Monday, September 6, 2021

ಗಣೇಶ ಚತುರ್ಥಿ, ಸರಳ, ಶಾಂತಿಯುತ ಆಚರಣೆಗೆ ತಹಸೀಲ್ದಾರ್ ಮನವಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿದರು.
    ಭದ್ರಾವತಿ, ಸೆ. ೬: ಕೋವಿಡ್-೧೯ರ ನಡುವೆಯೂ ಈ ಬಾರಿ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಹಲವು ಮಾರ್ಗಸೂಚಿಗಳೊಂದಿಗೆ ಸರ್ಕಾರ ಅನುಮತಿ ನೀಡಿದ್ದು, ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆವಹಿಸಿ ಹಬ್ಬವನ್ನು ಸರಳವಾಗಿ, ಶಾಂತಿಯುತವಾಗಿ ಆಚರಿಸಬೇಕೆಂದು ತಹಸೀಲ್ದಾರ್ ಆರ್. ಪ್ರದೀಪ್ ಕರೆ ನೀಡಿದರು.
    ಅವರು ಸೋಮವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಹಬ್ಬದ ಆಚರಣೆಗೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ಸ್ಥಳೀಯ ನಗರಸಭೆ ಆಡಳಿತಗಳು ಎಲ್ಲಾ ರೀತಿಯ ಸಹಕಾರ ನೀಡಲಿವೆ. ಇದೆ ರೀತಿ ಸಾರ್ವಜನಿಕರು ಸಹ ಪೂರಕವಾಗಿ ಸ್ಪಂದಿಸುವಂತೆ ಮನವಿ ಮಾಡಿದರು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲಾ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಕೆ.ಎಚ್ ಜಯಪ್ಪ, ಅಗ್ನಿ ಶಾಮಕ ಠಾಣಾಧಿಕಾರಿ ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ದೇಶದಲ್ಲಿ ಬೆಲೆ ಏರಿಕೆಯಿಂದಾಗಿ ಬಡ, ಮಧ್ಯಮ ವರ್ಗ ಸಂಕಷ್ಟಕ್ಕೆ : ಬಿ.ಕೆ ಸಂಗಮೇಶ್ವರ್

ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಭದ್ರಾವತಿ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಸೆ. ೬: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗು ಮಧ್ಯಮ ವರ್ಗದವರು ಸಂಕಷ್ಟ ಅನುಭವಿಸುವಂತಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ಸೋಮವಾರ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಡುಗೆ ಅನಿಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ಜೊತೆಗೆ ಇತರೆ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕಾರ್ಖಾನೆಗಳು ಅಭಿವೃದ್ಧಿಯಾಗದೆ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಗಿದೆ. ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಬಡ ಹಾಗು ಮಧ್ಯಮ ವರ್ಗದವರನ್ನು ಶೋಷಿಸಲಾಗುತ್ತಿದೆ ಎಂದು ಆರೋಪಿಸಿದರು.
    ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸಲು ವಿಫಲವಾಗಿದೆ. ಜನವಿರೋಧಿ ನೀತಿಗಳ ಜೊತೆಗೆ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇಂತಹ ಸರ್ಕಾರ ದೇಶದ ಜನರಿಗೆ ಅಗತ್ಯವಿಲ್ಲ. ರಾಷ್ಟ್ರಪತಿಗಳು ತಕ್ಷಣ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
    ನಗರಸಭಾ ಸದಸ್ಯರಾದ ಕೆ. ಸುದೀಪ್‌ಕುಮಾರ್, ಆರ್. ಶ್ರೇಯಸ್, ಜಾರ್ಜ್, ಯುವ ಘಟಕದ ನಗರ ಉಪಾಧ್ಯಕ್ಷ ತೇಜಸ್‌ಗೌಡ, ಪ್ರಧಾನ ಕಾರ್ಯದರ್ಶಿ ಭರತ್, ಮಧುಸೂಧನ್, ಶಂಕರ್, ನವೀನ್, ಚೇತನ್, ಕಾರ್ಯದರ್ಶಿಗಳಾದ ನಂದನ್, ಸುನಿಲ್, ಸಚಿನ್, ಮನು, ಸಂಜಯ್, ಸ್ಟೀಫನ್, ರಾಜ್‌ಕ್ರಿಸ್ಟಿ, ಸುನಿಲ್, ಯೋಗೀಶ್, ಸೋಮಣ್ಣ, ರಂಜಿತ್, ಧರ್ಮೇಂದ್ರ, ರಾಜ್‌ವೀರ್, ಗಗನ್, ಶ್ರೀನಿವಾಸ್, ಮುರುಳಿ, ಮಂಜು, ಹರೀಶ್, ಐಸಾಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಸೌದೆ ಒಲೆ ಹಚ್ಚುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.


ಹಣ, ಅಧಿಕಾರಕ್ಕೆ ಜನ ಬೆಂಬಲವಿಲ್ಲ : ಶಾರದ ಅಪ್ಪಾಜಿ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರನ್ನು ವರಿಷ್ಠೆ ಶಾರದ ಅಪ್ಪಾಜಿ ಅಭಿನಂದಿಸಿದರು.
    ಭದ್ರಾವತಿ, ಸೆ. ೬: ಹಣ, ಅಧಿಕಾರಕ್ಕೆ ಜನ ಬೆಲೆ ಕೊಡುವುದಿಲ್ಲ. ಕೆಲಸ ಮಾಡುವವರಿಗೆ ಜನರು ಬೆಂಬಲಿಸುತ್ತಾರೆ ಎಂಬುದು ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಜೆಡಿಎಸ್ ವರಿಷ್ಠೆ ಶಾರದ ಅಪ್ಪಾಜಿ ಹೇಳಿದರು.
    ಅವರು ಸೋಮವಾರ ವಾರ್ಡ್ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.
    ಚುನಾವಣೆಯಲ್ಲಿ ಮತದಾರರು ನಮ್ಮ ಪರವಾಗಿ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಕ್ಷೇತ್ರದ ಮತದಾರರು ಎಂದಿಗೂ ನಮ್ಮೊಂದಿಗಿದ್ದಾರೆ. ಮತದಾರರಿಗೆ ಹಾಗು ಅತಿ ಹೆಚ್ಚಿನ ಅಂತರದ ಗೆಲುವಿಗೆ ಕಾರಣಕರ್ತರಾಗಿರುವ  ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
        ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ:
   ಜೆಡಿಎಸ್ ಅಭ್ಯರ್ಥಿ ಗೆಲುವು ಘೋಷಣೆಯಾಗುತ್ತಿದ್ದಂತೆ ತಾಲೂಕು ಕಛೇರಿ ಮುಂಭಾಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ನಂತರ ಮೆರವಣಿಗೆ ಮೂಲಕ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ತೆರಳಿ ಅಪ್ಪಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
    ವಾರ್ಡ್ ವ್ಯಾಪ್ತಿ ಬೃಹತ್ ಮೆರವಣಿಗೆ :
ವಾರ್ಡ್ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹಾಗು ಗೆಲುವು ಸಾಧಿಸಿದ ಅಭ್ಯರ್ಥಿ ಆರ್. ನಾಗರತ್ನಅನಿಲ್‌ಕುಮಾರ್ ಪರವಾಗಿ ಘೋಷಣೆ ಹಾಕುವ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು.
    ಮುಖಂಡರಾದ ಎಸ್. ಕುಮಾರ್, ಎಂ.ಎ ಅಜಿತ್, ಅನಿಲ್ ಕುಮಾರ್, ಕರಿಯಪ್ಪ( ಕಬ್ಬಡಿ), ಕುಮಾರ್ (ಡಿವಿ ಪ್ಲಾಜಾ), ನಂಜುಂಡೇಗೌಡ (ಸೌದೆ), ಎಸ್.ಕೆ ಉಮೇಶ್, ಎಂ. ರಾಜು, ಲಕ್ಷ್ಮೀನಾರಾಯಣ್, ಬದ್ರಿನಾರಾಯಣ್,  ಮೈಲಾರಪ್ಪ, ಸುರೇಶ್(ಕ್ಲಬ್), ಎಸ್.ಬಿ ಮೋಹನ್‌ರಾವ್, ಡಿ.ಟಿ ಶ್ರೀಧರ್, ಲೋಕೇಶ್ವರ ರಾವ್, ಬಳ್ಳಿ ಕೃಷ್ಣಪ್ಪ, ಪಾಪಣ್ಣ, ರಾಜಣ್ಣ, ನಾಗರಾಜ್, ಉದಯಕುಮಾರ್, ಕೋಟೇಶ್ವರರಾವ್, ದಿಲೀಪ್, ನಂಜುಂಡಪ್ಪ, ಮೋಹನ್(ಚಕ್ಲಿ), ಸತೀಶ್ (ಬಸ್), ಪವನ್, ಎಚ್.ಡಿ ನಾಗರಾಜ್, ರಾಮಕೃಷ್ಣ, ಎ.ಟಿ ರವಿ, ಆರ್. ಮೋಹನ್‌ಕುಮಾರ್, ಮಲ್ಲೇಶ್, ಸತೀಶ್(ಟೇಲರ್), ಬಾಬು, ಸುರೇಶ್ ಬಾಬು, ವಾಸು(ಬೆಣ್ಣೆ), ಯತೀಶ್(ಪಿಗ್ಮಿ), ರಮೇಶ್(ಡಾನ್), ಸುಬ್ಬಾರೆಡ್ಡಿ, ಶಂಕರ್, ಗಿರೀಶ್, ರಾಕೇಶ್, ರೂಪೇಶ್, ಹರೀಶ್, ಯಶವಂತ್, ರಮೇಶ್ ನಾಯ್ಕ, ಲೀಲಾವತಿ ಕೃಷ್ಣಪ್ಪ, ಭಾಗ್ಯಮ್ಮ ಮಂಜುನಾಥ್, ಪರಮೇಶ್ವರಿ, ಧನಲಕ್ಷ್ಮಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ನಗರಸಭೆ ವಾರ್ಡ್ ನಂ.೨೯ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಭರ್ಜರಿ ಗೆಲುವು

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರಿಗೆ  ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ್ ಹಾಗು ಸಹಾಯಕ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್ ಮತ್ತು ತಾಲೂಕು ಚುನಾವಣಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್‌  ಪ್ರಮಾಣ ಪತ್ರ ವಿತರಿಸಿದರು.
    ಭದ್ರಾವತಿ, ಆ. ೬: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ೪೫೦ ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
    ತಾಲೂಕು ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭಗೊಂಡು ಕೇವಲ ೩೦ ನಿಮಿಷದಲ್ಲಿ ಫಲಿತಾಂಶ ಪ್ರಕಟಗೊಂಡಿತು. ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ೧೨೮೨ ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಲೋಯಿತಾ ನಂಜಪ್ಪ ೮೩೨ ಮತಗಳನ್ನು ಹಾಗು ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಕೇವಲ ೭೦ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೨೨೦೦ ಮಂದಿ ಮತ ಚಲಾಯಿಸಿದ್ದು, ಈ ಪೈಕಿ ೧೬ ನೋಟಾ ಮತಗಳು ಚಲಾವಣೆಯಾಗಿವೆ.
    ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಲೋಯಿತಾ ನಂಜಪ್ಪ ವಿರುದ್ಧ ಸುಮಾರು ೪೫೦ ಮತಗಳ ಅಂತರದಿಂದ ಗೆಲುವು ಸಾಧಿಸಿದ ಆರ್. ನಾಗರತ್ನ ಅನಿಲ್‌ಕುಮಾರ್ ಅವರಿಗೆ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ್ ಹಾಗು ಸಹಾಯಕ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್ ಮತ್ತು ತಾಲೂಕು ಚುನಾವಣಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್‌ ಪ್ರಮಾಣ ಪತ್ರ ವಿತರಿಸಿದರು.
    ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದ ಸಂದರ್ಭದಲ್ಲಿ ವಾರ್ಡ್ ನಂ.೨೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆದಿದ್ದು, ಜೆಡಿಎಸ್ ತನ್ನ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ನಡೆಸಿದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
    ಪ್ರಸ್ತುತ ನಗರಸಭೆ ೩೫ ವಾರ್ಡ್‌ಗಳಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೪ ಮತ್ತು ಪಕ್ಷೇತರ-೧ ಸ್ಥಾನ ಹೊಂದಿವೆ. ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಎ.ಕೆ ಜಯಕುಮಾರ್ ನಿಧನ

ಎ.ಕೆ ಜಯಕುಮಾರ್    
ಭದ್ರಾವತಿ ಸೆ. ೬:  ಆರ್ಯವೈಶ್ಯ ಸಮಾಜದ ಮುಖಂಡ ಎ.ಕೆ ಜಯಕುಮಾರ್ (೪೮) ಭಾನುವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
      ತಾಯಿ ಹಾಗು ಕಿರಿಯ ಸಹೋದರನನ್ನು ಹೊಂದಿದ್ದರು.  ಜಯಕುಮಾರ್ ಪ್ರಸ್ತುತ ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜದ ವತಿಯಿಂದ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

Sunday, September 5, 2021

ವಾರ್ಡ್ ನಂ.೨೯ ಚುನಾವಣೆ : ಸೆ.೬ರಂದು ಮತ ಎಣಿಕೆ

ಭದ್ರಾವತಿ, ಸೆ. ೫: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತ ಎಣಿಕೆ ಸೋಮವಾರ ಬೆಳಿಗ್ಗೆ ೮ ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
    ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದ ಸಂದರ್ಭದಲ್ಲಿ ವಾರ್ಡ್ ನಂ.೨೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಉಳಿದ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಸಹ ಪ್ರಕಟಗೊಂಡಿದೆ. ಉಳಿದಂತೆ ವಾರ್ಡ್ ನಂ.೨೯ಕ್ಕೆ ಸೆ.೩ರಂದು ಮತದಾನ ನಡೆದಿದೆ. ಸೆ.೬ರ ಸೋಮವಾರ ಮತ ಎಣಿಕೆ ನಡೆಯಲಿದೆ.
    ಈಗಾಗಲೇ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಬಿ.ಜಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಆರ್. ನಾಗರತ್ನ ಮತ್ತು ಬಿಜೆಪಿ ಪಕ್ಷದಿಂದ ರಮಾ ವೆಂಕಟೇಶ್ ಸ್ಪರ್ಧಿಸಿದ್ದು, ೩ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಳಿಗ್ಗೆ ೧೦ ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಯಾರಿಗೆ ವಿಜಯ ಮಾಲೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಪ್ರಬಲ ಸ್ಪರ್ಧೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಕ್ಕಳ ಉಜ್ವಲ ಭವಿಷ್ಯದಿಂದ ದೇಶದ ಸಂವಿಧಾನ ಉಳಿವು ಸಾಧ್ಯ : ಶಾಸಕ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಸೆ. ೫: ಅಮೂಲ್ಯವಾದ ಸೇವೆ ನೀಡುತ್ತಿರುವ ಶಿಕ್ಷಕರೇ ಸಮಾಜದ ನಿಜವಾದ ಸಂಪತ್ತು.  ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಪಕವಾಗಿ ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗು ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  
    ತಂದೆ-ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಜ್ಞಾನ ನೀಡುವ ಪ್ರತ್ಯಕ್ಷ ದೇವರುಗಳಾಗಿದ್ದಾರೆ. ಜ್ಞಾನ ಸಂಪತ್ತು ಎಂಬುದು ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತು ಅಲ್ಲ. ಬದಲಾಗಿ ಶ್ರದ್ಧೆ, ಶ್ರಮದಿಂದ ಪಡೆಯುವುದಾಗಿದೆ ಎಂದರು.
ಸಮಾಜ ಸುಧಾರಣೆಯಲ್ಲಿ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದ್ದು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶಿಕ್ಷಕರು ಎಂದಿಗೂ ಅಮರ. ತಮ್ಮ ಜವಾಬ್ದಾರಿಗಳನ್ನು ಅರಿತು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹಾದಿಯಲ್ಲಿ ಎಲ್ಲರೂ ಸಾಗಿ ಶಿಕ್ಷಕ ವೃತ್ತಿಯ ಘನತೆ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ್,  ಕೃಷ್ಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನಗರಸಭಾ ಸದಸ್ಯರಾದ ಸರ್ವಮಂಗಳ, ರಿಯಾಜ್ ಅಹ್ಮದ್, ಮುಖಂಡರಾದ ಎಸ್.ಎಸ್ ಭೈರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರಿಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಕಾರ್ಯದರ್ಶಿ ಎಸ್.ಪಿ ಮೋಹನ್, ನಗರಸಭೆ ಪರಿಸರ ಇಂಜಿನಿಯರ್ ಪ್ರಭಾಕರ್, ಶಿಕ್ಷಕರ ಸಂಘದ ಮುಖಂಡರಾದ ಹನುಮಂತು, ಸುಮತಿ ಕಾರಂತ್, ಎಂ.ಸಿ ಆನಂದ್, ಸಿ. ಜಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು. ಸುಮತಿ ಕಾರಂತ್ ಸಂಗಡಿಗರು ಪ್ರಾರ್ಥಿಸಿದರು. ಬಿಆರ್‌ಸಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೈ.ಗಣೇಶ್ ವಂದಿಸಿದರು.  ತಾಲೂಕು ಕ್ರೀಡಾಧಿಕಾರಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.  ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ೮೦ ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಯಿತು