Sunday, November 7, 2021

ನ.೮ರಂದು ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ

    ಭದ್ರಾವತಿ, ನ. ೭: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ತಾಲೂಕು ಪಂಚಾಯಿತಿ ಮುಂಭಾಗ ನ.೮ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಪ್ರಗತಿಪರ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್, ದಕ್ಷ ಲೋಕಾಯುಕ್ತ ವೆಂಕಟಾಚಲ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಹಾಗು ಭ್ರಷ್ಟಾಚಾರ ಮಿತಿಮೀರಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಲು ತೊಂದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಗ್ರಾಮದ ರೈತರೊಬ್ಬರಿಗೆ ನ್ಯಾಯಾಲಯದ ಆದೇಶವಿದ್ದರೂ ಸಹ ಪೋಡಿ ಮಾಡಿಕೊಡದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಶಿರಸ್ತೆದಾರ್ ಕಾರು ಅಪಘಾತ

    ಭದ್ರಾವತಿ, ನ. ೭; ಚಿಕ್ಕಮಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ಶಿರಸ್ತೆದಾರ್ ಅವರ ಕಾರು ಅಪಘಾತಗೊಂಡಿರುವ ಘಟನೆ ತಾಲೂಕಿನ ಕೆಂಪೇಗೌಡ ನಗರದಲ್ಲಿ ನಡೆದಿದೆ.
    ಕೆಂಪೇಗೌಡ ನಗರದ ಬಳಿ ಬಿ.ಎಚ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಹಂಪ್ಸ್ ಎದುರಾದ ಹಿನ್ನೆಲೆಯಲ್ಲಿ ಶಿರಸ್ತೆದಾರ್ ಹಾಲನಾಯ್ಕ ಅವರ ಕಾರು ನಿಧನವಾಗಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಕಾರು ಖಜಂಗೊಂಡಿದ್ದು, ಆದರೆ ಕಾರಿನಲ್ಲಿದ್ದ ಹಾಲನಾಯ್ಕ ಅವರ ಕುಟುಂಬಸ್ಥರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
    ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹಾಲನಾಯ್ಕ ಕುಟುಂಬದವರು ಭದ್ರಾವತಿಗೆ ಆಗಮಿಸಿದ್ದರು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಜಾರ ಜನಾಂಗದಲ್ಲಿ ದೀಪ ಬೆಳಗುವ ವಿಶೇಷ ಆಚರಣೆ ‘ಮೇರಾ’

ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ಭದ್ರಾವತಿ ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಭದ್ರಾವತಿ, ನ. ೭: ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಬಂಜಾರ ಜನಾಂಗದಲ್ಲಿ ದೀಪವನ್ನು ಹೆಣ್ಣಿಗೆ ಹೋಲಿಕೆ ಮಾಡಿದ್ದು, ಹೆಣ್ಣು ಮನೆ ಬೆಳಗುವ ದೀಪ ಎಂಬ ಗೌರವಭಾವದಿಂದ ಕಾಣಲಾಗುತ್ತದೆ. ಈ ಕಾರಣದಿಂದ ಈ ಜನಾಂಗದ ಹೆಣ್ಣು ಮಕ್ಕಳು ಅಮಾವಾಸ್ಯೆ ರಾತ್ರಿಯಂದು ದೀಪ ಹಿಡಿದು ತಂದೆಗೆ 'ಬಾಪೂ ತೋನ ಮೇರಾ', ತಾಯಿಗೆ 'ಯಾಡಿ ತೋನ ಮೇರಾ', ಅಣ್ಣನಿಗೆ 'ಭೀಯಾ ತೋನ ಮೇರಾ', ಅತ್ತೆಗೆ 'ಫೂಫಿ ತೋನ ಮೇರಾ' ಹೀಗೆ ಕುಟುಂಬ ಪ್ರತಿಯೊಬ್ಬ ಸದಸ್ಯರಿಗೂ, ಹಿತೈಷಿಗಳಿಗೂ ದೀಪ ಬೆಳಗುವ ಮೂಲಕ ಶುಭ ಹಾರೈಸುತ್ತಾರೆ.
    ಹೆಣ್ಣು ದೀಪ ಬೆಳಗುವ ಮೂಲಕ ಆ ಮನೆಯ ಅಂಧಕಾರ, ದೃಷ್ಟಶಕ್ತಿ ದೂರವಾಗುತ್ತದೆ ಎಂಬ ನಂಬಿಕೆ ಈ ಜನಾಂಗದ್ದಾಗಿದೆ. ಸಿರಿಯೂರು ತಾಂಡದಲ್ಲಿ ಬಂಜಾರ ಯುವ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ ಕುಟುಂಬ ಸದಸ್ಯರು ದೀಪ ಬೆಳಗುವ ಮೂಲಕ ಗಮನ ಸೆಳೆದರು.

ಎಲ್ಲರೂ ಎಚ್ಚರಿಕೆ ಗಂಟೆಯಾಗಿದ್ದಾಗ ಮಾತ್ರ ಜವಾಬ್ದಾರಿಯಿಂದ ಮುನ್ನಡೆಯಲು ಸಾಧ್ಯ : ಕೆ.ಎನ್ ಶ್ರೀಹರ್ಷ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೭: ಸಾರ್ವಜನಿಕ ಕ್ಷೇತ್ರದಲ್ಲಿನ ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಮಾಜದ ಎಲ್ಲರೂ ಎಚ್ಚರಿಕೆ ಗಂಟೆಯಾಗಿರಬೇಕು. ಆಗ ಮಾತ್ರ ಸಂಘಟನೆಯ ಜವಾಬ್ದಾರಿ ಹೊತ್ತವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆಂದು ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಹೇಳಿದರು.
    ಅವರು ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಸಂಘದ ವತಿಯಿಂದ ಅಭಿನಂದಿಸುತ್ತಿರುವುದು ಹೃದಯಸ್ಪರ್ಶಿ ವಿಚಾರವಾಗಿದ್ದು, ಈ ನಡುವೆ ವಕೀಲರ ಸಂಘದ ಅಧ್ಯಕ್ಷರಾಗಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕೆ.ಎನ್ ಶ್ರೀಹರ್ಷರವರು ಪತ್ರಕರ್ತರ ಸಂಘದ ಜೊತೆಗೆ ವಕೀಲರ ಸಂಘದ ಅಧ್ಯಕ್ಷರಾಗುವ ಮೂಲಕ ಇದೀಗ ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ಪತ್ರಕರ್ತರ ಸಂಘದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದು, ವಕೀಲರ ಸಂಘದಲ್ಲೂ ಇದೆ ರೀತಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಮಾತನಾಡಿದರು. ಪತ್ರಕರ್ತ ಎನ್. ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಪತ್ರಕರ್ತ ಸುಭಾಷ್‌ರಾವ್ ಸಿಂಧ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ನಿರೂಪಿಸಿದರು. ರವೀಂದ್ರನಾಥ್ ಪ್ರಾರ್ಥಿಸಿದರು.  
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.



ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅವರನ್ನು ಸನ್ಮಾನಿಸಲಾಯಿತು.

Saturday, November 6, 2021

ಮೊದಲ ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ವಾಗ್ದಾಳಿ, ಪ್ರತಿಭಟನೆ ಬಿಸಿ


ಭದ್ರಾವತಿ ನಗರಸಭೆ ನೂತನ ಚುನಾಯಿತ ಪ್ರತಿನಿಧಿಗಳ ಮೊದಲ ಸಾಮಾನ್ಯ ಸಭೆ ಶನಿವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
    ಭದ್ರಾವತಿ, ನ. ೬: ನಗರಸಭೆ ನೂತನ ಚುನಾಯಿತ ಪ್ರತಿನಿಧಿಗಳ ಮೊದಲ ಸಾಮಾನ್ಯ ಸಭೆ ಶನಿವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲ ಸಭೆಯಲ್ಲಿಯೇ ಒಂದೆಡೆ ವಿವಿಧ ಇಲಾಖೆಗಳ ಅಧಿಕಾರಗಳ ವಿರುದ್ಧ ಸದಸ್ಯರೆಲ್ಲರೂ ಪಕ್ಷಬೇಧ ಮರೆತು ವಾಗ್ದಾಳಿ ನಡೆಸಿದ ಹಾಗು ಮತ್ತೊಂದೆಡೆ ಪ್ರತಿಭಟನೆ ಬಿಸಿ ಎದುರಾದ ಘಟನೆಗಳು ಕಂಡು ಬಂದವು.
    ಸುಮಾರು ಎರಡೂವರೆ ವರ್ಷಗಳ ನಂತರ ನಗರಸಭೆಯಲ್ಲಿ ಜರುಗಿದ ಜನಪ್ರತಿನಿಧಿಗಳ  ಮೊದಲ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿತ್ತು.  ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಪೂರೈಕೆ, ಉದ್ಯಾನವನ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಯಲ್ಲಿ ಗಾಂಜಾ ಸೇವನೆ, ಮಟ್ಕಾ, ಇಸ್ಪೀಟ್ ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸುವುದು ಅಸಾಧ್ಯವಾಗಿದೆ. ಅಲ್ಲದೆ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಜನಪ್ರತಿನಿಧಿಗಳಿಗಿಂತ ಮಧ್ಯವರ್ತಿಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಗೌರವ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬಹುತೇಕ ಸದಸ್ಯರು ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಸಹ ಸಭೆಯಲ್ಲಿ ಅನುಭವ ಹೊಂದಿರುವವರಂತೆ ಸಮಸ್ಯೆಗಳ ಕುರಿತು ಪಕ್ಷ ಬೇಧ ಮರೆತು ಚರ್ಚಿಸಿದರು.
    ಈ ನಡುವೆ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಅವರ ೧೨ ಅಡಿ ಎತ್ತರದ ಹೊಸ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.  



ಅಂಬೇಡ್ಕರ್ ಪ್ರತಿಮೆ ಬದಲಿಸಿ ಹೊಸ ಪ್ರತಿಮೆ ಪ್ರತಿಷ್ಠಾಪಿಸಲು ಆಗ್ರಹ

ನಗರಸಭೆ ಆವರಣದಲ್ಲಿ ಡಿಎಸ್‌ಎಸ್ ಪ್ರತಿಭಟನೆ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಕುಬ್ಜವಾಗಿರುವ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಳೇಯ ಪ್ರತಿಮೆಯನ್ನು ಬದಲಿಸಿ ಹೊಸ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಶನಿವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ನ. ೬: ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಕುಬ್ಜವಾಗಿರುವ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಳೇಯ ಪ್ರತಿಮೆಯನ್ನು ಬದಲಿಸಿ ಹೊಸ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಶನಿವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆ ನೇತೃತ್ವ ವಹಿಸಿದ್ದ ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ೨೦೦೭ರಲ್ಲಿ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು ಸರ್ಕಾರದ ನಿಯಾಮಾನುಸಾರ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದರು. ಆದರೆ ಈ ಪ್ರತಿಮೆ ಕೇವಲ ೬ ಅಡಿ ಎತ್ತರವಿದ್ದು, ಕುಬ್ಜವಾಗಿದೆ. ಈ ಹಿನ್ನಲೆಯಲ್ಲಿ  ಆರಂಭದಿಂದಲೂ ಹಲವಾರು ಬಾರಿ ಈ ಪ್ರತಿಮೆ ಬದಲಿಸಿ ಹೊಸದಾಗಿ ೧೨ ಅಡಿ ಎತ್ತರದ ಆಕರ್ಷಕವಾದ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೆ ಪ್ರತಿಮೆ ಪ್ರತಿಷ್ಠಾಪನೆ ಮಾಡುವಲ್ಲಿ ನಿರ್ಲಕ್ಷ್ಯತನ ಧೋರಣೆ ಅನುಸರಿಸುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಕೆಲಸ ಮಾಡಲಾಗುತ್ತಿದೆ. ತಕ್ಷಣ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗುವಂತೆ ಆಗ್ರಹಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸರ್ಕಾರದಿಂದ ಸಮರ್ಪಕವಾಗಿ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಆದರೂ ಸಹ ಯಾವುದಾದರೂ ಅನುದಾನದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬ ನಿಮ್ಮ ಹೋರಾಟಕ್ಕೆ ನನ್ನದು ಸಹ ಬೆಂಬಲವಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಸೇರಿ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ತಂದು ಕೊಡುವ ಕೆಲಸ ಮಾಡೋಣ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಉದಯಕುಮಾರ್, ಮಾಜಿ ಸದಸ್ಯ ಬಾಲಕೃಷ್ಣ, ಡಿಎಸ್‌ಎಸ್ ತಾಲೂಕು ಸಂಚಾಲಕ ರಂಗನಾಥ್, ದಲಿತ ಮುಖಂಡರಾದ ಈಶ್ವರಪ್ಪ, ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ವಿ. ವಿನೋದ್, ದಾಸ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, November 4, 2021

ಡಿಎಫ್‌ಓ ಕರ್ತವ್ಯ ಲೋಪ ಪ್ರಕರಣ : ನ.೧೦ರೊಳಗೆ ವರದಿ ಸಲ್ಲಿಸಲು ಆದೇಶ

ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿರುವುದು.
    ಭದ್ರಾವತಿ, ನ. ೪: ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾನೂನು ಮೀರಿ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿಗೆ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ ಹಾಗು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.
    ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅ.೧೩ರಂದು ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾಗರ್ಗ್ ಅವರಿಗೆ ಮನವಿ ಸಲ್ಲಿಸಿ, ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಭದ್ರಾವತಿ-ಶಿವಮೊಗ್ಗ-ತೀರ್ಥಹಳ್ಳಿ ಒಳಗೊಂಡ ಶಿವಮೊಗ್ಗ ವಲಯಕ್ಕೆ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರಾಥೋಡ್‌ಗೆ ವಲಯ ಅರಣ್ಯಾಧಿಕಾರಿಯಾಗಿ ೩೧.೦೫.೨೦೧೮ರಲ್ಲಿ ಪ್ರಭಾರ ನೀಡಿ ಕೆ.ಸಿ.ಎಸ್.ಆರ್ ನಿಯಮಾವಳಿ ೧೯೫೭ರ ಉಲ್ಲಂಘನೆ ಮಾಡಿದ್ದು, ಒಬ್ಬ ಅರಣ್ಯ ರಕ್ಷಕನಿಗೆ ಡ್ರಾಯಿಂಗ್ ಆಫೀಸರ್ ಪ್ರಭಾರ ಹುದ್ದೆಯನ್ನು ನೀಡಿರುವುದು ಕಾನೂನು ಬಾಹಿರ ಹಾಗು ಯಾವುದೇ ಕಾರ್ಯನಿರ್ವಹಣೆಯ ತರಬೇತಿಯನ್ನು ಪಡೆಯದೆ ಕಾಮಗಾರಿಗಳ ಕೋಟ್ಯಾಂತರ ರು. ಬಿಲ್ಲು ಮಾಡುವಂತಹ ಹುದ್ದೆ ನೀಡಿರುವುದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
    ಇದೆ ರೀತಿ ನೂತನ್ ಕುಮಾರ್ ಎಂಬುವರು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಮುಂಬಡ್ತಿಯಾಗಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರಿಗೂ ಸಹ ನಿಯಮ ಉಲ್ಲಂಘಿಸಿ ಸಾಗರ ಮತ್ತು ಹೊಸನಗರ ಒಳಗೊಂಡ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ, ಸರ್ಕಾರಿ ಕಾಮಗಾರಿಗಳ ನಿರ್ವಹಣೆ ವಹಿಸಲಾಗಿದೆ. ಇವರು ಸುಮಾರು ನಾಲ್ಕೂವರೆ ವರ್ಷಗಳಿಂದ ಈ ಹುದ್ದೆ ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.


ಸಾಮಾಜಿಕ ಹೋರಾಟಗಾರ ಶಿವಕುಮಾರ್