Monday, August 2, 2021

ಮೂರು ಸರ್ಕಾರಗಳು ಬದಲಾದರೂ ಮುಗಿಯದ ಕಾಮಗಾರಿ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಬದಲಿ ಸೇತುವೆ.

* ಅನಂತಕುಮಾರ್
ಭದ್ರಾವತಿ: ಮೂರು ಸರ್ಕಾರಗಳು ಬದಲಾದರೂ ಸಹ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಬದಲಿ ಸೇತುವೆ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ.
      ನಗರದ ಹೃದಯ ಭಾಗದಲ್ಲಿರುವ ಸುಮಾರು ೧೬೦ ವರ್ಷಗಳಿಗೂ ಹಳೇಯದಾದ ಭದ್ರಾ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಈ ಸೇತುವೆಗೆ ಬದಲಾಗಿ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ನಿರಂತರವಾದ ಹೋರಾಟಗಳು ನಡೆದ ಪರಿಣಾಮ ಕೊನೆಗೂ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಯಿತು.
      ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ೨೦೧೮ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು ೨೧.೩೪ ಕೋ. ರು. ವೆಚ್ಚದಲ್ಲಿ ೨೪೦.೫ ಮೀಟರ್ ಉದ್ದದ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.  ಮೆ/. ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ನಿರ್ವಹಣಾ ಸಲಹೆಗಾರರಾಗಿ ಮೆ/. ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಅವರನ್ನು ನೇಮಕಗೊಳಿಸಲಾಗಿದೆ. ಸೇತುವೆ ನಿರ್ಮಾಣಗೊಂಡ ನಂತರ ೫ ವರ್ಷಗಳ ವರೆಗೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
       ವಿಳಂಬ ಕಾಮಗಾರಿ:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಟ್ಟು ೩ ಸರ್ಕಾರಗಳು ಬದಲಾದರೂ ಸಹ ಕಾಮಗಾರಿ ಮುಕ್ತಾಯಗೊಂಡಿಲ್ಲ. ಪ್ರಸ್ತುತ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಸೇತುವೆಯನ್ನು ಕಮಾನು ಮಾದರಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗುತ್ತಿದೆ. ಎರಡು ಬದಿಗೂ ಸಂಪರ್ಕ ಕಲ್ಪಿಸುವ ಕೊನೆಯ ಹಂತದ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಈ ಬಗ್ಗೆ ಗಮನ ಗಮನ ಹರಿಸಬೇಕಾಗಿದೆ. ಕೋವಿಡ್ ೩ನೇ ಅಲೆ ಆರಂಭಗೊಳ್ಳುವಷ್ಟರಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
     ವಾಹನ ದಟ್ಟನೆ ಅಧಿಕಗೊಳ್ಳುವ ಸಾಧ್ಯತೆ:
    ಈಗಾಗಲೇ ನಗರದ ಒಳ ಭಾಗದ ಹಾಗು ಹೊರ ಭಾಗದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಅಭಿವೃದ್ದಿಗೊಳ್ಳುತ್ತಿದ್ದು, ಅಲ್ಲದೆ ದಿನದಿಂದ ದಿನಕ್ಕೆ ನಗರದ ಬೆಳವಣಿಗೆ ಸಹ ವಿಸ್ತಾರಗೊಳ್ಳುತ್ತಿದೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟನೆ ಮತ್ತಷ್ಟು ಹೆಚ್ಚಾಗಲಿದೆ. ಈ ಹಿನ್ನಲೆಯಲ್ಲಿ ಸೇತುವೆ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕಾಗಿದೆ.

ಕೋವಿಡ್ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಟೆಂಡರ್ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ಕಾಮಗಾರಿ ನಡೆಸಲು ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡು ಜಾಗವನ್ನು ಮಾಲೀಕರಿಂದ ಸ್ವಾಧೀನಕ್ಕೆ ಪಡೆಯಬೇಕಾಗಿದೆ. ಇದಕ್ಕೆ ತಗಲುವ ಪರಿಹಾರ ಮೊತ್ತವನ್ನು ಮಾಲೀಕರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನೀಡಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ೩-೪ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
                                                          - ಲಿಂಗರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೆಆರ್‌ಡಿಸಿಎಲ್
                                                                        (ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ವ್ಯಾಪ್ತಿ)


          ಅದ್ಭುತ ಸಾಮರ್ಥ್ಯದ ಭದ್ರಾ ಸೇತುವೆ :
     ಅಂದಿನ ವೆಂಕಿಪುರ(ಭದ್ರಾವತಿ)ದಲ್ಲಿ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ೧೮೬೦ರಲ್ಲಿ ಸುಮಾರು ೭೪,೯೯೭ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಯಿತು. ಈ ಸೇತುವೆ ನಿರ್ಮಾಣ ದಿಂದಾಗಿ ೧೯೧೭ರಲ್ಲಿ ವಿಐಎಸ್‌ಎಲ್ ಮತ್ತು ೧೯೩೭ರಲ್ಲಿ ಎಂಪಿಎಂ ಕಾರ್ಖಾನೆಗಳ ಸ್ಥಾಪನೆಗೆ ಸಾಧ್ಯವಾಯಿತು.
       ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯ ಸಾಮಾರ್ಥ್ಯದ ಬಗ್ಗೆ ಯಾರು ಸಹ ಮಾತಾಡುವಂತಿಲ್ಲ. ಇದರ ಸಾಮಾರ್ಥ್ಯ ಇಂದಿಗೂ ಬೆರಗುಗೊಳಿಸುತ್ತದೆ.  ಈ ಸೇತುವೆಗೆ ಪರ್ಯಾಯವಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಮತ್ತೊಂದು ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಸಂಪೂರ್ಣವಾಗಿ ಮುಳುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಭದ್ರಾ ಸೇತುವೆ ಮೇಲೆಯೇ ಎಲ್ಲಾ ವಾಹನಗಳು ಸಂಚರಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಇಂದು ವಾಹನಗಳ ಸಂಖ್ಯೆ ಮಿತಿ ಮೀರಿದೆ. ಕಣ್ಣರಳಿಸಿದಷ್ಟು ಸೇತುವೆ ಮೇಲೆ ವಾಹನಗಳ ದಟ್ಟಣೆ. ಇದನ್ನು ನೋಡಿದಾಗ ಅರ್ಥವಾಗುತ್ತದೆ ಈ ಸೇತುವೆ ಅದೆಷ್ಟು ಸಾಮರ್ಥ್ಯವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ಎಂಬುದು. ಅಂದಿನ ಕಲ್ಪನೆಯೇ ಬೇರೆ, ಇಂದಿನ ಕಲ್ಪನೆಯೇ ಬೇರೆ ಭವಿಷ್ಯದಲ್ಲಿ ಇಂದಿನವರಿಗೆ ಈ ರೀತಿಯ ಸೇತುವೆ ನಿರ್ಮಾಣದ ಕಲ್ಪನೆಯೂ ಸಹ ಬರುವುದಿಲ್ಲ ಎಂದರೆ ತಪ್ಪಾಗಲಾರದು.  

ವಿಜಯಲಕ್ಷ್ಮೀ ನಿಧನ

ವಿಜಯಲಕ್ಷ್ಮೀ
ಭದ್ರಾವತಿ, ಆ. ೨:   ಹಳೇನಗರದ ಒಎಸ್‌ಎಂ ರಸ್ತೆ ನಿವಾಸಿ ವಿಜಯಲಕ್ಷ್ಮೀ(೭೫) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
ಓರ್ವ ಪುತ್ರನನ್ನು ಹೊಂದಿದ್ದರು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.

ಬಿ.ವಿ ಗಿರೀಶ್ ಸ್ಮರಣಾರ್ಥ ನೆನಪು ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಭದ್ರಾವತಿ ಪದ್ಮನಿಲಯ ಹೋಟೆಲ್ ಸುನಂದ ಹಾಲ್‌ನಲ್ಲಿ ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸ್ಮರಣಾರ್ಥ ಸವಿ ನೆನಪಿನ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.  
     ಭದ್ರಾವತಿ, ಆ. ೧: ನಗರದ ಪದ್ಮನಿಲಯ ಹೋಟೆಲ್ ಸುನಂದ ಹಾಲ್‌ನಲ್ಲಿ ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸ್ಮರಣಾರ್ಥ ಸವಿ ನೆನಪಿನ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.  
    ಬಿ.ವಿ ಗಿರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಶಾಸಕರು, ಗಿರೀಶ್ ಅವರ ಹೋರಾಟದ ಸ್ಮರಿಸಿದರು.
     ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಸಿದ್ದಾಂತ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್, ಕರ್ನಾಟಕ ಭೋವಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ, ಮುಖಂಡರಾದ ಧರ್ಮರಾಜ್, ಕೆ. ಮಂಜುನಾಥ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಿ.ವಿ ಗಿರೀಶ್ ಕುಟುಂಬಸ್ಥರಾದ ತಂದೆ ವೆಂಕಟೇಶ್, ತಾಯಿ ಲಕ್ಷ್ಮಮ್ಮ, ದೇವಿಕಾ ಗಿರೀಶ್, ಅಂಕಿತ ಮತ್ತು ಧನುಷ್,  ಬಿ.ವಿ ಗಿರೀಶ್ ಅಭಿಮಾನಿಗಳ ಬಳಗ ಗೌರವಾಧ್ಯಕ್ಷ ಶಿವಕುಮಾರ್, ಅಧ್ಯಕ್ಷ ವಿವೇಕ್ ಪ್ರಶಾಂತ್, ಕಾರ್ಯಾಧ್ಯಕ್ಷರಾದ ರಾಘವೇಂದ್ರ, ಸಂದೇಶ್, ಪ್ರಧಾನ ಕಾರ್ಯದರ್ಶಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, August 1, 2021

ಬಿ.ವಿ ಗಿರೀಶ್ ಸ್ಮರಣಾರ್ಥ ಆ.೨ರಂದು ಸವಿ ನೆನಪು ಕಾರ್ಯಕ್ರಮ

ಬಿ.ವಿ ಗಿರೀಶ್
     ಭದ್ರಾವತಿ, ಆ. ೧: ಸಾಮಾಜಿಕ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸ್ಮರಣಾರ್ಥ ಸವಿ ನೆನಪಿನ ಕಾರ್ಯಕ್ರಮ ಆ.೨ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಪದ್ಮನಿಲಯ ಹೋಟೆಲ್ ಸುನಂದ ಹಾಲ್‌ನಲ್ಲಿ ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದೆ.
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಬಿ.ವಿ ಗಿರೀಶ್ ಅವರ ಭಾಗಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.
    ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪ ತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೋಲಿಸ್ ಠಾಣಾಧಿಕಾರಿ ಕವಿತ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಿ.ವಿ ಗಿರೀಶ್ ಕುಟುಂಬಸ್ಥರಾದ ತಂದೆ ವೆಂಕಟೇಶ್, ತಾಯಿ ಲಕ್ಷ್ಮಮ್ಮ, ದೇವಿಕಾ ಗಿರೀಶ್, ಅಂಕಿತ ಮತ್ತು ಧನುಷ್ ಉಪಸ್ಥಿತರಿರುವವರು.

ಅರ್ಹ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪಲಿ : ಸುಂದರ್ ಬಾಬು

ಭದ್ರಾವತಿ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಭಾನುವಾರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಆ. ೧: ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಲಭಿಸುವಂತಾಗಬೇಕೆಂದು  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
   ಅವರು ಭಾನುವಾರ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ಅಸಂಘಟಿತ ಕಾರ್ಮಿಕರು ಗುರುತಿಸುವ ವಿಧಾನಗಳು ಬದಲಾಗಿದೆ. ಯಾರು ಕಟ್ಟಡ ಕಾರ್ಮಿಕರು ಎಂಬುದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ಕಾರ್ಮಿಕರ ವ್ಯಾಪ್ತಿಯಲ್ಲಿ ಇನ್ನಿತರ ಅಸಂಘಟಿತ ಕಾರ್ಮಿಕರನ್ನು ಸಹ ಸೇರ್ಪಡೆಗೊಳಿಸಿರುವ ಕಾರಣ ಅರ್ಹ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
    ಶ್ರಮಜೀವಿಗಳಾದ ಕಟ್ಟಡ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಅವಶ್ಯಕವಾಗಿದೆ. ಸಂಘಟನೆ ಹೆಚ್ಚು ಬಲಗೊಂಡಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಘಟನೆಯೊಂದಿಗೆ ಕೈಜೋಡಿಸಬೇಕೆಂದರು.
    ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಶ್ರೀಧರ ಶೆಟ್ಟಿ, ಸದಸ್ಯ ಎಂ.ಆರ್ ಅಭಿನಂದನ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್‌, ತಾಂತ್ರಿಕ ಸಲಹೆಗಾರ ಮನೋಹರ್‌,  ಕಾರ್ಯಾಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ನಾಗೇಂದ್ರ ರೆಡ್ಡಿ, ಖಜಾಂಚಿ ಕೃಷ್ಣ, ನಿರ್ದೇಶಕ ಅಂತೋಣಿ ಕ್ರೂಸ್, ಗೌರವ ಸಲಹೆಗಾರ ಶಿವಣ್ಣಗೌಡ, ಮಹಿಳಾ ಘಟಕದ ಮುಖ್ಯಸ್ಥೆ ಭಾಗ್ಯಮ್ಮ, ಭಾರತೀಯ ಮಜ್ದೂರ್ ಸಂಘದ ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Saturday, July 31, 2021

ಯೋಧನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಯೋಧ ಹಾಗು ಯೋಧನ ಕುಟುಂಬದವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಶನಿವಾರ ಸಂಜೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಜು. ೩೧: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಯೋಧ ಹಾಗು ಯೋಧನ ಕುಟುಂಬದವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಶನಿವಾರ ಸಂಜೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
    ಮಡಿಕೇರಿಯಲ್ಲಿ ಯೋಧ ಅಶೋಕ್‌ಕುಮಾರ್ ಹಾಗು ಅವರ ಕುಟುಂಬ ಸದಸ್ಯರ ಮೇಲೆ ನಡೆದಿರುವ ಹಲ್ಲೆಯನ್ನು ಮಾಜಿ ಸೈನಿಕರು ತೀವ್ರವಾಗಿ ಖಂಡಿಸಿದರು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
     ಸಂಘದ ಉಪಾಧ್ಯಕ್ಷ ಬಿ.ಆರ್ ದಿನೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಕಲಾ, ಸುಪ್ರಿಯಾ ಹಾಗು ಮಾಜಿ ಸೈನಿಕರು ಮತ್ತು ಕುಟುಂಬ ವರ್ಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ‘ಶ್ರೀ ಸಿದ್ದಗಂಗ ಅರಣ್ಯ’ ನಿರ್ಮಾಣಕ್ಕೆ ಚಾಲನೆ

ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಮಠದ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ 'ಶ್ರೀ ಸಿದ್ದಗಂಗ ಅರಣ್ಯ' ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
     ಭದ್ರಾವತಿ, ಜು. ೩೧:  ತುಮಕೂರಿನ ಶ್ರೀ ಸಿದ್ದಗಂಗಾ ಮಠದ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ 'ಶ್ರೀ ಸಿದ್ದಗಂಗ ಅರಣ್ಯ' ನಿರ್ಮಾರ್ಣಕ್ಕೆ ಚಾಲನೆ ನೀಡಲಾಯಿತು.
      ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ೨ ಎಕರೆ ಜಾಗದಲ್ಲಿ ಸುಮಾರು ೧೦ ಸಾವಿರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.  ಅಲ್ಲದೆ ಸವಿ ನೆನಪಿಗಾಗಿ 'ರಕ್ತದಾನ ಶಿಬಿರ' ಆಯೋಜಿಸಲಾಗಿತ್ತು.
     ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ, ರಾಜ್ಯ ಕಾರ್ಯದರ್ಶಿ ಪ್ರಶಾಂತ್, ಭದ್ರಾವತಿ ಘಟಕದ ಅಧ್ಯಕ್ಷ ಎಚ್. ಮಂಜುನಾಥ್ ಕಾರ್ಯದರ್ಶಿ ಕೆ.ಆರ್ ಆನಂದ್,  ಖಜಾಂಚಿ ಬಿ.ಎಂ ರಮೇಶ್ ಹಾಗೂ ಮಂಡ್ಯ ಪ್ರದೀಪ್,  ಅರುಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.