ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಕೋವಿಡ್ ಸಂಬಂಧಿಗಳ ಅನುಕೂಲಕ್ಕಾಗಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ತೆರೆಯಲಾಗಿರುವ ತಂಗುದಾಣ ಹಾಗು ಕೋವಿಡ್ ಸುರಕ್ಷಾ ಪಡೆ ಮತ್ತು ಕೋವಿಡ್ ಸೋಂಕಿತರ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
ಭದ್ರಾವತಿ, ಮೇ. ೨೨: ಇಂದು ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಜನರಿಗೆ ಕೊರೋನಾ ಹರಡದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಕಾರ್ಯಪ್ರವೃತ್ತವಾಗಿದ್ದು, ಜಾಗೃತಿ ಮೂಡಿಸುವುದೇ ದೇಶ ಸೇವೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ಶನಿವಾರ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಕೋವಿಡ್ ಸಂಬಂಧಿಗಳ ಅನುಕೂಲಕ್ಕಾಗಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ತೆರೆಯಲಾಗಿರುವ ತಂಗುದಾಣ ಹಾಗು ಕೋವಿಡ್ ಸುರಕ್ಷಾ ಪಡೆ ಮತ್ತು ಕೋವಿಡ್ ಸೋಂಕಿತರ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಜಾಗೃತಿ ಎಂಬುದರ ಅರ್ಥವೇ ಕಳೆದುಹೋಗಿದೆ. ನಾನು, ನನ್ನ ಕುಟುಂಬದವರು, ನನ್ನ ಅಕ್ಕಪಕ್ಕದವರು ಮತ್ತು ನನ್ನ ಸಮಾಜ ಕೊರೋನಾದಿಂದ ಮುಕ್ತವಾಗಬೇಕೆಂಬ ಜಾಗೃತ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಆಗ ಮಾತ್ರ ಕೊರೋನಾ ನಿರ್ಮೂಲನೆ ಸಾಧ್ಯ ಎಂದರು.
ಕೊರೋನಾ ಹರಡದಂತೆ ಎಚ್ಚರವಹಿಸುವುದು, ಒಂದು ವೇಳೆ ಕೊರೋನಾ ಕಾಣಿಸಿಕೊಂಡಲ್ಲಿ ಅನುಸರಿಸಬೇಕಾದ ಕ್ರಮಗಳು, ಸೋಂಕಿತರಿಗೆ ಹಾಗು ಅವರ ಕುಟುಂಬಸ್ಥರಿಗೆ ನೆರವಾಗುವ ಬಗೆ ಎಲ್ಲವನ್ನು ಅರಿತು ತಾಲೂಕು ಬಿಜೆಪಿ ಮಂಡಲ ಸೇವಾ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ:
ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ೪ ದಿನಗಳ ಹಿಂದೆ ನಡೆಸಿದ ಸಭೆಯ ಫಲವಾಗಿ ತಾಲೂಕು ಆಡಳಿತ ಹಾಗು ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸೋಂಕಿನ ಪ್ರಕರಣಗಳು ಕಡಿಮೆಯಾಗುವವರೆಗೂ ಇದೆ ರೀತಿ ಬಿಗಿಯಾದ ಕ್ರಮ ಅನುಸರಿಸಬೇಕೆಂದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಇಂತಹ ಸಂಕಷ್ಟ ಸಮಯದಲ್ಲೂ ಜನಪ್ರತಿನಿಧಿಗಳು ಮನೆಯಲ್ಲಿರದೆ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರುಗಳು ಸಹ ತಮ್ಮ ಕೈಲಾದ ಸೇವೆಯನ್ನು ಕೈಗೊಳ್ಳುತ್ತಿದ್ದಾರೆ. ಸೇವಾ ಕಾರ್ಯದಲ್ಲಿ ಬಿಜೆಪಿ ತಾಲೂಕು ಮಂಡಲ ಇಂದು ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಜರಂಗದಳ ಕಾರ್ಯಕರ್ತರ ಸೇವೆಗೆ ಮೆಚ್ಚುಗೆ :
ಇಲ್ಲಿನ ಬಜರಂಗದಳ ಕಾರ್ಯಕರ್ತರು ವಿಶೇಷವಾಗಿ ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ವಾಹನವೊಂದನ್ನು ಬಾಡಿಗೆಗೆ ಪಡೆದು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದುವರೆಗೂ ಕೊರೋನಾ ಸೋಂಕಿನಿಂದ ಹಾಗು ಇನ್ನಿತರ ಕಾರಣಗಳಿಂದ ಮೃತಪಟ್ಟ ಸುಮಾರು ೧೮ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇವರ ಕಾರ್ಯಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಇವರು ಸಹ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಬ್ಲಾಕ್ ಪಂಗಸ್ ಆತಂಕ:
ವಿಷಾದಕರ ಸಂಗತಿ ಎಂದರೆ ಕೊರೋನಾ ನಿರ್ಮೂಲನೆಗಾಗಿ ನಡೆಸುವ ಹೋರಾಟಗಳ ನಡುವೆ ಇದೀಗ ಬ್ಲಾಕ್ ಫಂಗಸ್ ಎಂಬ ಕಾಯಿಲೆ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕಾಯಿಲೆ ಜಿಲ್ಲೆಯಲ್ಲೂ ಕಂಡು ಬಂದಿದ್ದು, ಇದಕ್ಕೆ ರೋಗಿಯ ತೂಕದ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗಿರುತ್ತದೆ. ಇದಕ್ಕೆ ಲಕ್ಷಾಂತರ ರು. ವ್ಯಯವಾಗಲಿದೆ. ಈ ರೋಗಕ್ಕೆ ಒಳಗಾದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಸೇವಾಕಾರ್ಯಕ್ಕೆ ನೆರವಾಗಿರುವ ಜೈನ್ ಸಮಾಜದ ಮುಖಂಡ ಅಶೋಕ್ ಜೈನ್ ಹಾಗು ಹೊಳೆಹೊನ್ನೂರಿನ ರಾಜಾರಾವ್ ಅವರನ್ನು ಸಚಿವ ಕೆ.ಎಸ್ ಈಶ್ವರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ಅಭಿನಂದಿಸಿದರು.
ಪ್ರಮುಖರಾದ ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಶ್ರೀನಾಥ್, ಸೂಡಾ ಸದಸ್ಯ ವಿ.ಕದಿರೇಶ್, ಎಸ್. ದತ್ತಾತ್ರಿ, ಎಂ. ಮಂಜುನಾಥ್, ರಾಜು ರೇವಣ್‌ಕರ್, ನಾರಾಯಣಪ್ಪ, ಅರಳಿಹಳ್ಳಿ ಪ್ರಕಾಶ್, ಚನ್ನೇಶ್, ಶಶಿಕಲಾ, ಅನುಪಮಾ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.