Monday, June 7, 2021

ಲಸಿಕೆ ಖರೀದಿಸಲು ೧ ಕೋ.ರು. ಅನುದಾನ ಬಿಡುಗಡೆಗೊಳಿಸಿ

ಶಾಸಕ ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೮: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೋವಿಡ್-೧೯ ಲಸಿಕೆ ಖರೀದಿಸಲು ೧ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
     ತಾಲೂಕಿನಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈಗಾಗಲೇ ೨ನೇ ಅಲೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ೩ನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದರಿಂದ ಇದನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಜಿಲ್ಲಾ ಹಾಗು ತಾಲೂಕು ಮಟ್ಟ, ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ  ಪ್ರಸ್ತುತ ಅಗತ್ಯವಿರುವಷ್ಟು ಲಸಿಕೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸೂಕ್ತ ಸಮಯದಲ್ಲಿ ಲಸಿಕೆ ಲಭ್ಯವಾಗದೆ ಸೋಂಕಿನ ೨ನೇ ಅಲೆಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
     ಈ ಹಿನ್ನಲೆಯಲ್ಲಿ ತಕ್ಷಣ ಲಸಿಕೆ ಖರೀದಿ ಮಾಡಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ೧ ಕೋ. ರು. ಅನುದಾನ ಮಂಜೂರು ಮಾಡಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಾರ್ಡ್‌ಗಳಲ್ಲಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಬೇಕೆಂದು ಕೋರಿದ್ದಾರೆ.

ಸ್ನೇಹ ಜೀವಿ ಸತೀಶ್ ನೆನಪಿನಲ್ಲಿ ‘ಹಸಿದವರಿಗೆ ಅನ್ನ’ ಸೇವಾ ಕಾರ್ಯ

ಭದ್ರಾವತಿಯಲ್ಲಿ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
    ಭದ್ರಾವತಿ, ಜೂ. ೭: ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ನಗರದ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
   ಹಲವಾರು ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡಿರುವ ಸ್ನೇಹ ಜೀವಿ ಬಳಗವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಸತೀಶ್‌ರವರು ಸುಮಾರು ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಸ್ಮರಣಾರ್ಥ ಇವರ ಪುತ್ರ ಸುಹಾಸ್ ನ್ಯೂಟೌನ್ ದಯಾ ಸಾಗರ್ ಟ್ರಸ್ಟ್ ವತಿಯಿಂದ ಕೊರೋನಾ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸಿ ಮಾನವೀಯತೆ ಮೆರೆದರು. ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ಹಾಗು ಸ್ನೇಹ ಜೀವಿ ಬಳಗದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಭಿಕ್ಷುಕರು, ನಿಗರ್ತಿಕರು, ವಿಕಲಚೇತನರು, ಅಸಹಾಯಕರಿಗೆ ಅನ್ನದಾಸೋಹ ಸೇರಿದಂತೆ ಇನ್ನಿತರ  ಸೇವಾ ಕಾರ್ಯಗಳನ್ನು ನೆರವೇರಿಸುವ ಉದ್ದೇಶದಿಂದ ದಿವಂಗತ ರೋಶಯ್ಯನವರು ದಯಾಸಾಗರ್ ಟ್ರಸ್ಟ್ ಸ್ಥಾಪಿಸಿದ್ದರು. ಇದೀಗ ಈ ಟ್ರಸ್ಟನ್ನು ರೋಸಯ್ಯನವರ ಪುತ್ರ ಮೋಸಸ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

೧ ಕೋ. ರು. ವೆಚ್ಚದಲ್ಲಿ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯ ೨೫,೦೦೦ ಅರ್ಹ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ

ತಾಲೂಕು ಮಟ್ಟದ ಕೋವಿಡ್-೧೯ ಕಾರ್ಯಪಡೆ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಕೋವಿಡ್-೧೯ ಕಾರ್ಯಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು.

        ಭದ್ರಾವತಿ, ಜೂ. ೭: ನಗರಸಭೆ ೩೫ ವಾರ್ಡ್‌ಗಳಲ್ಲಿ ಸುಮಾರು ೧ ಕೋ. ರು. ವೆಚ್ಚದಲ್ಲಿ ೨೫ ಸಾವಿರ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
      ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೋವಿಡ್-೧೯ ಕಾರ್ಯ ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಗರಸಭೆ ೩೫ ವಾರ್ಡ್‌ಗಳಲ್ಲಿ ಕೋವಿಡ್-೧೯ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಅರ್ಹ ಬಡವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ನಗರಸಭೆ ವಿಶೇಷ ಅನುದಾನದಲ್ಲಿ(ಸಿಎಸ್‌ಆರ್) ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಸುಮಾರು ೧ ಕೋ. ರು. ವೆಚ್ಚದಲ್ಲಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ನಗರಸಭೆ ಇತಿಹಾಸದಲ್ಲಿಯೇ ಇದೊಂದು ಮೊದಲ ಪ್ರಯತ್ನವಾಗಿದೆ ಎಂದರೆ ತಪ್ಪಾಗಲಾರದು ಎಂದರು.
     ಈಗಾಗಲೇ ಸರ್ಕಾರ ಬಡವರಿಗೆ ಉಚಿತ ಅಕ್ಕಿ ವಿತರಿಸಿದ್ದು, ಅಕ್ಕಿಯನ್ನು ಬಿಟ್ಟು ಇತರೆ ದಿನಸಿ ಸಾಮಗ್ರಿಗಳನ್ನು ನೀಡಲಾಗುವುದು. ಎಲ್ಲಾ ಪ್ರಕ್ರಿಯೆಗಳು ಮುಗಿಯಲು ಸುಮಾರು ೧೦ ದಿನಗಳು ಬೇಕಾಗುತ್ತದೆ. ಒಂದು ವೇಳೆ ಲಾಕ್‌ಡೌನ್ ಇಲ್ಲದಿದ್ದರೂ ಸಹ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. ನಿಗದಿಪಡಿಸಲಾದ ಮಾನದಂಡಗಳ ಆಧಾರದ ಮೇಲೆ ಆಯಾ ವಾರ್ಡ್‌ಗಳ ಸದಸ್ಯರು ಹಾಗು ಮುಖಂಡರು ಮತ್ತು ಅಧಿಕಾರಿಗಳನ್ನೊಳಗೊಂಡ ತಂಡ ಬಡವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಲಿದೆ ಎಂದರು.
      ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ, ಸಿಬ್ಬಂದಿಗಳಿಗೆ ಲಸಿಕೆ:
   ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸದಸ್ಯರು, ಸಿಬ್ಬಂದಿಗಳು ಹಾಗು ನಗರಸಭೆ ೩೫ ವಾರ್ಡ್‌ಗಳ ಸದಸ್ಯರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮಂಗಳವಾರ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
      ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಲಸಿಕಾ  ಕೇಂದ್ರ :
   ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ೧, ೨ ರಿಂದ ೩ ಹಾಗು ೩ ರಿಂದ ೪ ವಾರ್ಡ್‌ಗಳನ್ನು ಒಳಗೊಂಡಂತೆ ತಲಾ ಒಂದೊಂದು ಒಟ್ಟು ೧೨ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಕೇವಲ ೧ ಸಾವಿರ ಲಸಿಕೆ ಮಾತ್ರ ಬರುತ್ತಿದೆ. ಆದರೆ ಶಿವಮೊಗ್ಗಕ್ಕೆ ಹೆಚ್ಚಿನ ಲಸಿಕೆ ನೀಡಲಾಗುತ್ತಿದೆ. ಈ ರೀತಿಯ ತಾರತಮ್ಯ ಸರಿಯಲ್ಲ. ಭದ್ರಾವತಿಗೂ ಹೆಚ್ಚಿನ ಲಸಿಕೆ ನೀಡಬೇಕೆಂದು ಆಗ್ರಹಿಸಿದರು.  
      ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದವರು ಜೀವಂತವಾಗಿ ಬರುತ್ತಿಲ್ಲ:
   ತಾಲೂಕಿನಲ್ಲಿ ಕೊರೋನಾ  ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ, ಕಡ್ಡಾಯವಾಗಿ ಸ್ಯಾನಿಟೈಜರ್ ಮತ್ತು ಮಾಸ್ಕ್ ಬಳಸಬೇಕು. ಅನಾವಶ್ಯಕವಾಗಿ ಮನೆಯಿಂದ  ಹೊರಬರದೆ ಸಹಕರಿಸಬೇಕು. ಅಲ್ಲದೆ ಕೊರೋನಾ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಸಹ ಇನ್ನೂ ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದರು.
    ಸೋಂಕಿಗೆ ಒಳಗಾಗಿ ತುರ್ತು ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದವರು ಪುನಃ ಜೀವಂತವಾಗಿ ಹಿಂದಿರುಗುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳು ಇವೆಯೋ,  ಇಲ್ಲವೋ ಒಂದು ಗೊತ್ತಾಗುತ್ತಿಲ್ಲ. ಇಂದಿಗೂ ಆಕ್ಸಿಜನ್, ವೆಂಟಿಲೇಟರ್ ಕೊರತೆ ಕಂಡು ಬರುತ್ತಿದ್ದು, ಯಾರಾದರೂ ಸತ್ತರೆ ಮಾತ್ರ ಹೊಸಬರಿಗೆ ವ್ಯವಸ್ಥೆ ಕಲ್ಪಿಸುವಂತಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಪತ್ರಕರ್ತರು, ಮಾಧ್ಯಮಗಳಿಗೆ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ತಕ್ಷಣ ಆಸ್ಪತ್ರೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸಬೇಕೆಂದು ಒತ್ತಾಯಿಸಿದರು.
    ಲಸಿಕಾ ಕೇಂದ್ರಗಳಿಗೆ ಸಂಬಂಧಿಸಿದಂತೆ ನಗರಸಭಾ ಸದಸ್ಯರು, ಮುಖಂಡರುಗಳಿಂದ ಹಲವು ಸಲಹೆ ಸೂಚನೆಗಳು ವ್ಯಕ್ತವಾದವು. ತಾಲೂಕು ಆರೋಗ್ಯಾಧಿಕಾರಿಗಳು ಸಮಸ್ಯೆಗಳನ್ನು ಸಾಧ್ಯವಾದಷ್ಟು ಬಗೆಹರಿಸುವುದಾಗಿ ಭರವಸೆ ನೀಡಿದರು.
     ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ  ಅಶೋಕ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಉಪಸ್ಥಿತರಿದ್ದರು.
     ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಕೆ ಸುದೀಪ್‌ಕುಮಾರ್, ಬಿ.ಟಿ ನಾಗರಾಜ್, ವಿ. ಕದಿರೇಶ್, ಟಿಪ್ಪು ಸುಲ್ತಾನ್, ಕೋಟೇಶ್ವರರಾವ್, ಚನ್ನಪ್ಪ, ಮುಖಂಡರಾದ ಎಸ್.ಎಸ್ ಭೈರಪ್ಪ, ವಸಂತಕುಮಾರ್, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೊರೋನಾ ಸೋಂಕಿಗೆ ವಿಇಎಸ್ ವಿದ್ಯಾಸಂಸ್ಥೆ ಪ್ರಾಂಶುಪಾಲ ಕೆ. ನಿಂಗಪ್ಪ ಬಲಿ

ಕೆ. ನಿಂಗಪ್ಪ
    ಭದ್ರಾವತಿ,  ಜೂ. ೭: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಬಿ.ಇಡಿ ವಿಭಾಗದ ಪ್ರಾಂಶುಪಾಲ ಕೆ. ನಿಂಗಪ್ಪ ಸೋಮವಾರ ಬೆಳಿಗ್ಗೆ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
   ಪತ್ನಿಯನ್ನು ಹೊಂದಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಂಗಪ್ಪ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಹಾಗು ಪ್ರಭಾರ ಆಡಳಿತಾಧಿಕಾರಿಯಾಗಿ ಸುಮಾರು ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
   ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಭಾರ ನೂತನ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.

Sunday, June 6, 2021

ಜೂ.೭ರಿಂದ ಪುನಃ ಸಂಪೂರ್ಣ ಲಾಕ್‌ಡೌನ್

   ಭದ್ರಾವತಿ, ಜೂ. ೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜೂ.೭ರಿಂದ ಪುನಃ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
    ಬೆಳಿಗ್ಗೆ ೬ ರಿಂದ ೮ ಗಂಟೆವರೆಗೆ ಅಗತ್ಯ ವಸ್ತುಗಳಾದ ದಿನಸಿ, ಹಣ್ಣು ಮತ್ತು ತರಕಾರಿ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಬಿತ್ತನೆ ಬೀಜಗಳ ಖರೀದಿಗೆ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಹಾಗು ಪೆಟ್ರೋಲ್ ಬಂಕ್‌ಗಳು ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
    ಉಳಿದಂತೆ ಮುಂದಿನ ಆದೇಶದವರೆಗೂ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಅಲ್ಲದೆ ಅನಾವಶ್ಯಕ ಜನಸಂಚಾರ ಸಹ ನಿಷೇಧಿಸಲಾಗಿದೆ. ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಬರದೆ ಸಹಕರಿಸುವಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.

ಭದ್ರಾವತಿಯಲ್ಲಿ ೧೩೯ ಸೋಂಕು : ೧೫೦ರ ಗಡಿ ದಾಟಿದ ಸಾವಿನ ಸಂಖ್ಯೆ

   ಭದ್ರಾವತಿ, ಜೂ. ೬: ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ೨ನೇ ಅವಧಿಯ ಸೆಮಿ ಲಾಕ್‌ಡೌನ್ ಮುಕ್ತಾಯಗೊಳ್ಳಲು ಒಂದು ದಿನ ಬಾಕಿ ಇದೆ. ಆದರೂ ಸಹ ತಾಲೂಕಿನಲ್ಲಿ ಸೋಂಕಿನ ನೂರರ ಗಡಿಯಾಚೆಯಲ್ಲಿದ್ದು, ಭಾನುವಾರ ೧೩೯ ಸೋಂಕು ಪತ್ತೆಯಾಗಿದೆ. 
ಒಟ್ಟು ೧೪೪ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೩೯ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೭೭ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೨ ಇಬ್ಬರು ಬಲಿಯಾಗಿದ್ದಾರೆ. 
ಇದುವರೆಗೂ ಒಟ್ಟು ೫೮೯೯ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೪೭೯೫ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ೧೧೦೪ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಇದುವರೆಗೂ ಒಟ್ಟು ೧೫೧ ಮಂದಿ ಮೃತಪಟ್ಟಿದ್ದು, ೪೫೪ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು ೩೬ ಕಂಟೈನ್‌ಮೆಂಟ್  ಜೋನ್‌ಗಳು ಸಕ್ರಿಯವಾಗಿದ್ದು, ೮೪ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಇದೆ ರೀತಿ ಗ್ರಾಮಾಂತರ ಭಾಗದಲ್ಲಿ ೨೬ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ೧೭ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. 

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಎಂ.ಜಿ ರಾಮಚಂದ್ರ ನೇಮಕ


ಎಂ.ಜಿ ರಾಮಚಂದ್ರ
   ಭದ್ರಾವತಿ, ಜೂ. ೬: ನಗರಸಭೆ ವಾರ್ಡ್ ನಂ.೨೭ರ ವ್ಯಾಪ್ತಿಯ ಆಂಜನೇಯ ಅಗ್ರಹಾರ ೭ನೇ ರಸ್ತೆ ನಿವಾಸಿ ಎಂ.ಜಿ ರಾಮಚಂದ್ರ ಅವರನ್ನು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್ ಅವರ ಸೂಚನೆ ಮೇರೆಗೆ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಕಾಂಗ್ರೆಸ್ ಐ.ಟಿ ಸೆಲ್ ವಿಭಾಗದ ತಾಲೂಕು ಅಧ್ಯಕ್ಷ ವಿಲ್ಸನ್‌ಬಾಬು, ೨೬ನೇ ವಾರ್ಡ್ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ, ಮಾಜಿ ನಗರಸಭಾ ಸದಸ್ಯರಾದ ಮುಕುಂದಪ್ಪ, ಪ್ರಾನ್ಸಿಸ್ ಸೇರಿದಂತೆ ಇನ್ನಿತರರು ರಾಮಚಂದ್ರ ಅವರನ್ನು ಅಭಿನಂದಿಸಿದ್ದಾರೆ.
    ಉಪಾಧ್ಯಕ್ಷರನ್ನಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ ಅವರಿಗೆ ರಾಮಚಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.