ಭದ್ರಾವತಿ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಸಮೀಪದ ಸ್ಮಾರ್ಟ್ ಹರ್ಟ್ಜ್ ಇನ್ವೆನ್‌ಕ್ಷನ್ ಪ್ರೈವೇಟ್ ಲಿಮಿಟೆಡ್, ಎಸ್.ಎನ್ ಭದ್ರಾವತಿ ಪ್ರೀಮಿಯಮ್ ಪ್ಯೂಯಲ್ಸ್ ಮತ್ತು ಇಂಡಿಯನ್ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಮಾಲೀಕ ಸೈಯದ್ ಇಮ್ರಾನ್ ಸ್ವತಃ ಕಡುಬಡವರನ್ನು ಸಂಪರ್ಕಿಸಿ ದಿನಸಿ ಸಾಮಗ್ರಿ, ತರಕಾರಿ ವಿತರಿಸುತ್ತಿರುವುದು.
ಭದ್ರಾವತಿ, ಜೂ. ೨: ಸ್ವಂತ ಉದ್ದಿಮೆಗಳ ಆರಂಭದ ಜೊತೆ ಜೊತೆಗೆ ಸಮಾಜದ ಸುತ್ತಮುತ್ತಲಿನ ಜನರ ಸಂಕಷ್ಟಗಳನ್ನು ಹತ್ತಿರದಿಂದ ಕಂಡಿರುವ ನಗರದ ಯುವ ಉದ್ಯಮಿಯೊಬ್ಬರು ಇದೀಗ ಕೊರೋನಾ ಸಂಕಷ್ಟದಲ್ಲಿರುವ ಕಡು ಬಡವರ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಸಮೀಪದ ಸ್ಮಾರ್ಟ್ ಹರ್ಟ್ಜ್ ಇನ್ವೆನ್‌ಕ್ಷನ್ ಪ್ರೈವೇಟ್ ಲಿಮಿಟೆಡ್, ಎಸ್.ಎನ್ ಭದ್ರಾವತಿ ಪ್ರೀಮಿಯಮ್ ಪ್ಯೂಯಲ್ಸ್ ಮತ್ತು ಇಂಡಿಯನ್ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಮಾಲೀಕ ಸೈಯದ್ ಇಮ್ರಾನ್ ನಗರ ಭಾಗದ ಸಾದತ್ ಕಾಲೋನಿ, ನೆಹರು ನಗರ ಹಾಗು ಗ್ರಾಮೀಣ ಭಾಗದ ಗೌರಾಪುರ, ಅಂತರಗಂಗೆ, ರಂಗನಾಥಪುರ, ಹಳೇ ಅಂತರಗಂಗೆ, ಬಸವನಗುಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಡು ಬಡತನದಲ್ಲಿರುವವರನ್ನು ಗುರುತಿಸಿ ಲಾಕ್‌ಡೌನ್ ಮುಕ್ತಾಯಗೊಳ್ಳುವವರೆಗೂ ಅಗತ್ಯವಿರುವಷ್ಟು ದಿನಸಿ ಸಾಮಗ್ರಿಗಳನ್ನು ಹಾಗು ತರಕಾರಿಗಳನ್ನು ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಇತ್ತೀಚಿನ ಕೆಲವು ತಿಂಗಳುಗಳ ಹಿಂದೆ ಆರಂಭಿಸಿರುವ ಉದ್ಯಮಗಳು ಇದೀಗ ಕೊರೋನಾ ಸಂಕಷ್ಟದ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಈ ನಡುವೆಯೂ ಉದ್ಯಮದಿಂದ ಸಂಪಾದಿಸಿದ ಒಂದಿಷ್ಟು ಹಣವನ್ನು ಈ ಸೇವಾ ಕಾರ್ಯಕ್ಕೆ ವಿನಿಯೋಗಿಸಿದ್ದಾರೆ. ಇವರ ಸೇವಾಕಾರ್ಯಕ್ಕೆ ಉದ್ಯಮದ ಸಿಬ್ಬಂದಿಗಳು ಸಹ ಕೈ ಜೋಡಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಇಮ್ರಾನ್, ಪ್ರಸ್ತುತ ಎದುರಾಗಿರುವ ಕೊರೋನಾ ಸಂಕಷ್ಟದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಬಡವರ ಸ್ಥಿತಿ ತೀರ ಹದಗೆಟ್ಟಿದೆ. ಬದುಕು ಸಾಗಿಸುವುದು ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರತಿಯೊಬ್ಬರ ಮಾನವೀಯತೆಯಾಗಿದೆ. ಈ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಗುತ್ತಿದೆ. ಸಂಕಷ್ಟಕ್ಕೆ ಒಳಗಾಗಿರುವ ಸುಮಾರು ೧ ಸಾವಿರ ಮಂದಿಗೆ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರ ನೆರವಿಗೆ ಮುಂದಾಗಬೇಕೆಂಬ ಬಯಕೆ ಇದೆ. ಈ ಹಿನ್ನಲೆಯಲ್ಲಿ ದಾನಿಗಳ ನೆರವಿನೊಂದಿಗೆ ಟ್ರಸ್ಟ್ ರಚಿಸಿ ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳಲಾಗುವುದು ಎಂದರು.