ಭದ್ರಾವತಿಯಲ್ಲಿ ಜೀವಾಮೃತ ಚಾರಿಟಬಲ್ ಟ್ರಸ್ಟ್ ಕೈಗೊಂಡಿರುವ ೧೧ನೇ ದಿನದ ಸೇವಾ ಕಾರ್ಯದಲ್ಲಿ ಟೊಮೊಟೋ ಬಾತ್ ಹಾಗು ಮೈಸೂರು ಪಾಕ್ ತಯಾರಿಸಿ ಹಸಿವಿನಿಂದ ಸಂಕಷ್ಟದಲ್ಲಿ ಬಳಲುತ್ತಿರುವವರಿಗೆ ವಿತರಿಸಲಾಯಿತು.
ಭದ್ರಾವತಿ, ಮೇ. ೧೪: ಸೆಮಿ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿ ಹಸಿವಿನಿಂದ ಬಳಲುತ್ತಿರುವವರ ನೆರವಿಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಮುಂದಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕೆಲವು ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ನೆರವಿಗೆ ಮುಂದಾಗಿವೆ. ಇನ್ನೂ ಕೆಲವು ತಮಗೆ ಸಾಧ್ಯವಿರುವಷ್ಟು ಮಟ್ಟಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಒಟ್ಟಾರೆ ಎಲ್ಲಾ ಸಂಘಟನೆಗಳು ಮಾನವೀಯ ನೆಲೆಯಲ್ಲಿ ಸೇವಾ ಕಾರ್ಯಕ್ಕೆ ಮುಂದಾಗಿವೆ.
೧೧ನೇ ದಿನ ಪೂರೈಸಿದ ಜೀವಾಮೃತ ಚಾರಿಟಬಲ್ ಟ್ರಸ್ಟ್:
ಜೀವಾಮೃತ ಚಾರಿಟಬಲ್ ಟ್ರಸ್ಟ್ ಕೈಗೊಂಡಿರುವ ೧೧ನೇ ದಿನದ ಸೇವಾ ಕಾರ್ಯಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯನವರ ಹುಟ್ಟುಹಬ್ಬ ಹಾಗು ಶ್ರೀ ಜಗಜ್ಯೊತಿ ಬಸವೇಶ್ವರರ ಜನ್ಮದಿನಾಚರಣೆ ಅಂಗವಾಗಿ ಒಂದು ದಿನದ ನೆರವು ನೀಡಲಾಯಿತು.
ಶುಕ್ರವಾರ ವಿಶೇಷವಾಗಿ ಟೊಮೊಟೋ ಬಾತ್ ಮತ್ತು ಮೈಸೂರ್ ಪಾಕ್ ತಯಾರಿಸಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ, ಅಸಹಾಯಕರಿಗೆ, ಭಿಕ್ಷುಕರಿಗೆ, ಜೊತೆಗೆ ಕೊರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಿಂದಿಗಳಿಗೆ, ಕೊರೋನಾ ಸೋಂಕಿಗೆ ಒಳಗಾಗಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ವಿತರಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭದ್ರಾವತಿಯಲ್ಲಿ ಹಿರಿಯ ಉಪಾಧ್ಯಕ್ಷ ಫಾಸ್ಟರ್ ದೇವನೇಸಂರವರ ಮಾರ್ಗದರ್ಶನದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಶುಕ್ರವಾರ ೩ನೇ ದಿನ ಯಶಸ್ವಿಯಾಗಿ ಪೂರೈಸಿತು.
೩ನೇ ದಿನದ ಸೇವಾ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ-ಸಂಸ್ಥೆಗಳ ಒಕ್ಕೂಟ:
ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಹಿರಿಯ ಉಪಾಧ್ಯಕ್ಷ ಫಾಸ್ಟರ್ ದೇವನೇಸಂರವರ ಮಾರ್ಗದರ್ಶನದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಶುಕ್ರವಾರ ೩ನೇ ದಿನ ಯಶಸ್ವಿಯಾಗಿ ಪೂರೈಸಿದೆ.
ಸೆಲ್ವರಾಜ್, ಎಂ.ಜಿ ರಾಮಚಂದ್ರನ್, ವಿಲ್ಸನ್ ಬಾಬು, ಡಾರ್ವಿನ್, ದಾಸ್, ಹಬಕ್ಕೂರ್, ಪ್ರೇಮ್, ಅನಿಲ್, ಭಾಸ್ಕರ್ ಮತ್ತು ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರತಿ ದಿನ ಸುಮಾರು ೧೦೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ವಿತರಿಸಲಾಗುತ್ತಿದೆ.
ಭದ್ರಾವತಿ ನಗರಸಭೆ ೧೨ನೇ ವಾರ್ಡ್ ನಿವಾಸಿಗಳಿಗೆ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು.
ಸಂಕಷ್ಟಕ್ಕೆ ಸ್ಪಂದಿಸಿದ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್:
ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಗುರುವಾರ ನಗರಸಭೆ ವಾರ್ಡ್ ನಂ. ೧೨ರಲ್ಲಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟೈಜರ್ ಸಿಂಪಡಿಸಲಾಯಿತು.
ಅಲ್ಲದೆ ವಾರ್ಡ್‌ನ ಪ್ರತಿಯೊಂದು ಮನೆಗೂ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು. ವಾರ್ಡ್ ಪ್ರಮುಖರಾದ ಗಿರೀಶ್, ನವೀನ್, ಪ್ರಕಾಶ್, ಅಶೋಕ್, ಚರಣ್, ರಘು, ಆಕಾಶ್, ಸುನಿಲ್, ಕಿಶೋರ್ ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲೂ ಸುದೀಪ್‌ಕುಮಾರ್ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಿದ್ದಪಡಿಸಿದ ಆಹಾರ ಖರೀದಿಸಿ ಬಡವರಿಗೆ ವಿತರಣೆ:
ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ, ಬಿಜೆಪಿ ಕಾರ್ಯಕರ್ತ ಭರತ್‌ರಾವ್ ಹಾಗು ಸ್ನೇಹಿತರು ಕಳೆದ ಕೆಲವು ದಿನಗಳಿಂದ ಉಜ್ಜನಿಪುರ, ಆನೇಕೊಪ್ಪ ಹಾಗು ಕಾಗದನಗರ ವ್ಯಾಪ್ತಿಯಲ್ಲಿ ದೀನದಲಿತರು, ನಿರ್ಗತಿಕರು, ಅಸಹಾಯಕರು, ಭಿಕ್ಷುಕರಿಗೆ ಸಿದ್ದಪಡಿಸಿದ ಆಹಾರ ವಿತರಿಸಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಸುಮಾರು ೨೦೦ ಮಂದಿಗೆ ಸಾಕಾಗುವಷ್ಟು ಸಿದ್ದಪಡಿಸಿದ ಆಹಾರ ಖರೀದಿಸಿ ಸಂಕಷ್ಟಕ್ಕೆ ವಿತರಿಸಲಾಗುತ್ತಿದೆ. ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲಿ ಹಸಿದವರ ಸಂಕಷ್ಟಕ್ಕೆ ಈ ತಂಡ ಸ್ಪಂದಿಸಿತ್ತು.