ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಮೇ. ೨೦: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಎಂಬುದೇ ಗೊತ್ತಿಲ್ಲ. ಕೊರೋನಾ ಸಂಕಷ್ಟದಲ್ಲಿಯೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರ ಹಣ ಲೂಟಿ ಹೊಡೆಯುತ್ತಿದೆ. ಇಂತಹ ಸರ್ಕಾರ ಜನರಿಗೆ ಅಗತ್ಯವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಏನೋ ಆಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ಜನ ಮತವನ್ನು ಕೊಟ್ಟರು. ಆದರೆ ಇದುವರೆಗೂ ಏನು ಆಗಿಲ್ಲ. ದೇಶದಲ್ಲಿ ೭೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಎಲ್ಲವನ್ನು ನೀಡಿದೆ. ಬಡವರು, ದೀನದಲಿತರು, ಕಟ್ಟಡ ಕಾರ್ಮಿಕರ ಪರವಾಗಿ ಸ್ಪಂದಿಸಿದೆ. ಮಲ್ಲಿಕಾರ್ಜುನಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹಲವಾರು ಬದಲಾವಣೆಗಳನ್ನು ತಂದು ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಇದೀಗ ಬಿಜೆಪಿ ಸರ್ಕಾರ ಬಂದ ಮೇಲೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವಿನಾಕಾರಣ ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಾರ್ಮಿಕರಿಗೆ ಕೇವಲ ೨,೦೦೦ ರು. ಪರಿಹಾರ ಘೋಷಣೆ ಮಾಡಿರುವುದು ಸರಿಯಲ್ಲ. ಕನಿಷ್ಠ ೧೦,೦೦೦ ರು. ಪರಿಹಾರ ನೀಡಬೇಕು. ಈ ಸಂಬಂಧ ಈಗಾಗಲೇ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯನವರು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದ್ದು, ಅಲ್ಲದೆ ಬಿಪಿಎಲ್ ಪಡಿತರ ಕುಟುಂಬಗಳಿಗೂ ೧೦,೦೦೦ ರು. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲ :
ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರತಿ ದಿನ ಸಾವಿರಾರು ಮಂದಿ ಸೋಂಕಿಗೆ ಒಳಗಾಗಿ ನರಳುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಪ್ರತಿ ದಿನ ೨೦ ರಿಂದ ೩೦ ಜನ ಸಾಯುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಪ್ರಭಾವಿ ನಾಯಕರುಗಳಿದ್ದರೂ ಸಹ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ನೂತನ ನಗರಸಭಾ ಸದಸ್ಯರಾದ ಕೆ. ಸುದೀಪ್‌ಕುಮಾರ್, ಜಾರ್ಜ್ ಹಾಗು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment