ಗುಣಮಟ್ಟ ಸಹ ಕಳಪೆ, ಸ್ಥಳೀಯರಿಂದ ದೂರು
ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಚರಂಡಿ ಕಾಮಗಾರಿ ಕೈಗೊಂಡಿರುವುದು.
ಭದ್ರಾವತಿ, ಮೇ. ೨೦: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಹಾಗು ಕಳಪೆ ಗುಣಮಟ್ಟದಿಂದ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಾರ್ಡ್ ನಂ.೨೮ರ ಎಂ.ಎಂ ರಸ್ತೆ ಜಯಶ್ರೀ ವೃತ್ತದಿಂದ ವಾರ್ಡ್ ೨೯ರ ಮಲ್ಲೇಶ್ವರ ಸಭಾಭವನದವರೆಗೂ ಮುಖ್ಯರಸ್ತೆಯಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಸಕರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಸಾಕಷ್ಟು ಲೋಪದೋಷ ವೆಸಗಿರುವುದು ಬೆಳಕಿಗೆ ಬಂದಿದೆ.
ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ನಿಂತುಕೊಳ್ಳಲಿದೆ. ಮತ್ತೊಂದೆಡೆ ಒಂದು ವೇಳೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ನಿರ್ಮಾಣಗೊಂಡಿರುವ ಚರಂಡಿಯನ್ನು ಒಡೆಯಬೇಕಾಗುತ್ತದೆ. ಇದರಿಂದ ಕಾಮಗಾರಿ ಪುನಃ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ ಸಾರ್ವಜನಿಕ ಹಣ ಪೋಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಚರಂಡಿ ಕಾಮಗಾರಿ ಗುಣಮಟ್ಟ ಸಹ ಕಳಪೆಯಿಂದ ಕೂಡಿದ್ದು, ಸಾಕಷ್ಟು ಲೋಪದೋಷಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಾರ್ಡ್ ನಂ.೨೮ರ ನೂತನ ನಗರಸಭಾ ಸದಸ್ಯ ಕಾಂತರಾಜ್ ಪತ್ರಿಕೆಯೊಂದಿಗೆ ಮಾತನಾಡಿ, ಕಾಮಗಾರಿಯಲ್ಲಿ ಲೋಪದೋಷಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಕಾಮಗಾರಿ ನಡೆಯುವಾಗ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿತ್ತು. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳು ಸಾಧ್ಯವಾಗಲಿಲ್ಲ. ಕಳೆದ ೨ ತಿಂಗಳಿನಿಂದ ಗುತ್ತಿಗೆ ಕಾಮಗಾರಿ ಸ್ಥಗಿತಗೊಳಿಸಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
No comments:
Post a Comment