Thursday, July 22, 2021

ಜನರು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಿ : ಮನೋಹರ್

ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೨: ಜನರು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ಆ ಹುದ್ದೆಗೆ ಸಾರ್ಥಕತೆ ಬರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
    ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
     ನಗರಸಭೆ ಪೌರಾಯುಕ್ತರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ತೃಪ್ತಿ ನನಗಿದೆ. ನಗರಸಭೆ ೩೫ ವಾರ್ಡ್‌ಗಳಲ್ಲೂ ಜನರು ನನ್ನನ್ನು ಗುರುತಿಸುತ್ತಾರೆ. ಒಬ್ಬ ಅಧಿಕಾರಿಗೆ ಈ ರೀತಿಯ ಜನರ ಮೆಚ್ಚುಗೆ ಇದ್ದರೆ ಅಷ್ಟೆ ಸಾಕು ಬೇರು ಏನು ಬೇಕಾಗಿಲ್ಲ. ಅಧಿಕಾರಿಗಳಿಗೆ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಹಾಗು ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರಬೇಕು. ಅಲ್ಲದೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಬೇಕೆಂದರು.
     ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ಅಧಿಕಾರಿಗಳು, ಪತ್ರಕರ್ತರು ಮಾತನಾಡಿ, ಮನೋಹರ್ ಅವರು ಕೇವಲ ಒಬ್ಬ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲ. ಬದಲಾಗಿ ಮನೆ ಮಗನಂತೆ ಕರ್ತವ್ಯ ನಿರ್ವಹಿಸಿದರು. ಈ ಹಿನ್ನಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ಅಧಿಕಾರಿಯನ್ನು ನಗರಸಭೆ ಇತಿಹಾಸದಲ್ಲಿ ಯಾರು ಕಂಡಿಲ್ಲ. ನಗರದ ಜನ ಎಂದಿಗೂ ಮರೆಯದಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಗಳು ಲಭಿಸುವ ಜೊತೆಗೆ ಜನರ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಹಾರೈಸಿದರು.
     ನಗರಸಭೆ ಲೆಕ್ಕಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸೈಯದ್ ಮೆಹಬೂಬ್ ಆಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕುಡಿಯುವ ನೀರಿನ ಸಮಸ್ಯೆ : ವಿಐಎಲ್‌ಎಲ್ ನಗರಾಡಳಿತದೊಂದಿಗೆ ವಾಗ್ವಾದ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ಭದ್ರಾವತಿ, ಜು. ೨೨: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ವಿಐಎಸ್‌ಎಲ್ ಕಾರ್ಖಾನೆಯ ನಗರಾಡಳಿತ ವ್ಯಾಪ್ತಿಯ ನ್ಯೂಕಾಲೋನಿ, ನ್ಯೂಟೌನ್, ವಿದ್ಯಾಮಂದಿರ, ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿದೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನಗರಾಡಳಿತ ಇಲಾಖೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿದೆ. ಹಲವು ಬಾರಿ ಈ ಸಂಬಂಧ ನಗರಾಡಳಿತ ಇಲಾಖೆ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಕಾರ್ಖಾನೆಯ ನಗರಾಡಳಿತಾಧಿಕಾರಿ ಹಾಗು ಸಾರ್ವಜನಿಕ ಸಂಪರ್ಕಾಧಿಕಾರಿಗಳು ನೀರು ಪೂರೈಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ತಿಳಿಸುವ ಜೊತೆಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಧ್ಯ ಪ್ರವೇಶಿಸಿ ಸ್ಥಳೀಯವಾಗಿ ಎದುರಾಗಿರುವ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಮರ್ಪಕವಾಗಿ ನೀರು ಪೂರೈಕೆಗೆ ಮುಂದಾಗುವಂತೆ ಸೂಚಿಸಿದರು. ಇದಕ್ಕೆ ಅಧಿಕಾರಿಗಳಿಂದಲೂ ಪೂರಕ ಸ್ಪಂದನೆ ವ್ಯಕ್ತವಾಯಿತು.
     ಈ ಭಾಗದ ವ್ಯಾಪ್ತಿಯ ನಗರಸಭಾ ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್‌ಕುಮಾರ್, ಕಾಂತರಾಜ್, ಮುಖಂಡರಾದ ಎಸ್.ಎಸ್ ಭೈರಪ್ಪ, ಉಮೇಶ್, ದಿಲೀಪ್, ಎನ್. ರಾಮಕೃಷ್ಣ ಹಾಗು ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, July 21, 2021

ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನ ಸಮುದಾಯ ಭವನದ ಬಳಿ ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಜು. ೨೧: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನ ಸಮುದಾಯ ಭವನದ ಬಳಿ ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.
    ಊರಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದಲ್ಲಿರುವ ಸಮುದಾಯ ಭವನದ ಪಕ್ಕದಲ್ಲಿ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದ್ದು, ಇದೀಗ ಹೊಸದಾಗಿ ಬಾಕ್ಸ್ ಮಾದರಿ ಚರಂಡಿ ನಿರ್ಮಿಸಲಾಗುತ್ತಿದೆ.
   ನಗರಸಭೆ ಸದಸ್ಯರಾದ ಜಯಶೀಲ, ಕೆ. ಸುದೀಪ್‌ಕುಮಾರ್, ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ರಾಮಕೃಷ್ಣ, ಮುಖಂಡ ಸುರೇಶ್, ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ಸೆರಿದಂತೆ ಇನ್ನಿತರರು ಉಪಸ್ಥಿತರಿದ್ದರು.]

ಸ್ವಾಮೀಜಿಗಳ ನಿಯೋಗದ ತೀರ್ಮಾನಕ್ಕೆ ಬಿಳಿಕಿ ಶ್ರೀ ಬೆಂಬಲ

ಯಡಿಯೂರಪ್ಪ ಬದಲಿಸದಿರಲು ಬಿಜೆಪಿ ಹೈಕಮಾಂಡ್‌ಗೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಭದ್ರಾವತಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ.
   ಭದ್ರಾವತಿ, ಜು. ೨೧: ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ವದಂತಿ ಹಿನ್ನಲೆಯಲ್ಲಿ ಸ್ವಾಮೀಜಿಗಳ ನಿಯೋಗ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ನಿಯೋಗದಲ್ಲಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು.
   ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ಸಂಬಂಧ ಸ್ವಾಮೀಜಿಗಳ ನಿಯೋಗ ಕೈಗೊಂಡ ತೀರ್ಮಾನಕ್ಕೆ ಬಿಳಿಕಿ ಶ್ರೀಗಳು ಬದ್ಧರಾಗಿದ್ದು, ಅಲ್ಲದೆ ಶ್ರೀಗಳು ವೈಯಕ್ತಿಕವಾಗಿ ಸಹ ಬಿ.ಎಸ್ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸದಿರುವಂತೆ ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

ಜೆಡಿಎಸ್ ನೂತನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿ ಶಾರದ ಅಪ್ಪಾಜಿ ಹೆಗಲಿಗೆ

ಭದ್ರಾವತಿ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸರದ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.  
    ಭದ್ರಾವತಿ, ಜು. ೨೧: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಜಾತ್ಯಾತೀತ ಜನತಾದಳ ಕ್ಷೇತ್ರದಲ್ಲಿ ಹೆಚ್ಚು ಸಂಘಟಿತಗೊಳ್ಳುವ ಉದ್ದೇಶದಿಂದ ಹೊಸ ಪದಾಧಿಕಾರಿಗಳ ಆಯ್ಕೆಗೆ ಮುಂದಾಗಿದೆ.
    ಈ ಸಂಬಂಧ ಬುಧವಾರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹೋರಾಟದ ಆದರ್ಶಗಳನ್ನು ಮುಂದಿಟ್ಟುಕೊಂಡು ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಶಾರದ ಅಪ್ಪಾಜಿಯವರನ್ನು ಪ್ರತಿಯೊಬ್ಬರು ಬೆಂಬಲಿಸುವ ಜೊತೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಅವರ ವಿವೇಚನೆಗೆ ನೀಡಬೇಕೆಂಬ ಒಮ್ಮತದ ತೀರ್ಮಾನ ಸಭೆಯಲ್ಲಿ ಕೈಗೊಳ್ಳಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮುಖಂಡರಾದ ಡಿ.ಟಿ ಶ್ರೀಧರ್, ಕರಿಯಪ್ಪ, ಬದರಿನಾರಾಯಣ, ಎಂ.ಎ ಅಜಿತ್, ಮೈಲಾರಪ್ಪ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದಿರಿ

ಭದ್ರಾವತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.
   ಭದ್ರಾವತಿ, ಜು. ೨೧: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ಹಾಗು ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಸಮರ್ಪಕವಾಗಿ ಆಡಳಿತ ನಿರ್ವಹಿಸಿರುವ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
     ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ ರಾಜಿನಾಮೆ ಪಡೆಯುತ್ತಾರೆಂಬ ವದಂತಿ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಈಗಾಗಲೇ ಎಲ್ಲೆಡೆ ಪ್ರತಿರೋಧ ಸಹ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸಬಾರದು. ಇದರಿಂದಾಗಿ ಭವಿಷ್ಯದಲ್ಲಿ ಪಕ್ಷ ಹಾಗು ರಾಜ್ಯದ ಜನತೆ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮಠಾಧೀಶರು, ವಿರೋಧ ಪಕ್ಷದ ನಾಯಕರು ಸಹ ತಿಳಿಸಿದ್ದಾರೆ ಎಂದರು.
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಯಡಿಯೂರಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ಅಲ್ಲದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಜಾತಿ, ಜನಾಂಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಆಡಳಿತ ಯಂತ್ರವನ್ನು ಮುಂದೆ ಸಹ  ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಹುದ್ದೆಯಿಂದ ಬಿಡುಗಡೆಗೊಳಿಸಬಾರದು ಎಂದು ಮನವಿ ಮಾಡಿದರು.
   ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಸಿ ವೀರಭದ್ರಪ್ಪ, ಅಡವೀಶಯ್ಯ, ತೀರ್ಥಯ್ಯ, ಆರ್. ಮಹೇಶ್‌ಕುಮಾರ್, ಸಿದ್ದಲಿಂಗಯ್ಯ, ಬಿ.ಎಸ್ ಮಹೇಶ್‌ಕುಮಾರ್, ಬಸವರಾಜ್, ಯಶೋಧ ವೀರಭದ್ರಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, July 20, 2021

ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಅಭಿನಂದನೆ

ಸುಮಾರು ೯ ತಿಂಗಳ ಕಾಲ ಭದ್ರಾವತಿ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರನ್ನು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜು. ೨೦: ಸುಮಾರು ೯ ತಿಂಗಳ ಕಾಲ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರನ್ನು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಿತಿ ಹೋರಾಟಕ್ಕೆ ಸ್ಪಂದಿಸಿದ ತಹಸೀಲ್ದಾರ್‌ಗೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಅಭಿನಂದಿಸುವ ಜೊತೆಗೆ ಇನ್ನೂ ಉನ್ನತ ಹುದ್ದೆ ಲಭಿಸಲಿ ಎಂದು ಹಾರೈಸಲಾಯಿತು.
ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಮಿತಿಯ ಪ್ರಮುಖರಾದ ಸುಬ್ಬೇಗೌಡ, ಎರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಮ್, ಎನ್. ಮಂಜುನಾಥ್, ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದ ಉಪಾಧ್ಯಕ್ಷ ತಬ್ರೆಸ್‌ಖಾನ್, ಕಾರ್ಯದರ್ಶಿ ಶಂಕರ್, ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.