Monday, August 2, 2021

ಮೂರು ಸರ್ಕಾರಗಳು ಬದಲಾದರೂ ಮುಗಿಯದ ಕಾಮಗಾರಿ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಬದಲಿ ಸೇತುವೆ.

* ಅನಂತಕುಮಾರ್
ಭದ್ರಾವತಿ: ಮೂರು ಸರ್ಕಾರಗಳು ಬದಲಾದರೂ ಸಹ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಬದಲಿ ಸೇತುವೆ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ.
      ನಗರದ ಹೃದಯ ಭಾಗದಲ್ಲಿರುವ ಸುಮಾರು ೧೬೦ ವರ್ಷಗಳಿಗೂ ಹಳೇಯದಾದ ಭದ್ರಾ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಈ ಸೇತುವೆಗೆ ಬದಲಾಗಿ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ನಿರಂತರವಾದ ಹೋರಾಟಗಳು ನಡೆದ ಪರಿಣಾಮ ಕೊನೆಗೂ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಯಿತು.
      ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ೨೦೧೮ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು ೨೧.೩೪ ಕೋ. ರು. ವೆಚ್ಚದಲ್ಲಿ ೨೪೦.೫ ಮೀಟರ್ ಉದ್ದದ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.  ಮೆ/. ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ನಿರ್ವಹಣಾ ಸಲಹೆಗಾರರಾಗಿ ಮೆ/. ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಅವರನ್ನು ನೇಮಕಗೊಳಿಸಲಾಗಿದೆ. ಸೇತುವೆ ನಿರ್ಮಾಣಗೊಂಡ ನಂತರ ೫ ವರ್ಷಗಳ ವರೆಗೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
       ವಿಳಂಬ ಕಾಮಗಾರಿ:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಟ್ಟು ೩ ಸರ್ಕಾರಗಳು ಬದಲಾದರೂ ಸಹ ಕಾಮಗಾರಿ ಮುಕ್ತಾಯಗೊಂಡಿಲ್ಲ. ಪ್ರಸ್ತುತ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಸೇತುವೆಯನ್ನು ಕಮಾನು ಮಾದರಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗುತ್ತಿದೆ. ಎರಡು ಬದಿಗೂ ಸಂಪರ್ಕ ಕಲ್ಪಿಸುವ ಕೊನೆಯ ಹಂತದ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಈ ಬಗ್ಗೆ ಗಮನ ಗಮನ ಹರಿಸಬೇಕಾಗಿದೆ. ಕೋವಿಡ್ ೩ನೇ ಅಲೆ ಆರಂಭಗೊಳ್ಳುವಷ್ಟರಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
     ವಾಹನ ದಟ್ಟನೆ ಅಧಿಕಗೊಳ್ಳುವ ಸಾಧ್ಯತೆ:
    ಈಗಾಗಲೇ ನಗರದ ಒಳ ಭಾಗದ ಹಾಗು ಹೊರ ಭಾಗದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಅಭಿವೃದ್ದಿಗೊಳ್ಳುತ್ತಿದ್ದು, ಅಲ್ಲದೆ ದಿನದಿಂದ ದಿನಕ್ಕೆ ನಗರದ ಬೆಳವಣಿಗೆ ಸಹ ವಿಸ್ತಾರಗೊಳ್ಳುತ್ತಿದೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟನೆ ಮತ್ತಷ್ಟು ಹೆಚ್ಚಾಗಲಿದೆ. ಈ ಹಿನ್ನಲೆಯಲ್ಲಿ ಸೇತುವೆ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕಾಗಿದೆ.

ಕೋವಿಡ್ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಟೆಂಡರ್ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ಕಾಮಗಾರಿ ನಡೆಸಲು ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡು ಜಾಗವನ್ನು ಮಾಲೀಕರಿಂದ ಸ್ವಾಧೀನಕ್ಕೆ ಪಡೆಯಬೇಕಾಗಿದೆ. ಇದಕ್ಕೆ ತಗಲುವ ಪರಿಹಾರ ಮೊತ್ತವನ್ನು ಮಾಲೀಕರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನೀಡಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ೩-೪ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
                                                          - ಲಿಂಗರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೆಆರ್‌ಡಿಸಿಎಲ್
                                                                        (ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ವ್ಯಾಪ್ತಿ)


          ಅದ್ಭುತ ಸಾಮರ್ಥ್ಯದ ಭದ್ರಾ ಸೇತುವೆ :
     ಅಂದಿನ ವೆಂಕಿಪುರ(ಭದ್ರಾವತಿ)ದಲ್ಲಿ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ೧೮೬೦ರಲ್ಲಿ ಸುಮಾರು ೭೪,೯೯೭ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಯಿತು. ಈ ಸೇತುವೆ ನಿರ್ಮಾಣ ದಿಂದಾಗಿ ೧೯೧೭ರಲ್ಲಿ ವಿಐಎಸ್‌ಎಲ್ ಮತ್ತು ೧೯೩೭ರಲ್ಲಿ ಎಂಪಿಎಂ ಕಾರ್ಖಾನೆಗಳ ಸ್ಥಾಪನೆಗೆ ಸಾಧ್ಯವಾಯಿತು.
       ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯ ಸಾಮಾರ್ಥ್ಯದ ಬಗ್ಗೆ ಯಾರು ಸಹ ಮಾತಾಡುವಂತಿಲ್ಲ. ಇದರ ಸಾಮಾರ್ಥ್ಯ ಇಂದಿಗೂ ಬೆರಗುಗೊಳಿಸುತ್ತದೆ.  ಈ ಸೇತುವೆಗೆ ಪರ್ಯಾಯವಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಮತ್ತೊಂದು ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಸಂಪೂರ್ಣವಾಗಿ ಮುಳುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಭದ್ರಾ ಸೇತುವೆ ಮೇಲೆಯೇ ಎಲ್ಲಾ ವಾಹನಗಳು ಸಂಚರಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಇಂದು ವಾಹನಗಳ ಸಂಖ್ಯೆ ಮಿತಿ ಮೀರಿದೆ. ಕಣ್ಣರಳಿಸಿದಷ್ಟು ಸೇತುವೆ ಮೇಲೆ ವಾಹನಗಳ ದಟ್ಟಣೆ. ಇದನ್ನು ನೋಡಿದಾಗ ಅರ್ಥವಾಗುತ್ತದೆ ಈ ಸೇತುವೆ ಅದೆಷ್ಟು ಸಾಮರ್ಥ್ಯವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ಎಂಬುದು. ಅಂದಿನ ಕಲ್ಪನೆಯೇ ಬೇರೆ, ಇಂದಿನ ಕಲ್ಪನೆಯೇ ಬೇರೆ ಭವಿಷ್ಯದಲ್ಲಿ ಇಂದಿನವರಿಗೆ ಈ ರೀತಿಯ ಸೇತುವೆ ನಿರ್ಮಾಣದ ಕಲ್ಪನೆಯೂ ಸಹ ಬರುವುದಿಲ್ಲ ಎಂದರೆ ತಪ್ಪಾಗಲಾರದು.  

No comments:

Post a Comment