Friday, June 18, 2021

ಶಿಕ್ಷಕರು, ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ


ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಮತ್ತು ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ವತಿಯಿಂದ ಶುಕ್ರವಾರ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ ಮತ್ತು ಶಾಲಾ ಶಿಕ್ಷಕರು ಹಾಗು ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.  
     ಭದ್ರಾವತಿ, ಜೂ. ೧೮: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಮತ್ತು ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ವತಿಯಿಂದ ಶುಕ್ರವಾರ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ ಮತ್ತು ಶಾಲಾ ಶಿಕ್ಷಕರು ಹಾಗು ಬಡ ವರ್ಗದವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.  
   ಕೇಶವಪುರ ಬಡಾವಣೆಯ ತರುಣ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ಕಾನಿಟ್ಕರ್ ಮಾತನಾಡಿ, ಹಿಂದೂ ಸಾಮ್ರಾಜ್ಯೋತ್ಸವ ಹಾಗು ಶಿವಾಜಿ ಮಹಾರಾಜರು ನಡೆಸಿದ ಹೋರಾಟಗಳನ್ನು ವಿವರಿಸಿದರು.  ಅವರ ಸಾಹಸವನ್ನು ತಿಳಿಸಿದರು.
      ತರುಣ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಭೂಷಣ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಹಾಗು ತರುಣ ಭಾರತಿ  ವಿದ್ಯಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಯೋಗದ ಮಹತ್ವ ವಿವರಿಸಿದರು. ಸಹ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.  
     ಸವಿತಾ ನಿರೂಪಿಸಿದರು. ಸುಜಾತ ಸ್ವಾಗತಿಸಿದರು. ಪೂರ್ಣಿಮಾ ಅಮೃತವಚನ ನಡೆಸಿಕೊಟ್ಟರು. ಸರ್ವಮಂಗಳ ವಂದಿಸಿದರು. ಸುಮಾರು ೩೫ಕ್ಕೂ ಹೆಚ್ಚು ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
     ಖಜಾಂಚಿ ವಿಶ್ವನಾಥ್, ಸದಸ್ಯರಾದ ರಾಮಚಂದ್ರ, ಸತ್ಯನಾರಾಯಣ, ಸಿದ್ದರಾಮಣ್ಣ, ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Thursday, June 17, 2021

ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸುತ್ತಿರುವ ಯುವ ಮುಖಂಡ, ಸಮಾಜ ಸೇವಕ ಎನ್. ಗೋಕುಲ್ ಕೃಷ್ಣನ್

ಭದ್ರಾವತಿಯಲ್ಲಿ ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಸಮಾಜ ಸೇವಕ, ಯುವ ಮುಖಂಡ ಎನ್. ಗೋಕುಲ್ ಕೃಷ್ಣನ್ ಸ್ವಂತ ಖರ್ಚಿನಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿರುವುದು.
   ಭದ್ರಾವತಿ, ಜೂ. ೧೭: ನಗರದಲ್ಲಿ ಹಲವು ಮಂದಿ ದಾನಿಗಳು ತಮ್ಮ ಸ್ವಂತ ಹಣದಲ್ಲಿ ಕೊರೋನಾ ಸಂಕಷ್ಟದ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗುತ್ತಿದ್ದು, ಕೆಲವರು ಎಲೆಮರೆ ಕಾಯಿಯಂತೆ ಸೇವಾ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದಾರೆ.  ಈ ಪೈಕಿ ಸಮಾಜ ಸೇವಕ, ಬಿಜೆಪಿ ಯುವ  ಮುಖಂಡ ಎನ್ ಗೋಕುಲ್ ಕೃಷ್ಣನ್ ಸಹ ಒಬ್ಬರಾಗಿದ್ದಾರೆ.
   ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಗೋಕುಲ್ ಕೃಷ್ಣನ್ ಧಾವಿಸುತ್ತಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮೂಲದಿಂದ ಸಂಕಷ್ಟಕ್ಕೆ ಒಳಗಾಗಿರುವ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ ಸ್ಪಂದಿಸುವ ಮನೋಭಾವ ರೂಪಿಸಿಕೊಂಡಿದ್ದಾರೆ.
    ಬಿಜೆಪಿ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿರುವ ಗೋಕುಲ್ ಸೇವೆಯೆ ಸಂಘಟನೆ ಎಂಬುದನ್ನು ಅರಿತುಕೊಂಡಿದ್ದಾರೆ. ತೀರ ಸಂಕಷ್ಟಕ್ಕೆ ಒಳಗಾದ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಣೆ, ಸೋಂಕಿತ ಪ್ರದೇಶಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ, ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆರ್ಥಿಕ ನೆರವು ಸೇರಿದಂತೆ ಹಲವು ರೀತಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇದೀಗ ಗೋಕುಲ್ ಆಕರ್ಷಕ ಕೇಂದ್ರ ಬಿಂದುವಾಗಿ ಕಂಗೊಳಿಸುತ್ತಿದ್ದಾರೆ.

ಆರ್ಕೇಸ್ಟ್ರಾ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ತಾಲೂಕು ಆರ್ಕೇಸ್ಟ್ರಾ ಕಲಾವಿದರ ಸಂಘದಿಂದ ಬಡ ಕಲಾವಿದರಿಗೆ ಗುರುವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜೂ. ೧೭: ತಾಲೂಕು ಆರ್ಕೇಸ್ಟ್ರಾ ಕಲಾವಿದರ ಸಂಘದಿಂದ ಬಡ ಕಲಾವಿದರಿಗೆ ಗುರುವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಅವರ ನೆರವಿನೊಂದಿಗೆ ಸುಮಾರು ೩೫ ಮಂದಿ ಬಡ ಕಲಾವಿದರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಲಾಯಿತು.
    ಸಂಘದ ಅಧ್ಯಕ್ಷ ಯಶೋಧರಯ್ಯ(ಪುಟ್ಟಣ್ಣ), ಎಂ. ಪಳನಿರಾಜ್, ಡಿ.ವಿಜಯ್ ದಯಾಕರ್, ಬಿ.ಆರ್ ಗೋಪಾಲ್, ಎಂ. ರಾಜು, ಬಾಬುಜಾನ್, ಬಿ. ನಾಗರಾಜ್, ಅವಿನಿ ಸುಸನ್ನಾ, ರೇಖಾ, ಸ್ವಾತಿ, ಗಂಗಾಧರ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

೨೫ ಲಕ್ಷ ರು. ವೆಚ್ಚದಲ್ಲಿ ಸಿದ್ದಗೊಳ್ಳುತ್ತಿದೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಪ್ರತಿಮೆ

೧ನೇ ವರ್ಷದ ಪುಣ್ಯ ಸ್ಮರಣೆಯಂದು ಅನಾವರಣ


   ಭದ್ರಾವತಿ, ಜೂ. ೧೭: ವಿಧಾನಸಭಾ ಕ್ಷೇತ್ರದಲ್ಲಿ ೪ ದಶಕಗಳ ಕಾಲ ತಮ್ಮದೇ ಆದ ವಿಶಿಷ್ಟವಾದ ರಾಜಕಾರಣ ಹಾಗು ಪ್ರತಿಷ್ಠೆಯೊಂದಿಗೆ ೩ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರ ೧ನೇ ವರ್ಷದ ಪುಣ್ಯ ಸ್ಮರಣೆಗಾಗಿ ಸುಮಾರು ೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅವರ ಪ್ರತಿಮೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲಿದೆ.
    ಕಲಾವಿದರ ಕೌಶಲ್ಯ ಅಪ್ಪಾಜಿಯವರ ನೈಜತೆಯನ್ನು ಪ್ರತಿಮೆಯಲ್ಲಿ ಎದ್ದು ಕಾಣುವಂತೆ ಮಾಡಿದೆ. ಆಕರ್ಷಕವಾದ ಪ್ರತಿಮೆ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಕಳೆದ ೨-೩ ದಿನಗಳಿಂದ ಇನ್ನೂ ಪೂರ್ಣಪ್ರಮಾಣದಲ್ಲಿ ಸಿದ್ದಗೊಳ್ಳತ್ತಿರುವ ಅಪ್ಪಾಜಿಯವರ ಪ್ರತಿಮೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ. ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಪ್ರೊಪೈಲ್‌ನಲ್ಲಿ ಹಂಚಿಕೊಂಡಿದ್ದಾರೆ.


ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಆಕರ್ಷಕ ಪ್ರತಿಮೆ

    ಅಪ್ಪಾಜಿಯವರು ಸೆ.೨ರಂದು ರಾತ್ರಿ ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಅಂತ್ಯಕ್ರಿಯೆ ತಾಲೂಕಿನ ಗೋಣಿಬೀಡಿನ ಅವರ ತೋಟದಲ್ಲಿ ನೆರವೇರಿಸಲಾಗಿತ್ತು. ೧ನೇ ವರ್ಷದ ಪುಣ್ಯ ಸ್ಮರಣೆಯಂದು ಅವರ ಪ್ರತಿಮೆ ಇದೆ ಸ್ಥಳದಲ್ಲಿ ಅನಾವರಣಗೊಳ್ಳಲಿದೆ.
    ಪ್ರತಿಮೆಯನ್ನು ಅಪ್ಪಾಜಿ ಕುಟುಂಬ ವರ್ಗದವರು ನಿರ್ಮಿಸುತ್ತಿದ್ದು, ಪ್ರತಿಮೆ ಹಾಗು ವೇದಿಕೆ ಸೇರಿ ಒಟ್ಟು ವೆಚ್ಚ ೪೦ ಲಕ್ಷ ರು. ಗಳಾಗಿವೆ. ಸದ್ಯಕ್ಕೆ ೨೫ ಲಕ್ಷ ರು. ವ್ಯಯ ಮಾಡಿ ಪ್ರತಿಮೆಯನ್ನು ಮಾತ್ರ ಅನಾವರಣಗೊಳಿಸಲಿದೆ.

ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಪ್ರೊ. ಬಿ. ಕೃಷ್ಣಪ್ಪ ಹುಟ್ಟುಹಬ್ಬ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಹೋರಾಟಗಾರ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೧೭: ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಹೋರಾಟಗಾರ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನ ಆಚರಿಸಲಾಯಿತು.
   ಅಂಧ ವಿಕಲಚೇತನರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದಲಿತ ನೌಕರರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರ ಆದರ್ಶ ಗುಣಗಳು ಇಂದಿನ ಹೋರಾಟಗಳಿಗೆ ಸ್ಪೂರ್ತಿದಾಯಕವಾಗಿವೆ. ಅವರು ರೂಪಿಸಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ಸಾಗಬೇಕೆಂದರು.
    ಡಿಎಸ್‌ಎಸ್ ತಾಲೂಕು ಸಂಚಾಲಕ ಆರ್. ರವಿನಾಯ್ಕ ನೇತೃತ್ವ ವಹಿಸಿದ್ದರು. ನಗರ ಸಂಚಾಲಕ ಆರ್. ತಮ್ಮಯ್ಯ, ಸಂಘಟನಾ ಸಂಚಾಲಕರಾದ ನಾಗರಾಜ್, ನಾಗೇಶ್, ಉಬೇದ್ ಅಹಮದ್,  ಶಿವನಾಯ್ಕ, ಮಂಜುನಾಥ್, ವಿಜಯ್ ಕಾಕೆಡ್, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ೬ ವರ್ಷ ಕಳೆದರೂ ಬಗೆಹರಿಯದ ಸಮಸ್ಯೆ

ಕೋವಿಡ್-೧೯ ಸಂದಿಗ್ದ ಪರಿಸ್ಥಿತಿಯಲ್ಲೂ ೭-೮ ತಿಂಗಳಿಂದ ವೇತನವಿಲ್ಲ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ.


* ಅನಂತಕುಮಾರ್
    ಭದ್ರಾವತಿ, ಜೂ. ೧೭:  ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಸುಮಾರು ೬ ವರ್ಷಗಳು ಕಳೆದಿದ್ದು, ಆದರೆ ಇದುವರೆಗೂ ಕಾರ್ಮಿಕರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಕಳೆದ ೭-೮ ತಿಂಗಳಿನಿಂದ ವೇತನವಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
     ೨೦೧೫ರಲ್ಲಿ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡ ನಂತರ ಕಾರ್ಮಿಕರಿಗೆ ಎದುರಾದ ಸಂಕಷ್ಟಕ್ಕೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ. ಒಂದೆಡೆ ಕಾರ್ಖಾನೆ ಪುನಃ ಆರಂಭಗೊಳ್ಳದೆ ಇತಿಹಾಸದ ಗತ ವೈಭವ ಕಣ್ಮರೆಯಾಗಿರುವಾಗ, ಮತ್ತೊಂದೆಡೆ ಸುಮಾರು ೩೦-೪೦ ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿದಿರುವ ಕಾರ್ಮಿಕರಿಗೆ ಕೊನೆ ಘಳಿಗೆಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.


ಪ್ರಸ್ತುತ ಕಾರ್ಮಿಕರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ೭-೮ ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ನಮ್ಮ ಅಳಲು ಯಾರು ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ.
                                                              -ದಿನೇಶ್, ಕಾರ್ಯದರ್ಶಿ, ಎಂ.ಪಿ.ಎಂ ಕಾರ್ಮಿಕರ ಸಂಘ.

     ಒಂದು ಕಾಲದಲ್ಲಿ ಕಾರ್ಖಾನೆಯಲ್ಲಿ ೩ ರಿಂದ ೪ ಸಾವಿರ ಕಾಯಂ ಕಾರ್ಮಿಕರು, ಸುಮಾರು ೫ ಸಾವಿರ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ವ್ಯಾಪಾರಸ್ಥರು, ಕೃಷಿಕರು ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಕುಟುಂಬಗಳು ಕಾರ್ಖಾನೆಯನ್ನು ನಂಬಿ ಬದುಕು ಸಾಗಿಸುತ್ತಿದ್ದವು. ದೇಶ, ವಿದೇಶಗಳಲ್ಲಿ ತನ್ನದೇ ಆದ ಬ್ರಾಂಡ್‌ನೊಂದಿಗೆ ಮಾರುಕಟ್ಟೆ ಹೊಂದುವ ಮೂಲಕ ಭವ್ಯ ಪರಂಪರೆಯನ್ನು ಕಟ್ಟಿಕೊಂಡಿದ್ದ ಕಾರ್ಖಾನೆಯನ್ನು ರಾಜ್ಯ ಸರ್ಕಾರ  ಖಾಸಗಿಕರಣಗೊಳಿಸುವ ನಿಟ್ಟಿನಲ್ಲಿ ೨೦೧೭ರಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ೭೭೩ ಕಾಯಂ ಹಾಗು ೧೦೨೯ ಗುತ್ತಿಗೆ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದು ಕೊಂಡಿದ್ದರು. ಉಳಿದಂತೆ ೨೨೦ ಕಾಯಂ ನೌಕರರು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಸರ್ಕಾರ ಒಟ್ಟು ೩೪೫ ಕೋ.ರು. ವಿಶೇಷ ಪ್ಯಾಕೇಜ್ ರೂಪಿಸಿ ಎರಡು ಹಂತದಲ್ಲಿ ಹಣ ಸಹ ಬಿಡುಗಡೆಗೊಳಿಸಿತ್ತು. ಆದರೆ ಬಹುತೇಕ ಕಾರ್ಮಿಕರಿಗೆ ಇನ್ನೂ ಪೂರ್ತಿ ಹಣ ಕೈಸೇರಿಲ್ಲ. ಬಾಕಿ ಹಣ ನೀಡುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
      ೭-೮ ತಿಂಗಳಿಂದ ವೇತನವಿಲ್ಲ :
ಪ್ರಸ್ತುತ ಉಳಿದುಕೊಂಡಿರುವ ೨೧೬ ಕಾಯಂ ಕಾರ್ಮಿಕರ ಪೈಕಿ ೧೧೪ ಕಾರ್ಮಿಕರನ್ನು ಸರ್ಕಾರದ ವಿವಿಧ ಇಲಾಖೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಉಳಿದಿರುವ ಸುಮಾರು ೯೦ ಕಾಯಂ ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೫೦ ಕಾರ್ಮಿಕರು ಹಾಗು ಭದ್ರತಾ ಮತ್ತು ಬೇಹುಗಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೮೦ ಮಂದಿ ಹಾಗು ಅರಣ್ಯ ಕ್ಷೇತ್ರಪಾಲಕರು ಸುಮಾರು ೭-೮ ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
       ಸರ್ಕಾರದಿಂದ ಯಾವುದೇ ನೆರವಿಲ್ಲ:
    ಕೋವಿಡ್-೧೯ರ ಪರಿಣಾಮ ಕಳೆದ ಸುಮಾರು ೨ ವರ್ಷದಿಂದ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಆದರೂ ಸಹ ಸರ್ಕಾರ ಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮತ್ತೊಂದೆಡೆ ಸರ್ಕಾರ ಕಾರ್ಮಿಕರಿಗೆ ಕೋವಿಡ್-೧೯ ವಿಶೇಷ ನೆರವು ಸಹ ನೀಡಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಬಹುತೇಕ ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಲಾದರೂ ಸರ್ಕಾರ ನೆರವಿಗೆ ಧಾವಿಸಬೇಕೆಂಬ ಅಳಲು ಕಾರ್ಮಿಕರಿಂದ ಕೇಳಿ ಬರುತ್ತಿದೆ.  
      ಖಾಸಗಿಕರಣಗೊಳಿಸುವ ಪ್ರಕ್ರಿಯೆ ಸಹ ವಿಫಲ:
   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಭರವಸೆ ನೀಡುತ್ತಾ ಬಂದಿದೆಯಾದರೂ ಸಹ ಇದುವರೆಗೂ ಪುನಃ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವ ಸರ್ಕಾರದ ಪ್ರಸ್ತಾಪಕ್ಕೆ ಆರಂಭದಲ್ಲಿ ಪೂರಕ ಪ್ರತಿಕ್ರಿಯೆಗಳು ಕಂಡು ಬಂದರೂ ಸಹ ನಂತರದ ದಿನಗಳಲ್ಲಿ ಯಾವುದೇ ಖಾಸಗಿ ಕಂಪನಿಗಳು ಈ ಬಗ್ಗೆ ಆಸಕ್ತಿ ವಹಿಸದಿರುವುದು ಪುನಃ ಕಾರ್ಖಾನೆ ಆರಂಭಗೊಳ್ಳುವ ನಿರೀಕ್ಷೆಯನ್ನು ಹುಸಿಗೊಳಿಸಿದೆ.

Wednesday, June 16, 2021

ಶಿಕ್ಷಕರಿಗೆ, ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಜೂ. ೧೬: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಶಿವ ಸಾಯಿ ಕೃಪ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಅಭಿಲಾಷ್, ಶಿವಲಿಂಗೇಗೌಡ, ಸೌಮ್ಯ ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.