.
   ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಒಕ್ಕೂಟದ ರಾಜ್ಯಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಹಾಗು ಉಪಾಧ್ಯಕ್ಷ ಫಾಸ್ಟರ್ ದೇವನೇಸಂರವರ ಮಾರ್ಗದರ್ಶನದಲ್ಲಿ ಬುಧವಾರದಿಂದ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಕ್ಕೂಟದ ಸದಸ್ಯರೆಲ್ಲರೂ ಒಗ್ಗೂಡಿ ತಮ್ಮ ಸ್ವಂತ ಹಣದಲ್ಲಿ ಈ ಕಾರ್ಯ ಕೈಗೊಂಡಿದ್ದು, ಪ್ರತಿದಿನ ೧೦೦ ಮಂದಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.
     ಒಕ್ಕೂಟದ ತಾಲೂಕು ಪ್ರಮುಖರಾದ ಸೆಲ್ವರಾಜ್( ಗೌರಿ ಗ್ಯಾಸ್), ವಿಲ್ಸನ್ ಬಾಬು, ಡಾರ್ವಿನ್, ಪಿ.ಸಿ ರಾಜ (ದಾಸ್) ಮತ್ತು ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
     ತಿರುಮಲ ಫಿಶ್ ಟ್ರಸ್ಟ್ :
   ಹಸಿದವರ ಸಂಕಷ್ಟಕ್ಕೆ ತಿರುಮಲ ಫಿಶ್ ಟ್ರಸ್ಟ್ ಸ್ಪಂದಿಸಿದ್ದು, ೩ ದಿನಗಳಿಂದ  ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಿಂಗ್ ಪಾನಿಪುರಿ ಮತ್ತು ಚಾಟ್ಸ್(ಲಕ್ಷ್ಮಣ), ಮೀನುಗಾರರ ಬೀದಿ ಮತ್ತು ಸಂಜಯ್ ಕಾಲೋನಿ ಯುವಕರು ಈ ಸೇವಾ ಕಾರ್ಯದಲ್ಲಿ ಮುಂದಾಗಿದ್ದಾರೆ.


ಭದ್ರಾವತಿಯಲ್ಲಿ ಹಸಿದವರ ಸಂಕಷ್ಟಕ್ಕೆ ತಿರುಮಲ ಫಿಶ್ ಟ್ರಸ್ಟ್ ಸ್ಪಂದಿಸಿದ್ದು, ೩ ದಿನಗಳಿಂದ  ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ

ಒಂದೇ ದಿನ ೧೬೨ ಸೋಂಕು ಪತ್ತೆ, ೪ ಮಂದಿ ಬಲಿ

    ಭದ್ರಾವತಿ, ಮೇ. ೧೨: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ೩ ದಿನ ಕಳೆದಿದ್ದು, ಈ ನಡುವೆ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳು ಕಾಣುತ್ತಿಲ್ಲ. ಗುರುವಾರ ಒಂದೇ ದಿನ ೧೬೨ ಪ್ರಕರಣಗಳು ಪತ್ತೆಯಾಗಿವೆ.
    ಒಟ್ಟು ೨೭೫ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೬೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ೬೬ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ೪ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
   ಸೋಂಕಿಗೆ ಒಳಗಾಗಿರುವ ೩೪೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.

ಇಂದಿರಾ ಕ್ಯಾಂಟಿನ್‌ನಲ್ಲಿ ಮೇ.೧೩ರಿಂದ ಬಡವರಿಗೆ ಉಚಿತ ಆಹಾರ ವಿತರಣೆ

ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟಿನ್‌ನಲ್ಲಿ ಗುರುವಾರದಿಂದ ಬಡವರಿಗೆ ಉಚಿತ ಆಹಾರ ವಿತರಣೆ ನಡೆಯಲಿದೆ.
    ಭದ್ರಾವತಿ, ಮೇ. ೧೨: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಬಡವರಿಗೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಆಹಾರ ವಿತರಿಸುವಂತೆ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಗುರುವಾರದಿಂದ ನಗರದಲ್ಲಿ ಉಚಿತ ಆಹಾರ ವಿತರಣೆಗೆ ಸಿದ್ದತೆ ನಡೆಸಿಕೊಳ್ಳಲಾಗಿದೆ.
     ಇದೀಗ ಪ್ರತಿದಿನ ೫೦೦ ಮಂದಿಗೆ ಸಾಕಾಗುವಷ್ಟು ಆಹಾರ ವಿತರಿಸಲಾಗುತ್ತಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಹಾಗು ರಾತ್ರಿ ಊಟ ಲಭ್ಯವಾಗುತ್ತಿದೆ. ಪ್ರತಿ ದಿನ ನೂರಾರು ಮಂದಿ ಬಡವರ್ಗದವರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನಗರದ ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಹಾಗು ವಾರ್ಡ್ ನಂ.೧೨ ಹೊಸಮನೆ ಸಂತೆ ಮೈದಾನದಲ್ಲಿ ಒಟ್ಟು ಎರಡು ಕಡೆ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ.
    ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನೂತನ ಪೌರಾಯುಕ್ತ ಕೆ. ಪರಮೇಶ್ ಕ್ಯಾಂಟಿನ್‌ಗೆ ಬರುವ ಎಲ್ಲರಿಗೂ ಉಚಿತ ಆಹಾರ ವಿತರಿಸುವಂತೆ ಸೂಚಿಸಿದ್ದಾರೆ.

ನೂತನ ಪೌರಾಯುಕ್ತರಾಗಿ ಪರಮೇಶ್ ಅಧಿಕಾರ ಸ್ವೀಕಾರ



ಭದ್ರಾವತಿ ನೂತನ ಪೌರಾಯುಕ್ತ ಪರಮೇಶ್ ಅವರನ್ನು ಪಕ್ಷೇತರ ಸದಸ್ಯ ಮೋಹನ್‌ಕುಮಾರ್ ಅಭಿನಂದಿಸಿದರು.
   ಭದ್ರಾವತಿ, ಮೇ. ೧೨: ಕಳೆದ ೨ ದಿನಗಳ ಹಿಂದೆ ನಗರಸಭೆ ನೂತನ ಪೌರಾಯುಕ್ತರಾಗಿ ಪರಮೇಶ್ ಅಧಿಕಾರ ವಹಿಸಿಕೊಂಡರು.
   ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಹರ್ ಅವರು ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ  ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರಸಭೆ ಪೌರಾಯುಕ್ತರಾಗಿ ಸೇವೆ  ಸಲ್ಲಿಸುತ್ತಿದ್ದ ಪರಮೇಶ್ ಅವರನ್ನು ನೇಮಕಗೊಳಿಸಲಾಗಿದೆ.
ಪರಮೇಶ್ ಅವರು ಕರ್ನಾಟಕ ಪೌರಾಡಳಿತ ಸೇವೆ(ಕೆಎಂಎಎಸ್) ಅಧಿಕಾರಿಯಾಗಿದ್ದು, ಪುರಸಭೆ ಮುಖ್ಯಾಧಿಕಾರಿಯಾಗಿ, ತದ ನಂತರ ಚಿಕ್ಕಮಗಳೂರು, ಕೊಪ್ಪಳ ಹಾಗು ಹೊಸಕೋಟೆ ನಗರಸಭೆ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
          ಪೌರಾಯುಕ್ತರಿಗೆ ಅಭಿನಂದನೆ:
  ನೂತನ ಪೌರಾಯುಕ್ತ ಪರಮೇಶ್ ಅವರನ್ನು ನಗರಸಭೆ ನೂತನ ಪಕ್ಷೇತರ ಸದಸ್ಯ ಮೋಹನ್‌ಕುಮಾರ್ ಅಭಿನಂದಿಸಿದರು. ವಾರ್ಡ್ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇತ್ತೀಚೆಗೆ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಹಾಗು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು, ಉಳಿದಂತೆ ಓರ್ವ ಪಕ್ಷೇತರ ಸದಸ್ಯ ಆಯ್ಕೆಯಾಗಿದ್ದಾರೆ. ಇನ್ನೂ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ.