Saturday, August 7, 2021

ಭದ್ರಾ ಜಲಾಶಯದಿಂದ ನದಿಗೆ ನೀರು : ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆ

ಭದ್ರಾ ಜಲಾಶಯದಿಂದ ಕಳೆದ ೨ ದಿನಗಳಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಇದರಿಂದಾಗಿ ಭದ್ರಾವತಿ ನಗರದಲ್ಲಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ನೀರಿನಲ್ಲಿ ಮುಳುಗಡೆಗೊಳ್ಳುವ ಹಂತಕ್ಕೆ ತಲುಪಿರುವುದು.
    ಭದ್ರಾವತಿ, ಆ. ೭: ಭದ್ರಾ ಜಲಾಶಯದಿಂದ ಕಳೆದ ೨ ದಿನಗಳಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಇದರಿಂದಾಗಿ ನಗರದಲ್ಲಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
    ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಮುಳುಗುವ ಹಂತಕ್ಕೆ ಬಂದು ತಲುಪಿದ್ದು, ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯ ಸಹ ಈಗಾಗಲೇ ಮುಳುಗಡೆ ಹಂತ ತಲುಪಿದೆ. ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು, ಶನಿವಾರ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ. ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ.
    ಅಲ್ಲದೆ ಜಲಾಶಯದ ವ್ಯಾಪ್ತಿಯಲ್ಲೂ ಮಳೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ನದಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಸಹ ತಗ್ಗು ಪ್ರದೇಶದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗುವುದು ಸಹ ಬಹುತೇಕ ಖಚಿತವಾಗಿದ್ದು, ಹಳೇ ಸೇತುವೆ ಮೇಲೆ ಸಂಚಾರ ದಟ್ಟಣೆ ಅಧಿಕವಾಗಲಿದ್ದು, ಈ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಬದಲಿ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಈ ಸೇತುವೆ ಇನ್ನೂ ಪೂರ್ಣಗೊಂಡಿಲ್ಲ.

ಕೊರೋನಾ ಸೋಂಕು ಪುನಃ ಏರಿಕೆ : ಒಬ್ಬರು ಬಲಿ

ಭದ್ರಾವತಿ, ಆ. ೭: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಹೆಚ್ಚಾಗುತ್ತಿದ್ದು, ಶನಿವಾರ ಒಟ್ಟು ೧೧ ಪ್ರಕರಣಗಳು ದಾಖಲಾಗಿವೆ.
ಕಳೆದ ಸುಮಾರು ೧೫ ದಿನಗಳಿಂದ ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿತ್ತು. ಇದೀಗ ಏಕಾಏಕಿ ೧೧ ಪ್ರಕರಣಗಳು ಹೆಚ್ಚಾಗಿದ್ದು, ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಗ್ರಾಮಾಂತರ ಭಾಗದಲ್ಲಿ ೫ ಮತ್ತು ನಗರ ಪ್ರದೇಶದಲ್ಲಿ ೬ ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲಿ : ಬಿ.ವೈ ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಶನಿವಾರ ಭದ್ರಾವತಿ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.
     ಭದ್ರಾವತಿ, ಆ. ೭: ಶಿವಮೊಗ್ಗ ಜಿಲ್ಲೆಯನ್ನು ಕೃಷಿ ನೀರಾವರಿ ಜಿಲ್ಲೆಯನ್ನಾಗಿ ರೂಪಿಸುವ ಮೂಲಕ ಜಿಲ್ಲೆಯ ಮಹತ್ವ ಎತ್ತಿ ಹಿಡಿಯಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
    ಅವರು ಶನಿವಾರ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಬಿ.ಎಸ್ ಯಡಿಯೂರಪ್ಪನವರು ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಸುಮಾರು ೩ ಸಾವಿರ ಕೋ. ರು. ಹಾಗು ಇತರೆ ನೀರಾವರಿ ಯೋಜನೆಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಗೊಳಿಸಿದ್ದರು. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು. ಯೋಜನೆಗಳಲ್ಲಿ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಗಮನ ನೀಡಬೇಕು. ನಾಲೆಗಳಲ್ಲಿ ಹೂಳು ತುಂಬಿಕೊಳ್ಳದಂತೆ ಹಾಗು ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಬೇಕೆಂದರು.
    ಮಧ್ಯ ಕರ್ನಾಟಕ ಭಾಗದ ಬರ ಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಬಹಳ ವರ್ಷಗಳ ಕನಸು ಈಡೇರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.  
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ ೧೪ ಟಿಎಂಸಿ ಹಾಗು ಭದ್ರಾ ಜಲಾಶಯದಿಂದ ೧೫ ಟಿಎಂಸಿ ನೀರನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರ ಯೋಜನೆ  ರೂಪಿಸಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಹೆಚ್ಚಿನ ಅನಾನುಕೂಲವಾಗಲಿದೆ. ತುಂಗಾ ಜಲಾಶಯದಲ್ಲಿ ಸಂಗ್ರಹವಾಗುವ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದನ್ನು ತಪ್ಪಿಸಲು ತುಂಗಾ ಜಲಾಶಯದಿಂದಲೇ ೩೦ ಟಿಎಂಸಿ ಹೆಚ್ಚುವರಿ ನೀರನ್ನು ಈ ಯೋಜನೆಗೆ ಬಳಸಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು.
    ಪ್ರಮುಖರಾದ ಪದ್ಮನಾಭ ಭಟ್, ಎಸ್. ದತ್ತಾತ್ರಿ, ಎಸ್.ಎಸ್ ಜ್ಯೋತಿಪ್ರಕಾಶ್, ನಾಗಸಮುದ್ರ ಷಡಾಕ್ಷರಿ, ಸಾಲೂರು ರುದ್ರಮೂರ್ತಿ, ರಾಜಪ್ಪ, ಹನುಮಂತಪ್ಪ, ಮಂಜುನಾಥ, ಸ್ಥಳೀಯ ಮುಖಂಡರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್,  ಜಿ. ಆನಂದ ಕುಮಾರ್, ಮಂಗೋಟೆ ರುದ್ರೇಶ್, ಬಿ.ಜಿ ರಾಮಲಿಂಗಯ್ಯ, ಮಂಜುನಾಥ್, ಕೂಡ್ಲಿಗೆರೆ ಹಾಲೇಶ್, ವಿ.ಕದಿರೇಶ್, ಅನಿತಾ ಮಲ್ಲೇಶ್, ಅನುಪಮ ಚನ್ನೇಶ್, ಮಂಡಳಿ ನಿರ್ದೇಶಕ ವಿನಾಯಕ, ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಅಧೀಕ್ಷಕ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ವೆಂಕಟೇಶ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Friday, August 6, 2021

ಆ.೭ರಂದು ‘ರಸ ರಾಮಾಯಣ’

     ಭದ್ರಾವತಿ, ಆ. ೬: ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಪ್ರೊ. ಗಜಾನನ ಹೆಗಡೆ ಮೈಸೂರು ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಆ.೭ರಂದು ಸಂಜೆ ೫.೩೦ಕ್ಕೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
    ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಆ.೮ರಂದು ವಿದ್ಯುತ್ ವ್ಯತ್ಯಯ

      ಭದ್ರಾವತಿ, ಆ. ೬: ನಗರ ಉಪವಿಭಾಗ ಘಟಕ-೪ರ ಶಾಖಾ ವ್ಯಾಪ್ತಿಯ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
       ಸೀಗೇಬಾಗಿ, ಶ್ರೀ ಸತ್ಯ ಸಾಯಿ ನಗರ, ಸೈಯ್ಯದ್  ಕಾಲೋನಿ, ಅಂಬೇಡ್ಕರ್ ಬೀದಿ, ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರ ಹಳ್ಳಿ, ಬಾಬಳ್ಳಿ ಮತ್ತು ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.


ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ ೨೦ ಟಿ.ಎಂ.ಸಿ ನೀರು ಹರಿಸಿ : ಕೆ.ಟಿ ಗಂಗಾಧರ್

ಭದ್ರಾವತಿ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತ ವರಿಷ್ಠ ಕೆ.ಟಿ ಗಂಗಾಧರ್ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.  
     ಭದ್ರಾವತಿ, ಆ. ೬:  ಭದ್ರಾನದಿ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರು ಹರಿಸಲು ಭದ್ರಾ ಜಲಾಯಶಯದಿಂದ ನಿಗದಿ ಪಡಿಸಲಾಗಿರುವ  ೨೦ ಟಿ.ಎಂ.ಸಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದೆ ಬೇಸಿಗೆ ಬೆಳೆಗಳಿಗೆ ನೀರಿನ ಅಗತ್ಯತೆ ಹಿನ್ನಲೆಯಲ್ಲಿ ಕಾಯ್ದಿರಿಸಿಕೊಳ್ಳುವಂತೆ ರೈತ ವರಿಷ್ಠ ಕೆ.ಟಿ ಗಂಗಾಧರ್ ಆಗ್ರಹಿಸಿದರು.
     ಅವರು ಶುಕ್ರವಾರ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು.
    ಪ್ರಸ್ತುತ ೬ ಜಿಲ್ಲೆಗಳು ಜಲಾಶಯ ವ್ಯಾಪ್ತಿಗೆ ವಿಸ್ತರಿಸಿಕೊಂಡಿವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದೀಗ ಭದ್ರಾ ಜಲಾಶಯದಿಂದ ೨೦ ಟಿ.ಎಂ.ಸಿ ನೀರು ಭದ್ರಾ ಮೇಲ್ದಂಡೆ   ಯೋಜನೆಗೆ ಹರಿಸಲು ಸರ್ಕಾರ ನಿರ್ಧರಿಸಿದೆ. ಈ ನೀರನ್ನು ಭದ್ರಾ ಜಲಾಶಯದಿಂದ ಬಿಡುಗಡೆಗೊಳಿಸದೆ ತುಂಗಾ ಜಲಾಶಯದಿಂದ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
     ಇತ್ತೀಚೆಗೆ ಬೆಳಕಿಗೆ ಬಂದಿರುವ ಜಲಾಶಯದಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತು ತಕ್ಷಣ ತಾಂತ್ರಿಕ ಸಮಿತಿಯಿಂದ ವರದಿ ಸಿದ್ದಪಡಿಸಿ ಜಲಾಶಯದಿಂದ ನೀರು ಬಿಡುಗಡೆ ಸ್ಥಗಿತಗೊಂಡ ತಕ್ಷಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗಮನ ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.  
     ಮುಖಂಡರಾದ ಯಶವಂತರಾವ್ ಘೋರ್ಪಡೆ, ಅಶೋಕ್‌ರಾವ್ ಘೋರ್ಪಡೆ, ರಾಮಚಂದ್ರರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ಪುಟ್ಟಪ್ಪ, ಕೂಡ್ಲಿಗೆರೆ ಮೋಹನ್, ರಮೇಶ್, ಲವಾಕುಮಾರ್, ಜಗದೀಶ್‌ಗೌಡ, ಮಂಜಪ್ಪಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪರಿಚಿತ ವ್ಯಕ್ತಿ ಸಾವು : ಪತ್ತೆಗೆ ಮನವಿ

ಭದ್ರಾವತಿಯಲ್ಲಿ ಸುಮಾರು ೭೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಯಾರಿಗಾದರೂ ಆ ವ್ಯಕ್ತಿಯ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
    ಭದ್ರಾವತಿ, ಆ. ೬: ಸುಮಾರು ೭೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಯಾರಿಗಾದರೂ ಆ ವ್ಯಕ್ತಿಯ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
    ನಗರದ ಸಿ.ಎನ್ ರಸ್ತೆ ಪರಿಮಳ ಹೋಟೆಲ್ ಸಮೀಪದ ಅಂಗಡಿಯೊಂದರ ಮುಂಭಾಗ ಅನಾರೋಗ್ಯದಿಂದ ಅಸ್ವಸ್ಥಗೊಂಡು ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಅಂಗಡಿ ಮಾಲೀಕರು ೧೦೮ ವಾಹನಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
      ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರಿಗಾದರೂ ಅಪರಿಚಿತ ವ್ಯಕ್ತಿಯ ಬಗ್ಗೆ ಸುಳಿವು ಕಂಡು ಬಂದಲ್ಲಿ. ದೂ. ಸಂಖ್ಯೆ ೦೮೨೮೨-೨೬೬೩೪೩ ಅಥವಾ ಮೊ: ೯೪೮೦೮೦೩೩೫೪ ಸಂಖ್ಯೆಗೆ ಕರೆ ಮಾಡುವಂತೆ ಕೋರಲಾಗಿದೆ.