Wednesday, July 21, 2021

ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದಿರಿ

ಭದ್ರಾವತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.
   ಭದ್ರಾವತಿ, ಜು. ೨೧: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ಹಾಗು ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಸಮರ್ಪಕವಾಗಿ ಆಡಳಿತ ನಿರ್ವಹಿಸಿರುವ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
     ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ ರಾಜಿನಾಮೆ ಪಡೆಯುತ್ತಾರೆಂಬ ವದಂತಿ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಈಗಾಗಲೇ ಎಲ್ಲೆಡೆ ಪ್ರತಿರೋಧ ಸಹ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸಬಾರದು. ಇದರಿಂದಾಗಿ ಭವಿಷ್ಯದಲ್ಲಿ ಪಕ್ಷ ಹಾಗು ರಾಜ್ಯದ ಜನತೆ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮಠಾಧೀಶರು, ವಿರೋಧ ಪಕ್ಷದ ನಾಯಕರು ಸಹ ತಿಳಿಸಿದ್ದಾರೆ ಎಂದರು.
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಯಡಿಯೂರಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ಅಲ್ಲದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಜಾತಿ, ಜನಾಂಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಆಡಳಿತ ಯಂತ್ರವನ್ನು ಮುಂದೆ ಸಹ  ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಹುದ್ದೆಯಿಂದ ಬಿಡುಗಡೆಗೊಳಿಸಬಾರದು ಎಂದು ಮನವಿ ಮಾಡಿದರು.
   ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಸಿ ವೀರಭದ್ರಪ್ಪ, ಅಡವೀಶಯ್ಯ, ತೀರ್ಥಯ್ಯ, ಆರ್. ಮಹೇಶ್‌ಕುಮಾರ್, ಸಿದ್ದಲಿಂಗಯ್ಯ, ಬಿ.ಎಸ್ ಮಹೇಶ್‌ಕುಮಾರ್, ಬಸವರಾಜ್, ಯಶೋಧ ವೀರಭದ್ರಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment