ಗುರುವಾರ, ಮೇ 27, 2021

ಭದ್ರಾವತಿ ಪುನಃ ೨ ದಿನ ಮೇ.೨೯, ೩೦ರಂದು ಸಂಪೂರ್ಣ ಲಾಕ್‌ಡೌನ್

ಭದ್ರಾವತಿ, ಮೇ. ೨೭: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇನ್ನೂ ಇಳಿಮುಖವಾಗದ ಹಿನ್ನಲೆಯಲ್ಲಿ ಪುನಃ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
     ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರು ಮೇ.೨೯ ಮತ್ತು ೩೦ ಶನಿವಾರ ಹಾಗು ಭಾನುವಾರ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿ ಆದೇಶಿಸಿದ್ದಾರೆ. ಹಾಲು ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಅಲ್ಲದೆ ಸಾರ್ವಜನಿಕರು ವಿನಾಕಾರಣ ತಿರುಗಾಡುವಂತಿಲ್ಲ. ಸಂಪೂರ್ಣ ಲಾಕ್‌ಡೌನ್‌ಗೆ ಎಲ್ಲರೂ ಸಹಕಾರ ನೀಡುವಂತೆ ಕೋರಲಾಗಿದೆ.

ವಿವಿಧ ಸೇವಾ ಸಂಸ್ಥೆಗಳಿಂದ ಸಂಕಷ್ಟದಲ್ಲಿರುವವರಿಗೆ ನೆರವು


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಕೋವಿಡ್ ಚಿಕಿತ್ಸೆ ಪಡೆಯುವವರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರುತಿ ಇಕೊ ಮೊಬೈಲ್ ವ್ಯಾನ್ ಉಚಿತ ಸೇವೆಗಾಗಿ ಮೀಸಲಿಡಲಾಗಿದೆ.
    ಭದ್ರಾವತಿ, ಮೇ. ೨೭: ತಾಲೂಕಿನಲ್ಲಿ ಕೊರೋನಾ ಸೋಂಕು ೨ನೇ ಅಲೆ  ಭೀತಿ ನಡುವೆಯೂ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ದಾನಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿವೆ.
       ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು :
     ಸೇವೆಯಲ್ಲಿ ಭಗವಂತನನ್ನು ಕಾಣಬೇಕೆಂಬ ಮನೋಭಾವನೆಯೊಂದಿಗೆ ನಿರಂತರವಾಗಿ ಹಲವಾರು ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸೇವಾ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿವೆ.
      ಮೇ.೪ ರಿಂದ ಕೊರೋನಾ ಸಂದಭದಲ್ಲಿನ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಕೋವಿಡ್ ಚಿಕಿತ್ಸೆ ಪಡೆಯುವವರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರುತಿ ಇಕೊ ಮೊಬೈಲ್ ವ್ಯಾನ್ ಉಚಿತ ಸೇವೆಗಾಗಿ ಮೀಸಲಿಡಲಾಗಿದೆ. ಮೇ.೭ರಿಂದ ಪ್ರತಿದಿನ ಸುಮಾರು ೧೫೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ಹಸಿವಿನಿಂದ ಬಳಲುತ್ತಿರುವವರಿಗೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವಿತರಿಸಲಾಗುತ್ತಿದೆ. ಜೊತೆಗೆ ಭಿಕ್ಷುಕರು, ನಿರ್ಗತಿಕರು, ಅಸಹಾಯಕರಿಗೆ ಊಟದ ಜೊತೆ ಬಟ್ಟೆ ಸಹ ವಿತರಿಸಲಾಗುತ್ತಿದೆ. ಇವೆಲ್ಲದರ ಜೊತೆಗೆ ಸೋಂಕಿನಿಂದ ಗುಣಮುಖರಾಗಿರುವವರಿಗೆ ಒಂದು ಆಕ್ಸಿಜನ್ ಕಾನ್ಸನ್‌ಟ್ರೇಟರ್ ಮೀಸಲಾಗಿದ್ದು, ಸಂಸ್ಥೆಯ ಭಕ್ತರು ಹಾಗು ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲಾ ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.



ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಭಿಕ್ಷುಕರು, ನಿರ್ಗತಿಕರು, ಅಸಹಾಯಕರಿಗೆ ಸಿದ್ದಪಡಿಸಿದ ಆಹಾರದ ಜೊತೆಗೆ ಬಟ್ಟೆ ಸಹ ವಿತರಿಸುತ್ತಿರುವುದು.

     ಸಂಸ್ಥೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊ: ೯೮೪೪೨೩೮೫೮೬ ಅಥವಾ ಮೊ: ೯೧೪೧೬೪೨೪೩೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ನಗರದಲ್ಲಿ ಸೇವಾ ಕಾರ್ಯಗಳು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯನವರ ನೇತೃತ್ವದಲ್ಲಿ ನಡೆಯುತ್ತಿವೆ. ಈಗಾಗಲೇ ಸಂಸ್ಥೆಯ ಅನೇಕ ಭಕ್ತರು ಸ್ವಯಂ ಪ್ರೇರಣೆಯಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
    ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೆರವು:
   ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.
    ತಾಲೂಕಿನಲ್ಲಿ ಒಟ್ಟು ಸುಮಾರು ೪೦೦೦ ಕಟ್ಟಡ ಕಾರ್ಮಿಕರಿದ್ದು, ಈ ಪೈಕಿ ಬಹುತೇಕ ಮಂದಿ ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ. ಇಂತಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ನಗರದ ವಿವಿಧೆಡೆ ನೆಲೆಸಿರುವ ಕಟ್ಟಡ ಕಾರ್ಮಿಕರಿಗೆ ಆಯಾ ಭಾಗದಲ್ಲಿಯೇ ದಿನ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಇದುವರೆಗೂ ಸುಮಾರು ೫೦೦ ರಿಂದ ೬೦೦ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇನ್ನೂ ಸುಮಾರು ೧೦೦೦ ಮಂದಿಗೆ ವಿತರಿಸಬೇಕಾಗಿದೆ.
    ಗುರುವಾರ ಭಂಡಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ನಗರಸಭೆ ಮಾಜಿ ಸದಸ್ಯ ಗಂಗಾಧರ್, ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷಣ್, ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಮನೋಹರ್, ಶೇಖರ್, ಪೇಂಟಿಂಗ್ ಸಂಘದ ಅಧ್ಯಕ್ಷ ಶಿವಣ್ಣ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ನಾಗೇಶ್, ಗುರು, ಅಂತೋಣಿ ಕ್ರೂಸ್, ನಾರಾಯಣ ಸ್ವಾಮಿ, ಅಭಿಲಾಷ್, ಮಂಜುನಾಥ್, ಸುಬ್ರಮಣ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ಭಂಡಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಭದ್ರಾವತಿಯಲ್ಲಿ ೧೦೭ ಸೋಂಕು ಪತ್ತೆ : ೪ ಮಂದಿ ಬಲಿ

    ಭದ್ರಾವತಿ, ಮೇ. ೨೭: ತಾಲೂಕಿನಲ್ಲಿ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಇನ್ನೂ ನೂರರ ಗಡಿಯಾಚೆಯಲ್ಲಿದ್ದು, ಗುರುವಾರ ಒಟ್ಟು ೧೦೭ ಸೋಂಕು ಪತ್ತೆಯಾಗಿದೆ.
   ಒಟ್ಟು ೪೪೮ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೧೦೭ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೭೬ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಈ ೪ ಮಂದಿ ಬಲಿಯಾಗಿದ್ದಾರೆ. ಇದುವರೆಗೂ ೧೦೮ ಮಂದಿ ಮೃತಪಟ್ಟಿದ್ದು, ೪೦೧ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ನಗರ ಭಾಗದಲ್ಲಿ ಒಟ್ಟು ೬೦ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨೬ ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ಒಟ್ಟು ೨೯ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.

ನೂತನ ಬಿಪಿಎಲ್ ಸಂಘ ಅಸ್ತಿತ್ವಕ್ಕೆ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಮುಂಭಾಗ ನೂತನವಾಗಿ ಬಿ.ಪಿ.ಎಲ್ ಸಂಘ(ಭದ್ರಾವತಿ ಪ್ರಜಾ ವಿಮೋಚನೆ) ಅಸ್ತಿತ್ವಕ್ಕೆ ಬಂದಿದ್ದು, ಗುರುವಾರ ಸಂಘದ ಕಛೇರಿ ಉದ್ಘಾಟಿಸಲಾಯಿತು.

    ಭದ್ರಾವತಿ, ಮೇ. ೨೭: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಮುಂಭಾಗ ನೂತನವಾಗಿ ಬಿ.ಪಿ.ಎಲ್ ಸಂಘ(ಭದ್ರಾವತಿ ಪ್ರಜಾ ವಿಮೋಚನೆ) ಅಸ್ತಿತ್ವಕ್ಕೆ ಬಂದಿದ್ದು, ಗುರುವಾರ ಸಂಘದ ಕಛೇರಿ ಉದ್ಘಾಟಿಸಲಾಯಿತು.
    ಈಗಾಗಲೇ ಸಂಘದ ವತಿಯಿಂದ ಕೋವಿಡ್ ಲಾಕ್‌ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀಡುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ನೂತನ ಸಂಘದ ಸೇವಾ ಕಾರ್ಯದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಿದ್ದಾರೆ.
    ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಎಂ. ಮುಕುಂದನ್, ಕಾರ್ಯಾಧ್ಯಕ್ಷ ಎಂ. ರವಿಕುಮಾರ್, ಉಪಾಧ್ಯಕ್ಷರಾದ ಸಾಮ್ಯುಯೆಲ್, ವಿಲಿಯಂ ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್, ಕಾರ್ಯದರ್ಶಿ ಎಂ.ಸಿ ಸುನಿಲ್‌ಕುಮಾರ್, ಸಹಕಾರ್ಯದರ್ಶಿ ಜಿ. ಗೋವಿಂದ, ಖಜಾಂಚಿ ಎ.ವಿ ಮುರುಳಿಕೃಷ್ಣ, ನಿರ್ದೇಶಕರಾದ ಶ್ರೀಕಾಂತ್, ಎನ್. ನವೀನ್‌ಕುಮಾರ್, ಆರ್. ರವೀಂದ್ರಪ್ಪ, ಸಿ. ಉಮಾಶಂಕರ್, ಜಿ. ಕರುಣಾನಿಧಿ, ಎನ್. ಲೋಕೇಶ್, ಬಿ.ವೈ. ಅಜಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೋವಿಡ್-೧೯ ಕಾರ್ಯಪಡೆ ವತಿಯಿಂದ ಕೂಡ್ಲಿಗೆರೆ ಗ್ರಾಮದಲ್ಲಿ ಜಾಗೃತಿಗಾಗಿ ಪಥ ಸಂಚಲನ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಕೋವಿಡ್-೧೯ ಕಾರ್ಯಪಡೆ ವತಿಯಿಂದ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೂಡ್ಲಿಗೆರೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಥ ಸಂಚಲನ ನಡೆಸಲಾಯಿತು.
    ಭದ್ರಾವತಿ, ಮೇ. ೨೭: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಕೋವಿಡ್-೧೯ ಕಾರ್ಯಪಡೆ ವತಿಯಿಂದ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೂಡ್ಲಿಗೆರೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಥ ಸಂಚಲನ ನಡೆಸಲಾಯಿತು.
    ಈಗಾಗಲೇ ಕೂಡ್ಲಿಗೆರೆ ಗ್ರಾಮದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದು, ರೋಗ ನಿರೋಧಕ ಔಷಧ ಸಿಂಪಡಿಸುವ ಜೊತೆಗೆ ಸೀಲ್‌ಡೌನ್ ಸಹ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ನಡೆಸಲಾಯಿತು.
   ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಉಪ ತಹಸೀಲ್ದಾರ್ ನಾರಾಯಣಗೌಡ, ರಾಜಸ್ವ ನಿರೀಕ್ಷಕ ಜಗದೀಶ್, ಗ್ರಾಮ ಲೆಕ್ಕಾಧಿಕಾರಿ ಜ್ಞಾನೇಶ್ವರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಪಂಚಾಯಿತಿ ಸದಸ್ಯರಾದ ರುದ್ರೇಶ್, ಆರ್.ಎನ್ ಸ್ವಾಮಿನಾಥನ್, ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಪ್ಪನ್, ಪೊಲೀಸ್ ಇಲಾಖೆಯ ಜಗದೀಶ್, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬುಧವಾರ, ಮೇ 26, 2021

ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರಿಗೆ ನೆರವು

ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳನ್ನು ಉಚಿತವಾಗಿ ನೆರವೇರಿಸುವ ಮೂಲಕ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ೨೫ ಸಾವಿರ ರು. ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಯಿತು.
    ಭದ್ರಾವತಿ, ಮೇ. ೨೬: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವವರ ನೆರವಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು ಮುಂದಾಗುವ ಜೊತೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿವೆ.
    ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಸುಮಾರು ೨೫ ಸಾವಿರ ರು. ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಲಾಯಿತು.
    ಬಜರಂಗದಳ ಕಾರ್ಯಕರ್ತರು ವಾಹನವೊಂದನ್ನು ಬಾಡಿಗೆಗೆ ಪಡೆದು ಕೋವಿಡ್-೧೯ರ ಸೇವೆಗೆ ಮೀಸಲಿಡುವ ಜೊತೆಗೆ ಉಚಿತವಾಗಿ ಇದುವರೆಗೂ ಸುಮಾರು ೩೩ ಮೃತ ದೇಹಗಳ ಅಂತ್ಯಸಂಸ್ಕಾರವನ್ನು ಕೈಗೊಂಡಿದೆ.
     ಹಿಂದೂ ಮಹಾಸಭಾ, ಹಿಂದೂ ರಾಷ್ಟ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಉಪಾಧ್ಯಕ್ಷರಾದ ಮಣಿ ಎಎನ್‌ಎಸ್, ಕೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಭವಾನಿ, ಚನ್ನಪ್ಪ, ಕಾರ್ಯದರ್ಶಿ ಕೆ. ಸುದೀಪ್ ಕುಮಾರ್,  ಪ್ರಮುಖರಾದ ಶೇಖರಪ್ಪ, ಗಿರೀಶ್, ಬಜರಂಗದಳ ಪ್ರಮುಖರಾದ ಸುನಿಲ್, ವಡಿವೇಲು, ದೇವರಾಜ್, ಕೃಷ್ಣ, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗೃಹ ರಕ್ಷಕರಿಗೆ ಭದ್ರಾವತಿ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕರ ಕಛೇರಿ ಬಳಿ ಬುಧವಾರ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಯಿತು.

      ಗೃಹ ರಕ್ಷಕರಿಗೆ ನೆರವು:
    ಕೊರೋನಾ ಸಂಕಷ್ಟದ ಸಮಯದಲ್ಲೂ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಗೃಹ ರಕ್ಷಕರ ನೆರವಿಗೆ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟ ಮುಂದಾಗುವ ಮೂಲಕ ವಿಶೇಷತೆ ಮೆರೆದಿದೆ.
   ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗೃಹ ರಕ್ಷಕರಿಗೆ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕರ ಕಛೇರಿ ಬಳಿ ಬುಧವಾರ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸುವ ಮೂಲಕ ಸಮಾಜಕ್ಕೆ ಅವರ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಲಾಯಿತು.  
   ಲಾಕ್‌ಡೌನ್ ಮೊದಲ ಅವಧಿ ಮುಕ್ತಾಯಗೊಳ್ಳುವವರೆಗೂ ಒಕ್ಕೂಟದಿಂದ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀಡುವ ಸೇವಾ ಕಾರ್ಯ ಕೈಗೊಳ್ಳಲಾಗಿತ್ತು. ಇದೀಗ ೨ನೇ ಅವಧಿಯಲ್ಲಿ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ.
    ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪಾಸ್ಟರ್ ದೇವನೇಸನ್ ಸ್ಯಾಮ್ಯುವೆಲ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ, ಪ್ರಮುಖರಾದ ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಪ್ರಮುಖರಾದ ವಿಲ್ಸನ್ ಬಾಬು, ಎಂ.ಜಿ ರಾಮಚಂದ್ರ, ದಾಸ್, ಗೃಹ ರಕ್ಷಕದಳದ ಘಟಕಾಧಿಕಾರಿ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೧೩೫ ಕೊರೋನಾ ಸೋಂಕು : ೩ ಮಂದಿ ಬಲಿ

ಭದ್ರಾವತಿ, ಮೇ. ೨೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಬುಧವಾರ ಒಟ್ಟು ೧೩೫ ಸೋಂಕು ಪತ್ತೆಯಾಗಿದ್ದು, ೩ ಮಂದಿ ಬಲಿಯಾಗಿದ್ದಾರೆ.
ಒಟ್ಟು ೩೫೦ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೩೫ ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ೩೫ ಮಂದಿ ಮಾತ್ರ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಇದುವರೆಗೂ ೧೦೪ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಟ್ಟು ೪೩೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ೫೬ ಕಂಟೈನ್‌ಮೆಂಟ್ ಜೋನ್‌ಗಳ ಪೈಕಿ ೨೬ ತೆರವುಗೊಳಿಸಲಾಗಿದೆ. ಗ್ರಾಮೀಣ ಭಾಗದ ೨೭ ಕಂಟೈನ್‌ಮೆಂಟ್ ಜೋನ್‌ಗಳ ಪೈಕಿ ೨ ತೆರವುಗೊಳಿಸಲಾಗಿದೆ.