Saturday, September 25, 2021

ರಾಜೀವ್‌ಗಾಂಧಿ ಮೆಮೆರಿಯಲ್ ಪ್ರೌಢಶಾಲೆಯಲ್ಲಿ ಪೋಷಣ್ ಅಭಿಯಾನ್

ಭದ್ರಾವತಿ, ಸೆ. ೨೫ : ನಗರಸಭೆ ವ್ಯಾಪ್ತಿಯ ಹಳೇಸೀಗೆಬಾಗಿ ರಾಜೀವ್‌ಗಾಂಧಿ ಮೆಮೊರಿಯಲ್ ಪ್ರೌಢಶಾಲೆಯಲ್ಲಿ ಶನಿವಾರ 'ಪೋಷಣ್  ಅಭಿಯಾನ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ 'ಪೋಷಣ್ ಅಭಿಯಾನ್' ಮಹತ್ವ ಕುರಿತು ವಿವರಿಸಲಾಯಿತು. ಪೋಷಕಾಂಶ, ಖನಿಜ ಲವಣಗಳು, ನಾರುಪದಾರ್ಥ ಸೇರಿದಂತೆ ಮನುಷ್ಯನ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಹೊಂದಿರುವ ಬಗೆ ಬಗೆಯ ಸೊಪ್ಪು, ತರಕಾರಿ, ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹೊಸಮನೆ ಭಾಗದ ಸಂಪನ್ಮೂಲ ವ್ಯಕ್ತಿ ಕೃಷ್ಣಮೂರ್ತಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಗಂಗಾಧರಪ್ಪ, ಎಚ್.ಎನ್ ಪವಾರ್,  ಎಸ್. ಶ್ರೀನಿವಾಸಪ್ಪ, ಶಿವಕುಮಾರ್, ಡಾ. ಶಕೀಲ್ ಮಹಮದ್, ಚಂದ್ರಪ್ಪ, ಶಿವಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪಿ.ಎಸ್ ನಾಗಲಕ್ಷ್ಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಸ್  ನಿರ್ಮಲ, ಗೀತಾಬಾಯಿ, ಅಂಗನವಾಡಿ ಹಾಗು  ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ರಸ್ತೆ ಬದಿ ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ

ಭದ್ರಾವತಿ, ಸೆ. ೨೫:  ತಾಲೂಕಿನ ಕೂಡ್ಲಿಗೆರೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಬಳಿ ಭದ್ರಾವತಿ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದು ಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.  
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನ ಚಾಲಕ ಸೀಟ್‌ಬೆಲ್ಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಸಿದ್ದು, ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತ ಮುಖಂಡ ಕೆ. ರಂಗನಾಥ್, ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದು ಅಪಘಾತಕ್ಕೆ ಕಾರಣವಾಗಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಸಾರ್ವಜನಿಕರು, ಶಾಲಾ ಮಕ್ಕಳು ಮತ್ತು ವಾಹನಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.  


ಸೆ.೨೭ರಂದು ಭಾರತ್ ಬಂದ್‌ಗೆ ಬಂಬಲ : ಬೃಹತ್ ಪ್ರತಿಭಟನಾ ಮೆರವಣಿಗೆ

    ಭದ್ರಾವತಿ, ಸೆ. ೨೫: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ದಲಿತ, ಕಾರ್ಮಿಕ ಹಾಗು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆ.೨೭ರಂದು ಕರೆ ನೀಡಲಾಗಿರುವ ಭರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ತಾಲೂಕು ಬೆಂಬಲ ವ್ಯಕ್ತಪಡಿಸಿದೆ.
    ರೈತ, ದಲಿತ, ಕಾರ್ಮಿಕ, ಮಹಿಳಾ, ಕನ್ನಡಪರ ಹಾಗು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಅಂದು ಬೆಳಿಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ ಅಂಡ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಹಮ್ಮಿಕೊಳ್ಳಲಾಗಿದೆ.
ಸಮಸ್ತ ನಾಗರೀಕರು ಪ್ರತಿಭಟನಾ ಮೆರವಣಿಗೆ ಬೆಂಬಲಿಸುವ ಮೂಲಕ ಯಶಸ್ವಿಗೊಳಿಸುವಂತೆ ರೈತ  ಮುಖಂಡರಾದ ಯಶವಂತರಾವ್ ಘೋರ್ಪಡೆ, ಎಚ್.ಪಿ ಹಿರಿಯಣ್ಣಯ್ಯ ಮತ್ತು ಡಿ.ವಿ ವೀರೇಶ್ ಕೋರಿದ್ದಾರೆ.
        ರೈತ ಹೋರಾಟಕ್ಕೆ ಎಎಪಿ ಬೆಂಬಲ:
    ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಸೆ. ೨೭ರ ಹೋರಾಟಕ್ಕೆ  ಆಮ್ ಆದ್ಮಿ ಪಾರ್ಟಿ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದ್ದಾರೆ.
    ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮಸೂದೆಗಳಿಗೆ ತಿದ್ದುಪಡಿ ತಂದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ಎಎಪಿ ಸಂಪೂರ್ಣ ಬೆಂಬಲ ನೀಡಲಿದ್ದು, ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ನಡೆಯುವ ಹೋರಾಟಕ್ಕೆ ಎಎಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನಕ್ಕೆ ಸಂತಾಪ

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ    
ಭದ್ರಾವತಿ, ಸೆ. ೨೫: ಕುಪ್ಪೂರು ಗದ್ದಿಗೆ ಮಠದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ನಿಧನಕ್ಕೆ ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸಂತಾಪ ಸೂಚಿಸಿದ್ದಾರೆ.
    ಶ್ರೀಗಳು ರಾಜ್ಯಾದ್ಯಂತ ಹೆಚ್ಚಿನ ಭಕ್ತರನ್ನು ಹೊಂದಿದ್ದು, ಕುಪ್ಪೂರು ಗದ್ದಿಗೆ ಮಠದ ಅಭಿವೃದ್ಧಿಯಲ್ಲಿ ಹೆಚ್ಚಿನ ಗಮನ ಹರಿಸುವ ಜೊತೆಗೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಶ್ರೀಗಳು ಲಿಂಗೈಕ್ಯರಾಗಿರುವುದು ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಕೊಮಾರನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಸಾಂದರ್ಭಿಕ ಚಿತ್ರ
    ಭದ್ರಾವತಿ, ಸೆ. ೨೫: ತಾಲೂಕಿನ ಕೊಮಾರನಹಳ್ಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಎದುರಾಗಿದೆ.
    ಕೊಮಾರನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಬಂದು ಹೋಗಿರುವ ಮಾಹಿತಿಗಳಿದ್ದು, ಗ್ರಾಮದಲ್ಲಿ ನಾಯಿಗಳನ್ನು ಭೇಟೆಯಾಡಿರುವುದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಆತಂಕ ಎದುರಾಗಿದೆ. ಮಾಹಿತಿ ತಿಳಿದ ತಕ್ಷಣ ಶುಕ್ರವಾರ ರಾತ್ರಿಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕಾಡಂಚಿನ ಗ್ರಾಮವಾಗಿರುವ ಹಿನ್ನಲೆಯಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬಂದು ಹೋಗುವುದು ಸಹಜವಾಗಿದ್ದು, ಈ ಭಾಗದಲ್ಲಿ ಸಿಬ್ಬಂದಿಗಳು ಪ್ರತಿದಿನ ರಾತ್ರಿ ವೇಳೆ ಗಸ್ತು ತಿರುಗುತ್ತಾರೆ. ಮುನ್ನಚ್ಚರಿಕೆ ಕ್ರಮವಾಗಿ ಕೊಮಾರನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ ಸಹ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಚಿರತೆ ಹಾವಳಿ ಹೆಚ್ಚಾದ್ದಲ್ಲಿ ಹಿಡಿಯಲು ಬೋನ್ ಅಳವಡಿಸಲಾಗುವುದು ಎಂದರು.

Friday, September 24, 2021

ಸೆ.೨೬ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಸೆ. ೨೪: ಮೆಸ್ಕಾಂ ಸೀಗೆಬಾಗಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಸ್.ಎಫ್-೧, ಭದ್ರಾ ಕಾಲೋನಿ ಮತ್ತು ಎಸ್.ಎಫ್-೨, ವೀರಾಪುರ ಫೀಡರ್‌ನ ೧೧ ಕೆ.ವಿ ಮಾರ್ಗ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಸೆ.೨೬ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಬಾಬಳ್ಳಿ, ಗೌಡರಹಳ್ಳಿ, ಲಕ್ಷ್ಮೀಪುರ, ವೀರಾಪುರ, ಶ್ರೀರಾಮನಗರ, ಸೈಯ್ಯದ್ ಕಾಲೋನಿ, ಸೀಗೆಬಾಗಿ, ಶ್ರೀ ಸತ್ಯಸಾಯಿ ನಗರ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಎ.ಜೆ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡದಿರಿ, ಸಾರ್ವಜನಿಕವಾಗಿ ಚರ್ಚೆಯಾಗಲಿ

ನ್ಯಾಯಮೂರ್ತಿ  ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬಾರದೆಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ಭದ್ರಾವತಿ ತಾಲೂಕು ಘಟಕದ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ, ಸೆ. ೨೪; ದೇಶದ ಸಂವಿಧಾನಕ್ಕೆ ವಿರೋಧವಾಗಿರುವ ಮತ್ತು ವಾಸ್ತವಿಕತೆಗೆ ದೂರವಾಗಿರುವ ಅಂಕಿಅಂಶಗಳನ್ನು ಒಳಗೊಂಡಿರುವ
    ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡರು ಆಗ್ರಹಿಸಿದರು.
    ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಯವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದನ್ನು ವಿರೋಧಿಸಿ ಹಾಗು ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಹಮ್ಮಿಕೊಳ್ಳಲಾಗಿದ್ದಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ಸದಾಶಿವ ಆಯೋಗದ ವರದಿ ಕುರಿತಂತೆ ನಡೆಯುತ್ತಿರುವ ಹೋರಾಟ ನೆನ್ನೆ ಮೊನ್ನೆಯದಲ್ಲ. ಕಳೆದ ೧೫ ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಈ ವರದಿ ಭೋವಿ. ಬಂಜಾರ, ಕೊರಚ, ಕೊರಮ, ಅಲೆಮಾರಿ, ಸುಡುಗಾಡು ಸಿದ್ದ ಸೇರಿದಂತೆ ಇನ್ನಿತರೆ ಸಮುದಾಯಗಳಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
    ದಲಿತ, ಹಿಂದುಳಿದ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಮಿತಿಯನ್ನು ಶೇ. ೫೦ ರಿಂದ ೭೦ಕ್ಕೆ ಹೆಚ್ಚಿಸಬೇಕು. ಮೀಸಲಾತಿಯನ್ನು ಮೂಲಭೂತ ಹಕ್ಕಿನಡಿಯಲ್ಲಿ ಸೇರಿಸಬೇಕು. ಹೋರಾಟಗಳ ಹೆಸರಿನಲ್ಲಿ ಬಂಜಾರ ಕುಲಗುರು ಶ್ರೀ ಸಂತ ಸೇವಾಲಾಲ್ ಮತ್ತು ಸಚಿವ ಪ್ರಭುಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ, ಪ್ರಚೋದನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವ ಗೋವಿಂದ ಕಾರಜೋಳ ಅವರುಗಳನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.
  ಪ್ರತಿಭಟನೆಯಲ್ಲಿ ಪ್ರಮುಖರಾದ ಬೆಂಗಳೂರಿನ ಸಾಮಾಜಿಕ ಚಳುವಳಿಗಾರ ರಾಜಾನಾಯ್ಕ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಪೂಜಾರ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ, ತಾಲೂಕು ಘಟಕದ ಗೌರವಾಧ್ಯಕ್ಷ ಟಿ.ಎಂ ಮಂಜುನಾಥ್, ಉಪಾಧ್ಯಕ್ಷರಾದ ನವೀನ್‌ಕುಮಾರ್, ಹನುಮಂತನಾಯ್ಕ, ಟಿ. ರಂಗನಾಥ್, ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಸೋಮೇಶ್‌ನಾಯ್ಕ, ಧನಿಕನಾಯ್ಕ, ನಾಗೇಶ್, ಮಂಜುನಾಥ್, ಪ್ರವೀಣ್‌ನಾಯ್ಕ, ಅಣ್ಣಪ್ಪ, ಖಜಾಂಚಿ ಜುಂಜಾನಾಯ್ಕ, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ, ಬಿ.ಎನ್ ನಿದೀಶ್, ಜಿ. ಆನಂದಕುಮಾರ್, ಬಿ.ಟಿ ನಾಗರಾಜ್, ಚೌಡಪ್ಪ, ಹಾಜ್ಯನಾಯ್ಕ, ರವಿನಾಯ್ಕ, ಅಣ್ಣಾಮಲೈ, ವಿದ್ಯಾರ್ಥಿ ಘಟಕದ ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.