ಆನಂದ್ ಎಸ್. ಕುಮಾರ್ ಯೋಗೇಶ್ ಮೋಹನ್‌ಕುಮಾರ್ ಬಾಲಕೃಷ್ಣ
* ಅನಂತಕುಮಾರ್
ಭದ್ರಾವತಿ, ನ. ೨೦: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ಪ್ರತಿನಿಧಿಸುತ್ತಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಇದೀಗ ಹೆಚ್ಚು ಗಮನ ಸೆಳೆಯುತ್ತಿದ್ದು, ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವ್ಯಾಪ್ತಿಯ ನಿರ್ದೇಶಕರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ.
ಪ್ರಮುಖವಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಪ್ರಭಾವಿ ವ್ಯಕ್ತಿಗಳು ಈ ಬಾರಿ ಚುನಾವಣೆಯಲ್ಲಿ ಪೈಪೋಟಿಗೆ ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಇಲ್ಲಿಯವರೆಗೂ ನಿರ್ದೇಶಕರ ಸ್ಥಾನಕ್ಕೆ ಯಾರೊಬ್ಬರೂ ಸಹ ಆಯ್ಕೆಯಾಗದಿರುವುದು ಇಲ್ಲಿನ ಒಕ್ಕಲಿಗ ಸಮುದಾಯದವರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಹೇಗಾದರೂ ಮಾಡಿ ನಿರ್ದೇಶಕರ ಸ್ಥಾನ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಹಿಂದೆ ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಇದೀಗ ಇಲ್ಲದಿರುವುದು ಒಂದೆಡೆ ಸಮುದಾಯಕ್ಕೆ ಹಿನ್ನಡೆಯಾಗಿದೆ. ಆದರೂ ಸಹ ಅವರ ಸ್ಥಾನದಲ್ಲಿ ಇದೀಗ ತಾಲೂಕು ಒಕ್ಕಲಿಗ ಸಂಘ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆ ಮತ್ತಷ್ಟು ಗಮನ ಸೆಳೆಯಲು ಕಾರಣವಾಗಿದೆ.
ಜಿಲ್ಲೆಯಲ್ಲಿ ತೀರ್ಥಹಳ್ಳಿ ನಂತರ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದು ಭದ್ರಾವತಿ ತಾಲೂಕಿನಲ್ಲಿ ಮಾತ್ರ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಈ ಎರಡು ತಾಲೂಕುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇದುವರೆಗೂ ತೀರ್ಥಹಳ್ಳಿ ತಾಲೂಕಿನವರೇ ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಆದರೆ ತಾಲೂಕಿನಲ್ಲಿ ಇದುವರೆಗೂ ಯಾರೊಬ್ಬರು ಆಯ್ಕೆಯಾಗಿಲ್ಲ ಎಂಬ ಕೊರಗು ಇದೀಗ ಸಮುದಾಯದವರಲ್ಲಿ ಕಾಡುತ್ತಿದೆ. ಈ ನಡುವೆ ಹಲವಾರು ವರ್ಷಗಳಿಂದ ಸಮುದಾಯದವರು ರಾಜಕೀಯವಾಗಿ ಎರಡು ಬಣಗಳಾಗಿ ಗುರುತಿಸಿಕೊಂಡು ಬರುತ್ತಿದ್ದಾರೆ. ಆದರೂ ಸಹ ಸಮುದಾಯದವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಒಮ್ಮತದ ತೀರ್ಮಾನಕ್ಕೆ ಬದ್ದರಾಗಲು ಮುಂದಾಗಿದ್ದಾರೆ.
ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ಸದಸ್ಯ, ಸಹಕಾರಿ ಧುರೀಣ ಜೆ.ಪಿ ಯೋಗೇಶ್, ೩೪ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ಪ್ರಗತಿಪರ ಹೋರಾಟಗಾರ, ಮುಖಂಡ ಬಾಲಕೃಷ್ಣ ಸೇರಿದಂತೆ ಇನ್ನಿತರರು ತೀವ್ರ ಪೈಪೋಟಿಗೆ ಮುಂದಾಗಿದ್ದಾರೆ. ಈಗಾಗಲೇ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಇದೀಗ ತಾಲೂಕು ಒಕ್ಕಲಿಗರ ಸಂಘಕ್ಕೆ ಒಂದೆಡೆ ಸವಾಲಾಗಿದೆ. ಮತ್ತೊಂದೆಡೆ ವೈಯಕ್ತಿಕ ವರ್ಚಸ್ಸು, ಪ್ರತಿಷ್ಠೆ ಹಿನ್ನಲೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕೆಲವರಿಗೆ ಹಿನ್ನಡೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಸಹ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.